ಹೋಳಿ 2021 : ಸುರಕ್ಷಿತ ಹೋಳಿ ಹಬ್ಬ ಆಚರಣೆಗೆ ಇಲ್ಲಿವೆ ಕೆಲವು ಟಿಪ್ಸ್..!  

ಹೋಳಿ, ಬಣ್ಣಗಳ ಹಬ್ಬವನ್ನು ಈ ವರ್ಷ ಮಾರ್ಚ್ 28 ಮತ್ತು 29 ರಂದು ಆಚರಿಸಲಾಗುತ್ತಿದೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿಕೊಳ್ಳಲು ನಾವು ತುದಿಗಾಲಿನಲ್ಲಿದ್ದೇವೆ. ಜೊತೆಗೆ ಕೋವಿಡ್ ಭಯವೂ ಕೂಡ ಇದೆ. ಆದರೂ ಹಬ್ಬದ ಖುಷಿಗೆ ಯಾವ ಭಯವೂ ಎರದುರಾಗದು ಎಂಬ ನಂಬಿಕೆಯಿಂದ ಹಬ್ಬಕ್ಕಾಗಿ ಕಾಯುತ್ತಿದ್ದೇವೆ. ಆದರೂ ನಾವು ಸುರಕ್ಷತೆಯನ್ನು ಮರೆಯಬಾರದು.

ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಕೆಲವು ಸಲಹೆಗಳು ಮತ್ತು ಪ್ರಮುಖ ಮುನ್ನೆಚ್ಚರಿಕೆಗಳು ಇಲ್ಲಿವೆ:

ನೈಸರ್ಗಿಕ ಬಣ್ಣಗಳನ್ನು ಆರಿಸಿಕೊಳ್ಳಿ:

ಸಿಂಥೆಟಿಕ್ ಅಥವಾ ಪರ್ಮನೆಂಟ್ ಬಣ್ಣಗಳನ್ನು ಬಳಸುವುದರಿಂದ ನಿಮ್ಮ ಚರ್ಮ ಮತ್ತು ಕೂದಲಿಗೆ ಹಾನಿಯಾಗಬಹುದು. ಆದ್ದರಿಂದ ಹೋಳಿಯಾಡಲು ನೈಸರ್ಗಿಕ ಬಣ್ಣವನ್ನು ಆಯ್ದುಕೊಳ್ಳುವುದು ಉತ್ತಮ. ನಿಮಗೆ ನೈಸರ್ಗಿಕ ಬಣ್ಣಗಳು ಸಿಗದಿದ್ದಲ್ಲಿ, ಕನಿಷ್ಠ ಪಕ್ಷ ನಿಮ್ಮ ಬಣ್ಣಗಳು ಗುಣಮಟ್ಟದ ಬಣ್ಣಗಳೇ ಎಂದು ಖಚಿತಪಡಿಸಿಕೊಳ್ಳುವುದು ಒಳಿತು.

ನಿಮ್ಮ ಮುಖ ಮತ್ತು ಕೂದಲಿನ ಬಗ್ಗೆ ಜಾಗೃತೆ ಇರಲಿ :

ಹೋಳಿಯಾಡುವ ಮೊದಲು ನಿಮ್ಮ ಮುಖಕ್ಕೆ ಕ್ರೀಮ್ ಹಚ್ಚಿಕೊಳ್ಳಿ, ತಲೆಗೆ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಬಣ್ಣಗಳು ಅಂಟುವ ಪ್ರಮಾಣ ಕಡಿಮೆಯಾಗುತ್ತದೆ. ನಿವು ಸುಲಭವಾಗಿ ಬಣ್ಣವನ್ನು ತೊಳೆದುಕೊಳ್ಳಬಹದು. ನಿಮ್ಮ ಚರ್ಮ ಹಾಗೂ ಕೂದಲಿನ ರಕ್ಷಣೆಯೂ ಇದರಿಂದ ಆಗುತ್ತದೆ.

ಮುಖಕ್ಕೆ ಬಣ್ಣ ಹಚ್ಚುವುದು ಹಾಗೂ ಹಚ್ಚಿಸಿಕೊಳ್ಳುವುದನ್ನು ಮಾಡಬೇಡಿ :

ಸಾಮಾನ್ಯವಾಗಿ ಹೋಳಿಯಾಡುವಾಗ ಪರಸ್ಪರ ಒಬ್ಬರಿಗೊಬ್ಬರು ಬಣ್ಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರ ಮೂಲಕ ಸಂತಸ ವ್ಯಕ್ತ ಪಡಿಸುತ್ತಾರೆ. ಆದರೇ, ಇದು ಅತ್ಯಂತ ಅಪಾಯಕಾರಿ. ಮುಖಕ್ಕೆ ಬಣ್ಣ ಹಚ್ಚುವಾಗ ಕೆಮಿಕಲ್ ಯುಕ್ತ ಬಣ್ಣಗಳು ನಿಮ್ಮ ಕಣ್ಣುಗಳನ್ನು ಪ್ರವೇಶಿಸಬಹುದು, ಬಾಯಿಯ ಮೂಲಕ ನಿಮ್ಮ ಹೊಟ್ಟೆಯನ್ನು ಪ್ರವೇಶಿಸಲೂ ಕೂಡ ಸಾಧ್ಯವಿದೆ. ಹಾಗಾಗಿ ಜಾಗರೂಕತೆಯಿಂದ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಸನ್ ಗ್ಲಾಸ್ ಧರಿಸಿ: ಸನ್ ಗ್ಲಾಸ್ ಕೆಮಿಕಲ್ ಬಣ್ಣಗಳು ಮತ್ತು ಕೆಮಿಕಲ್ ಬಣ್ಣಗಳ ನೀರಿನೆರಚಾಟದಿಂದ ಕಣ್ಣಿನ ರಕ್ಷಣೆಯನ್ನು ನೀಡುತ್ತದೆ. ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ ಮತ್ತು ಹೋಳಿ ಸಮಯದಲ್ಲಿ ‘ಪಿಚ್ಕರಿಸ್’ ಮತ್ತು ಹೋಳಿ ನೀರೀನಾಟವಾಡುವಾಗ ಜಾಗರೂಕತೆ ವಹಿಸಲು ಸನ್ ಗ್ಲಾಸ್ ಸುಲಭ ಮಾರ್ಗ. ಆದ್ದರಿಂದ, ಸನ್ ಗ್ಲಾಸ್ ಧರಿಸಿ, ನಿಮ್ಮ ಕಣ್ಣುಗಳನ್ನು ಹಾನಿಕಾರಕ ರಾಸಾಯನಿಕಗಳಿಂದ ರಕ್ಷಿಸಿ.

 ಚರ್ಮದ ಅಲರ್ಜಿ ಇರುವವರು ಹೊಳಿಯಾಟವನ್ನು ತಪ್ಪಿಸುವುದು ಉತ್ತಮ:

ನಿಮಗೆ ಚರ್ಮದ ಅಲರ್ಜಿ ಇದ್ದರೆ, ಹೋಳಿಯಾಟದ ಆಚರಣೆಯನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ. ಬದಲಾಗಿ, ಹೋಲಿಕಾ ದಹನ್, ದೀಪೋತ್ಸವದಂತಹ ಇತರ ಬಣ್ಣರಹಿತ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ.

ನಿಮ್ಮ ಆರೋಗ್ಯ ನಿಮ್ಮ ಭವಿಷ್ಯ. ಹ್ಯಾಪಿ ಹೋಳಿ…  ಇದು ‘ಉದಯವಾಣಿ’ಯ ಕಳಕಳಿ.   

ಆರೋಗ್ಯ – Udayavani – ಉದಯವಾಣಿ
Read More