ಹೊಸಬರ ‘ಅಸ್ಥಿರ’ ಟೀಸರ್​ ರಿಲೀಸ್​ ಮಾಡಿ ಶುಭ ಕೋರಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​ | Asthira Kannada movie teaser released by Karnataka Film Chamber of Commerce president Ba Ma Harish


ಥ್ರಿಲ್ಲರ್ ಹಾಗೂ ಸೆಸ್ಪೆನ್ಸ್ ಮಾದರಿಯಲ್ಲಿ ಸಾಗುವ ‘ಅಸ್ಥಿರ’ ಚಿತ್ರದ ಕಥೆಯಲ್ಲಿ ಒಂದು ಜರ್ನಿ ಕೂಡ ಇದೆ. ಹೊಸಬರ ಈ ಚಿತ್ರತಂಡಕ್ಕೆ ಭಾ.ಮ. ಹರೀಶ್​ ಶುಭ ಹಾರೈಸಿದ್ದಾರೆ.

ಹೊಸಬರ ‘ಅಸ್ಥಿರ’ ಟೀಸರ್​ ರಿಲೀಸ್​ ಮಾಡಿ ಶುಭ ಕೋರಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​

‘ಅಸ್ಥಿರ’ ಸಿನಿಮಾ ಸುದ್ದಿಗೋಷ್ಠಿ

ಗಾಂಧಿನಗರಕ್ಕೆ ಪ್ರತಿ ದಿನವೂ ಹೊಸಬರ ಎಂಟ್ರಿ ಆಗುತ್ತದೆ. ಹೊಸ ಕನಸುಗಳನ್ನು ಹೊತ್ತುಕೊಂಡು ನೂತನ ಪ್ರತಿಭೆಗಳು ಸಿನಿಮಾ ಮಾಡಲು ಬರುತ್ತಾರೆ. ಅಂಥವರಿಗೆ ಚಿತ್ರರಂಗದ ಹಿರಿಯರ ಸಹಕಾರ ತುಂಬ ಅಗತ್ಯ. ಈಗ ಅಂಥ ಒಂದು ಚಿತ್ರತಂಡಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಅಧ್ಯಕ್ಷ ಭಾ.ಮ. ಹರೀಶ್​ ಅವರು ಬೆಂಬಲ ಸೂಚಿಸಿದ್ದಾರೆ. ನಿರ್ದೇಶಕರನ್ನು ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ ಸಿನಿಮಾ ‘ಅಸ್ಥಿರ’ (Asthira Kannada movie). ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ (Ba Ma Harish) ಅವರು ಮುಖ್ಯ ಅತಿಥಿಯಾಗಿ ಬಂದು ಶುಭ ಹಾರೈಸಿದರು. ಪೋಸ್ಟರ್​ ಕೂಡ ಅನಾವರಣಗೊಳಿಸಿದರು.

‘ಅಸ್ಥಿರ’ ಚಿತ್ರತಂಡದ ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿ ನಿತ್ಯಾನಂದಪ್ರಭು, ನಿರ್ಮಾಪಕರಾದ ಸೆಬಾಸ್ಟಿನ್‌ ಡೇವಿಡ್, ಕೆ.ಎನ್. ನಾಗೇಗೌಡ ಕೂಡ ಉಪಸ್ಥಿತರಿದ್ದರು. ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸ್ಥಿಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಯಾವ ರೀತಿ ಇರುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದಿದ್ದಾರೆ ಚಿತ್ರತಂಡದವರು.

ತ್ರಿಕೋನ ಪ್ರೇಮ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಅಸ್ಥಿರ’ ಕಥೆಯಲ್ಲಿ ಒಂದು ಜರ್ನಿ ಕೂಡ ಇದೆ. ಬನ್ನೂರಿನಿಂದ ಕುಮುಟಾ, ಹೊನ್ನಾವರ ತನಕ ಸಾಗುವ ಈ ಪಯಣ ಒಂದು ಕಾಡಿನಲ್ಲಿ ಕೊನೆಗೊಳ್ಳುತ್ತದೆ. ಥ್ರಿಲ್ಲರ್ ಹಾಗೂ ಸೆಸ್ಪೆನ್ಸ್ ಮಾದರಿಯಲ್ಲಿ ಚಿತ್ರ ಮೂಡಿಬಂದಿದೆ ಎಂಬುದು ಚಿತ್ರತಂಡದವರ ಮಾತು.

ಈವರೆಗೂ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಪ್ರಮೋದ್ ಎಸ್.ಆರ್. ಅವರಿಗೆ ಇದೆ. ಈಗ ಅವರು ‘ಅಸ್ಥಿರ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅನಿಲ್ ಸಿ.ಆರ್. ಅವರು ಕಥೆ ಬರೆದಿದ್ದಾರೆ. ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಮೂಲಕ ಬಂಡವಾಳ ಹೂಡಿದ್ದು ಅಲ್ಲದೇ ಅವರು ಹೀರೋ ಆಗಿಯೂ ನಟಿಸಿದ್ದಾರೆ. ಆ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕಾಲೇಜು ಹುಡುಗಿ ಪಾತ್ರ ಮಾಡಿರುವ ಕಾವೇರಿ ಅವರು ಈ ಚಿತ್ರದ ನಾಯಕಿ. ಅವರ ಜೊತೆ ಗೆಳತಿಯರಾಗಿ ಭುವನಾ, ಹರಿಣಿ ನಟಿಸಿದ್ದಾರೆ. ಆಯಾ ಪಾತ್ರಗಳಿಗೆ ಕಲಾವಿದರ ಮೂಲ ಹೆಸರನ್ನೇ ಇಡಲಾಗಿದೆ. ನಿತಿನ್‌ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿಗೆ ಸಿದ್ದು ಅರಸು ಸಾಹಿತ್ಯ ಬರೆದಿದ್ದಾರೆ. ವಿನೋದ್ ಆರ್. ಛಾಯಾಗ್ರಹಣ, ಅಯುರ್‌ ಸ್ವಾಮಿ ಸಂಕಲನ, ಗಣೇಶ್ ಅವರ ಸಾಹಸ ಈ ಚಿತ್ರಕ್ಕಿದೆ.

ಕುಮುಟ, ಹೊನ್ನಾವರ, ಬನ್ನೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ನವೆಂಬರ್‌ ವೇಳೆಗೆ ರಿಲೀಸ್​ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದೆ ಚಿತ್ರತಂಡ.

TV9 Kannada


Leave a Reply

Your email address will not be published.