ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲದೆ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಹೆಚ್.ವಿಶ್ವನಾಥ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್, ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಹಾಗೂ ಸಮ್ಮತಿ ಇಲ್ಲದೆಯೇ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಿರುವುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂಪಾಯಿ ಮೊತ್ತದ ಸಮಗ್ರ ಪರಿಷ್ಕತ ಯೋಜನಾ ವರದಿಯ ಶಿಫಾರಸಿನ ಅನ್ವಯ ಸರ್ಕಾರವು ದಿನಾಂಕ 16-12-2020 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಅಂತೆಯೇ, ದಿನಾಂಕ : 24-12-2020 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.

ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ ಬರಪೀಡಿತ ಮಧ್ಯ ಕರ್ನಾಟಕದ ಬವಣೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ದಿನಾಂಕ : 25-03-2021 ರಂದು ನಡೆದ ಸಭೆಯಲ್ಲಿ ಈ ಕಡತವನ್ನು ಕೇಂದ್ರ ಸರ್ಕಾರದ ಹೂಡಿಕೆ ತೀರುವಳಿ ಮಂಡಳಿ (ಇನ್‍ವೆಸ್ಟ್ಮೆಂಟ್ ಕ್ಲಿಯರೆನ್ಸ್ ಬೋರ್ಡ್)ಗೆ ನೀಡಲಾಗಿದೆ. ಪ್ರಸ್ತುತ ಉನ್ನತಾಧಿಕಾರ ಸಮಿತಿಯ ಮುಂದೆ ತಿರುವಳಿಗಾಗಿ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರು ಸ್ಪಷ್ಟನೆ ನೀಡಿದ್ದಾರೆ.

ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ
ಈ ಯೋಜನೆಗೆ ಸಂಬಂಧಿಸಿದಂತೆ 02-12-2020 ರಲ್ಲಿ ನಡೆದ ನಿರ್ದೇಶಕ ಮಂಡಳಿಯ 16 ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ, 21,473 ಕೋಟಿ ರೂ. ಯೋಜನೆಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿರುವ ಅವರು ಈ ಯೋಜನೆಯು ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಮ್ಮತಿಯೊಂದಿಗೆ ಅನುಮೋದಿತವಾಗಿದೆ. ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ. ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರ್ಕಾರವು ಅನುದಾನ ಮಂಜೂರು ಮಾಡಿದೆ. ಹೀಗಾಗಿ ಈ ಯೋಜನೆಯ ಜಾರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನ
ಇಪ್ಪತ್ತು ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದು ಇದಕ್ಕೆ ಅನುಮತಿ ಇಲ್ಲ ಎಂಬ ಆರೋಪಕ್ಕೆ ಉತ್ತರಿಸಿರುವ ಶ್ರೀ ಲಕ್ಷ್ಮಣ ರಾವ್ ಪೇಶ್ವೆ ಅವರು, 25-03-2021 ರಂದು ಜರುಗಿದ ಸಭೆಯಲ್ಲಿ ಕೇಂದ್ರ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು 2023-24 ನೇ ಸಾಲಿನ ಒಳಗೆ ಪೂರ್ಣ ಗೊಳಿಸಬೇಕಿರುವುದರಿಂದ ಡ್ರಿಪ್ ಕಾಮಗಾರಿ ಅಂದಾಜು ಪಟ್ಟಿಗಳನ್ನು ಡ್ರಿಪ್ ಸಮಿತಿಯ ಐದು ಸಭೆಗಳಲ್ಲಿ ಸವಿವರವಾಗಿ ಚರ್ಚಿಸಿ ಹಾಗೂ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಖರೀದಿಗಳಲ್ಲಿ ಪಾರದರ್ಶಕತಾ ಅಧಿನಿಯಮದಲ್ಲಿನ ನಿಯಮಾನುಸಾರ 4026.60 ಕೋಟಿ ಮೊತ್ತಕ್ಕೆ ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.

ಇದು ಪ್ರಕ್ರಿಯೆಯ ವಿವಿಧ ಹಂತಗಳಲಿವೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಮಾಡಲಾಗಿಲ್ಲ. ಹೀಗಾಗಿ ಪ್ರಸ್ತುತ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಯೋಜನೆಯ ಜಾರಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘₹20,000 ಕೋಟಿಯ ಟೆಂಡರ್​​ನಿಂದ ವಿಜಯೇಂದ್ರ ಕಿಕ್ ಬ್ಯಾಕ್ ಪ್ಲ್ಯಾನ್’- ಹೆಚ್​​.ವಿಶ್ವನಾಥ್ ಗಂಭೀರ ಆರೋಪ

The post ಹೆಚ್​.ವಿಶ್ವನಾಥ್ ‘ಕಿಕ್​ ಬ್ಯಾಕ್ ಪ್ಲಾನ್’ ಆರೋಪಕ್ಕೆ ಸರ್ಕಾರ ಕೊಟ್ಟ ಉತ್ತರವೇನು? appeared first on News First Kannada.

Source: newsfirstlive.com

Source link