ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು | Man finds snake hiding inside the sofa photo got viral


ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

ಹೆಬ್ಬಾವು

ಮನೆಯನ್ನು ಅಂದವಾಗಿರಿಸಲು ಅಥವಾ ನಮ್ಮ ಅನುಕೂಲಕ್ಕೆ ತಕ್ಕಂತೆ ಒಂದಷ್ಟು ಅಲಂಕಾರಿಕ ವಸ್ತುಗಳನ್ನು ಮನೆಗೆ ತರುವುದು ಸಾಮಾನ್ಯ. ಆದರೆ ಹೀಗೆ ಅಂಗಡಿಯಿಂದ ತಂದ ವಸ್ತುಗಳಲ್ಲಿ ಹಾವು ಕಾಣಿಸಿಕೊಂಡರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಸದ್ಯ ಇಂತಹದ್ದೇ ಒಂದು ಸನ್ನಿವೇಶ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆ ತಂದಾ ಸೋಫಾದ ಜತೆಗೆ ಹೆಬ್ಬಾವು (boa constrictors) ಕೂಡ ಬಂದಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಇದೇ ಕಾರಣಕ್ಕೆ ಪೊಲೀಸರಿಗೆ ಕರೆ ಮಾಡಿದ್ದಾರೆ. ತನ್ನ ಮನೆಯ ಸೋಫಾದೊಳಗೆ ಹಾವು ಅಡಗಿಕೊಂಡಿದೆ ಎಂದು ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕ್ಲಿಯರ್‌ವಾಟರ್ ಪೊಲೀಸ್ ಇಲಾಖೆ ಹೆಬ್ಬಾವನ್ನು ರಕ್ಷಣೆ ಮಾಡಿದೆ.

ಕ್ಲಿಯರ್‌ವಾಟರ್ ಪೊಲೀಸ್ ಅಧಿಕಾರಿಗಳು ಹೆಬ್ಬಾವಿನ ಜತೆಗಿನ ಫೋಟೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾವು ಜೀವಂತವಾಗಿದೆ. ಮರ್ಲಿನ್ ಪೈನ್ಸ್‌ನ ನಿವಾಸಿಯೊಬ್ಬರು ಇಂದು ಮಧ್ಯಾಹ್ನ ಕರೆ ಮಾಡಿ ತಮ್ಮ ಮನೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದರು. ನಂತರ ಮನೆಯ ಸೋಫಾದಲ್ಲಿ ಅಡಗಿದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಪ್ರಕಾರ, ಸೋಫಾದಲ್ಲಿ ಅಡಗಿರುವ ಹೆಬ್ಬಾವನ್ನು ಹೊರ ತೆಗೆಯಲು ಸೋಫಾವನ್ನು ಮನೆಯಿಂದ ಹೊರತರಲಾಯಿತು. ಸುಮಾರು 5 ಅಡಿ ಉದ್ದದ ಹೆಬ್ಬಾವು ಸೋಫಾದ ಒಳಗೆ ಕಂಡುಬಂದಿದೆ. ಸದ್ಯ ಇದನ್ನು ಹತ್ತಿರದ ಸಾಕುಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗಿದೆ. ಏಕೆಂದರೆ ಈ ರೀತಿಯ ಕೆಂಪು ಬಾಲದ ಹೆಬ್ಬಾವು ಅಷ್ಟೋಂದು ವಿಷಕಾರಿಯಾಗಿರುವುದಿಲ್ಲ ಮತ್ತು ಮನೆಯಲ್ಲಿ ಸಾಕಲು ಇವುಗಳನ್ನು ತರಲಾಗುತ್ತದೆ.

ಸೋಫಾ ಖರೀದಿ ಮಾಡಿ ನಂತರದ ದಿನ ಅದನ್ನು ಮನೆಗೆ ತರಲಾಗಿದೆ. ಈ ನಡುವೆ ಹಾವು ಅದರ ಒಳಗೆ ಸೇರಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಪ್ರಕಾರ, ಈ ಹಾವುಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮನೆಯಲ್ಲಿ ಸಾಕಲು ಈ ಹಾವನ್ನು ತರುತ್ತಾರೆ. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿದಾಗ ಈ ರೀತಿ ಬೇರೆ ಕಡೆಗೆ ಸ್ಥಳಾಂತರವಾಗುತ್ತವೆ.

ರಕ್ಷಣಾ ತಂಡದಲ್ಲಿ ಮಹಿಳಾ ಅಧಿಕಾರಿಗಳ ಉಪಸ್ಥಿತಿಯನ್ನು ಕಂಡ ನೆಟ್ಟಿಗರು ಈ ಕಾರ್ಯಕ್ಕೆ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಇದನ್ನು ಹೆಬ್ಬಾವು ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಅದು ಕೆಂಪು ಬಾಲದ ಬೋವಾ, ಇದನ್ನು ಸಾಮಾನ್ಯವಾಗಿ ಸಾಕುಪ್ರಾಣಿಯಾಗಿ ಮನೆಯಲ್ಲಿ ಸಾಕಲಾಗುತ್ತದೆ. ಇದು ಹೆಬ್ಬಾವಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *