ಹೈದ್ರಾಬಾದ್‌ನಲ್ಲಿ ತಲೆ ಎತ್ತಿದ ರಾಮಾನುಜರ ‘ಸಮಾನತೆ ಪ್ರತಿಮೆ’!.. ಏನಿದರ ವಿಶೇಷತೆ?


ಇತಿಹಾಸ ನಿರ್ಮಾಣ ಮಾಡ್ಬೇಕು ಅಂದ್ರೆ ಇತಿಹಾಸ ಗೊತ್ತಿರಬೇಕು ಅನ್ನೋ ಮಾತಿದೆ. ಅದು ಸತ್ಯ ಕೂಡ ಹೌದು. ಇತಿಹಾಸವನ್ನು ಇಂದಿನ ಪೀಳಿಗೆಯ ಜನಕ್ಕೆ ಮನಮುಟ್ಟುವಂತೆ ತಿಳಿಸಬೇಕು. ಹಾಗೇ ಮುಂದಿನ ಪೀಳಿಗೆಗೂ ಇತಿಹಾಸದ ಅರಿವು ಮೂಡಿಸುವ ಕುರುಹುಗಳನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ 11ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ಆ ಮಹಾನುಭಾವರ ಬೃಹತ್ ಪ್ರತಿಮೆಯೊಂದು ದೇಶದಲ್ಲಿ ತಲೆ ಎತ್ತಲಿದೆ.

ದೇಶದ ಏಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಾಯ್‌ ಪಟೇಲ್​ರ ಪ್ರತಿಮೆ ಇದು. ಗುಜರಾತ್‌ನಲ್ಲಿ ನಿರ್ಮಾಣವಾಗಿರೋ ಈ ಪ್ರತಿಮೆಯನ್ನು ನೋಡಿ ಇಡೀ ಜಗತ್ತೇ ಬೆಕ್ಕಸ ಬೆರಗಾಗಿತ್ತು. ಯಾಕಂದ್ರೆ ಇದರ ಎತ್ತರ ಬರೋಬ್ಬರಿ 182 ಮೀಟರ್‌ ಇದ್ದು, ಇಷ್ಟೊಂದು ಎತ್ತರದ ಪ್ರತಿಮೆ ಜಗತ್ತಿನಲ್ಲಿ ಎಲ್ಲಿಯೂ ಇರಲಿಲ್ಲ. ಇದೀಗ ನೀವು ಜಗತ್ತಿನ ಅತೀ ಎತ್ತರ ಪ್ರತಿಮೆ ಯಾವುದು ಅಂತ ಗೂಗಲ್‌ನಲ್ಲಿ ಸರ್ಚ್‌ ಕೂಟ್ರೆ ಆಡಳಿತದಲ್ಲಿರುವ ಮೋದಿ ಸರ್ಕಾರದ ಅವಧಿಯಲ್ಲಿ ಲೋಕಾರ್ಪಣೆಗೊಂಡ ಈ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಪ್ರತಿಮೆ ಎಂದು ಸರ್ಚ್ ರಿಸಲ್ಟ್​ ಬರತ್ತೆ. ಈ ಹೆಮ್ಮೆ ಭಾರತಕ್ಕಿದೆ. ಇದೀಗ ದೇಶವೇ ಹೆಮ್ಮೆ ಪಡುವಂತಹ ಮತ್ತೊಂದು ಬೃಹತ್‌ ಪ್ರತಿಮೆ ತಲೆಎತ್ತಲು ಸಜ್ಜಾಗಿದೆ. ಅದನ್ನೂ ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ

ಹೈದ್ರಾಬಾದ್‌ನಲ್ಲಿ ತಲೆ ಎತ್ತಿದ ರಾಮಾನುಜರ ‘ಸಮಾನತೆ ಪ್ರತಿಮೆ’!
ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ!

ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ರಾಮಾನುಜಾಚಾರ್ಯರ ಪ್ರತಿಮೆ ಬಗ್ಗೆ ಹೇಳೋಕು ಮುನ್ನ ನಾವು ಅವರ ಬಗ್ಗೆ ತಿಳಿದುಕೊಳ್ಳಲೇಬೇಕು. ಸಮಾಜದಲ್ಲಿ ಇಂದಿಗೂ ನಾವು ಅಸ್ಪೃಶ್ಯತೆ, ಜಾತಿಯತೆ ಅನ್ನೋ ಪಿಡುಗಗಳನ್ನು ನೋಡ್ತಾನೇ ಇದ್ದೀವಿ. ಆದ್ರೆ, 11ನೇ ಶತಮಾನದಲ್ಲಿಯೇ ಅಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಮಾಹಾನ್‌ ಸಂತ ರಾಮಾನುಜರು. 1017 ರಲ್ಲಿ ತಮಿಳುನಾಡಿದ ಪೆರಂಬದೂರಿನಲ್ಲಿ ಜನಿಸಿದ ಇವರು. ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರಾಗಿದ್ರು.

ಸಂತರಾಗಿರೋ ರಾಮಾನುಜರು ಸಮಾಜ ಸುಧಾರಣೆಗಾಗಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದವರು. ಎದುರಾದ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿದವರು. ನಮಗೆ ಇಂದಿಗೂ ಸಮಾಜದಲ್ಲಿ ಹಲವಾರು ಅನಿಷ್ಠ ಪದ್ಧತಿಗಳ ದರ್ಶನವಾಗ್ತಿದೆ. ಅದು ಧಾರ್ಮಿಕ ಸೂಕ್ಷ್ಮ ವಿಚಾರ, ಕೋಮು ವಿಚಾರ ಅಂತ ಅದರ ತಂಟೆಗಳಿಗೆ ಸರ್ಕಾರವೇ ಹೋಗಲ್ಲ. ಇನ್ನು, ಜನರಂತೂ ಬಾಯಿ ತರೆದು ಮಾತನಾಡಲ್ಲ. ಆದ್ರೆ, 11ನೇ ಶತಮಾನದಲ್ಲಿಯೇ ಅಂತಹ ಕೆಟ್ಟ ಪದ್ಧತಿಗಳ ವಿರುದ್ಧ ರಾಮಾನುಜರು ಹೋರಾಟ ಮಾಡಿದವರು. ಸಮಾನತೆಗಾಗಿ ಸಾಕಷ್ಟು ದುಡಿದವರು ಅಂದ್ರೆ ಕಲ್ಪನೆ ಮಾಡಿಕೊಳ್ಳೋದು ಕಷ್ಟ ಅಲ್ವ? ಆದ್ರೆ, ರಾಮಾನುಜರು ಆ ಕೆಲಸ ಮಾಡಿದ್ದಾರೆ. ಸಮಾನತೆಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದೇ ಕಾರಣಕ್ಕೆ ಹೈದ್ರಾಬಾದ್‌ನಲ್ಲಿ ನಿರ್ಮಾಣವಾಗುತ್ತಿರೋ ರಾಮಾನುಜರ ಪ್ರತಿಮೆಯನ್ನ ಸಮಾನತೆಯ ಪ್ರತಿಮೆ ಅಂತಲೇ ಕರೆಯಲಾಗುತ್ತಿದೆ. ಈ ಪ್ರತಿಮೆಯನ್ನು ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಸಮಾನತೆಯ ಪ್ರತಿಮೆ ಸಿದ್ಧ
ಹೈದರಾಬಾದ್‌ನ ಮುಂಚಿಂತಾಲ್‌ ಗ್ರಾಮದಲ್ಲಿ ನಿರ್ಮಾಣ
ರಾಮಾನುಜರ 1000ನೇ ವರ್ಷಾಚರಣೆ ಅಂಗವಾಗಿ ಸ್ಥಾಪನೆ
ರಾಮಾನುಜ ಪ್ರತಿಮೆ ನಿರ್ಮಾಣದ ವೆಚ್ಚ ₹ 1000 ಕೋಟಿ
ಪದ್ಮಾಸನ ಹಾಕಿ ಕುಳಿತ ಭಂಗಿಯಲ್ಲಿಯೇ ಪ್ರತಿಮೆ ಸ್ಥಾಪನೆ
ರಾಮಾನುಜರ ‘ಸಮಾನತೆ ಪ್ರತಿಮೆ’ಯ ಎತ್ತರ 216 ಅಡಿ
ಕುಳಿತ ಸ್ಥಿತಿಯಲ್ಲಿರೋ ಜಗತ್ತಿನ 2ನೇ ಅತೀ ಎತ್ತರದ ಪ್ರತಿಮೆ
65 ಎಕರೆ ಕಾಂಪ್ಲೆಕ್ಸ್‌ನಲ್ಲಿ ನಿರ್ಮಾಣವಾಗಿದೆ ಈ ಪ್ರತಿಮೆ
ಥಾಯ್ಲೆಂಡ್‌ನಲ್ಲಿ ಇದೇ 300 ಅಡಿ ಎತ್ತರದ ಬುದ್ಧನ ವಿಗ್ರಹ

ಫೆಬ್ರವರಿ 5ರಂದು ಲೋಕಾರ್ಪಣೆಗೊಳ್ತಿರೋ ರಾಮಾನುಜರ ಪ್ರತಿಮೆ ಹಲವಾರು ವಿಶೇಷತೆಗಳನ್ನೇ ಹೊಂದಿದೆ. ಇದು, ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿ ನಿರ್ಮಾಣವಾಗಿದೆ. ರಾಮಾನುಜರ 1000ನೇ ವರ್ಷಾಚರಣೆ ಅಂಗವಾಗಿ 2017 ರಲ್ಲಿಯೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಅದು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಈ ಪ್ರತಿಮೆ ನಿರ್ಮಾಣದ ವೆಚ್ಚ ಸುಮಾರು 1 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಂತರಾಗಿರೋ ರಾಮಾನುಜರು ಪದ್ಮಾಸನ ಹಾಕಿ ಕುಳಿತ ಭಂಗಿಯಲ್ಲಿಯೇ ಬೃಹತ್‌ ಪ್ರತಿಮೆ ತಯಾರಿಸಲಾಗಿದ್ದು, ಇದಕ್ಕೆ ಸಮಾನತೆ ಪ್ರತಿಮೆ ಎಂದೇ ಹೆಸರಿಸಲಾಗಿದೆ. ಇನ್ನು, ಈ ಪ್ರತಿಮೆ ಬರೋಬ್ಬರಿ 216 ಅಡಿ ಎತ್ತರವಿದೆ. ಕುಳಿತ ಸ್ಥಿತಿಯಲ್ಲಿರೋ ಜಗತ್ತಿನ 2ನೇ ಅತೀ ಎತ್ತರ ಪ್ರತಿಮೆ ಎಂಬ ಹೆಗ್ಗಳಿಕೆ ಕೂಡ ಸಿಗಲಿದ್ದು. 65 ಎಕರೆ ಜಾಗದಲ್ಲಿ ಇದು ನಿರ್ಮಾಣವಾಗುತ್ತಿದೆ. ಇನ್ನು ಥಾಯ್ಲೆಂಡ್‌ನಲ್ಲಿ ಕುಳಿತ ಸ್ಥಿತಿಯಲ್ಲಿ 300 ಅಡಿ ಎತ್ತರದ ಬುದ್ಧನ ವಿಗ್ರಹವಿದ್ದು, ಅದಾದ ಬಳಿಕ ಕುಳಿತ ಸ್ಥಿತಿಯಲ್ಲಿರೋ 2ನೇ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ರಾಮಾನುಜರ ಪ್ರತಿಮೆ ಪಾತ್ರವಾಗಲಿದೆ.
2017ಕ್ಕೆ ರಾಮಾನುಜರು ಜನಿಸಿ ಒಂದು ಸಾವಿರ ವರ್ಷವಾಗಿದ್ದು, ಇದೇ ಹಿನ್ನೆಲೆಯಲ್ಲಿ ರಾಮಾನುಜರ ತತ್ವ ಸಿದ್ಧಾಂತಗಳ ಬಗ್ಗೆ ಜಗತ್ತಿಗೆ ಸಾರಲು ಸರ್ಕಾರ ತೀರ್ಮಾನಿಸಿತ್ತು. ಸಮಾಜ ಸುಧಾರಣೆಗೆ ರಾಮಾನುಜರ ಕೊಡುಗೆ ಏನು? ಅವರು ನಡೆದು ಬಂದ ಹಾದಿ ಹೇಗಿತ್ತು? ಅನಿಷ್ಠ ಪದ್ಧತಿಗಳ ಬಗ್ಗೆ ಜನರಿಗೆ ಯಾವ ರೀತಿಯಲ್ಲಿ ಅರಿವು ಮೂಡಿಸಿದ್ರು? ಅನ್ನೋ ಬಗ್ಗೆ ತಿಳಿಸಲು ಚಿಂತಿಸಿತ್ತು. ಆದ್ರೆ, ಏನೂ ಮಾಡದೇ ರಾಮಾನುಜರ ತತ್ವಗಳನ್ನು ಜಗತ್ತಿಗೆ ಸಾರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬೃಹತ್‌ ಪ್ರತಿಮೆ ನಿರ್ಮಾಣ ಮಾಡಬೇಕು, ಅದನ್ನು ಧಾರ್ಮಿಕ ಕೇಂದ್ರವಾಗಿ ರೂಪಿಸಬೇಕು. ಮುಂದಿನ ಜನಾಂಗಕ್ಕೂ ರಾಮಾನುಜರ ಬಗ್ಗೆ ಅರಿವು ಮೂಡಿಸಬೇಕು ಅನ್ನೋ ಉದ್ದೇಶವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು 2017ರಿಂದಲೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಿತ್ತು.

ಪಂಚಲೋಹ ಬಳಸಿ ‘ಸಮಾನತೆ ಪ್ರತಿಮೆ’ ತಯಾರು
ಇದೇ ಕಾಂಪ್ಲೆಕ್ಸ್‌ನಲ್ಲಿ 108 ವಿಷ್ಣು ದೇಗುಲ ನಿರ್ಮಾಣ

ಇನ್ನು, ಈ ಸಮಾನತೆಯ ಪ್ರತಿಮೆ 216 ಅಡಿ ಎತ್ತರದಲ್ಲಿ ಸಖತ್ ಸುಂದರವಾಗಿ ನಿರ್ಮಾಣಗೊಂಡಿದೆ. ವಿಶೇಷ ಅಂದ್ರೆ, ಈ ಮೂರ್ತಿ ತಯಾರಿಕೆಗೆ ಪಂಚ ಲೋಹಗಳ ಬಳಕೆ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ, ಕಬ್ಬಿಣ ಈ ಐದು ಲೋಹಗಳನ್ನು ಬಳಸಿ ನಾಲ್ಕೇ ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ಮಳೆ ಗಾಳಿ ಚಳಿ ಏನೇ ಆದ್ರೂ ಪ್ರತಿಮೆಗೆ ಏನೂ ಆಗದಂತೆ ಅತ್ಯುನ್ನತ ತಂತ್ರಜ್ಞಾನ ಅಳವಡಿಸಲಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚಿಗೆ ವರ್ಷ ಈ ಪ್ರತಿಮೆ ಬಾಳಿಕೆ ಬರುತ್ತೆ ಎನ್ನಲಾಗಿದೆ.

ಇನ್ನು 11ನೇ ಶತಮಾನ ಅದ್ವೈತ ಸಿದ್ಧಾಂತದ ಪ್ರವರ್ಧಮಾನದ ಕಾಲವಾಗಿತ್ತು. ಅಂತ ಸಂದರ್ಭದಲ್ಲಿ ತಮಿಳುನಾಡಿನ ಸಂತರಾದ ಆಳ್ವರ್ಸರ ವಿಶಿಷ್ಟದ್ವೈತ ಸಿದ್ಧಾಂತ ಪಾಲನೆ ಮಾಡ್ತಾ ಇದ್ರು. ವಿಶಿಷ್ಟದ್ವೈತ ಅನ್ನೋದು ಎಲ್ಲರೂ ಸಮಾನರು ಅನ್ನೋದನ್ನು ಪ್ರತಿಪಾದನೆ ಮಾಡುತ್ತೆ. ಯಾವುದೇ ಭೇದಭಾವ ಇರಬಾರದು ಅನ್ನೋದನ್ನು ಹೇಳುತ್ತೆ. ಹಾಗೇ, ವೈಕುಂಠ ಪ್ರವೇಶಕ್ಕೆ ವಿಷ್ಣುವನ್ನು ಆರಾಧಿಸುವಂತೆ ಹೇಳುತ್ತೆ. ಇದೇ ಕಾರಣಕ್ಕೆ ರಾಮಾನುಜಾಚಾರ್ಯರು ವಿಶಿಷ್ಟದ್ವೈತ ತತ್ವ ಸಿದ್ಧಾಂತದತ್ತ ಆಕರ್ಶಿತರಾಗುತ್ತಾರೆ. ಅದನ್ನು ಭಾರತದಾದ್ಯಂತ ಪ್ರಚಾರ ಪಡಿಸುತ್ತಾರೆ. ಜನರಲ್ಲಿ ಅರಿವು ಮೂಡಿಸುತ್ತಾರೆ. ಭಗವಾನ್‌ ವಿಷ್ಣುವನ್ನು ಆಱಧಿಸಲು ಹೇಳುವುದರಿಂದ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣದ ಕಾಂಪ್ಲೆಕ್ಸ್‌ನಲ್ಲಿಯೇ 108 ವಿಷ್ಣು ದೇವಾಲಯಗಳ ನಿರ್ಮಾಣವೂ ಆಗಿದೆ.

120 ಕಿಲೋ ಗ್ರಾಮ್‌ನಲ್ಲಿ ಗರ್ಭಗುಡಿ ನಿರ್ಮಾಣ
ರಾಷ್ಟ್ರಪತಿಯಿಂದ ಗರ್ಭಗುಡಿಯ ಪ್ರತಿಮೆ ಅನಾವರಣ

ಹೈದರಾಬಾದ್‌ನಲ್ಲಿ ನಿರ್ಮಾಣವಾಗುತ್ತಿರೋ ರಾಮಾನುಚಾರ್ಯರ ವಿಶ್ವ ಪ್ರಸಿದ್ಧ ಪ್ರತಿಮೆ ನಿರ್ಮಾಣ ಹಲವಾರು ವಿಶೇಷತೆಗಳನ್ನ ಹೊಂದಿದೆ. ಹೊರ ಭಾಗದಲ್ಲಿ ದೊಡ್ಡದಾದ ಪ್ರತಿಮೆ ನಿರ್ಮಾಣವಾದ್ರೆ, ಒಳಭಾಗದಲ್ಲಿ ಕೂಡ ರಾಮಾನುಚಾರ್ಯರ ಗರ್ಭಗುಡಿಯ ನಿರ್ಮಾಣವಾಗಿದೆ. ಈ ಗರ್ಭಗುಡಿಯಲ್ಲಿ ರಾಮಾನುಜರ ಮೂರ್ತಿ ನಿರ್ಮಿಸಲಾಗಿದೆ. ಅದಕ್ಕೆ 120 ಕೆಜಿ ಬಂಗಾರವನ್ನು ಬಳಸಲಾಗಿದೆ. ಈ ಮೂರ್ತಿ ಲೋಕಾಪರ್ಣೆ ಕಾರ್ಯ ಫೆಬ್ರವರಿ 13 ರಂದು ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉದ್ಘಾಟನೆ ಮಾಡಲಿದ್ದಾರೆ.

1035 ಹೋಮಕುಂಡಗಳು, 2 ಲಕ್ಷ ಕೆಜಿ ತುಪ್ಪ!
ಧಾರ್ಮಿಕ ಕ್ಷೇತ್ರವಾಗಿ ತಲೆ ಎತ್ತಲಿದೆ ಈ ಕ್ಷೇತ್ರ

ಫೆಬ್ರವರಿ 2ರಿಂದ 14ರವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿನಿತ್ಯ ಒಂದೊಂದು ರೀತಿಯ ಕಾರ್ಯಕ್ರಮವನ್ನು ಆಡಳಿತ ಕಮಿಟಿ ಹಮ್ಮಿಕೊಂಡಿದೆ. ಅದರಲ್ಲೂ ವಿಶೇಷವಾದದ್ದು ಅಂದ್ರೆ, ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ 216 ಅಡಿ ಪ್ರತಿಮೆಯ ಲೋಕಾರ್ಪಣೆ ಮಾಡೋದು. ಫೆಬ್ರವರಿ 13 ರಂದು ರಾಷ್ಟಪತಿ ರಾಮನಾಥ್‌ ಕೋವಿಂದ್‌ ಭೇಟಿ ನೀಡುವುದು. ಇನ್ನು ಇದೇ ಕಾರ್ಯಕ್ರಮದಲ್ಲಿ ಬೃಹತ್‌ ಹೋಮಕ್ಕೆ ಕಾರ್ಯಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿಯೇ 1035 ಹೋಮಕುಂಡಗಳನ್ನು ನಿರ್ಮಿಸಲಾಗಿದೆ. ಎರಡು ಲಕ್ಷ ಹಸುವಿನ ಕೆಜಿ ಹಸುವಿನ ತಪ್ಪವನ್ನು ಹೋಮಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ಮೇಲೆ ಇದು ಧಾರ್ಮಿಕ ಕ್ಷೇತ್ರವಾಗಿ ರೂಪಗೊಳ್ಳಲಿದೆ.

ಪ್ರತಿಮೆ ನಿರ್ಮಾಣ ತಪ್ಪೋ ಸರಿಯೋ ಅನ್ನೋದರ ಬಗ್ಗೆ ವಾದ ಪ್ರತಿವಾದಗಳು ಇದ್ದೇ ಇರುತ್ತವೆ. ಆದ್ರೆ, ಇತಿಹಾಸದಲ್ಲಿ ಮಹತ್ವದ ಕಾಣಿಕೆ ನೀಡಿರೋ ಮಹಾನ್‌ ವ್ಯಕ್ತಿಗಳ ಪ್ರತಿಮೆ ನಿರ್ಮಾಣದಿಂದ ಅವರ ತತ್ವ ಸಿದ್ಧಾಂತಗಳನ್ನು ಜಗತ್ತಿಗೆ ಪ್ರಸರಿಸಲು ಸಾಧ್ಯ. ಅದರಿಂದ ಸಮಾಜ ಸ್ವಲ್ಪನಾದ್ರೂ ಬದಲಾವಣೆ ಪಡೆದ್ರೆ, ಪ್ರತಿಮೆ ನಿರ್ಮಾಣ ಕಾರ್ಯ ಸಾರ್ಥಕವಾದಂತೆ ಆಗುತ್ತೆ.

News First Live Kannada


Leave a Reply

Your email address will not be published. Required fields are marked *