ನ್ಯೂಜಿಲೆಂಡ್ ಚುಟುಕು ಸರಣಿಯೊಂದಿಗೆ ಟೀಮ್ ಇಂಡಿಯಾದ ಹೊಸ ಯುಗಾರಂಭವಾಗಲಿದೆ. ಹೊಸ ತಲೆಮಾರಿನ ಆಟಗಾರರ ಜೊತೆ ಹೊಸ ಸವಾಲುಗಳು. ಫ್ಯೂಚರ್ ಟೀಮ್ ಇಂಡಿಯಾ, ಶ್ರೇಷ್ಠ ತಂಡ ಕಟ್ಟುವ ದ್ರಾವಿಡ್ರ ಕನಸು ಇಲ್ಲಿಂದಲೇ ಮೊಳಕೆ ಹೊಡೆಯಲಿದೆ.
ಇಂದಿನಿಂದ ನ್ಯೂಜಿಲೆಂಡ್ ವಿರುದ್ಧದ ಚುಟುಕು ಸರಣಿಗೆ ಟೀಮ್ ಇಂಡಿಯಾ ಆಣೆಯಾಗ್ತಿದ್ದು, ಈ ಸರಣಿಯೊಂದಿಗೆ ಟೀಮ್ ಇಂಡಿಯಾದಲ್ಲಿ ಹೊಸ ಪರ್ವ ಶುರುವಾಗಿದೆ. ದ್ರಾವಿಡ್ ಫುಲ್ ಟೈಮ್ ಕೋಚ್ ಆಗಿ ಹೊಸ ಸವಾಲನ್ನ ಸ್ವೀಕರಿಸುತ್ತಿದ್ದರೆ, ರೋಹಿತ್ ಟಿ20 ನಾಯಕನಾಗಿ ಹೊಸ ಸವಾಲಿಗೆ ಸನ್ನದ್ಧವಾಗಿದೆ. ಅಷ್ಟೆ ಅಲ್ಲ.. ಈ ಸರಣಿಯಿಂದಲೇ ಟೀಮ್ ಇಂಡಿಯಾದಲ್ಲಿ ಹೊಸ ಯುಗಾರಂಭಕ್ಕೆ ನಾಂದಿಯಾಗ್ತಿದೆ.
ಟೀಮ್ ಇಂಡಿಯಾದಲ್ಲಿ ಶುರುವಾಯ್ತು ಹೊಸ ಯುಗ
ಈಗಾಗಲೇ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಸಿನೀಯರ್ಸ್ಗೆ ರೆಸ್ಟ್ ನೀಡಿದ್ರೆ, ಯುವ ಆಟಗಾರರಾದ ವೆಂಕಟೇಶ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಅವೇಶ್ ಖಾನ್, ಹರ್ಷಲ್ ಪಟೇಲ್ರಂಥ ಹೊಸ ಪ್ರತಿಭೆಗಳಿಗೆ ಚಾನ್ಸ್ ನೀಡಲಾಗಿದೆ. ಆ ಮೂಲಕ ಹೊಸ ರೋಲ್, ಹೊಸ ಚಾಲೆಂಜ್, ಹೊಸ ಎನರ್ಜಿಯೊಂದಿಗೆ ಹೊಸ ಯುಗಾರಂಭಕ್ಕೆ, ಮುನ್ನುಡಿ ಬರೆಯಲು ಸಜ್ಜಾಗ್ತಿದೆ.
ದ್ರಾವಿಡ್ ಅಧಿಕಾರವಧಿಯಲ್ಲಿ ಪ್ರತಿಭೆಗಳಿಗೆ ಸಿಗಲಿದೆ ಚಾನ್ಸ್
ಎನ್ಸಿಎ ಮುಖ್ಯಸ್ಥರಾಗಿ, ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ಹೊಸ ರೂಪವನ್ನೇ ನೀಡಿರುವ ದ್ರಾವಿಡ್, ತಮ್ಮ ಕಾರ್ಯ ವೈಖರಿಯಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಜೊತೆಗೆ ಹಲವು ಯುವ ಪ್ರತಿಭೆಗಳನ್ನ, ಟೀಮ್ ಇಂಡಿಯಾಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಭೆಗಳನ್ನ ಗುರುತಿಸುವಲ್ಲಿ ನಿಸ್ಸೀಮರಾಗಿರುವ ದಿ ವಾಲ್, ಈಗ ಟೀಮ್ ಇಂಡಿಯಾಕ್ಕೆ ಆಗಮಿಸಿರುವುದು, ಯುವ ಪ್ರತಿಭೆಗಳಿಗೆ ಹೊಸ ಉತ್ಸಾಹ ತುಂಬಿದೆ. ಹೀಗಾಗಿ ಪ್ರತಿಭಾನ್ವಿತರಿಗೆ ಹೊಸ ಆಶಾಭಾವನೆ ಹುಟ್ಟುಹಾಕಿದೆ.
ಭವಿಷ್ಯದ ಟೀಮ್ ಇಂಡಿಯಾ ಕಟ್ಟಲಿದ್ದಾರೆ ದಿ ವಾಲ್..!
ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ರಾಹುಲ್ ದ್ರಾವಿಡ್, ಮುಂದಿನ 2 ವರ್ಷಗಳ ಕಾಲ ಮಹತ್ತರ ಹುದ್ದೆಯಲ್ಲಿರಲಿದ್ದಾರೆ. ಈ ಕಾಲಾವಧಿಯಲ್ಲಿ ಟೀಮ್ ಇಂಡಿಯಾಕ್ಕೆ ಹೊಸ ಟಚ್ ನೀಡುವ ಮಹತ್ತರ ಆಶಯ ಹೊಂದಿದ್ದಾರೆ. ಅದ್ರಲ್ಲೂ ಇನ್ನೆರಡು, ಮೂರು ವರ್ಷಗಳಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಸೇರಿದಂತೆ ಕೆಲ ಆಟಗಾರರು ತೆರೆ ಮರೆಗೆ ಸರಿಯುವ ಹಂತದಲ್ಲಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಪರ್ಯಾಯ ಆಟಗಾರರನ್ನ ಬೆಳಸುವ ಉದ್ದೇಶದಿಂದಲೇ, ಫ್ಯೂಚರ್ ಟೀಮ್ ಇಂಡಿಯಾ ಕಟ್ಟೋ ಪ್ಲಾನ್ನಲ್ಲಿದ್ದಾರೆ.
ಮೂರು ಫಾರ್ಮೆಟ್ನಲ್ಲೂ ಶ್ರೇಷ್ಠ ತಂಡ ಕಟ್ಟುವ ಕನಸು..!
ದಿ ವಾಲ್ ರಾಹುಲ್ರ, ದೊಡ್ಡ ಕನಸು, ಟೀಮ್ ಇಂಡಿಯಾವನ್ನ ಮೂರು ಫಾರ್ಮೆಟ್ನಲ್ಲಿ ಬಲಿಷ್ಠ ಹಾಗೂ ಶ್ರೇಷ್ಠ ತಂಡವನ್ನಾಗಿಸೋದೆ ಆಗಿದೆ. ಇದಕ್ಕಾಗಿ ಹಲವು ಯೋಜನೆಗಳನ್ನ ಹೊಂದಿರುವ ದ್ರಾವಿಡ್, ಹಂತ ಹಂತವಾಗಿ ಕಾರ್ಯ ರೂಪಕ್ಕೆ ತರಲು ಮುಂದಾಗಿದ್ದಾರೆ. ಈ ವಿಚಾರವಾಗಿ ಬಿಸಿಸಿಐ ಬಿಗ್ಬಾಸ್ ಗಂಗೂಲಿ ಕೂಡ, ದ್ರಾವಿಡ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ನಿರೀಕ್ಷೆ, ನಂಬಿಕೆ ಉಳಿಸಿಕೊಳ್ಳಲು ಈಗಿನಿಂದಲೇ ವರ್ಕೌಟ್ ಮಾಡ್ತಿದ್ದಾರೆ.