ಬೆಂಗಳೂರು: ಹೊರ ರಾಜ್ಯದ ಪ್ರಯಾಣಕ್ಕೆ ಕಡ್ಡಾಯವಾಗಿ ಕೋವಿಡ್​ ರಿಪೋರ್ಟ್​ ಸಲ್ಲಿಸಬೇಕಿರುವ ಹಿನ್ನೆಲೆ, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ನಕಲಿ ರಿಪೋರ್ಟ್  ತಯಾರಿಸಿಕೊಡುತ್ತಿದ್ದ ದಂಧೆ ಬೆಳಕಿಗೆ ಬಂದಿತ್ತು. ಇದೀಗ ಈ ದಂಧೆಯ ಕಿಂಗ್​​ಪಿನ್​​ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಲಾಲ್(35) ಬಂಧಿತ ಆರೋಪಿ. ಈ ಪ್ರಕರಣದ ಮತ್ತೊಬ್ಬ ಆರೋಪಿ‌ ಎಸ್ಕೇಪ್ ಆಗಿದ್ದಾನೆ.

ಅಕ್ಕಿಪೇಟೆ‌ ನಿವಾಸಿಯಾಗಿದ್ದ ಆರೋಪಿ ಸಂಪತ್ ಲಾಲ್, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳಕ್ಕೆ ಹೋಗುವವರಿಗೆ ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್ ತಯಾರಿಸಿಕೊಡ್ತಿದ್ದ. ಕೊರೊನಾ ಟೆಸ್ಟ್​ ಮಾಡದೆಯೇ.. ನಕಲಿ‌ ವೈದ್ಯರ ಹೆಸರು, ಸೀಲ್, ವೈದ್ಯರಿಂದ ದೃಢೀಕರಣ ನೀಡಿದ ರೀತಿ ರಿಪೋರ್ಟ್ ತಯಾರಿಸುತ್ತಿದ್ದ. ಒಂದು ನಕಲಿ ನೆಗೆಟಿವ್ ರಿಪೋರ್ಟ್​ಗೆ 3-4 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ.

ಈತ ಕಳೆದ 15 ದಿನಗಳಲ್ಲಿ ಅನೇಕ ಪ್ರಯಾಣಿಕರಿಗೆ‌ ನಕಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೊಟ್ಟಿದ್ದಾನೆ. ಈತನಿಂದ ನಕಲಿ ರಿಪೋರ್ಟ್ ಪಡೆದು ಅನೇಕರು ಪ್ರಯಾಣಿಸಿದ್ದಾರೆ. ಸಂಪತ್​ ಲಾಲ್​​ ಈ ಹಿಂದೆ ರೈಲ್ವೆ ಟಿಕೆಟ್​ ಮತ್ತು ವಿಮಾನಗಳ ಟಿಕೆಟ್ ಬುಕ್ ಮಾಡ್ತಿದ್ದ. ಇತ್ತೀಚೆಗೆ ರೈಲ್ವೆ ಟಿಕೆಟ್ ಬುಕ್ಕಿಂಗ್​​ಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾದ ಹಿನ್ನೆಲೆ ಈ ದಂಧೆಗೆ‌ ಇಳಿದಿದ್ದ ಎಂದು ತಿಳಿದುಬಂದಿದೆ.

ಪೊಲೀಸರು ಆರೋಪಿಯಿಂದ ಮೂರು ನಕಲಿ ಕೋವಿಡ್ ನೆಗಿಟಿವ್ ಸರ್ಟಿಫಿಕೇಟ್ ಹಾಗೂ ಒಂದು ಮೊಬೈಲ್ ಸೀಜ್ ಮಾಡಿದ್ದಾರೆ. ಈತನ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ‌ಕೊರೊನಾ ನೆಗೆಟಿವ್ ರಿಪೋರ್ಟ್ ಬಳಸಿ ಹಲವರು ಪ್ರಯಾಣಿಸಿರುವ ಬಗ್ಗೆ ಆಯಾ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.

The post ಹೊರರಾಜ್ಯ ಪ್ರಯಾಣಕ್ಕೆ ನಕಲಿ ಕೋವಿಡ್ ರಿಪೋರ್ಟ್ ದಂಧೆ: ಸಿಕ್ಕಿಬಿದ್ದ ಕಿಂಗ್​ಪಿನ್​​ appeared first on News First Kannada.

Source: newsfirstlive.com

Source link