ಹೈಕೋರ್ಟ್ ನಂತರ ರಾಜಕಾರಣಿಗಳಿಗೆ ಉಗಿಯುವ ಸರದಿ ಸಾರ್ವಜನಿಕರದ್ದು, ಕೋವಿಡ್ ನಿಯಮ ಅವರಿಗ್ಯಾಕೆ ಅನ್ವಯಿಸುವುದಿಲ್ಲ? | After the High Court its public’s turn take on erring politicians, Covid restrictions should apply to them too ARB


ಪಾದಯಾತ್ರೆ ಶುರುಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಈಗ ಸಾರ್ವಜನಿಕರು ಸಹ ಮುಖಕ್ಕೆ ಉಗಿಯುತ್ತಿದ್ದಾರೆ. ಮೈಸೂರಿನಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಜಯಶ್ರೀ ಮಂಜುನಾಥ ಎನ್ನುವವರ ಜೊತೆ ನಮ್ಮ ಮೈಸೂರು ವರದಿಗಾರ ಮಾತಾಡಿದಾಗ ಕೊವಿಡ್ ನಿಯಮಾವಳಿಗಳ ಹಿನ್ನೆಲೆಲಯಲ್ಲಿ ಗಂಟೆಗಟ್ಟಲೆ ದೇವಸ್ಥಾನದ ಮುಂದೆ ನಿಂತರೂ ದೇವರ ದರ್ಶನ ಸಾಧ್ಯವಾಗದೆ ಬೇಸರಗೊಂಡಿದ್ದ ಜಯಶ್ರೀ ಅವರು ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ಒಂದು ನ್ಯಾಯ, ರಾಜಕೀಯ ಧುರೀಣರಿಗೆ ಮತ್ತೊಂದು ನ್ಯಾಯ ಅಂದರೆ ಹೇಗೆ? ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುತ್ತಾರೆ, ಆಡಳಿತ ಪಕ್ಷದವರು ಸಾರ್ವಜನಿಕ ಸಭೆಗಳನ್ನು ನಡೆಸುತ್ತಾರೆ. ಟಿವಿಯಲ್ಲಿ ನಾವು ಎಲ್ಲವನ್ನು ನೋಡುತ್ತಿದ್ದೇವೆ. ನಾಯಕರಲ್ಲಿ ಎಷ್ಟು ಜನ ಮಾಸ್ಕ್ ಧರಿಸಿರುತ್ತಾರೆ? ಸಾವಿರಾರು ಜನ ಗುಂಪುಗೂಡಿರುತ್ತಾರೆ. ಅವರಿಗೆಲ್ಲ ಕೋವಿಡ್ ನಿಯಮಗಳು ಅನ್ವಯಿಸುದಿಲ್ಲವೇ ಅಂತ ಜಯಶ್ರೀ ಕೇಳಿದರು.

ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿರುವಾಗ ಸಾರ್ವಜನಿಕವಾಗಿ ಸಭೆ ನಡೆಸುವ ಅಗತ್ಯವೇನಿದೆ? ಆನ್​ಲೈನಲ್ಲಿ ಮೀಟಿಂಗ್​ಗಳನ್ನು ನಡೆಸಬಹುದಲ್ವ? ವಿಡಿಯೋ ಕಾನ್ಫರೆನ್ಸ್ ಗಳನ್ನು ಬೇರೆಲ್ಲ ಕಡೆ ಮಾಡುತ್ತಾರೆ, ನಮ್ಮಲ್ಲಿ ಯಾಕಿಲ್ಲ? ಇವರಿಗೆ ನಮ್ಮ ವೋಟುಗಳು ಮಾತ್ರ ಬೇಕು. ಸಾರ್ವಜನಿಕರ ಬಗ್ಗೆ ಇವರಿಗೆ ಸ್ವಲ್ಪವೂ ಕಾಳಜಿಯಿಲ್ಲ, ಸಹಾಯವಂತೂ ಮೊದಲೇ ಇಲ್ಲ. ಅವರೇನೋ ಕಾರುಗಳಲ್ಲಿ ಆರಾಮವಾಗಿ ಓಡಾಡುತ್ತಾರೆ, ನಮ್ಮ ಗತಿಯೇನು? ಎಂದು ಜಯಶ್ರೀ ರಾಜಕಾರಣಿಗಳನ್ನು ಜರಿದರು.

ಲಾಕ್ಡೌನ್ ಸಮಯದಲ್ಲಿ ಸರ್ಕಾರ ದಿನಗೂಲಿ ಮಾಡುವವರಿಗೆ, ಆಟೋಚಾಲಕರಿಗೆ ಹಣ ಕೊಡುತ್ತೇವೆ ಅಂತ ಹೇಳುತ್ತಾರೆ. ಅದನ್ನು ಪಡೆಯಲು ಜನ ಎಷ್ಟು ಪಡಬೇಕಾಗುತ್ತದೆ ಅಂತ ಅವರಿಗೇನಾದರೂ ಗೊತ್ತಿದೆಯಾ? ಎಂದು ಕೇಳಿದ ಜಯಶ್ರೀ ಅವರು ನಿಯಮ ಪಾಲಿಸದ ಸಾರ್ವಜನಿಕರಿಗೆ ಶಿಕ್ಷಿಸುವ ಹಾಗೆ ರಾಜಕಾರಣಿಗಳನ್ನು ಸಹ ಶಿಕ್ಷಿಸಬೇಕು ಎಂದರು.

TV9 Kannada


Leave a Reply

Your email address will not be published. Required fields are marked *