ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ | Alia Bhatt and Ranbir Kapoor wedding: Here is the details about Juta Churai


ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ

ರಣಬೀರ್ ಕಪೂರ್ ಆಲಿಯಾ ಭಟ್ ಮದುವೆ

ಹಿಂದಿ ಚಿತ್ರರಂಗದ ಕ್ಯೂಟ್​ ಜೋಡಿಯಾದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ (Alia Bhatt Ranbir Kapoor Marriage) ಅದ್ದೂರಿಯಾಗಿ ನೆರವೇರಿತು. ಏ.14ರಂದು ಮುಂಬೈನಲ್ಲಿರುವ ರಣಬೀರ್​ ಕಪೂರ್​ ನಿವಾಸದಲ್ಲಿ ನಡೆದ ಈ ಸಮಾರಂಭಕ್ಕೆ ಕೆಲವೇ ಕೆಲವು ಮಂದಿ ಸಾಕ್ಷಿ ಆಗಿದ್ದರು. ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸೆಲೆಬ್ರಿಟಿಗಳ ಮದುವೆ ಎಂದರೆ ಅಭಿಮಾನಿಗಳಿಗೆ ಕುತೂಹಲ ಸಹಜ. ಮದುವೆ ಶಾಸ್ತ್ರಗಳು ಯಾವ ರೀತಿ ನಡೆದವು? ಆಲಂಕಾರ ಹೇಗಿತ್ತು? ಭೋಜನದ ವ್ಯವಸ್ಥೆ ಹೇಗೆ ಮಾಡಲಾಗಿತ್ತು? ಯಾರೆಲ್ಲ ಬಂದಿದ್ದರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಫ್ಯಾನ್ಸ್​ ಬಯಸುತ್ತಾರೆ. ಆದರೆ ಆಲಿಯಾ ಭಟ್ ಮದುವೆ (Alia Bhatt Marriage) ಬಹಳ ಗೌಪ್ಯವಾಗಿ ನಡೆದ ಕಾರಣ ಹೆಚ್ಚಿನ ಮಾಹಿತಿ ಹೊರಬೀಳಲಿಲ್ಲ. ಆದರೂ ಕೆಲವು ಮೂಲಗಳು ಒಂದಷ್ಟು ವಿಚಾರವನ್ನು ಬಿಟ್ಟುಕೊಟ್ಟಿವೆ. ಆ ಪೈಕಿ ಇಲ್ಲೊಂದು ಇಂಟರೆಸ್ಟಿಂಗ್​ ಆದ ವಿಷಯ ಇದೆ. ಜೂತ ಚುಪಾಯಿ ಅಥವಾ ಜೂತ ಚುರಾಯಿ ಶಾಸ್ತ್ರದ ವೇಳೆ ಹೆಣ್ಣಿನ ಕಡೆಯವರು 11 ಕೋಟಿ ರೂಪಾಯಿ ಡಿಮ್ಯಾಂಡ್​​ ಮಾಡಿದಾಗ ರಣಬೀರ್​ ಕಪೂರ್​ (Ranbir Kapoor) ಅವರು ಕೇವಲ ಒಂದು ಲಕ್ಷ ರೂಪಾಯಿ ನೀಡಿ ಕೈ ತೊಳೆದುಕೊಂಡರು ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ಏನಿದು ಕಥೆ? ಇಲ್ಲಿದೆ ವಿವರ..

ಒಂದೊಂದು ಸಂಪ್ರದಾಯದಲ್ಲಿ ಒಂದೊಂದು ರೀತಿಯಲ್ಲಿ ಮದುವೆ ನೆರವೇರಿಸಲಾಗುತ್ತದೆ. ಆಯಾ ಸಂಪ್ರದಾಯಗಳಿಗೆ ತಕ್ಕಂತೆ ಶಾಸ್ತ್ರಗಳು ಇರುತ್ತವೆ. ಆ ಪೈಕಿ ಜೂತ ಚುಪಾಯಿ ಅಥವಾ ಜೂತ ಚುರಾಯಿ ಶಾಸ್ತ್ರ ಕೂಡ ಒಂದು. ಮದುಮಗನ ಚಪ್ಪಲಿಯನ್ನು ಹೆಣ್ಣಿನ ಸಂಬಂಧಿಕರು ಮುಚ್ಚಿಡುತ್ತಾರೆ. ಅದನ್ನು ಮರಳಿ ನೀಡಬೇಕು ಎಂದರೆ ಇಂತಿಷ್ಟು ಹಣ ನೀಡಬೇಕು ಎಂದು ಗಂಡಿನ ಬಳಿ ಡಿಮ್ಯಾಂಡ್​ ಮಾಡುತ್ತಾರೆ. ಹಣ ಉಳಿಸಲು ಗಂಡು ಒಂದಷ್ಟು ಚೌಕಾಸಿ ಮಾಡುತ್ತಾನೆ. ಕಡೆಗೂ ಒಂದಷ್ಟು ಹಣ ನೀಡಿ ತನ್ನ ಚಪ್ಪಲಿಯನ್ನು ವಾಪಸ್​ ಪಡೆಯುತ್ತಾನೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆಯಲ್ಲೂ ಜೂತ ಚುರಾಯಿ ಶಾಸ್ತ್ರ ನಡೆದಿದೆ. ಆಲಿಯಾ ಭಟ್​ ಕಡೆಯವರು ರಣಬೀರ್​ ಕಪೂರ್​ ಅವರ ಚಪ್ಪಲಿ ಮುಚ್ಚಿಟ್ಟಿದ್ದಾರೆ. ಮರಳಿ ನೀಡಲು ಬರೋಬ್ಬರಿ 11 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡಿದ್ದಾರೆ! ಆದರೆ ರಣಬೀರ್​ ಕಪೂರ್​ ಅಂತಿಮವಾಗಿ ನೀಡಿದ್ದು 1 ಲಕ್ಷ ರೂಪಾಯಿ ಮಾತ್ರ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಚಿಕ್ಕ ವಯಸ್ಸಿನಲ್ಲಿಯೇ ಆಲಿಯಾಗೆ ರಣಬೀರ್​ ಮೇಲೆ ಕ್ರಶ್​ ಆಗಿತ್ತು. ಆದರೆ ಅವರು ಅದನ್ನು ಹೇಳಿಕೊಂಡಿರಲಿಲ್ಲ. ಮದುವೆ ಆಗುವುದಕ್ಕೂ ಕೆಲವೇ ತಿಂಗಳ ಮುಂಚೆ ಅವರು ಮಾಧ್ಯಮದ ಎದುರು ಅದನ್ನು ಬಾಯಿ ಬಿಟ್ಟರು. ಆದರೆ ಮದುವೆ ದಿನಾಂಕದ ವಿಚಾರದಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ರಹಸ್ಯ ಕಾಯ್ದುಕೊಂಡಿದ್ದರು. ಮದುವೆ ಪ್ರಯುಕ್ತ ರಣಬೀರ್ ಕಪೂರ್ ನಿವಾಸಕ್ಕೆ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿತ್ತು.

ಮದುವೆ ಬಳಿಕ ಆಲಿಯಾ ಭಟ್​ ಅವರು ಒಂದಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಎಲ್ಲರಿಂದ ಆಶೀರ್ವಾದ ಬೇಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ರಣಬೀರ್​ ಕಪೂರ್​ ಅವರು ಈ ಮೊದಲು ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್​ ಜೊತೆಗೂ ಪ್ರೀತಿಯಲ್ಲಿ ಮುಳುಗಿದ್ದರು. ಆ ಕುರಿತಾಗಿಯೂ ಸೋಶಿಯಲ್​ ಮೀಡಿಯಾದಲ್ಲಿ ಹಲವು ಮೀಮ್ಸ್​ ಹರಿದಾಡುತ್ತಿವೆ.

TV9 Kannada


Leave a Reply

Your email address will not be published. Required fields are marked *