ಹ್ಯಾರಿ ಪಾಟರ್ ಚಿತ್ರದ ನಟಿ ಹೆಲೆನ್ ಮೆಕ್ರೋರಿ ನಿಧನ

ಲಂಡನ್: ಹ್ಯಾರಿ ಪಾಟರ್ ಸಿನಿಮಾಗಳಲ್ಲಿ ನಟಿಸಿದ್ದ ಬ್ರಿಟಿಷ್ ನಟಿ ಹೆಲೆನ್ ಮೆಕ್ರೋರಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹೆಲೆನ್ ಮೃತಪಟ್ಟಿರುವ ಸುದ್ದಿಯನ್ನು ಆಕೆಯ ಪತಿ, ನಟ ಡಾಮಿನ್ ಲ್ಯೂಯಿಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಹೆಲೆನ್ ತಮ್ಮ ನಿವಾಸದಲ್ಲಿ ಶಾಂತಿಯಿಂದ ಮರಣಹೊಂದಿದ್ದಾರೆ. ಅವರು ಬಹು ಸಮಯದಿಂದ ಕ್ಯಾನ್ಸರ್‌ ಜೊತೆಗೆ ಸೆಣೆಸಾಡುತ್ತಿದ್ದರು' ಎಂದಿದ್ದಾರೆ.

'ಹೆಲೆನ್ ಧೈರ್ಯದಿಂದ ಬದುಕಿದ್ದರು, ಧೈರ್ಯದಿಂದಲೇ ಮರಣಿಸಿದರು. ನಾವು ಆಕೆಯನ್ನು ಪ್ರೀತಿಸಿದ್ದೆವು. ನಮ್ಮ ಬಾಳಿನಲ್ಲಿ ಆಕೆಯ ಹಾಜರಿ ಅನುಭವಿಸಿದ ನಾವುಗಳು ಪುಣ್ಯವಂತರು. ಆಕೆ ಬೆಳಕಿನ ರೀತಿಯಿದ್ದಳು. ಈಗ ದೇವರ ಬಳಿ ಹೋಗಿದ್ದಾಳೆ' ಎಂದು ಭಾವುಕ ಸಾಲುಗಳನ್ನು ಪತಿ ಡಾಮಿನ್ ಲ್ಯೂಯಿಸ್ ಬರೆದಿದ್ದಾರೆ.

1994 ರಲ್ಲಿ ಬಿಡುಗಡೆ ಆದ 'ಇಂಟರ್ವ್ಯೂ ವಿತ್ ವ್ಯಾಂಪೈರ್' ಸಿನಿಮಾದಿಂದ ನಟನೆ ಆರಂಭಿಸಿದ ಹೆಲೆನ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹ್ಯಾರಿ ಪಾಟರ್‌ ಸರಣಿಯ ಮೂರು ಸಿನಿಮಾಗಳು. ಬಾಂಡ್ ಸಿನಿಮಾ 'ಸ್ಕೈ ಫಾಲ್‌'ನಲ್ಲೂ ನಟಿಸಿದ್ದಾರೆ ಹೆಲೆನ್. ಸಿನಿಮಾ ಮಾತ್ರವಲ್ಲದೆ ಹಲವಾರು ಟೆಲಿವಿಷನ್‌ ಶೋಗಳಲ್ಲಿಯೂ ನಟಿಸಿದ್ದಾರೆ.

ಹೆಲೆನ್‌ಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಟಿವಿ ಶೋ ಪೆನ್ನಿ ಡ್ರೆಡ್‌ಫುಲ್. ಹ್ಯಾರಿ ಪಾಟರ್‌ಗಿಂತಲೂ ಪೆನ್ನಿ ಡ್ರೆಡ್‌ಫುಲ್ ಶೋ ನಿಂದಾಗಿಯೇ ಹೆಲೆನ್ ಹೆಚ್ಚು ಪರಿಚಿತರು. ಹೆಲೆನ್ ಸಾವಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ನಟ ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ವಿಶ್ವದಾದ್ಯಂತ ಸಿನಿಮಾ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More