ಬೆಂಗಳೂರು: ಚಾಮರಾಜಪೇಟೆ ಮಗು ಕಿಡ್ನಾಪ್​ ಕೇಸ್​ ನಿಮಗೆ ಗೊತ್ತೇ ಇದೆ. ಅಪಹರಣ ಪ್ರಕರಣವನ್ನ ಭೇದಿಸಿದ ಪೊಲೀಸರು ಬರೋಬ್ಬರಿ ಒಂದು ವರ್ಷದ ಬಳಿಕ ಬರಿದಾಗಿದ್ದ ಹೆತ್ತವರ ಮಡಿಲು ತುಂಬಿದ್ರು. ತಾವೇ ಹೆತ್ತ ಮಗುವನ್ನ ಮನೆಗೆ ಕರೆದೊಯ್ಯಲು ಒಂದಾದ ಮೇಲೊಂದು ಪರೀಕ್ಷೆಗಳನ್ನ ಎದುರಿಸ್ತಿದ್ದ ಹೆತ್ತವರು ಕೊನೆಗೂ ಗೆದ್ದಿದ್ದಾರೆ.

ಈ ತಾಯಿ ನವಮಾಸ ತನ್ನ ಒಡಲಲ್ಲಿ ಜೋಪಾನವಾಗಿಟ್ಕೊಂಡು, ಸಾವಿನ ಜೊತೆ ಸೆಣಸಾಡಿ ಮುದ್ದಾದ ಕಂದಮ್ಮನಿಗೆ ಜನ್ಮ ಕೊಟ್ಟಿದ್ಲು. ಆದ್ರೆ ಅದನ್ನ ಅಪ್ಪಿ ಮುದ್ದಾಡಲು, ಅದು ನಕ್ಕಾಗ ಖುಷಿಪಡಲು, ಅತ್ತಾಗ ಸುಮ್ಮನಾಗಿಸಲು, ಅದರ ತುಂಟಾಟ ನೋಡಲು, ಅದರ ತೊದಲು ನುಡಿ ಕೇಳಲು, ಅಂಬೆಗಾಲಿಡೋದನ್ನ ಕಣ್ತುಂಬಿಕೊಳ್ಳೋಕೆ ಮಾತ್ರ ಆಕೆ ಹಣೆಯಲ್ಲಿ ಬರೆದಿರಲಿಲ್ಲ ಅನಿಸುತ್ತೆ. ಯಾಕಂದ್ರೆ ಆ ಕಂದಮ್ಮ ಹುಟ್ಟುತ್ತಲೇ ಹೆತ್ತವರಿಂದ ದೂರವಾಗಿತ್ತು.‌

ನವಮಾಸ ಹೆತ್ತು ಹೊತ್ತಿದ್ದ ಕಂದಮ್ಮನ ಕಣ್ತುಂಬಿಕೊಳ್ಳೋಕೆ ಹೆತ್ತಮ್ಮ ಹಾತೊರೆಯುತ್ತಿದ್ರೆ, ಇತ್ತ ಆಸ್ಪತ್ರೆಯಲ್ಲಿ ಹಸುಗೂಸು ಅಪಹರಣವಾಗ್ಬಿಟ್ಟಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊನೆಗೂ ಮಗುವನ್ನ ತಾಯಿ ಮಡಿಲು ಸೇರಿಸಿದ್ರು. ಆದ್ರೆ, ಒಂದು ವರ್ಷದ ಬಳಿಕವೂ ಹೆತ್ತೊಡಲು ಸೇರಲು ಕಂದಮ್ಮನಿಗೆ ತೊಡಕು ಉಂಟಾಗಿತ್ತು. ಇದೀಗ ಪ್ರಕರಣ ಸುಖಾಂತ್ಯವಾಗಿದೆ.

ಮನೋವೈದ್ಯೆ ರಶ್ಮೀ ಮಗುವನ್ನ ಕದ್ದು ಕುಷ್ಟಗಿಯ ಪ್ರತಿಷ್ಠಿತ ಕುಟುಂಬಕ್ಕೆ ಮಾರಾಟ ಮಾಡಿದ್ಲು. ಅವರು ಕಂದನನ್ನ ಮುದ್ದಾಗಿ ಬೆಳೆಸುತ್ತಿದ್ರು. ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರು ಪ್ರಕರಣವನ್ನ ಭೇದಿಸಿದ್ರು. ಈ ವೇಳೆ ಕೋರ್ಟ್​ ಮಗುವಿನ ನಿಜವಾದ ಪೋಷಕರನ್ನ ಪತ್ತೆ ಹಚ್ಚುವಂತೆ ಸೂಚಿಸಿತ್ತು.

ರಶ್ಮಿ. ಮಗು ಕದ್ದ ಆರೋಪಿ

ಅದರಂತೆ ಮಗು ಸೇರಿದಂತೆ ಐವರನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದು ವರ್ಷದ ಮಗು, ಪಾದರಾಯನಪುರದ ದಂಪತಿ ಉಸ್ಮಾಬಾನು-ನವೀದ್ ಪಾಷಾ ಹಾಗೂ ಕೊಪ್ಪಳ ಮೂಲದ ದಂಪತಿಯ ಪರೀಕ್ಷೆ ನಡೆಸಲಾಗಿತ್ತು. ರಕ್ತದ ಮಾದರಿ ಸೇರಿ ಡಿಎನ್​ಎಗೆ ಬೇಕಾದ ಎಲ್ಲಾ ರೀತಿಯ ಸ್ಯಾಂಪಲ್​ ಸಂಗ್ರಹಿಸಿದ ವೈದ್ಯರು ಎಫ್ಎಸ್ಎಲ್​ಗೆ ಕಳುಹಿಸಿದ್ದರು. ಡಿಎನ್​ಎ‌ ಪರೀಕ್ಷೆಯ ವರದಿ ಬಂದಿದ್ದು, ಪಾದರಾಯನಪುರ‌ ನಿವಾಸಿ ಹುಸ್ನಾಬಾನು ದಂಪತಿಗೆ‌ ಸೇರಿದ‌ ಮಗು ಎಂದು ರುಜುವಾಗಿದೆ.

ಜುಲೈ ಐದರಂದು ಡಿಎನ್ಎ ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ವರದಿ ಪರಿಶೀಲನೆ ನಡೆಸಿ ಕೋರ್ಟ್ಗೆ ರಿಪೋರ್ಟ್ ಸಲ್ಲಿಸಿದ್ದಾರೆ. ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಒಟ್ನಲ್ಲಿ, ಒಂದು ವರ್ಷದಿಂದ ಹೆತ್ತವರಿಂದ ದೂರಾಗಿದ್ದ ಮಗು ಕೊನೆಗೂ ಹೆತ್ತವರ ಮಡಿಲು ಸೇರಲಿದೆ.

The post ಹೆತ್ತ ಮಗುವನ್ನ ಅಪ್ಪಿಕೊಳ್ಳಲು ಅಗ್ನಪರೀಕ್ಷೆಯನ್ನೇ ಎದುರಿಸಿದ ತಾಯಿ.. ಕೊನೆಗೂ ಮಡಿಲು ಸೇರುತ್ತಿದೆ ಮಗು appeared first on News First Kannada.

Source: newsfirstlive.com

Source link