ಆರೋಗ್ಯಯುತ ಜೀವನಕ್ಕೆ ಯೋಗಾಸನ ಬಹುಮುಖ್ಯ. ಕೆಲವು ದೈಹಿಕ ತೊಂದರೆಗಳಿರಬಹುದು,ಇಲ್ಲವೆ ಮಾನಸಿಕ ಒತ್ತಡಗಳಿರಬಹುದು.ಇವುಗಳನ್ನು ನಿವಾರಿಸಿಕೊಳ್ಳಲು ಯೋಗಾಸನ ಒಳ್ಳೆಯ ಮಾರ್ಗ. ಪ್ರತಿ ದಿನ ಮುಂಜಾನೆ ವಿವಿಧ ಆಸನಗಳನ್ನು ಮಾಡುವುದರ ಮೂಲಕ ಸದೃಢ ಆರೋಗ್ಯ ಹಾಗೂ ಸ್ವಾಸ್ಥ್ಯ ಮನಸ್ಸು ನಮ್ಮದಾಗಿಸಿಕೊಳ್ಳಬಹುದು.

ಬಾಲಿವುಡ್ ನಟಿ ಮಲೈಕಾ ಅರೋರಾ ಯೋಗಾಸನದ ಪ್ರಾಮುಖ್ಯತೆ ಕುರಿತು ಹೇಳಿದ್ದಾರೆ.ಸೋಮವಾರ ತನ್ನ ಅಭಿಮಾನಿಗಳಿಗೆ ಇನ್‍ಸ್ಟಾಗ್ರಾಂ ಪೋಸ್ಟ್ ಮೂಲಕ ಗೋಮುಖಾಸನ ಮಾಡುವ ವಿಧಾನದ ಬಗ್ಗೆ ಹೇಳಿಕೊಂಡಿದ್ದಾರೆ. ಸ್ವತಃ ತಾವೇ ಗೋಮುಖಾಸನ ಮಾಡಿ, ಅವುಗಳ ಫೋಟೊ ಹಂಚಿಕೊಂಡಿದ್ದಾರೆ.

ಅಭ್ಯಾಸ ಮಾಡುವುದು ಹೇಗೆ?

ಮೊದಲಿಗೆ ಕಾಲುಗಳನ್ನು ನೇರವಾಗಿ ಚಾಚಿ ಮ್ಯಾಟ್ ಮೇಲೆ ಕುಳಿತುಕೊಳ್ಳಿ.

ನಿಮ್ಮ  ಬಲಗಾಲಿನ ಕೆಳಗೆ ಎಡಗಾಲನ್ನು ಮಡಚಿ.

ಎಡ ಪಾದವನ್ನು ಬಲ ಸೊಂಟದ ಹತ್ತಿರ ಇರಿಸಿ.

ಬಲ ಮೊಣಕಾಲನ್ನು ಮಡಚಿ ಎಡ ಮೊಣಕಾಲಿನ ಮೇಲೆ ಇರಸಿ. ಒಂದರ ಮೇಲೊಂದು ಮೊಣಕಾಲು ಇರುವಂತೆ ನೋಡಿಕೊಳ್ಳಿ.

ನಿಮ್ಮ ಬಲಗಾಲಿನ ಪಾದವನ್ನು ಎಡಗಾಲಿನ ಸೊಂಟದ ಬಳಿ ಇರಲಿ

ಈಗ, ನಿಮ್ಮ  ಬಲ ಮೊಣಕೈನ್ನು ಬೆನ್ನಿನ ಹಿಂದೆ ತೆಗೆದುಕೊಂಡು ನಿಮ್ಮ ಮೊಣಕೈಯನ್ನು ಬಗ್ಗಿಸಿ. ನಿಮ್ಮ ಕೈಯನ್ನು ಭುಜಗಳ ಕಡೆಗೆ ತಲುಪಲು ಪ್ರಯತ್ನಿಸಿ.

ನಿಮ್ಮ ಎಡಗೈಯನ್ನು ತಲೆಯ ಮೇಲಿಂದ ತನ್ನಿ. ಮೊಣಕೈಯನ್ನು ಬಗ್ಗಿಸಿ ಮತ್ತು ಎರಡೂ ಕೈಗಳ ಬೆರಳುಗಳನ್ನು ಬೆಸೆಯಲು ಪ್ರಯತ್ನಿಸಿ.

ಈ ಭಂಗಿಯನ್ನು ಕನಿಷ್ಠ 30 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆದು ಇದನ್ನೇ ಇನ್ನೊಂದು ಬದಿಗೆ ನಿರ್ವಹಿಸಿ.

ಗೋಮುಖಾಸನದ ಪ್ರಯೋಜನಗಳು :

ಎದೆಯು ವಿಶಾಲವಾಗಿ ಹಿಗ್ಗಲು ಸಹಕಾರಿ.

ಬೆನ್ನನ್ನು ನೇರವಾಗಿ ನಿಲ್ಲಿಸುತ್ತದೆ. ಬೆನ್ನಿನ ಸೆಳೆತ ನಿವಾರಿಸುತ್ತದೆ.

ಹೆಗಲಿನ ಕೀಲುಗಳ ಸರಳವಾದ ಚಲನೆಗೆ ನೆರವಾಗುವುದು.

ಕಾಲುಗಳಲ್ಲಿನ ಪೆಡಸುತನವನ್ನು ತೊಡೆದು, ಮಾಂಸಖಂಡಗಳು ಸ್ಥಿತಿಸ್ಥಾಪಕತ್ವ ಪಡೆಯುತ್ತವೆ.

ಗೋಮುಖಾಸನ ಯೋಗದ ವಿಧಾನ ಹಾಗೂ ಅದರಿಂದಾಗು ಪ್ರಯೋಜನಗಳ ಬಗ್ಗೆ ತಿಳಿಸಿರುವ ನಟಿ ಮಲೈಕಾ, ತನ್ನ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹಾಗೂ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಬಣ್ಣದ ಹಬ್ಬ ಎಲ್ಲರ ಬದುಕಿನಲ್ಲಿ ಸಂತಸ ಮತ್ತು ಪ್ರೀತಿ ತರಲಿ. ನಾವು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದೇವೆ. ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು,ಖುಷಿಯಿಂದ ಹಾಗೂ ಎಚ್ಚರಿಕೆಯಿಂದ ಹೋಳಿ ಹುಣ್ಣಿಮೆ ಆಚರಿಸಿ ಎಂದಿದ್ದಾರೆ.

ಆರೋಗ್ಯ – Udayavani – ಉದಯವಾಣಿ
Read More

By

Leave a Reply