ಹೊರಬಿತ್ತು ‘ದಿ ಕಾಶ್ಮೀರ್ ಫೈಲ್ಸ್’ ಒಟಿಟಿ ರಿಲೀಸ್ ದಿನಾಂಕ; ಇಲ್ಲಿದೆ ವಿವರ | The Kashmir Files OTT Release date The Kashmir Files movie to premier on Zee5 on May 13th


ಹೊರಬಿತ್ತು ‘ದಿ ಕಾಶ್ಮೀರ್ ಫೈಲ್ಸ್’ ಒಟಿಟಿ ರಿಲೀಸ್ ದಿನಾಂಕ; ಇಲ್ಲಿದೆ ವಿವರ

ದಿ ಕಾಶ್ಮೀರ್ ಫೈಲ್ಸ್

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ. ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆ ಮತ್ತು ವಲಸೆ ಆಧರಿಸಿ ಸಿದ್ಧಗೊಂಡ ಈ ಚಿತ್ರ ಭಾರತದ ಭಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ನಾಲ್ಕು ಕೋಟಿ ರೂಪಾಯಿಗೂ ಕಡಿಮೆ ಕಲೆಕ್ಷನ್ ಮಾಡಿದ ಸಿನಿಮಾ ನಂತರ 250 ಕೋಟಿ ರೂಪಾಯಿ ಕ್ಲಬ್ ಸೇರುತ್ತದೆ ಎಂದರೆ ಅದು ನಿಜಕ್ಕೂ ಸಾಧನೆಯೇ ಸರಿ. ಈಗ ಈ ಸಿನಿಮಾ ಒಟಿಟಿಗೆ ಬರೋಕೆ ರೆಡಿ ಆಗಿದೆ. ಜೀ5 ಆ್ಯಪ್​ ಮೂಲಕ ಸಿನಿಮಾ ಪ್ರಸಾರ ಆಗುತ್ತಿದೆ.

ವಿವೇಕ್ ಅಗ್ನಿಹೋತ್ರಿ ನಿರ್ಮಾಣದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬಂದಿತ್ತು. ಈ ಚಿತ್ರವನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕ ರಾಜಕೀಯ ನಾಯಕರು ಈ ಸಿನಿಮಾಗೆ ಬೆಂಬಲ ನೀಡಿದ್ದರು. ಇದರಿಂದ ಚಿತ್ರದ ಮೈಲೇಜ್ ಹೆಚ್ಚಿತ್ತು. ಸೆಲೆಬ್ರಿಟಿ ವಲಯದಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಮಧ್ಯೆ, ಕೆಲವರು ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಚಿತ್ರ ಗೆದ್ದು ಬೀಗಿದೆ. ಈಗ ಸಿನಿಮಾ ಮೇ 13ರಂದು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

‘ದಿ ಕಾಶ್ಮೀರ್ ಫೈಲ್ಸ್’ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಹಿಂದಿ ತಿಳಿಯದೇ ಇರುವ ಪ್ರೇಕ್ಷಕರಿಗೆ ಈ ಸಿನಿಮಾ ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಈಗ ಒಟಿಟಿಯಲ್ಲಿ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಇದು ಹಲವರಿಗೆ ಖುಷಿ ನೀಡಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದ ಬಜೆಟ್ ಕೇವಲ 15 ಕೋಟಿ ರೂಪಾಯಿ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಈ ಚಿತ್ರವನ್ನು ಕೆಲವರು ವಿರೋಧಿಸಿದ್ದಾರೆ. ಈ ಚಿತ್ರದಿಂದ ಶಾಂತಿ ಕದಡುವ ಪ್ರಯತ್ನ ಆಗಿದೆ ಎಂದು ಆರೋಪಿಸಿದವರು ಇದ್ದಾರೆ.

TV9 Kannada


Leave a Reply

Your email address will not be published. Required fields are marked *