ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ | Kajol starts shooting for Salaam Venky movie with director Revathy


ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ

ರೇವತಿ-ಕಾಜೋಲ್​

ಮದುವೆ ಆದ ಬಳಿಕ ನಟಿಯರು ಚಿತ್ರರಂಗದಲ್ಲಿ ಹಿನ್ನೆಲೆಗೆ ಸರಿಯುತ್ತಾರೆ ಎಂಬ ಮಾತಿತ್ತು. ಆದರೆ ನಂತರದ ದಿನಗಳಲ್ಲಿ ಕಾಲ ಬದಲಾಯಿತು. ಅನೇಕ ಸ್ಟಾರ್​ ನಟಿಯರು ಮದುವೆ, ಮಕ್ಕಳು ಆದ ಬಳಿಕವೂ ಹೀರೋಯಿನ್​ ಆಗಿಯೇ ಡಿಮ್ಯಾಂಡ್​ ಉಳಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಹಲವು ನಟಿಯರು ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ. ವಿದ್ಯಾ ಬಾಲನ್​, ರಾಣಿ ಮುಖರ್ಜಿ, ಕಾಜೋಲ್​ ಮುಂತಾದ ನಟಿಯರು ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುವ ಸ್ಕ್ರಿಪ್ಟ್​ಗಳು ಕೂಡ ಭಿನ್ನವಾಗಿವೆ. ಈಗ ಕಾಜೋಲ್​ (Kajol) ಅವರು ಹೊಸ ಸಿನಿಮಾದ ಕೆಲಸದಲ್ಲಿ ಭಾಗಿ ಆಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕಿ ರೇವತಿ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಈ ಸಿನಿಮಾಗೆ ‘ಸಲಾಂ ವೆಂಕಿ’ (Salaam Venky Movie) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಶೂಟಿಂಗ್​ ಆರಂಭವಾಗಿದ್ದು, ಮುಹೂರ್ತದ ಕೆಲವು ಫೋಟೋಗಳನ್ನು ಕಾಜೋಲ್​ ಶೇರ್​ ಮಾಡಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅವರಿಗೆ ಹೆಚ್ಚು ಉತ್ಸಾಹ ಇದೆ. ಆ ಬಗ್ಗೆ ಅವರು ಬರೆದುಕೊಂಡಿದ್ದಾರೆ. ರೇವತಿ (Director Revathy) ಮತ್ತು ಕಾಜೋಲ್​ ಕಾಂಬಿನೇಷನ್​ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ.

ನೈಜ ಘಟನೆ ಆಧಾರಿತವಾಗಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಫ್​ ಬೀಟ್​ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕಾಜೋಲ್​ ಅವರು ಈಗ ‘ಸಲಾಮ್​ ವೆಂಕಿ’ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಹೇಳಲೇಬೇಕಾದ ಒಂದು ಕಥೆಯ ಪಯಣವನ್ನು ನಾವಿಂದು ಆರಂಭಿಸಿದ್ದೇವೆ. ನಂಬಲು ಅಸಾಧ್ಯವಾದ ನೈಜ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಕಾದಿದ್ದೇವೆ’ ಎಂದು ಕಾಜೋಲ್​ ಟ್ವೀಟ್​ ಮಾಡಿದ್ದಾರೆ.

ಸೂರಜ್​ ಸಿಂಗ್​, ಶ್ರದ್ಧಾ ಅಗರ್​ವಾಲ್​, ವರ್ಷಾ ಕುಕ್ರೇಜಾ ಅವರು ‘ಸಲಾಮ್​ ವೆಂಕಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಹಂತದ ಶೂಟಿಂಗ್​ಗೆ ಚಾಲನೆ ನೀಡಲಾಗಿದೆ. ಜೀವನದಲ್ಲಿ ಅಸಾಧಾರಣ ಸವಾಲುಗಳನ್ನು ಎದುರಿಸಿದ ತಾಯಿಯೊಬ್ಬಳ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತದೆ. ಸದ್ಯಕ್ಕೆ ‘ಸಲಾಮ್​ ವೆಂಕಿ’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಕಾಜೋಲ್​ ಅವರ ಈ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಭಿನ್ನವಾದ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ರೇವತಿ ಗುರುತಿಸಿಕೊಂಡಿದ್ದಾರೆ. ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್​ಫೇರ್​ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇಂಥ ಪ್ರತಿಭಾವಂತ ನಿರ್ದೇಶಕಿಯ ಜೊತೆ ಕಾಜೋಲ್​ ಕೈ ಜೋಡಿಸಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಕಾಜೋಲ್ ನಟಿಸಿದ್ದ ‘ತ್ರಿಭಂಗ’ ಸಿನಿಮಾ ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿರುವ ಕಾಜೋಲ್​ ಅವರು ಈಗ ‘ಸಲಾಮ್​ ವೆಂಕಿ’ ಚಿತ್ರ ಆಯ್ಕೆ ಮಾಡಿಕೊಂಡಿರುವುದರಿಂದ ನಿರೀಕ್ಷೆ ಸೃಷ್ಟಿ ಆಗಿದೆ.

TV9 Kannada


Leave a Reply

Your email address will not be published.