ಹೆತ್ತವರ ವಿರೋಧದ ನಡುವೆಯೂ ಪ್ರಿಯಕರನ ಕೈಹಿಡಿದ ಯುವತಿ- ಒಂದೇ ವರ್ಷಕ್ಕೆ ದುರಂತ ಅಂತ್ಯ

ಹೆತ್ತವರ ವಿರೋಧದ ನಡುವೆಯೂ ಪ್ರಿಯಕರನ ಕೈಹಿಡಿದ ಯುವತಿ- ಒಂದೇ ವರ್ಷಕ್ಕೆ ದುರಂತ ಅಂತ್ಯ

ಶಿವಮೊಗ್ಗ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿಯ ಬದುಕು ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡಿದೆ.

ತಾಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯ (21) ಮೃತ ದುರ್ದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಸೌಂದರ್ಯ ಮತ್ತು ಕಾಡಿಗ್ಗೇರಿ ಉಮೇಶ್ ನಡುವೆ ಫೇಸ್‍ಬುಕ್ ಮೂಲಕ ಗೆಳೆತನ ಶುರುವಾಗಿ ಕ್ರಮೇಣ ಪ್ರೀತಿಗೆ ತಿರುಗಿತ್ತು.

ಇವರಿಬ್ಬರ ಜಾತಿ ಬೇರೆ ಎಂಬ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ. ವಿರೋಧದ ನಡುವೆಯೂ ಇವರಿಬ್ಬರೂ 2020ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಎಲ್ಲಾದರೂ ಇರು ಚೆನ್ನಾಗಿರು ಎಂದು ಹೇಳಿ ಆಕೆಯ ಪೋಷಕರೂ ಸುಮ್ಮನಾಗಿದ್ದರಂತೆ.

ಗೋಳಗೊಂಡೆ ಗ್ರಾಮದ ಉದಯ್ ಎಂಬುವವರ ನಾಲ್ಕು ಮಕ್ಕಳ ಪೈಕಿ ಎರಡನೇ ಮಗಳಾದ ಐಶ್ವರ್ಯ ತುಮಕೂರಲ್ಲಿ ತನ್ನ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಾದ 17 ದಿನಕ್ಕೆ ಹಿರಿಯ ಮಗಳು ಹೊಸನಗರದ ತನ್ನ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಒಂದೇ ತಿಂಗಳಲ್ಲಿ ಹೆಣ್ಣು ಮಕ್ಕಳಿಬ್ಬರು ದುರಂತವಾಗಿ ಸಾವು ಕಂಡಿದ್ದಾರೆ.

ಕೇವಲ 17 ದಿನದ ಹಿಂದೆ ಅಂದರೆ 2021ರ ಜೂ.8 ರಂದು ಸೌಂದರ್ಯಳ ತಂಗಿ ಐಶ್ವರ್ಯಳ ಶವ ತುಮಕೂರಿನಲ್ಲಿ ಗಂಡನ ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಹಾಗಾಗಿ ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪಾಲಕರು ಮಹಿಳಾ ಠಾಣೆಯಲ್ಲಿ‌ ದೂರು ನೀಡಿದ್ದಾರೆ.

ಜೂನ್ 10 ರಂದು ತಂಗಿ ಐಶ್ವರ್ಯಳ ಅಂತ್ಯಕ್ರಿಯೆ ವೇಳೆ ಅಕ್ಕ ಸೌಂದರ್ಯ ತನ್ನ ಗಂಡ ಉಮೇಶ್ ನೊಂದಿಗೆ ಬಂದು ಹೋಗಿದ್ದಳು. ಇದಾದ 17 ದಿನಕ್ಕೆ ಅಂದರೆ ಜೂನ್ 25 ರಂದು ಸೌಂದರ್ಯ ಸಹ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತಳ ಪಾಲಕರು ಕುಸಿದು ಬಿದ್ದಿದ್ದಾರೆ.

ಮಗಳ ಸಾವಿನಿಂದ ಆಕ್ರೋಶಗೊಂಡ ಆಕೆಯ ಪಾಲಕರು ಉಮೇಶನ ಮನೆಯ ಹತ್ತಿರವೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಅಲ್ಲದೆ ಸೂಕ್ತ ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

ಸದ್ಯ ಸೌಂದರ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತೀರ್ಥಹಳ್ಳಿ ಡಿಎಸ್​​ಪಿ ಶಾಂತವೀರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಿಪಿಐ ಜಿ.ಕೆ.ಮಧುಸೂದನ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

The post ಹೆತ್ತವರ ವಿರೋಧದ ನಡುವೆಯೂ ಪ್ರಿಯಕರನ ಕೈಹಿಡಿದ ಯುವತಿ- ಒಂದೇ ವರ್ಷಕ್ಕೆ ದುರಂತ ಅಂತ್ಯ appeared first on News First Kannada.

Source: newsfirstlive.com

Source link