ಕೊರೊನಾ ವೈರಸ್‌ ಮನುಕುಲವನ್ನು ಅಷ್ಟೇ ಅಲ್ಲ ಮೃಗಾಲಯದಲ್ಲಿರೋ ಪ್ರಾಣಿಗಳನ್ನು ಬಿಡುತ್ತಿಲ್ಲ. ಅಮೆರಿಕ, ಭಾರತ, ಶ್ರೀಲಂಕಾ ಸೇರಿದಂತೆ ವಿವಿಧ ರಾಷ್ಟ್ರಗಳ ಮೃಗಾಲಯಗಳ ಪ್ರಾಣಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾದ್ರೆ ಪ್ರಾಣಿ ಪ್ರಭೇದ ಕಾಪಾಡಲು ವ್ಯಾಕ್ಸಿನ್‌ ಬೇಡವಾ? ಖಂಡಿತ ಬೇಕು. ಅಂತಹ ಕೆಲಸ ಈಗಾಗಲೇ ಆರಂಭವಾಗಿದೆ.

ವಿಶ್ವವನ್ನೆಲ್ಲ ಕಾಡ್ತಾ ಇರೋದು ಕೊರೊನಾ. ಇಷ್ಟು ದಿನ ಮನುಕುಲವನ್ನು ಕಾಡ್ತಾ ಇದ್ದ ಕೊರೊನಾ ಈಗ ಪ್ರಾಣಿಸಂಕುಲವನ್ನೂ ಕಾಡಲು ಶುರು ಮಾಡಿದೆ. ಹಲವಾರು ಕಡೆ ಇಂತಹ ಪ್ರಕರಣಗಳು ಪತ್ತೆಯಾಗ್ತಾ ಇವೆ. ಸಾಕು ಪ್ರಾಣಿಗಳಿಗೆ ಮಾತ್ರವಲ್ಲ, ಕಾಡು ಪ್ರಾಣಿಗಳಲ್ಲೂ ಕೊರೊನಾ ಆತಂಕ ಶುರುವಾಗಿದೆ. ಹುಲಿ-ಸಿಂಹಗಳಿಗೆಲ್ಲ ಕೊರೊನಾ ಬರ್ತಾ ಇದೆ ಅಂದ್ರೆ ನೀವೇ ಯೋಚಿಸಿ. ಆದ್ರೆ ಇದು ನಿಜ. ಭಾರತ ಮತ್ತು ಶ್ರೀಲಂಕಾದ ಸಿಂಹಗಳಿಗೆ ಕೊರೊನಾ ದೃಢಪಟ್ಟಿತ್ತು. ಆದ್ರೆ ಎರಡು ಕಡೆ ಸಿಂಹಗಳು ಗುಣಮುಖವಾಗಿವೆ. ಕಾಡಿನ ರಾಜನಿಗೇ ಕೊರೊನಾ ಬರುತ್ತೆ ಅಂದ್ರೇ ಹೇಗೆ. ಆದರೂ ಬಂದಿದೆ ನೋಡಿ.

ಹೀಗೆ ಪ್ರಾಣಿಗಳಿಗೆ ಕೊರೊನಾ ಬರತೊಡಗಿದರೆ ಏನು ಮಾಡೋದು ಅಂತ ಚಿಂತೆ ಶುರುವಾಗಿತ್ತು. ಹೀಗಾಗಿ ಇವುಗಳಿಗೂ ವ್ಯಾಕ್ಸಿನ್ ಹಾಕಿಸಬೇಕೆಂಬ ಚಿಂತನೆ ನಡೆಯುತ್ತಿತ್ತು. ಇದೀಗ ಅದು ಸಾಕಾರವಾಗ್ತಾ ಇದೆ. ಮೊದಲು ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿರುವ ಬ್ರಾಂಕ್ಸ್‌ ಮೃಗಾಲಯದ ಪ್ರಾಣಿಗಳಲ್ಲಿ ಕೊರೊನಾ ದೃಢಪಟ್ಟಿತ್ತು. ಕಳೆದ ವರ್ಷವೇ ಹುಲಿಗೆ ಕೊರೊನಾ ವೈರಸ್ ಅಟ್ಯಾಕ್ ಮಾಡಿತ್ತು.ಜಗತ್ತಿನಲ್ಲಿಯೇ ಮೃಗಾಲಯದ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದಾಗಿತ್ತು. ಇದು ನಡೆದಿರುವುದು 2020 ಏಪ್ರೀಲ್‌. ಆ ನಂತರ ಭಾರತ, ರಷ್ಯಾ, ಶ್ರೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳ ಮೃಗಾಲಯಗಳಲ್ಲಿಯೂ ಪ್ರಾಣಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಹೈದ್ರಾಬಾದ್‌ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಸೋಂಕು ಪತ್ತೆಯಾಗಿದ್ದು ಆಘಾತ ಮೂಡಿಸಿತ್ತು. ಆದ್ರೆ ಈಗ ಆಶಾದಾಯಕ ವಿಷಯವೊಂದು ಹೊರಬಂದಿದೆ. ಅದೇನಂದ್ರೆ ಪ್ರಾಣಿಗಳಿಗೂ ವ್ಯಾಕ್ಸಿನ್‌ ಹಾಕುತ್ತಿರುವುದು.

ಆಕ್ಲಾಂಡ್‌ ಮೃಗಾಲಯದಲ್ಲಿ ಪ್ರಾಣಿಗಳಿಗೆ ವ್ಯಾಕ್ಸಿನ್‌
ಹೆಣ್ಣು ಹುಲಿಗೆ ಮೊದಲ ಕೊರೊನಾ ತಡೆ ಲಸಿಕೆ
ಕೊರೊನಾ ಸೋಂಕು ನಿಯಂತ್ರಿಸಲು ವ್ಯಾಕ್ಸಿನ್‌ ಬಂದ ನಂತರ ಪ್ರಾಣಿಗಳಿಗೆ ವ್ಯಾಕ್ಸಿನ್‌ ಹಾಕಲಾಗುತ್ತೆ ಅನ್ನೋ ಸುದ್ದಿ ಇತ್ತು. ಆದ್ರೆ, ಅದು ಯಾವಾಗ ಸಂಶೋಧನೆಯಾಗುತ್ತೆ, ಯಾವಾಗ ಹಾಕಲಾಗುತ್ತೆ ಅನ್ನೋದು ಮಾತ್ರ ಪ್ರಶ್ನಾರ್ಥಕವಾಗಿತ್ತು. ಈಗ ಅದು ನೆರವೇರ್ತಾ ಇದೆ. ಅಂತಹವೊಂದು ಮಹತ್ವದ ಕಾರ್ಯ ಮಾಡುತ್ತಿರುವುದು ಆಕ್ಲಾಂಡ್‌ ಮೃಗಾಲಯ. ಈಗಾಗಲೇ ಪ್ರಾಯೋಗಿಕವಾಗಿ ಪ್ರಾಣಿಗಳಿಕೆ ಲಸಿಕೆ ನೀಡಲು ಆರಂಭಿಸಿದೆ. ಮೊದಲ ಲಸಿಕೆ ಹೆಣ್ಣು ಹುಲಿ ನೀಡಲಾಗಿದ್ದು, ಆನಂತರ ಕರಡಿ, ಚಿರತೆಗೆ ನೀಡಲಾಗಿದೆ. ಲಸಿಕೆ ಪಡೆದ ಎಲ್ಲಾ ಪ್ರಾಣಿಗಳು ಆರೋಗ್ಯವಾಗಿಯೇ ಇವೆ. ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ.

ಮೃಗಾಲಯದ ಎಲ್ಲಾ ಪ್ರಾಣಿಗಳಿಗೂ ಕೋವಿಡ್‌ ಲಸಿಕೆ
ಆಕ್ಲಾಂಡ್‌ನಲ್ಲಿರೋದು ದೊಡ್ಡ ಮೃಗಾಲಯ. ಹುಲಿ, ಸಿಂಹ, ಕರಡಿ, ಚಿರತೆ ಸೇರಿದಂತೆ 850ಕ್ಕೂ ಹೆಚ್ಚಿನ ಪ್ರಾಣಿಗಳಿವೆ. ಮೊದಲ ಬಾರಿಗೆ ಯಾವ ಯಾವ ಪ್ರಾಣಿಗಳಿಗೆ ಲಸಿಕೆ ನೀಡಬೇಕು. ಆನಂತರ ಯಾವ ಪ್ರಾಣಿಗಳಿಗೆ ಲಸಿಕೆ ನೀಡಬೇಕು ಅನ್ನೋದನ್ನು ಲಿಸ್ಟ್‌ ಮಾಡಿದ್ದಾರೆ. ಆರಂಭದಲ್ಲಿ ಸ್ವಲ್ಪ ಪ್ರಾಣಿಗಳಿಗೆ ಲಸಿಕೆ ನೀಡಿ ಅವುಗಳ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತೆ. ಆನಂತರವೇ ಉಳಿದ ಪ್ರಾಣಿಗಳಿಗೂ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಲಿದೆ.

ಪ್ರಾಣಿ ಪ್ರಭೇದ ಉಳಿಸಲು ಪಣ ತೊಡಬೇಕಿದೆ
ಪ್ರಾಣಿಗಳಿಗೂ ಸೋಂಕು ಹಬ್ಬುತ್ತಿರುವುದು ಆಘಾತಕಾರಿ. ಒಮ್ಮೆ ವೈರಸ್‌ ವ್ಯಾಪಕವಾಗಿ ಹರಡಲು ಆರಂಭವಾಗಿ ಬಿಟ್ಟರೆ ಪ್ರಾಣಿ ಪ್ರಭೇದವೇ ನಶಿಸಿ ಹೋಗುವ ಅಪಾಯವಿದೆ. ಈಗಾಗಲೇ ಡೈನೋಸಾರ್‌ ನಂತರ ಪ್ರಾಣಿಗಳಿಂದ ಹಿಡಿದು ಅದೆಷ್ಟೋ ಪ್ರಭೇದಗಳು ನಾಶವಾಗಿ ಬಿಟ್ಟಿವೆ. ಪ್ರಾಣಿಗಳನ್ನು ಉಳಿಸಿಕೊಳ್ಳಬೇಕು ಅಂದ್ರೆ ಅವುಗಳ ರಕ್ಷಣೆ ನಮ್ಮ ಹೊಣೆಯಾಗಿರಬೇಕು.

ವ್ಯಾಕ್ಸಿನ್‌ಗೆ ಕೈಜೋಡಿಸಿದ ಕಂಪನಿ ಯಾವುದು?
ಮೊದಲಿಗೆ ಆಕ್ಲಾಂಡ್‌ನಲ್ಲಿ ಪ್ರಾಣಿ ಪ್ರಭೇದ ಉಳಿಸುವ ಅಭಿಯಾನ ಕೈಗೊಳ್ಳುವ ನಿರ್ಧಾರ ಮಾಡಲಾಗುತ್ತೆ. ಎಲ್ಲಾ ಪ್ರಾಣಿಗಳಿಗೂ ವ್ಯಾಕ್ಸಿನ್‌ ನೀಡಬೇಕು ಅನ್ನುವುದು ಅಭಿಯಾನದ ಉದ್ದೇಶವಾಗಿರುತ್ತೆ. ಆದ್ರೆ, ಇದಕ್ಕೆ ಕೈ ಜೋಡಿಸಿದ್ದು ನ್ಯೂಜೆರ್ಸಿ ಪಶುವೈದ್ಯಕೀಯ ಔಷಧ ಕಂಪನಿ ಜೊಯಿಟಿಸ್‌. ಹೌದು, ಇದೇ ಕಂಪನಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿ ದೇಣಿಗೆ ರೂಪದಲ್ಲಿ ಮೃಗಾಲಯಕ್ಕೆ ನೀಡಿದೆ.

ಮೃಗಾಲಯದ ಅಧಿಕಾರಿಗಳು ಹೇಳೋದು ಏನು?
ಮೃಗಾಲಯದಲ್ಲಿ ಪ್ರಾಣಿಗಳಿಗೆ ಪ್ರಾಯೋಗಿಕವಾಗಿ ಲಸಿಕೆ ಹಾಕಿಸಲಾಗುತ್ತಿದೆ. ಈ ಬಗ್ಗೆ ಮೃಗಾಲಯದ ಪಶುವೈದ್ಯಕೀಯ ಸೇವೆಗಳ ಉಪಾಧ್ಯಕ್ಷ ಅಲೆಕ್ಸ್‌ ಹರ್ಮನ್‌ ಮಾತನಾಡಿದ್ದಾರೆ.ಮೃಗಾಲಯದಲ್ಲಿ ಯಾವುದೇ ಪ್ರಾಣಿಗಳಿಗೆ ಸೋಂಕು ಬಂದಿಲ್ಲ. ಆದ್ರೆ, ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಒಮ್ಮೆ ಸೋಂಕು ತಗುಲಿದರೆ ಅಪಾಯ ಎದುರಿಸಬೇಕಾಗುತ್ತೆ. ಇದೇ ಉದ್ದೇಶಕ್ಕೆ ಈಗ ಹುಲಿ, ಸಿಂಹ, ಕರಡಿಗಳಿಗೆ ಒಂದು ಡೋಸ್‌ ನೀಡಲಾಗಿದೆ. ಮುಂದೆ ಸಸ್ತನಿಗಳಿಗೆ ನೀಡಲಾಗುತ್ತೆ ಅಂತ ಇವರು ತಿಳಿಸಿದ್ದಾರೆ.

ರಷ್ಯಾದಲ್ಲಿ ಸಾಕು ಪ್ರಾಣಿಗಳಿಗೂ ಲಸಿಕೆ
ಸಾಕು ಪ್ರಾಣಿಗಳಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧ ಇದ್ದೇ ಇದೆ. ಎಷ್ಟೋ ವೈರಸ್‌ಗಳು ಮನುಷ್ಯನಿಂದ ಸಾಕು ಪ್ರಾಣಿಗಳಿಗೆ ಅಥವಾ ಸಾಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತವೆ. ಈ ನಿಟ್ಟಿನಲ್ಲಿ ರಷ್ಯಾದಲ್ಲಿ ಮೊದಲ ಬಾರಿಗೆ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ನಾಯಿ, ಬೆಕ್ಕುಗಳನ್ನು ಹಿಡಿದುಕೊಂಡು ಬಂದು ಜನ ಲಸಿಕೆ ಹಾಕಿಸುತ್ತಿದ್ದಾರೆ.

ಭಾರತದಲ್ಲೂ ಪ್ರಾಣಿಗಳಿಗೆ ಲಸಿಕೆ ಹಾಕಲಾಗುತ್ತಾ?
ಕೋವಿಡ್‌ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಮೃಗಾಲಯಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆದ್ರೂ ಚೆನ್ನೈ ಮತ್ತು ಹೈದ್ರಾಬಾದ್‌ ಮೃಗಾಲಯದಲ್ಲಿರೋ ಹುಲಿ, ಸಿಂಹಗಳಿಗೆ ಸೋಂಕು ಬಂದಿತ್ತು. ಹೀಗಾಗಿ ಭಾರತದಲ್ಲಿಯೂ ಪ್ರಾಣಿಗಳಿಗೆ ಲಸಿಕೆ ಹಾಕಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೆಲವು ಕಂಪನಿಗಳು ಸಂಶೋಧನೆಯಲ್ಲಿ ನಿರತವಾಗಿವೆ. ಒಮ್ಮೆ ದೇಶೀಯ ಕಂಪನಿಗಳು ತಯಾರಿಸಿದ ಲಸಿಕೆ ಯಶಸ್ವಿಯಾದ್ರೆ ಅದನ್ನೇ ಪ್ರಾಣಿಗಳಿಗೆ ನೀಡಲಾಗುತ್ತೆ. ಇಲ್ಲದಿದ್ದರೇ ಆಮದು ಮಾಡಿಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಲಿದೆ.

ಮನುಷ್ಯನ ಪ್ರಾಣ ಎಷ್ಟು ಮುಖ್ಯವೋ ಪ್ರಾಣಿಗಳ ಪ್ರಾಣವೋ ಅಷ್ಟೇ ಮುಖ್ಯವಾಗಿದೆ. ಆದಷ್ಟು ಬೇಗ ಪ್ರಾಣಿಗಳಿಗೆ ನೀಡುವ ವ್ಯಾಕ್ಸಿನ್‌ ಭಾರತಕ್ಕೂ ಬರಬೇಕು. ಮೃಗಾಲಯದಲ್ಲಿರುವ,ಅಭಯಾರಣ್ಯದಲ್ಲಿರುವ ಪ್ರಾಣಿ ಸಂಕುಲಕ್ಕೆ ಕೊರೊನಾದಿಂದ ರಕ್ಷಣೆ ಸಿಗಲೇಬೇಕು.

The post ಹೆಣ್ಣು ಹುಲಿಗೆ ವಿಶ್ವದ ಮೊದಲ ಕೊರೊನಾ ಲಸಿಕೆ- ಭಾರತದ ಮೃಗಾಲಯದಲ್ಲೂ ವ್ಯಾಕ್ಸಿನ್ ಹಾಕಿಸ್ತಾರಾ? appeared first on News First Kannada.

Source: newsfirstlive.com

Source link