ಮಂಡ್ಯ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಬೊಮ್ಮನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗುಣಶ್ರೀ (35) ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದರಾಗಿದ್ದ ಗುಣಶ್ರೀ ಅವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಇವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಅರೆತಿಪ್ಪೂರಿನ ಮನೋಹರಗೌಡ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದ ಗುಣಶ್ರೀ ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಸೋಂಕು ತಗುಲಿತ್ತು.

ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಕೋವಿಡ್​ ಕೇರ್​ ಸೆಂಟರ್​​ಗೆ ದಾಖಲಾಗಿದ್ದರು. ಆದರೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆ.ಎಂ ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ಮಂಡ್ಯದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಈ ವೇಳೆ ಸೋಂಕಿನಿಂದ ಗುಣಮುಖರಾದ ಅವರನ್ನು ಮನೆಗೆ ವಾಪಸ್​ ಕರೆತರಲಾಗಿತ್ತು. ಆದರೆ ಮನೆಗೆ ಬಂದ ಎರಡು ದಿನಗಳಲ್ಲಿ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕೆ.ಎಂ ದೊಡ್ಡಿಯ ಆಸ್ಪತ್ರೆ ದಾಖಲಾಗಿದ್ದರು. ಆದರೆ ಮಗುವನ್ನು ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಮಗುವಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಗುಣಶ್ರೀ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

The post ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಕೆಲ ಕ್ಷಣಗಳಲ್ಲೇ ಕೊರೊನಾದಿಂದಾಗಿ ಉಸಿರು ಚೆಲ್ಲಿದಳು ತಾಯಿ appeared first on News First Kannada.

Source: newsfirstlive.com

Source link