ಭಾರತದ ಎರಡು ಗಡಿಗೆ ಹೊಂದಿಕೊಂಡಿರೋ ಎರಡು ದೇಶಗಳು.. ಸದಾಕಾಲ ಕತ್ತಿ ಮಸೆಯುತ್ತಲೇ ಇರುತ್ತವೆ. ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ. ಈ ದೇಶಗಳ ಟಾರ್ಗೆಟ್ ಅಂದ್ರೆ ಅದು ಭಾರತ. ಹೀಗಾಗಿ ಭಾರತ ಕೂಡ ಸಾಕಷ್ಟು ಜಾಗೃತವಾಗಿರುತ್ತೆ ಮತ್ತು ಶತ್ರುಗಳ ಹುಟ್ಟಡಗಿಸಬಲ್ಲಂಥ ಶಸ್ತ್ರಾಸ್ತ್ರ ನಿರ್ಮಾಣ ಕೂಡ ಮಾಡುತ್ತಲೇ ಇರುತ್ತೆ. ಇದಕ್ಕೆ ಈಗ ಹೊಸ ಸೇರ್ಪಡೆಯೇ ಈ ಅಸ್ತ್ರ.

ಭಾರತಕ್ಕೆ ವೈರಿ ರಾಷ್ಟ್ರ ಅಂತ ಇರೋದು ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಆ ಎರಡೂ ರಾಷ್ಟ್ರದ ಗಡಿಯಲ್ಲಿ ಆಗಾಗ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತೆ. ಕದನ ನಿಯಮ ಉಲ್ಲಂಘಿಸುವುದು, ಅಪ್ರಚೋದಿತ ದಾಳಿ ನಡೆಸುವುದು, ಆಮೇಲೆ ತಾನು ದಾಳಿ ನಡೆಸಿಯೇ ಇಲ್ಲ ಅನ್ನುವುದು ಪಾಕಿಸ್ತಾನದ ಹಳೇ ಚಾಳಿ. ನಾಲ್ಕು ಬಾರಿ ಯುದ್ಧಕ್ಕೆ ಬಂದು ಸೋತು ಸುಣ್ಣವಾದ್ರೂ ಅದಕ್ಕೆ ಬುದ್ಧಿ ಬಂದಿಲ್ಲ. ಮತ್ತೊಂದೆಡೆ ಡ್ರ್ಯಾಗನ್‌ ಚೀನಾ ಕೂಡ ಭಾರತಕ್ಕೆ ದೊಡ್ಡ ಅಪಾಯಕಾರಿ ಅನ್ನೋದ್ರಲ್ಲಿ ಡೌಟೇ ಬೇಡ. ಗಡಿ ನಿಯಮ ಉಲ್ಲಂಘಿಸುವಲ್ಲಿಯೂ ಚೀನಾ ಎತ್ತಿದ ಕೈ. ಮತ್ತೊಂದು ಅಪಾಯಕಾರಿ ಅಂಶ ಅಂದ್ರೆ ಎರಡೂ ರಾಷ್ಟ್ರದಲ್ಲಿಯೂ ಅಣ್ವಸ್ತ್ರಗಳಿದ್ದು, ಅದನ್ನು ಹೊತ್ತುಸಾಗುವ ಕ್ಷಿಪಣಿಗಳಿರುವುದು. ಇಷ್ಟೆಲ್ಲ ಅಪಾಯವನ್ನು ಬಗಲಲ್ಲಿಯೇ ಇಟ್ಟುಕೊಂಡು ಭಾರತ ಸುಮ್ಮನಿರಲು ಆಗುತ್ತಾ? ಅದಕ್ಕಾಗಿಯೇ ನಾವೇನು ಕಮ್ಮಿ ಇಲ್ಲ ಅಂಥ ಹಂತ ಹಂತವಾಗಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಇದೆ. ಈಗಾಗಲೇ ಅಣ್ವಸ್ತ್ರದ ಸಿಡಿತಲೆಗಳನ್ನು ಹೊತ್ತು ಚೀನಾ, ಪಾಕಿಸ್ತಾನದ ಮೂಲೆ ಮೂಲೆಯನ್ನು ತಲುಪಬಲ್ಲ ಮಿಸೈಲ್​ಗಳ ಭಂಡಾರವೇ ಭಾರತದ ಬಳಿ ಇದೆ. ಅದ್ರಲ್ಲೂ ಹೆಸರಿಗೆ ತಕ್ಕಂತೆಯೇ ಅಗ್ನಿ ಸಿರೀಸ್​ನ ಮಿಸೈಲ್​ಗಳು ಬೆಂಕಿ ಮಳೆಯನ್ನೇ ಸುರಿಸಿಬಿಡಬಲ್ಲುದಾಗಿವೆ..

ಭಾರತದ ಬಳಿ ಈಗಾಗಲೇ ಅಗ್ನಿ 1, 2, 3, 4 ಹಾಗೂ 5 ಹೆಸರಿನ ಮಿಸೈಲ್​ಗಳ ಭಂಡಾರವೇ ಇದೆ. ಇದರ ಸಾಲಿಗೆ ಸೇರಲು ಮತ್ತೊಂದು ‘ಅಗ್ನಿ’ ಈಗ ಪರೀಕ್ಷೆಗೆ ಒಳಪಡುತ್ತಿದ್ದು. ಅದರ ಟಾರ್ಗೆಟ್ ಸಂಪೂರ್ಣ ಪಾಕಿಸ್ತಾನ ಅಂತಾ ಹೇಳಲಾಗ್ತಿದೆ. ಇದರ ಹೆಸರು ಕೇಳುತ್ತಲೇ ಪಾಕಿಸ್ತಾನಕ್ಕೆ ಆಘಾತವಾಗುವುದು ಖಚಿತ. ಮತ್ತೊಂದೆಡೆ ಚೀನಾ ಕೂಡ ಬೆರಗಾಗಿ ನೋಡಬೇಕಾಗುತ್ತೆ. ಯಾಕೆಂದ್ರೆ ಅದರ ಗತ್ತು ಗಮತ್ತೆ ಹಾಗಿದೆ.

‘ಅಗ್ನಿ’ ಪರೀಕ್ಷೆಗೆ ಸಿದ್ಧವಾಗಿರುವ ಹೊಸ ಕ್ಷಿಪಣಿ ಯಾವುದು?!

ಅಗ್ನಿ ಸಿರೀಸ್‌ನ 5 ಕ್ಷಿಪಣಿಗಳು ಭಾರತೀಯ ಸೇನೆಯಲ್ಲಿದ್ದು ಸೇನಾ ಸಾಮರ್ಥ್ಯಕ್ಕೆ ಆನೆಬಲ ತಂದಿವೆ. ಯಾವುದೇ ರಾಷ್ಟ್ರ ಭಾರತದ ತಂಟೆಗೆ ಬರುವ ಮುನ್ನ ಮೈಮುಟ್ಟಿ ನೋಡಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿವೆ. ತಮ್ಮ ತಂಟೆಗೆ ಬಂದರೆ ಹುಷಾರ್‌ ನೀವೂ ಇರಲ್ಲ, ನಿಮ್ಮ ದೇಶವೂ ಇರಲ್ಲ ಅಂಥ ಹೇಳುತ್ತಿವೆ. ಇದನ್ನು ನೋಡಿಯೇ ಎದುರಾಳಿ ದೇಶಗಳು ಯುದ್ಧಕ್ಕೆ ಬರುವ ಮುನ್ನವೇ ಯೋಚಿಸುತ್ತಿವೆ. ಈ ನಡುವೆ ಮತ್ತೊಂದು ದೈತ್ಯ ಕ್ಷಿಪಣಿ ಪರೀಕ್ಷೆಗೆ ಸಜ್ಜಾಗಿದೆ. ಅದುವೆ ಅಗ್ನಿ ಪ್ರೈಮ್‌

ಹಳೇ ಬೇರು-ಹೊಸ ಚಿಗುರು ಇದರ ಸ್ಪೆಷಾಲಿಟಿ
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ರೂಪ ಪಡೆದ ಅಗ್ನಿ-1

ಅಗ್ನಿ-1 ಕ್ಷಿಪಣಿಯ ರೂಪಾಂತರಿಯೇ ಅಗ್ನಿ ಪ್ರೈಮ್‌ ಕ್ಷಿಪಣಿ. ಬಹುತೇಕ ಉಪಕರಣಗಳು ಅಗ್ನಿ-1 ಕ್ಷಿಪಣಿಯಲ್ಲಿ ಇರುವಂತಹದ್ದೇ ಆಗಿದೆ. ಆದರೆ, ಅಗ್ನಿ-4 ಮತ್ತು ಅಗ್ನಿ-5ನಲ್ಲಿ ಮಿಂಚಿನ ವೇಗದಲ್ಲಿ ಸಾಗುವಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಅದೇ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಆ ಮೂಲಕ ಅದರ ಸಾಮರ್ಥ್ಯವನ್ನು ದೈತ್ಯವಾಗಿಸಲಾಗಿದ್ದು, ಕ್ಷಣಾರ್ಧರಲ್ಲಿ ಎದುರಾಳಿ ಪಡೆಯತ್ತ ನುಗ್ಗುವ ಸಾಮರ್ಥ್ಯ ಹೊಂದಿದೆ. ಅಗ್ನಿ-1 ಅಣ್ವಸ್ತ್ರ ಹೊತ್ತು 700 ರಿಂದ 1200 ಕಿಲೋ ಮೀಟರ್‌ ದೂರ ಸಾಗುತ್ತಿದ್ದರೆ, ಅಗ್ನಿ ಪ್ರೈಮ್‌ 1000 ದಿಂದ 1500 ಕಿಲೋ ಮೀಟರ್‌ ದೂರ ಸಾಗಲಿದೆ. ಉಳಿದ ಅಗ್ನಿ ಸಿರೀಸ್‌ ಕ್ಷಿಪಣಿಗಳಿಗೆ ಹೋಲಿಸಿದರೆ ಅಣ್ವಸ್ತ್ರ ಹೊತ್ತು ಸಾಗುವ ದೂರ ಸ್ವಲ್ಪ ಕಡಿಮೆ ಇರಬಹುದು. ಆದ್ರೆ, ವೇಗ ಮತ್ತು ನಿಖರ ಗುರಿ ಮುಟ್ಟುವಲ್ಲಿ ಭಾರೀ ಬಲಾಢ್ಯವಾಗಿದೆ.

ಕಡಿಮೆ ತೂಕ, ಎದುರಾಳಿ ಪಡೆಗೆ ಮಾರಕ

ಅಗ್ನಿ ಪ್ರೇಮ್‌ ವಿಶೇಷ ಅಂದ್ರೆ, ಇದು ಅತ್ಯಂತ ಕಡಿಮೆ ತೂಕದ ಕ್ಷಿಪಣಿ. ಅಗ್ನಿ-1 ಕ್ಷಿಪಣಿ 22 ಟನ್‌ ಭಾರ ಹೊಂದಿತ್ತು. ಸುಮಾರು ಒಂದು ಸಾವಿರ ತೂಕದ ಅಣ್ವಸ್ತ್ರ ಹೊತ್ತು 1200 ಕಿಲೋ ಮೀಟರ್‌ವರೆಗೂ ಸಾಗುತ್ತಿತ್ತು. ಆದ್ರೆ, ಈಗ ಅಗ್ನಿ ಪ್ರೈಮ್‌ ಇನ್ನೂ ಹೆಚ್ಚಿನ ಪ್ರಮಾಣದ ಅಣ್ವಸ್ತ್ರವನ್ನು ಹೊತ್ತು ನಿಖರ ಗುರಿಯತ್ತ ಸಾಗಲಿದೆ. ಅಗ್ನಿ-1ರಲ್ಲಿ ಕಾಣಿಸಿಕೊಳ್ಳುವ ಕೆಲವು ನ್ಯೂನ್ಯತೆಗಳು ಇಲ್ಲ ಇಲ್ಲವೇ ಇಲ್ಲ. ಒಮ್ಮೆ ನಿಖರ ಗುರಿ ಇಟ್ಟು ಸಾಗಿದರೆ ವೈರಿ ಸೇನಾ ಪಡೆ ಭಸ್ಮವಾಗುವುದು ಖಚಿತ. ಇದರ ಹೆಸರು ಕೇಳುತ್ತಲೇ ಗಡಿಯಲ್ಲಿ ತಂಟೆ ತಕರಾರು ಮಾಡುತ್ತಿರುವ ರಾಷ್ಟ್ರಗಳು ಬೆಚ್ಚಿ ಬೀಳೋದು ಖಚಿತ.

ಶಕ್ತಿಶಾಲಿ ಡಬಲ್‌ ಎಂಜಿನ್‌ ಅಳವಡಿಕೆ

ಅಗ್ನಿ-1 ಕ್ಷಿಪಣಿಯ ರೂಪಾಂತರಿಯೇ ಅಗ್ನಿ ಪ್ರೈಮ್‌ ಆದರೂ ಕೆಲವಷ್ಟು ಬದಲಾವಣೆಗಳು ಇವೆ. ದೇಶಿಯ ನಿರ್ಮಿತ ಹಲವಾರು ತಂತ್ರಜ್ಞಾನವನ್ನು ಹೊಸದಾಗಿ ಅಳವಡಿಸಿಕೊಳ್ಳಲಾಗಿದೆ. ಅಗ್ನಿ-1 ಕ್ಷಿಪಣಿಯಲ್ಲಿ ಸಿಂಗಲ್‌ ಎಂಜಿನ್‌ ಬಳಸಲಾಗಿತ್ತು. ಆದ್ರೆ, ಅಗ್ನಿ ಪ್ರೈಮ್‌ನಲ್ಲಿ ಡಬಲ್‌ ಎಂಜಿನ್‌ ಬಳಸಲಾಗಿದೆ. ಮಾನವ ರಹಿತ ವೈಮಾನಿಕ ವಾಹನಕ್ಕೆ ಬಳಸುವ ರಷ್ಯಾ ನಿರ್ಮಿತ ಎಂಜಿನ್‌ ಇದು. ಇದುವೇ ಅಗ್ನಿ ಪ್ರೈಮ್‌ನ ಪ್ರಮುಖ ಆಕರ್ಷಣೆ. ಶಕ್ತಿಶಾಲಿ ಡಬಲ್‌ ಎಂಜಿನ್‌ ಅಳವಡಿಸಿ ಭಾರವನ್ನು ಕಡಿಮೆ ಮಾಡಿರುವುದರಿಂದ ಮಿಂಚಿನ ವೇಗದಲ್ಲಿ ಕ್ಷಿಪಣಿ ಗುರಿ ಮುಟ್ಟಲಿದೆ.

ಅಗ್ನಿ ಪ್ರೈಮ್‌ ಪರೀಕ್ಷೆ ತಡವಾಗಿದ್ದು ಯಾಕೆ?

ಕೊರೋನಾ ಎರಡನೇ ಅಲೆ ಭಾರತಕ್ಕೆ ನೀಡಿದ ಹೊಡೆತ ಅಷ್ಟಿಷ್ಟಲ್ಲ. ಇಡೀ ದೇಶವನ್ನೇ ಹೈರಾಣಾಗಿಸಿ ಬಿಟ್ಟಿತ್ತು. ಹೌದು, ಇದು ಅಗ್ನಿ ಪ್ರೈಮ್‌ ಕ್ಷಿಪಣಿ ಪರೀಕ್ಷೆ ಮೇಲೂ ಪರಿಣಾಮ ಬೀರಿತ್ತು. ಕ್ಷಿಪಣಿ ತಯಾರಿಗೆ ಜವಾಬ್ದಾರಿ ಹೊತ್ತ ಡಿಆರ್‌ಡಿಒ ಅಂದ್ರೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಮುಂಚಿತವಾಗಿ ಪರೀಕ್ಷೆಗೆ ಸಿದ್ಧವಾಗಿತ್ತು. ಇನ್ನೇನು ಅಲ್ಪ ಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿತ್ತು. ಆದ್ರೆ, ಕೊರೊನಾ ಎರಡನೇ ಅಲೆ ಅದಕ್ಕೂ ಅಡ್ಡಿ ಪಡಿಸಿತ್ತು. ಇಡೀ ರಾಷ್ಟ್ರವೇ ಕೊರೊನಾ ಸಂಕಷ್ಟದಲ್ಲಿದ್ದಾಗ ಡಿಆರ್‌ಡಿಒ ಅಗ್ನಿ ಪ್ರೈಮ್‌ ಕ್ಷಿಪಣಿಗಿಂತ ವೆಂಟಿಲೇಟರ್‌, ಅತ್ಯಾಧುನಿಕ ಪಿಪಿಇ ಕಿಟ್‌, ಮಾಸ್ಕ್‌, ಆಕ್ಷಿಜನ್‌ ಸಂಗ್ರಹಕ್ಕೆ ನೆರವು ನೀಡುವಂತಹ 52 ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿತ್ತು. ಇದೀಗ ಕೊರೊನೆ ಎರಡನೇ ಅಲೆ ಕುಗ್ಗಿರುವ ಹಿನ್ನೆಲೆಯಲ್ಲಿ ಮತ್ತೆ ಅಗ್ನಿ ಪ್ರೈಮ್‌ ಕೆಲಸದಲ್ಲಿ ನಿರತವಾಗಿದೆ.

ಮುಂದಿನ ವಾರವೇ ಅಗ್ನಿ ಪ್ರೈಮ್‌ ಪರೀಕ್ಷೆ

ಎಲ್ಲವೂ ಅಂದುಕೊಂಡಂತೆ ಆದ್ರೆ ಈಗಾಗಲೇ ಕ್ಷಿಪಣಿ ಪರೀಕ್ಷೆ ಮುಗಿದಿರಬೇಕಿತ್ತು. ಆದ್ರೆ, ಅದಕ್ಕೆ ಕೋವಿಡ್‌ ಅಡ್ಡಿ ಆಯ್ತು. ಇದೀಗ ಎಲ್ಲಾ ರೀತಿಯಲ್ಲೂ ಸರ್ವಸನ್ನದ್ದವಾದ ಡಿಆರ್‌ಡಿಒ ಜೂನ್‌ 28 ಅಥವಾ 29 ರಂದು ಪರೀಕ್ಷೆ ನಡೆಸಲಿದೆ. ಯಾವುದೇ ಕ್ಷಣದಲ್ಲಿ ಪರೀಕ್ಷಾರ್ಥವಾಗಿ ಕ್ಷಿಪಣಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಡಿಶಾದ ಕರಾವಳಿ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಯಶಸ್ವಿಯಾದ್ರೆ ಶೀಘ್ರವೇ ಸೇನೆಗೆ ಸೇರ್ಪಡೆ

ಹೌದು, ಅಗ್ನಿ ಪ್ರೈಮ್‌ ಪರೀಕ್ಷೆಗೆ ಬೇಕಾದ ಎಲ್ಲಾ ತಯಾರಿಯೂ ಆಗಿದೆ. ಪರೀಕ್ಷೆ ವೇಳೆ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬರದೇ ಯಶಸ್ವಿಯಾದ್ರೆ ಶೀಘ್ರವೇ ಸೇನೆ ಸೇರಲಿದೆ. ಈಗಾಗಲೇ ಅಗ್ನಿ ಸಿರೀಸ್‌ನ 5 ಕ್ಷಿಪಣಿಯನ್ನು ಹೊಂದಿರುವ ಸೇನೆ ಮತ್ತೊಂದು ಅಗ್ನಿ ಕ್ಷಿಪಣಿಯನ್ನು ಹೊಂದಿದಂತೆ ಆಗಲಿದೆ. ಇದು ಸಹಜವಾಗಿ ಸೇನಾ ಮಾಮರ್ಥ್ಯವನ್ನು ದುಪ್ಪಟ್ಟು ಹೆಚ್ಚಿಸಲಿದೆ. ವಿಶೇಷವಾಗಿ ಈ ಕ್ಷಿಪಣಿ ಪಾಕಿಸ್ತಾನವನ್ನು ಗುರಿಯಾಗಿಸಿಯೇ ಕೊಂಡು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಭಾರತ ತಾನಾಗಿಯೇ ಪಾಕಿಸ್ತಾನದ ತಂಟೆಗೆ ಹೋಗಲ್ಲ. ಆದ್ರೆ, ಪಾಕಿಸ್ತಾನ ಏನಾದ್ರೂ ಕಾಲುಕೆದರಿ ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿದೆ.

ಅಗ್ನಿ-1
ಅಣ್ವಸ್ತ್ರ ತೂಕ – 1000 ಕೆಜಿ
ವೇಗ : ಶಬ್ದ ವೇಗಕ್ಕಿಂತ 7 ಪಟ್ಟು
ರೇಂಜ್: 700-1200 ಕಿ.ಮೀ.
ಭಾರತದಲ್ಲಿ 1989 ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿ ಪರೀಕ್ಷೆ ಮಾಡಲಾಗಿತ್ತು. ಆ ಸಮಯದಲ್ಲಿ ಚಿಕ್ಕಪುಟ್ಟ ನ್ಯೂನ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಸೇನೆ ಸೇರಲಿಲ್ಲ. ಅಂತಿಮವಾಗಿ 2004 ರಲ್ಲಿ ಕ್ಷಿಪಣಿ ಸೇನೆಗೆ ಸೇರಿತ್ತು. ಸೇನಾ ಬಲ ಹೆಚ್ಚಿಸಿತ್ತು. ವೈರಿ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಅಣ್ವಸ್ತ್ರ ಹೊಂದಿರುವ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಕ್ಷಿಪಣಿಯ ಅನಿವಾರ್ಯತೆಯೂ ಇತ್ತು. ಈ ಕ್ಷಿಪಣಿ ಒಂದು ಸಾವಿರ ಕೆಜಿ ಸಾಮರ್ಥ್ಯದ ಅಣ್ವಸ್ತ್ರವನ್ನು ಹೊತ್ತು 700 ಕಿಲೋ ಮೀಟರ್‌ನಿಂದ 1200 ಕಿಲೋ ಮೀಟರ್‌ವರೆಗೂ ಸಾಗುವ ಸಾಮರ್ಥ್ಯ ಹೊಂದಿದೆ. ಇದರ ಉದ್ದ 15 ಮೀಟರ್‌, ತೂಕ 12 ಟನ್‌ ಆಗಿದೆ. ಇದರ ವಿಶೇಷತೆ ಅಂದ್ರೆ ಸೆಕೆಂಡ್‌ಗೆ 2.5 ಕಿಲೋ ಮೀಟರ್‌ ವೇಗದಲ್ಲಿ ಅಂದರೆ ಗಂಟೆಗೆ ಸುಮಾರು 9000 ಕಿ.ಮೀ ವೇಗದಲ್ಲಿ ಸಾಗುವಂಥದ್ದು. ಶಬ್ದದ ವೇಗ ಿರೋದು 1234 ಕಿಲೋ ಮೀಟರ್. ಅದ್ರೆ ಶಬ್ದರ ವೇಗಕ್ಕಿಂತ 7 ಪಟ್ಟು ಹೆಚ್ಚಿನ ವೇಗದಲ್ಲಿ ಸಾಗಲಿದೆ.

ಅಗ್ನಿ-2
ಅಣ್ವಸ್ತ್ರ ತೂಕ – 2000 ಕೆಜಿ
ವೇಗ : ಶಬ್ದದ ವೇಗಕ್ಕಿಂತ 11 ಪಟ್ಟು
ರೇಂಜ್: 2000-3500 ಕಿ.ಮೀ.
ಮೊದಲ ಬಾರಿಗೆ ಇದರ ಪರೀಕ್ಷೆ ನಡೆಸಿದ್ದು 2006ರಲ್ಲಿ. ಯಾವುದೇ ತಾಂತ್ರಿಕ ದೋಷ ಕಂಡುಬರದ ಹಿನ್ನೆಲೆಯಲ್ಲಿ ಆ ನಂತರ ಸೇನೆಗೆ ಸೇರಿಸಲಾಗಿತ್ತು. ಸುಮಾರು ಎರಡು ಸಾವಿರ ಕೆಜಿ ಭಾರದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತು ಎರಡು ಸಾವಿರದಿಂದ ಎರಡೂವರೆ ಸಾವಿರ ಕಿಲೋ ಮೀಟರ್‌ವರೆಗೂ ಸಾಗುವ ಶಕ್ತಿ ಇದಕ್ಕಿದೆ. ಇದು ಭಾರತ ಸೇನೆಗೆ ಆನೆ ಬಲವನ್ನು ತಂದ ಕ್ಷಿಪಣಿ. ಇದರ ತೂಕ 18 ಟನ್‌, ಉದ್ದ 20 ಮೀಟರ್‌. ಇದರ ವೇಗ ಸೆಕೆಂಡ್‌ಗೆ 3.5 ಕಿಲೋ ಮೀಟರ್‌. ಅಂದರೆ, ಗಂಟೆಗೆ 14040 ಕಿಲೋ ಮೀಟರ್‌ ವೇಗದಲ್ಲಿ ಸಾಗಲಿದೆ. ಅದು ಶಬ್ದದ ವೇಗಕ್ಕಿಂತ

ಅಗ್ನಿ-3
ಅಣ್ವಸ್ತ್ರ ತೂಕ – 2500 ಕೆಜಿ
ವೇಗ : ಶಬ್ದದ ವೇಗಕ್ಕಿಂತ 14 ಪಟ್ಟು
ರೇಂಜ್: 3000-5000 ಕಿ.ಮೀ.
ಆರಂಭಿಕವಾಗಿ ನಡೆಸಿದ ಪರೀಕ್ಷೆಯಲ್ಲಿ ಈ ಕ್ಷಿಪಣಿಯಲ್ಲಿ ವೈಫಲ್ಯ ಕಾಣಿಸಿತ್ತು. ಆದ್ರೆ, ಪ್ರಯತ್ನ ಮಾತ್ರ ಕೈಬಿಡಲಾಗಲಿಲ್ಲ. ಬೇರೆ ಬೇರೆ ರೀತಿಯ ತಂತ್ರಜ್ಞಾನ ಅಳವಡಿಸಿಕೊಂಡು ಪರೀಕ್ಷೆಯಲ್ಲಿ ಯಶಸ್ವಿಯಾಯಿತು. ಹಾಗೇ 2012 ರಲ್ಲಿ ಸೇನೆಗೆ ಸೇರಿಸಿಕೊಳ್ಳಲಾಯಿತು. ಇದು 2.5 ಟನ್‌ ಸಾಮರ್ಥ್ಯದ ಅಣ್ವಸ್ತ್ರ ಹೊತ್ತು 5 ಸಾವಿರ ಕಿಲೋ ಮೀಟರ್‌ ಸಾಗಬಲ್ಲದು. ಪಾಕಿಸ್ತಾನ ಮತ್ತು ಚೀನಾ ಮೂಲೆ ಮೂಲೆಯನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ. ಇದರ ತೂಕ 44 ಟನ್‌, ಉದ್ದ 17 ಮೀಟರ್‌. ಇದರ ವೇಗ ಸೆಕೆಂಡ್‌ಗೆ 5 ರಿಂದ 6 ಕಿಲೋ ಮೀಟರ್‌ ಇದೆ. ಅಂದ್ರೆ ಗಂಟೆಗೆ 18000 ಕಿಲೋ ಮೀಟರ್‌. ಇದು ಶಬ್ದದ ವೇಗಕ್ಕಿಂತ 14 ಪಟ್ಟು ಹೆಚ್ಚಿನದು.

ಅಗ್ನಿ-4
ಅಣ್ವಸ್ತ್ರ ತೂಕ – 1000 ಕೆಜಿ
ವೇಗ : ಶಬ್ದದ ವೇಗಕ್ಕಿಂತ 17 ಪಟ್ಟು
ರೇಂಜ್: 3500-4000 ಕಿ.ಮೀ.
ಅಗ್ನಿ ಕ್ಷಿಪಣಿಗಳಲ್ಲಿಯೇ ಅತ್ಯಂತ ಕಡಿಮೆ ತೂಕದ ಕ್ಷಿಪಣಿ ಅಂದ್ರೆ, ಅದು ಅಗ್ನಿ-4. ಹೌದು ಇದರ ತೂಡ 17 ಟನ್‌ ಮಾತ್ರ. ಆದ್ರೆ, ಎದುರಾಳಿ ಪಡೆಯ ಮೇಲೆ ವೇಗವಾಗಿ ಮುನ್ನುಗ್ಗುವ ಸಾಮರ್ಥ್ಯ ಇದಕ್ಕಿದೆ. ಕ್ಷಣಾರ್ಧದಲ್ಲೇ 3500 ರಿಂದ 4 ಸಾವಿರ ಕಿಲೋ ಮೀಟರ್‌ ದೂರವನ್ನು ಸಾಗಬಲ್ಲದು. ಒಂದು ಸಾವಿರ ಕೆಜಿ ಭಾರದ ಅಣ್ವಸ್ತ್ರ ಹೊತ್ತು ಸಾಗಲಿರುವ ಈ ಕ್ಷಿಪಣಿ 2014ರಲ್ಲಿ ಸೇನೆ ಸೇರಿದೆ. ಇದರ ಉದ್ದ 20 ಮೀಟರ್‌. ಇದರ ವೇಗ ಗಂಟೆಗೆ 22 ಸಾವಿರ ಕಿಲೋ ಮೀಟರ್‌. ಅದರೆ ಶಬ್ದದ ವೇಗಕ್ಕಿಂತ 17 ಪಟ್ಟು ಹೆಚ್ಚಿನದಾಗಿದೆ.

ಅಗ್ನಿ-5
ಅಣ್ವಸ್ತ್ರ ತೂಕ – 1500 ಕೆಜಿ
ವೇಗ : ಶಬ್ದದ ವೇಗಕ್ಕಿಂತ 23 ಪಟ್ಟು
ರೇಂಜ್: 5000-8000 ಕಿ.ಮೀ.
ಅಗ್ನಿ-5 ಕ್ಷಿಪಣಿ ಇಂಟರ್​ಕಾಂಟಿನೆಂಟಲ್​​ ಬ್ಯಾಲೆಸ್ಟಿಕ್​ ಅಂದ್ರೆ ಖಂಡಾಂತರ ಕ್ಷಿಪಣಿಯಾಗಿದೆ. ಇದು ಶಬ್ದ ವೇಗಕ್ಕಿಂತ ಬರೋಬ್ಬರಿ 24 ಪಟ್ಟು ವೇಗದಲ್ಲಿ ಸಾಗಬಹುದಾದಂಥ ಕ್ಷಿಪಣಿ ಅನ್ನೋ ಹೆಗ್ಗಳಿಕೆ ಪಡೆಕೊಂಡಿದೆ. ಅಗ್ನಿ ಸಿರೀಸ್​ನ ಕ್ಷಿಪಣಿಗಳ ಹೆಗ್ಗಳಿಕೆ ಅಂದ್ರೆ, ಇವು ಸಾಮಾನ್ಯವಾಗಿ ಭೂಮಿಯ ವಾಯುಮಂಡಲದಾಚೆ ಸಾಗಿ.. ನಂತರ ಗುರಿ ಮುಟ್ಟ ಬೇಕಾದಲ್ಲಿ ಭೂಮಿಗೆ ಪ್ರವೇಶಿಸಿ ವೇಗವಾಗಿ ಬಂದು ಗುರಿಯನ್ನು ಕೆಡವುತ್ತವೆ. ಅದ್ರಲ್ಲೂ ಅಗ್ನಿ-5 ಕ್ಷಿಪಣಿಯ ವಿಶೇಷ ಸಾಮರ್ಥ್ಯ ಅಂದ್ರೆ ಅದು 5 ಸಾವಿರ ಕಿಲೋ ಮೀಟರ್‌ ದೂರ ಸಾಗುವಂತಹದ್ದಾಗಿದೆ. ಮೂಲಗಳ ಪ್ರಕಾರ ಈ ಕ್ಷಿಪಣಿ ಸುಮಾರು 8 ಸಾವಿರ ಕಿಲೋಮೀಟರ್​ ದೂರದಷ್ಟು ಸಾಗಬಹುದಾಗಿದೆ ಅಂತಾ ಹೇಳಲಾಗುತ್ತೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ.. ಅಲ್ಲದೇ ಈ ಕ್ಷಿಪಣಿ ಚೀನಾದ ಮೂಲೆ ಮೂಲೆಯನ್ನೂ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಸುಮಾರು ಒಂದೂವರೆ ಸಾವಿರ ಕೆಜಿ ಭಾರತ ಅಣ್ವಸ್ತ್ರವನ್ನು ಹೊತ್ತು ಸಾಗಲಿದೆ. 2019ರಲ್ಲಿ ಸೇನೆಯನ್ನು ಸೇರಿಕೊಂಡಿದ್ದು, ಈ ಕ್ಷಿಪಣಿ ಬಗ್ಗೆ ಭಾರೀ ಪ್ರಶಂಸೆ ಇದೆ. ಇದರ ತೂಕ 50 ಟನ್‌. ಇದರ ವೇಗ ಗಂಟೆಗೆ 29401 ಕಿಲೋ ಮೀಟರ್‌. ಅಂದರೆ ಶಬ್ದದ ವೇಗಕ್ಕಿಂತ 23 ಪಟ್ಟು ಹೆಚ್ಚಿನದಾಗಿದೆ.

ಸೇನೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ, ವಿಶ್ವದ ಶಕ್ತಿಸಾಲಿ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸುವಲ್ಲಿ ಅಗ್ನಿ ಕ್ಷಿಪಣಿಗಳ ಕೊಡುಗೆ ದೊಡ್ಡದಿದೆ. ಇದೀಗ ಮತ್ತೊಂದು ಕ್ಷಿಪಣಿ ಸೇನೆ ಸೇರಲು ಸಜ್ಜಾಗಿದೆ ಅನ್ನೋದೆ ಹೆಮ್ಮೆಯವಿಷಯ.

ವಿಶೇಷ ಬರಹ: ಮಂಜು ಮಳಗುಳಿ, ಸ್ಪೆಷಲ್ ಡೆಸ್ಕ್

The post ಹೊಸ ಕ್ಷಿಪಣಿ ‘ಅಗ್ನಿ’ ಪರೀಕ್ಷೆಗೆ ಸಿದ್ಧತೆ.. ಹಳೇ ಬೇರು-ಹೊಸ ಚಿಗುರು ಇದರ ಸ್ಪೆಷಾಲಿಟಿ appeared first on News First Kannada.

Source: newsfirstlive.com

Source link