ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​ ದೇಶ್​​ಮುಖ್​ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಯುತ್ತಿರೋ ಜಾರಿ ನಿರ್ದೇಶನಾಲಯ, ಅವರನ್ನ ವಿಚಾರಣೆಗೆ ಬರುವಂತೆ ಸಮನ್ಸ್​ ನೀಡಿದೆ.  ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ದೇಶ್​​ಮುಖ್​ಗೆ ಸೂಚಿಸಲಾಗಿತ್ತು. ಆದ್ರೆ ಅವರ ಪರ ವಕೀಲರು ಕಾಲಾವಕಾಶ ಕೇಳಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯನ್ನ ಇ.ಡಿ ಪರಿಗಣಿಸಿದೆ ಎಂದು ವರದಿಯಾಗಿದೆ.

ಈ ಮಧ್ಯೆ ದೇಶ್​ಮುಖ್​​ ಅವರ ಪಿ.ಎ ಕುಂದನ್ ಶಿಂಧೇ ಹಾಗೂ ಆಪ್ತ ಕಾರ್ಯದರ್ಶಿ ಸಂಜೀವ್ ಪಳಂದೆಯನ್ನ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ಇ.ಡಿ ಅರೆಸ್ಟ್​ ಮಾಡಿದೆ. ಶುಕ್ರವಾರ ರಾತ್ರಿ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್​ ಅಡಿ ಜಾರಿ ನಿರ್ದೇಶನಲಾಯ ಇಬ್ಬರನ್ನೂ ವಿಚಾರಣೆ ಮಾಡಿದ್ದು, ಇಂದು ಪಿಎಂಎಲ್​ಎ ವಿಶೇಷ ನ್ಯಾಯಾಲಯದ ಮುಂದೆ ಅವರನ್ನ ಹಾಜರುಪಡಿಸಲಿದೆ

ಏನಿದು ಪ್ರಕರಣ?
ಅನಿಲ್ ದೇಶ್​ಮುಖ್​ ವಿರುದ್ಧ 100 ಕೋಟಿ ರೂಪಾಯಿಯ ಭ್ರಷ್ಟಾಚಾರ ಆರೋಪವಿದೆ. ಮಾಜಿ ಮುಂಬೈ ಪೊಲೀಸ್​ ಆಯುಕ್ತ ಪರಮ್​​ ಬೀರ್​ ಸಿಂಗ್, ಸಿಎಂ ಉದ್ಧವ್​ ಠಾಕ್ರೆಗೆ ಪತ್ರ ಬರೆದು ಅನಿಲ್​ ದೇಶ್​ಮುಖ್​ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಉದ್ಯಮಿ ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕವಿದ್ದ ಕಾರ್ ಪತ್ತೆಯಾದ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿ ಸಚಿನ್ ವಾಜೆ ಅವರನ್ನ ಎನ್ಐಎ ಬಂಧಿಸಿದ ಬೆನ್ನಲ್ಲೇ, ಪ್ರಕರಣದ​ ತನಿಖೆಯಲ್ಲಿ ಲೋಪವೆಸಗಿದ್ದಾರೆಂದು ಪರಮ್​ಬೀರ್​ ಸಿಂಗ್​ರನ್ನ ಮುಂಬೈ ಪೊಲೀಸ್​ ಕಮಿಷನರ್ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಬಳಿಕ ಪರಮ್​ಬೀರ್​ ಸಿಂಗ್​​ ಠಾಕ್ರೆಗೆ ಪತ್ರ ಬರೆದಿದ್ದರು.

ಸಚಿವ ಅನಿಲ್​ ದೇಶಮುಖ್​ ಮುಂಬೈನ 1750 ರೆಸ್ಟೊರೆಂಟ್​ ಮತ್ತು  ಬಾರ್​ಗಳಿಂದ ಲಂಚ ವಸೂಲಿ ಮಾಡಲು ಸಚಿನ್ ವಾಜೆ ಸೇರಿದಂತೆ ಹಲವು ಪೊಲೀಸ್​ ಅಧಿಕಾರಿಗಳನ್ನ ಬಳಸಿಕೊಂಡಿದ್ದಾರೆ. ತಿಂಗಳಿಗೆ 100 ಕೋಟಿ ಹಣ ತಂದುಕೊಡಬೇಕು ಅಂತ ಟಾರ್ಗೆಟ್​ ನೀಡಿದ್ದಾರೆ ಎಂದು ಪರಮ್​ಬೀರ್ ಸಿಂಗ್​​​ ಪತ್ರದಲ್ಲಿ ಹೇಳಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಅನಿಲ್ ದೇಶ್​ಮುಖ್​​​ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಆರೋಪದ ಸಂಬಂಧ ಅನಿಲ್​ ದೇಶ್​ಮುಖ್​ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿಕೊಂಡಿದೆ. ಬಳಿಕ ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿ ತನ್ನ ತನಿಖೆಯನ್ನು ಪ್ರಾರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹಲವರ ಹೇಳಿಕೆಗಳನ್ನು ದಾಖಲಿಸಿದೆ.
ಸುಮಾರು 12 ಬಾರ್ ಮಾಲೀಕರಿಂದ ಸುಲಿಗೆ ಮಾಡಲ್ಪಟ್ಟ ಮತ್ತು ಮಾಜಿ ಸಹಾಯಕ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಕೆಲವು ತಿಂಗಳುಗಳಲ್ಲಿ ಸಂಗ್ರಹಿಸಿದ 4 ಕೋಟಿ ರೂಪಾಯಿ ಹಣದ ಜಾಡನ್ನ ಇಡಿ ಅಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಅಂತ ವರದಿಯಾಗಿದೆ.

The post ₹100 ಕೋಟಿ ಭ್ರಷ್ಟಾಚಾರ ಆರೋಪ ಪ್ರಕರಣ: ಅನಿಲ್ ದೇಶ್​ಮುಖ್​ಗೆ ED ಬುಲಾವ್, ಪಿಎ ಬಂಧನ appeared first on News First Kannada.

Source: newsfirstlive.com

Source link