ಐಜ್ವಾಲ್: ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಈಶಾನ್ಯ ರಾಜ್ಯ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಹೇಳಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ.

ಜನಸಂಖ್ಯೆ ನಿಯಂತ್ರಣಕ್ಕೆ ದೇಶಗಳು ಯೋಜನೆ ರೂಪಿಸುತ್ತಿರುವ ಈ ಸಮಯದಲ್ಲಿ ಮಿಜೋರಾಂ ಸಚಿವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಆದರೆ ಇವರ ಹೇಳಿಕೆಯ ಹಿಂದಿನ ಉದ್ದೇಶ ತುಂಬಾ ವಿಭಿನ್ನವಾಗಿದೆ. ಇದನ್ನೂ ಓದಿ: ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್

ಮೀಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಈ ಹೇಳಿಕೆ ನೀಡಿದ್ದು, ಬಹುಮಾನಕ್ಕೆ ಅರ್ಹರಾಗಬೇಕಾದರೆ ಕನಿಷ್ಠ ಎಷ್ಟು ಮಕ್ಕಳಿರಬೇಕು ಎಂದು ತಿಳಿಸಿಲ್ಲ. ಸಣ್ಣಗಾತ್ರದ ಮಿಜೋ ಸಮುದಾಯಗಳಲ್ಲಿ ಜನಸಂಖ್ಯೆ ಹೆಚ್ಚಿಸುವ ಕಾರಣದಿಂದ ಸಚಿವ ರಾಬರ್ಟ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ನೀಡಲಾಗುವುದು. ಅದರೊಂದಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಿಜೋರಾಂನ ಕೆಲವು ಜನಾಂಗಗಳಲ್ಲಿ ಜನಸಂಖ್ಯೆ ತೀರಾ ಕಡಿಮೆಯಾಗಿದೆ, ಇದೊಂದು ಗಂಭೀರ ಸಮಸ್ಯೆಯಾಗಿದೆ. ಸಣ್ಣ ಬುಡಕಟ್ಟು ಪಂಗಡಗಳ ಉಳಿವು ಮತ್ತು ಅಭಿವೃದ್ದಿಗೆ ಇದು ಮಾರಕವಾಗಿದೆ ಎಂದು ಸಚಿವ ರಾಬರ್ಟ್ ಹೇಳಿದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದಲ್ಲಿ ತಮ್ಮ ದೇಶದ ಜನಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅನುಮತಿ ನೀಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭಾರತದ ಮಿಜೋರಾಂ ಇದೇ ವಿಷಯಕ್ಕೆ ಮತ್ತೆ ಸುದ್ದಿಯಾಗುತ್ತಿದೆ.

The post ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂಪಾಯಿ ಬಹುಮಾನ appeared first on Public TV.

Source: publictv.in

Source link