ಸೆಲ್ಫ್ ಮೇಡ್ ಆ್ಯಕ್ಟರ್ ಸಂಚಾರಿ ವಿಜಯ್​ಗೆ ಇಷ್ಟು ಅವಸರ ಏನಿತ್ತು? ಅಂತಾ ಕೇಳೋಹಾಗೆ ಘಟನೆ ನಡೆದುಹೋಗಿದೆ. ರಾಷ್ಟ್ರಪ್ರಶಸ್ತಿ ಬಳಿಕ ಅವರು ಮನೆ ಮಾತಾಗಿದ್ರೂ.. ಬೆಳೆದು ಬಂದ ಹಾದಿ ಸುಗಮವಾಗಿರಲಿಲ್ಲ.. ನಾಟಕದಿಂದ ನ್ಯಾಷನಲ್ ಅವಾರ್ಡ್​ ತನಕ ಅವರ ಜರ್ನಿ ಹೇಗಿತ್ತು ಗೊತ್ತಾ?

ಸಂಚಾರಿ ವಿಜಯ್ ಚಿಕ್ಕ ವಯಸ್ಸಿಗೆ ಅದ್ರಲ್ಲೂ ಅಲ್ಪ ಸಮಯದಲ್ಲಿಯೇ ತಮ್ಮ ಸಹಜ ನಟನೆಯಿಂದಾಗಿ ಕೀರ್ತಿಯ ಉತ್ತುಂಗಕ್ಕೇರಿದ್ದರು. ಹೆಜ್ಜೆ ಹೆಜ್ಜೆಗೂ ದುರ್ಗಮ ಹಾದಿಯಲ್ಲಿ ಸಂಚರಿಸುತ್ತಲೇ ಬಂದ ವಿಜಯ್, ಬೆಂಗಳೂರು ನಾಟಕ ರಂಗದಲ್ಲಿ ಸದಾ ಮಿಂಚುವ ಮಾಣಿಕ್ಯದಂತೆ ಇದ್ದವರು.

ರಂಗದ ಮೇಲಿರಲಿ ಇಲ್ಲವೇ ರಂಗದ ಹಿಂದಿರಲಿ.. ನಟನೆಯ, ನಟಕದ ಪ್ರತಿಯೊಂದೂ ಪಟ್ಟುಗಳನ್ನೂ ತಮ್ಮದಾಗಿಸಿಕೊಂಡಿದ್ದ ವಿಜಯ್​​, ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಒಬ್ಬ ವ್ಯಕ್ತಿ ಹೇಗೆ ಬೆಳೆಯಬಲ್ಲ ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ.

ನಟನಾದವರು ನೀರಿನಂತೆ ಇರಬೇಕು.. ಯಾವ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವಂತಿರಬೇಕು ಅಂತ ಹಿಂದೊಮ್ಮೆ ಹಿರಿಯ ನಟ ಅನಂತ್ ನಾಗ್ ಹೇಳಿದ್ದರು. ಅವರ ಮಾತಿಗೆ ವ್ಯಕ್ತಿ ರೂಪ ಕೊಟ್ಟರೆ ಹೇಗಿರಬಹುದು? ಅಂತಾ ಯಾರಾದ್ರೂ ಕೇಳಿದ್ರೆ.. ನೇರವಾಗಿ ಸಂಚಾರಿ ವಿಜಯ್​​ರತ್ತ ಬೆರಳು ಮಾಡಿ ತೋರಿಸಬಹುದಿತ್ತು. ಅವರ ನಟನಾ ಚಾತುರ್ಯವನ್ನ ರಂಗಭೂಮಿಯ ಮೇಲೆ ಕಂಡವರು ಅಕ್ಷರಶಃ ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತಿದ್ದುದು ಸುಳ್ಳಲ್ಲ.

ಪುಟ್ಟ ಪಾತ್ರವಿರಲಿ, ಮುಖ್ಯ ಪಾತ್ರವಿರಲಿ, ಮಾತೇ ಇರದ ಪಾತ್ರವಿರಲಿ, ಅಖಂಡ ಸಂಭಾಷಣೆಯ ಕಸುವಿರಲಿ ಸಹಜವಾಗಿ ಹೇಗೆ ನೀರು ಹಾಕಿದ ಪಾತ್ರೆ ಆಕಾರ ಪಡೆದುಕೊಳ್ಳುತ್ತೋ ಅದೇ ರೀತಿ ರೂಪ ಪಡೆದುಕೊಳ್ಳುತ್ತಿದ್ರು ವಿಜಯ್​​ ಅಂತ ಅವರನ್ನು ರಂಗ ಭೂಮಿಯಲ್ಲಿ ಕಂಡ ಪ್ರತಿಯೊಬ್ಬರೂ ಹೇಳುತ್ತಿದ್ದು ಸುಳ್ಳಲ್ಲ.

ಹೋಟೆಲ್​ನಲ್ಲೂ ಕ್ಲೀನರ್​ ಕೆಲಸ
ಇಂಜಿನೀಯರ್​ ಆದ ಮೇಲೂ ನಟನೆಗಾಗಿ ಮುಡುಪು

ಸಾಧಕ ಚಂದ್ರನಿದ್ದಂತೆ.. ದೂರದಿಂದ ನೋಡಿದಾಗ ಬೆಳದಿಂಗಳು ಚೆಲ್ಲುವ ಪ್ರಶಾಂತವಾಗಿಯೇ ಕಾಣ್ತಾರೆ. ಆದ್ರೆ ಹತ್ತಿರ ಹೋಗಿ ನೋಡಿದಾಗಲೇ ಶಿಲ್ಪವಾಗಲು ಬಿದ್ದ ಉಳಿ ಏಟಿನ ಪೆಟ್ಟು ಕಾಣಿಸುತ್ತೆ. ಇದಕ್ಕೆ ಸಂಚಾರಿ ವಿಜಯ್​ ಕೂಡ ಹೊರತಲ್ಲ.

ಪ್ರಾರಂಭದಲ್ಲಿ ವಿಜಯ್ ಕೆಲ ಸಮಯ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಕೆಫೆ ಮಲ್ನಾಡ್ ಅನ್ನೋ ಹೋಟೇಲ್​ನಲ್ಲಿ ಕ್ಲೀನರ್​ ಕೂಡ ಆಗಿದ್ದಾಗಿ ತಮ್ಮ ಸ್ನೇಹಿತರೊಂದಿಗೆ ಹೇಳಿಕೊಂಡಿದ್ರು. ಚಿಕ್ಕ ವಯಸ್ಸಿನಲ್ಲಿಯೇ ಅವರ ಮನೆಯಲ್ಲಾದ ಅಪಘಾತ ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿತ್ತು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಸಂಚಾರಿ.. ನಾಟಕ ರಂಗದ ಮಿನುಗು ನಕ್ಷತ್ರವಾಗ್ತಾರೆ ಅಂತಾ ಬಹುಶಃ ಅವರಿಗೂ ಅನಿಸಿರಲಿಲ್ಲ ಅನಿಸುತ್ತೆ.

ಸಂಚಾರಿ ವಿಜಯ್ ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು.  ಅವರ ಹುಟ್ಟು ಹೆಸರು ವಿಜಯ್ ಕುಮಾರ್, ತಂದೆ ಬಸವರಾಜಯ್ಯ ಚಿತ್ರಕಲಾವಿದರಾಗಿದ್ದರು. ಜೊತೆಗೆ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಂದೆಯ ಕಲೆಯೇ ಸಂಚಾರಿ ವಿಜಯ್ ಅವರಿಗೆ ವರದಾನವಾಗಿ ಬಂದಿತ್ತು ಅಂದ್ರೆ ಅತಿಶಯೋಕ್ತಿಯಲ್ಲ. ಆದ್ರೆ ಅವರ ಬದುಕಿನಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಅನಿವಾರ್ಯವಾಗಿ ಬೆಂಗಳೂರಿಗೆ ಬರುವಂತಾಗಿತ್ತು.

ಬೆಂಗಳೂರಿಗೆ ಬಂದ ವಿಜಯ್​ಗೆ ದಾರಿ ಸ್ಪಷ್ಟವಿರಲಿಲ್ಲ.. ಆದ್ರೆ ಸಾಧನೆಯ ಹಸಿವಿತ್ತು. ಜೊತೆಗೆ ಹೊಟ್ಟೆಯ ಹಸಿವೂ ಸಾಕಷ್ಟು ಕಾಡುತ್ತಿತ್ತು. ಇಂಥ ವೇಳೆಯಲ್ಲೇ ಅವರು ಕೆಲ ಕಾಲ ಹೋಟೆಲ್​ನಲ್ಲಿ ಕ್ಲೀನರ್​ ಕೂಡ ಆಗಿದ್ರಂತೆ. ಜೊತೆಗೆ ಅವರ ಸೋದರರ ಸಹಕಾರದಿಂದಾಗಿ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಕೂಡ ವಿಜಯ್ ಪಡೀತಾರೆ.

ಇಂಜಿನಿಯರಿಂಗ್ ಪದವಿ ಪಡೆದ್ರೂ ಅವರ ಮನಸ್ಸು ಮಾತ್ರ ನಟನೆಯತ್ತಲೇ ಸೆಳೆಯುತ್ತಿರುತ್ತೆ. ಹೀಗಾಗಿ ತಾವು ಯಾವುದೇ ಕಾರಣಕ್ಕು ಇಂಜಿನಿಯರಿಂಗ್ ವೃತ್ತಿ ಮಾಡಬಾರದು ಅಂತಾ ನಿರ್ಧರಿಸ್ತಾರೆ ವಿಜಯ್. ತದನಂತರದಲ್ಲಿಯೂ ಸಾಕಷ್ಟು ಅವಕಾಶಕ್ಕಾಗಿ ಓಡಾಡ್ತಾರೆ. ಆದ್ರೆ ಅವಕಾಶ ಮರೀಚಿಕೆಯಾಗಿಯೇ ಇರುತ್ತೆ. ಹೀಗಾಗಿ ತಾತ್ಕಾಲಿಕವಾಗಿ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸ್ತಿರ್ತಾರೆ. ಆದ್ರೆ ಅಲ್ಲಿ ಮನಸ್ಸು ಒಪ್ಪಿಕೊಳ್ಳಲ್ಲ. ಕನ್ನಡ ಕಾಲಾ ತಾಯಿ, ಬಾ ಮಗನೆ ನನ್ನ ಮಡಲಿಗೆ ಅಂತಾ ಪ್ರೀತಿಯಿಂದ ಕರುಳಿನ ಕರೆ ಕೊಡುತ್ತಲೇ ಇರುವಂತೆ ಅವರಿಗೆ ಅನಿಸುತ್ತಿರುತ್ತೆ. ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡ್ತಾರೆ. ಕೆಲಸಕ್ಕೆ ಪರ್ಮನೆಂಟ್​ ಆಗಿ ಗುಡ್​ಬೈ ಹೇಳಿ.. ಕಲೆಗಾಗಿ ಜೀವನ ಮುಡಿಪಾಗಿಸಿಕೊಳ್ಳಲು ನಿರ್ಧರಿಸ್ತಾರೆ.

ಪಾಠ ಹೇಳಿದ ಗುರುಕುಲವಾಯ್ತು ಸಂಚಾರಿ
ನಟನೆಗೆ ನೀರೆರೆದರು ಮಂಗಳಾ ತಾಯಿ
ಅಲ್ಲಿಂದಲೇ ಶುರು ವಿಜಯ್​ ರಹದಾರಿ

ಕಾಲೇಜಿನಲ್ಲಿದ್ದಾಗಲೇ ಅವರು ಸಾಕಷ್ಟು ಹವ್ಯಾಸಿ ರಂಗಭೂಮಿ ತಂಡಗಳನ್ನು ಸೇರಲು ಪ್ರಯತ್ನ ನಡೆಸುತ್ತಿರ್ತಾರೆ. ಇಂಥ ವೇಳೆಯಲ್ಲೇ ಅವರಿಗೆ ಸಂಚಾರಿ ರಂಗತಂಡದ ಹೆಬ್ಬಾಗಿಲು ತೆರೆದುಕೊಳ್ಳುತ್ತೆ. ಖ್ಯಾತ ನಟ ರಂಗಾಯಣ ರಘು ಅವರ ಪತ್ನಿ, ತಾವೇ ಸ್ವತಃ ಅದ್ಭುತ ಕಲಾವಿದೆಯಾಗಿರೋ ಮಂಗಳಾ ಅವರು ತಾಯಿಯಂತೆ ಕಲೆಯ ಪಟ್ಟುಗಳನ್ನು ಕಲಿಸಿಕೊಡ್ತಾರೆ. ಕಲ್ಲಾಗಿ ಬಂದ ವಿಜಯ್​​​ರನ್ನು ಶಿಲೆಯನ್ನಾಗಿ ಮಾರ್ಪಡಿಸುವಲ್ಲಿ ಸಾಕಷ್ಟು ಸಹಕಾರ ನೀಡ್ತಾರೆ. 10 ವರ್ಷಗಳ ಕಾಲ ಸತತವಾಗಿ ಈ ತಂಡದೊಂದಿಗೆ ಸಕ್ರಿಯವಾಗಿರೋ ವಿಜಯ್​​ಗೆ, ಸಂಚಾರಿ ತಂಡ ಒಂದು ಐಡೆಂಟಿಟಿಯನ್ನೂ ತಂದು ಕೊಡುತ್ತೆ. ಅಷ್ಟು ಮಾತ್ರವಲ್ಲ ವಿಜಯ್​ ಕುಮಾರ್ ಅವರನ್ನ ಸಂಚಾರಿ ವಿಜಯ್​​ರನ್ನಾಗಿ ಮಾರ್ಪಡಿಸುತ್ತೆ.

ಇಲ್ಲಿ ಸಕ್ರಿಯರಾಗಿ ಇರುವಾಗಲೇ ಸಾಕಷ್ಟು ನಾಟಕಗಳಲ್ಲಿ ವಿಜಯ್ ನಟಿಸುತ್ತಾರೆ. ಕೈಲಾಸಂ ಕೀಚಕ, ಶ್ರೀದೇವಿ ಮಹಾತ್ಮೆ, ತುಘ್ಲಕ್, ಪ್ರಕಸಂ ತಂಡದೊಂದಿಗೆ 13 ಮಾರ್ಗೋಸಾ ಮಹಲ್ ಹೀಗೆ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸುತ್ತಾರೆ.

ವಿಜಯ್​​​ ಒಳಗಿನ ನಿರ್ದೇಶಕನನ್ನೂ ಹೊರತೆಗೆದ ಸಂಚಾರಿ

ಒಂದು ಕಡೆ ನಾಟಕಗಳಲ್ಲಿ ಅಭಿನಿಯಿಸುತ್ತಲೇ ರಂಗಭೂಮಿಯಲ್ಲಿ ಹೆಸರು ಗಳಿಸುವ ಸಂಚಾರಿ ವಿಜಯ್​​ ಇನ್ನೊಂದು ಕಡೆ ರಂಗಪ್ಪ ಹೋಗ್ಬಿಟ್ನಾ, ರಾಮ ರಾಮ ರಘು ರಾಮ, ದಾಸವಾಳ ಸಿನಿಮಾಗಳಲ್ಲಿ ಕೊಟ್ಟ ಪಾತ್ರವನ್ನು ಚೊಕ್ಕಾಗಿ ನಿರ್ವಹಿಸ್ತಾರೆ. ದಾಸವಾಳದಲ್ಲಿ ಇವರು ಮಾಡಿದ ಪಾತ್ರ ಅಮೋಘವಾಗಿದ್ರೂ ಸಿನಿಮಾ ಸೋಲುತ್ತೆ.

ನಗುನಗುತಾ ನಲಿ, ಹೊಸ ಬಾಳಿಗೆ ನೀ ಜೊತೆಯಾದೆ, ಪಂಚರಂಗಿ ಪೋಂ..ಪೋಂ.., ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಆನಾವರಣ ಮುಂತಾದ ಸೀರಿಯಲ್​ಗಳಲ್ಲೂ ತಮ್ಮ ನಟನಾ ಚಾತುರ್ಯ ತೋರಿಸ್ತಿರ್ತಾರೆ. ಈ ನಡುವೆ ಯುವ ನಿರ್ದೇಶಕರಿಗೆ ನಾಟಕ ನಿರ್ದೇಶನಕ್ಕೆ ಅವಕಾಶ ನೀಡಬೇಕು ಅಂತಾ ಮಂಗಳಾ ಮೇಡಂ ನಿರ್ಧರಿಸುತ್ತಾರೆ. ಅದರ ಫಲವಾಗಿಯೇ ಎರಡು ಅದ್ಭುತ ನಾಟಕಗಳನ್ನು ಸಂಚಾರಿ ವಿಜಯ್​ ನಿರ್ದೇಶಿಸುತ್ತಾರೆ.

ಹೌದು. ಪಿನಾಕಿಯೋ ಅನ್ನೋ ಮಕ್ಕಳ ನಾಟಕವನ್ನು ಡಿಸ್ನಿಲ್ಯಾಂಡ್​ ರೀತಿಯಲ್ಲಿ ನಿರ್ದೇಶಿಸುತ್ತಾರೆ. ಆ ಸೆಟ್​, ಮಕ್ಕಳ ಕಾಸ್ಟ್ಯೂಮ್​ ಪ್ರತಿಯೊಂದೂ ಜನ ಮನ ಗೆಲ್ಲುತ್ತೆ. ಜೊತೆಗೆ ಮಿಸ್​ ಅಂಡರ್​ ಸ್ಟ್ಯಾಂಡಿಂಗ್ ಅನ್ನೋ ಕಾಮಿಡಿ ನಾಟಕವನ್ನೂ ಅವರು ನಿರ್ದೇಶಿಸುತ್ತಾರೆ. ಇದು ಯಾವ ಮಟ್ಟಿಗೆ ಜನಪ್ರಿಯವಾಗುತ್ತೆ ಅಂದ್ರೆ, ರಂಗ ಶಂಕರ್ ರಂಗಮಂದಿರದಲ್ಲಿ ಪ್ರತಿ ಬಾರಿ ಶೋ ನಡೆದಾಗಲೂ ಟಿಕೆಟ್​ ಸಿಗದೇ ನೂರಾರು ಮಂದಿ ವಾಪಸ್ ಆಗುವಂತಾಗುತ್ತೆ. ಈ ನಾಟಕ ಕೂಡ ನಿರ್ದೇಶಕ ಸಂಚಾರಿ ವಿಜಯ್​ಗೆ ದೊಡ್ಡ ಮಟ್ಟದ ಹೆಸರು ತಂದು ಕೊಡುತ್ತೆ.

ಬದುಕು ಬದಲಿಸಿದ ಬೃಹನ್ನಳೆ ನಾಟಕ
ಪುಟ್ಟ ಪತ್ರದಿಂದ ರಾಷ್ಟ್ರ ಪ್ರಶಸ್ತಿ ಹಾದಿ ಸುಗಮ

ನಟನೆ ಪ್ರೀತಿಸೋ ಕಲಾವಿದರಿಗೆ ಯಾವುದೇ ಚಿಕ್ಕ ಅಥವಾ ದೊಡ್ಡದು ಅಂತಾ ಪಾತ್ರ ಇಲ್ಲ. ಪಾತ್ರ ಪಾತ್ರವಷ್ಟೇ ಅಂತಾರೆ. ಅದರಂತೆ ಕೈಲಾಸಂ ಅವರು ಬರೆದಿದ್ದ ಕೈಲಾಸಂ ಕೀಚಕದಲ್ಲಿ ಒಂದು ಪಾತ್ರ ಇರುತ್ತೆ. ಕೇವಲ 2 ರಿಂದ 3 ಸೀನ್​ಗಳಲ್ಲಿ ಬರೋ ಪಾತ್ರವದು. ನಾಟಕ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ರೂ ಚಿಕ್ಕದಾದ ಆ ಪಾತ್ರದಲ್ಲಿ ನಟಿಸಲು ವಿಜಯ್ ಒಪ್ಪಿಕೊಳ್ತಾರೆ. ಆ ನಾಟಕದಲ್ಲಿ ಬೃಹನ್ನಳೆಯಾಗಿ ಮನೋಜ್ಞವಾಗಿ ವಿಜಯ್ ನಟಿಸ್ತಾರೆ. ಈ ಪುಟ್ಟ ತೃತೀಯ ಲಿಂಗಿಯ ಪಾತ್ರ ಅವರಿಗೆ ಮುಂದೆ ಎಂಥ ದೊಡ್ಡ ಅವಕಾಶ ನೀಡಬಹುದು ಅನ್ನೋದನ್ನು ಅವರು ಊಹಿಸಲೂ ಸಾಧ್ಯವಿರಲಿಲ್ಲ. ಈ ಪುಟ್ಟ ಪಾತ್ರದಲ್ಲೇ ಅವರು ಪರಕಾಯ ಪ್ರವೇಶ ಮಾಡಿ ಬಿಟ್ಟಿರ್ತಾರೆ. ಇದು ವಿಜಯ್ ಅಲ್ಲ, ತೃತೀಯ ಲಿಂಗಿ ಬೃಹನ್ನಳೆಯೇ ಇರಬಹೇಕು ಅಂತಾ ಭಾವಿಸುವಷ್ಟರ ಮಟ್ಟಿಗೆ ಜನರ ಮನಸ್ಸನ್ನು ಮುಟ್ಟುತ್ತಾರೆ.

ಈ ಪಾತ್ರದಲ್ಲಿ ಸಂಚಾರಿ ವಿಜಯ್​ರನ್ನು ಸಾಕಷ್ಟು ಜನರು ಮೆಚ್ಚಿರ್ತಾರೆ. ಇದೇ ಸಮಯದಲ್ಲಿ ಬಿ.ಎಸ್​ ಲಿಂಗದೇವರು ನಾನು ಅವನಲ್ಲ ಅವಳು ಸಿನಿಮಾ ತಯಾರಿಯಲ್ಲಿ ನಿರತರಾಗಿರ್ತಾರೆ. ಆದ್ರೆ ಅದೆಷ್ಟು ಹುಡುಕಿದ್ರೂ ಅವರಿಗೆ ತಮ್ಮ ಪ್ರಮುಖ ಪಾತ್ರಧಾರಿ ಸಿಕ್ಕಿರೋಲ್ಲ. ಹುಡುಕಿ ಹುಡುಕಿ ರೋಸಿಹೋಗಿರೋ ಬಿ.ಎಸ್​ ಲಿಂಗದೇವರು ಅವರ ಮನಸ್ಸಿನಲ್ಲಿ ಸಾಕಷ್ಟು ಗೊಂದಲ ಇರುತ್ತೆ. ಇಂಥ ಸಮಯದಲ್ಲಿಯೇ ಅವರಿಗೆ ಸಂಚಾರಿ ವಿಜಯ್​ ಸ್ನೇಹಿತರೊಬ್ಬರು ಬೃಹನ್ನಳೆ ಪಾತ್ರದ ಬಗ್ಗೆ ತಿಳಿಸುತ್ತಾರೆ. ಜೊತೆಗೆ ಲಿಂಗದೇವರು ಅವರೂ ಗೌರವ ಹೊಂದಿದ್ದ ಆ ವ್ಯಕ್ತಿ ನಾನು ಗ್ಯಾರಂಟೀ ಕೊಡ್ತೀನಿ ವಿಜಯ್ ಖಂಡಿತ ಈ ಪಾತ್ರದ ಪರಕಾಯ ಪ್ರವೇಶ ಮಾಡ್ತಾರೆ ಅಂತಾ ಭರವಸೆ ನೀಡ್ತಾರೆ. ಬಳಿಕ ಬಿ.ಎಸ್​ ಲಿಂಗದೇವರು ಕೂಡ ವಿಜಯ್​ ಸಾಮರ್ಥ್ಯ ಎಂಥದ್ದು ಅಂತಾ ತಿಳಿಯುತ್ತಾರೆ. ಬಳಿಕ ಇತಿಹಾಸವೇ ನಡೆದು ಹೋಗುತ್ತೆ. ಆ ಚಿತ್ರದ ನಟನೆಗಾಗಿ ಅಂದು ಸ್ಪರ್ಧೆಯಲ್ಲಿದ್ದ ಘಾಟನುಘಟಿ ನಟರಾದ ಮೋಹನ್ ಲಾಲ್, ಆಮೀರ್​ಖಾನ್ ಮುಂತಾದವರನ್ನ ಹಿಂದಿಕ್ಕೆ ಅತ್ಯುತ್ತಮ ನಟ ಅನ್ನೋ ರಾಷ್ಟ್ರ ಪ್ರಶಸ್ತಿಯನ್ನು ವಿಜಯ್ ಪಡೆದುಕೊಳ್ತಾರೆ. ಆ ಮೂಲಕ ಮನೆ ಮಾತಾಗ್ತಾರೆ. ಅಷ್ಟೇ ಅಲ್ಲ ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಕೂಡ ವಿಜಯ್​ಗೆ ತಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡ್ತಾರೆ. ಇನ್ನೊಂದು ಕಡೆ ಮಂಸೊರೆ ನಿರ್ದೇಶನದ ಹರಿವು ಕೂಡ ವಿಜಯ್​ಗೆ ಮತ್ತೊಂದು ಮಟ್ಟದ ಜನಪ್ರಿಯತೆ ತಂದು ಕೊಡುತ್ತೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವನ್ನೂ ಅಭ್ಯಾಸ ಮಾಡಿದ್ದ ವಿಜಯ್ ಸಾಖಷ್ಟು ನಾಟಕಗಳಲ್ಲಿ ಹಾಡೂ ಹಾಡಿರ್ತಾರೆ. ಸಾಕಷ್ಟು ಬಡತನ, ನಾಟಕದಲ್ಲಿ ಹೆಸರು ಬಂದರೂ ಹೊಟ್ಟೆ ತುಂಬದೇ ಹಲವು ರಾತ್ರಿಗಳನ್ನು ಕಳೆಯೋ ವಿಜಯ್, ಸಂಚಾರಿ ತಂಡ ಅಭ್ಯಾಸ ನಡೆಸ್ತಿದ್ದ ಬೆಂಗಳೂರಿನ ಹನುಮಂತ ನಗರದ ಕೆ.ಹೆಚ್​ ಕಾಲಸೌಧದಲ್ಲಿಯೇ ಇರ್ತಾರೆ.

ಹೀಗೆ ಪಡಬಾರದ ಪಾಡು ಪಟ್ಟು ಕಲೆಯನ್ನು ಸಿದ್ಧಿಸಿಕೊಂಡ ವಿಜಯ್, ಇಲ್ಲಿಯವರೆಗೂ 24 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳ ಪಟ್ಟಿಯಲ್ಲಿ ಕಿಲ್ಲಿಂಗ್ ವೀರಪ್ಪನ್, ನಾತಿಚರಾಮಿ, ಆ್ಯಕ್ಟ್ 1978 ಸಿನಿಮಾಗಳೂ ಸೇರಿವೆ. ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಒಂದೆಡೆಯಾದರೆ, ಕಡಿಮೆ ಅವಧಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮನ್ನು ತಾವು ಸಿನಿರಂಗದಲ್ಲಿ ಬ್ಯುಸಿಯಾಗಿಸಿಕೊಂಡಿದ್ದರು. ಸಿನಿಮಾ ರಂಗವಷ್ಟೇ ಅಲ್ಲದೇ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್, ಕೋವಿಡ್​ ಸಮಯದಲ್ಲಿ ಸೋಂಕಿನಿಂದ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ನಿಂತಿದ್ದರು.

ಕನ್ನಡದಲ್ಲಿ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ನಟರ ಪಟ್ಟಿಯಲ್ಲಿ ಸಂಚಾರಿ ವಿಜಯ್ ಮೂರನೇ ನಟರೆನ್ನಿಸಿಕೊಂಡಿದ್ದರು. ಪ್ರತಿಭೆ, ಸೇವಾ ಮನೋಭಾವದ ಸಂಚಾರಿ ವಿಜಯ್ ಅವರ ಭವಿಷ್ಯ ಉಜ್ವಲವಾಗಿತ್ತು ಎನ್ನುವುದನ್ನ ಒತ್ತಿ ಹೇಳಬೇಕಿಲ್ಲ. ಸಿನಿಮಾ, ನಟನೆ ಬಗೆಗಿನ ಅವರ ಶ್ರಮ, ಶ್ರದ್ಧೆ ಅವರನ್ನ ಬಹು ಎತ್ತರಕ್ಕೆ ಕೊಂಡೊಯ್ಯುವುದಿತ್ತು.

ವಿಶೇಷ ವರದಿ: ರಾಘವೇಂದ್ರ ಗುಡಿ,  ಪೂರಕ ಮಾಹಿತಿ: ರಾಜಶೇಖರ್ ಬಂಡೆ.

 

The post ಹೋಟೆಲ್​ನಲ್ಲಿ ಕ್ಲೀನರ್​ ಕೆಲಸದಿಂದ ರಾಷ್ಟ್ರಪ್ರಶಸ್ತಿ ಪಡೆಯೋವರೆಗೆ.. ವಿಜಯ್ ನಡೆದು ಬಂದ ಹಾದಿ appeared first on News First Kannada.

Source: newsfirstlive.com

Source link