₹15 ಲಕ್ಷ ನೀಡುವ ಭರವಸೆ, ರೈತರ ಆದಾಯ ದುಪ್ಪಟ್ಟು ಮಾಡುವ ವಾಗ್ದಾನ ಏನಾಯಿತು: ಮೋದಿ ವಿರುದ್ಧ ಪವನ್ ಖೇರಾ ವಾಗ್ದಾಳಿ | What happened to the promises of Rs15 lakh, doubling the income of the farmers asks Congress leader Pawan Khera


ಪ್ರಧಾನಿ ಭಾಷಣದಲ್ಲಿ ಹೇಳಿದ ಭಾಯಿ- ಬತೀಜಾವಾದ್ (ಸ್ವಜನ ಪಕ್ಷಪಾತ)ದ ಬಗ್ಗೆ ಟೀಕಿಸಿದ ಖೇರಾ, ಇದು ಬಿಜೆಪಿಯ ಆಂತರಿಕ ಸಮಸ್ಯೆ ಎಂದು ನನಗನಿಸುತ್ತಿದೆ.

₹15 ಲಕ್ಷ ನೀಡುವ ಭರವಸೆ, ರೈತರ ಆದಾಯ ದುಪ್ಪಟ್ಟು ಮಾಡುವ ವಾಗ್ದಾನ ಏನಾಯಿತು: ಮೋದಿ ವಿರುದ್ಧ ಪವನ್ ಖೇರಾ ವಾಗ್ದಾಳಿ

ಕಾಂಗ್ರೆಸ್ ನಾಯ ಕ ಪವನ್ ಖೇರಾ

ದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ ಕೆಲವು ಮಾತುಗಳನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಖಂಡಿಸಿದ್ದಾರೆ. ಸ್ವಾತಂತ್ರ್ಯ ದಿನದ ಭಾಷಣವೆಂದರೆ ಅಲ್ಲಿ ರಾಜಕೀಯ ವಿಷಯಗಳನ್ನು ಹೇಳುವುದಲ್ಲ. ಈ ರೀತಿ ಮಾತನಾಡುವ ಸಂಪ್ರದಾಯವನ್ನು ಮೋದಿ ಮಾಡಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ದಿನದಂದು ಮಾಡಿದ ಯಾವುದೇ ಭರವಸೆಯನ್ನು ಮೋದಿ ಈಡೇರಿಸಿಲ್ಲ ಎಂದಿದ್ದಾರೆ ಖೇರಾ. ₹15 ಲಕ್ಷ ನೀಡುವ ಭರವಸೆ ಏನಾಯ್ತು? ರೈತರ ಆದಾಯ ದುಪ್ಪಟ್ಟು ಮಾಡುವ, ಎಲ್ಲರಿಗೂ ಮನೆ ಭರವಸೆಗಳು ಎಲ್ಲಿ ಹೋದವು ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ. ಪ್ರಧಾನಿ ಭಾಷಣದಲ್ಲಿ ಹೇಳಿದ ಭಾಯಿ- ಬತೀಜಾವಾದ್ (ಸ್ವಜನ ಪಕ್ಷಪಾತ)ದ ಬಗ್ಗೆ ಟೀಕಿಸಿದ ಖೇರಾ, ಇದು ಬಿಜೆಪಿಯ ಆಂತರಿಕ ಸಮಸ್ಯೆ ಎಂದು ನನಗನಿಸುತ್ತಿದೆ. ಬಿಜೆಪಿಯಲ್ಲಿ ಸ್ವಜನ ಪಕ್ಷಪಾತವಿದೆ. ಅವರು ತಮ್ಮದೇ ಪಕ್ಷದ ಸಚಿವರು ಮತ್ತು ಅವರ ಮಕ್ಕಳ ಬಗ್ಗೆ ಹೇಳಿದ್ದೇ ಎಂಬುದನ್ನು ಮೋದಿಯೇ ಸ್ಪಷ್ಟ ಪಡಿಸಬೇಕು. ಅವರು ಯಾರ ಮೇಲೆ ದಾಳಿ ಮಾಡಿದ್ದು ಎಂದು ತಿಳಿದಿಲ್ಲ. ಆದರೆ 8 ವರ್ಷದಲ್ಲಿ ಅವರು ಮಾಡಿದ ಕೆಲಸದ ರಿಪೋರ್ಟ್ ಕಾರ್ಡ್ ನೀಡಲಿ ಎಂದು ದೇಶ ನಿರೀಕ್ಷಿಸುತ್ತಿದೆ ಎಂದಿದ್ದಾರೆ ಖೇರಾ.

ಸ್ವಾತಂತ್ರ್ಯ ದಿನ ಎಂಬುದು ಐತಿಹಾಸಿಕ ದಿನ. ಇವತ್ತು 75ನೇ ವರ್ಷದ ಆಚರಣೆ ನಡೆಯುತ್ತಿರುವುದರಿಂದ ಇದು ಹೆಚ್ಚು ಮಹತ್ವ ಪಡೆದಿದೆ. ಹಿಂದಿನಿಂದಲೂ ಕೆಂಪುಕೋಟೆಯಲ್ಲಿ ಅದ್ಭುತ ಭಾಷಣಗಳನ್ನು ಮಾಡಲಾಗಿದೆ. ಜಗತ್ತು ಕೆಂಪುಕೋಟೆಯತ್ತ ಕಣ್ಣಿಟ್ಟಿರುವಾಗ ಅಲ್ಲಿ ಪ್ರಬುದ್ಧ ಭಾಷಣವನ್ನು ನಿರೀಕ್ಷಿಸಿದ್ದೆವು ಎಂದು ಪವನ್ ಖೇರಾ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ನರೇಂದ್ರ ಮೋದಿ ಸರ್ಕಾರ ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಟೀಕಾ ಪ್ರಹಾರ ಮಾಡಿದ ಬೆನ್ನಲ್ಲೇ ಖೇರಾ ಮೋದಿ ವಿರುದ್ಧ ಟೀಕೆ ಮಾಡಿದ್ದಾರೆ. ಗಾಂಧಿ- ನೆಹರು-ಪಟೇಲ್- ಆಜಾದ್ ಜೀ ಮೊದಲಾದ ರಾಷ್ಟ್ರ ನಾಯಕರನ್ನು ಅವಮಾನಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ ಸೋನಿಯಾ ಗಾಂಧಿ.

ಭಾರತವು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಈ ಎರಡು ಪಿಡುಗು ವಿರುದ್ಧ ಹೋರಾಡಬೇಕಾಗಿದೆ. ನಾನು ಸ್ವಜನ ಪಕ್ಷಪಾತದ ಬಗ್ಗೆ ಮಾತನಾಡುವಾಗಲೆಲ್ಲ ಜನರು ನಾನು ರಾಜಕೀಯ ಬಗ್ಗೆ ಮಾತನಾಡುತ್ತೇನೆ ಎಂದು ಅಂದುಕೊಳ್ಳುತ್ತಾರೆ. ದುರದೃಷ್ಟವಶಾತ್, ಹಲವಾರು ಸಂಸ್ಥೆಗಳಲ್ಲಿಯೂ ಸ್ವಜನ ಪಕ್ಷಪಾತ ಇದೆ ಎಂದಿದ್ದಾರೆ ಮೋದಿ. ಕ್ರೀಡಾ ವಲಯದ ಉದಾಹರಣೆ ನೀಡಿದ ಮೋದಿ, ಭಾರತದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಪ್ರತಿಭೆಯನ್ನು ಮಾತ್ರ ನೋಡಿ ಅವರನ್ನು ಆಯ್ಕೆ ಮಾಡಿರುವುದರಿಂದ ಅವರು ಯಶಸ್ವಿಯಾಗಿದ್ದಾರೆಯೇ ಹೊರತು ಸ್ವಜನ ಪಕ್ಷಪಾತದಿಂದ ಅಲ್ಲ ಎಂದಿದ್ದಾರೆ ಮೋದಿ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಆಗಾಗ ಜಗಳ ನಡೆಯುತ್ತಲೇ ಇದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಇತಿಹಾಸ ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಭಾನುವಾರ ಟ್ವೀಟ್ ಮಾಡಿದ ವಿಡಿಯೊದಲ್ಲಿ ನೆಹರು ಅವರು ದೇಶದ ವಿಭಜನೆಗೆ ಕಾರಣ ಎಂದು ದೂಷಿಸಿದೆ. ಆದರೆ ಸಾವರ್ಕರ್ ಎರಡು ದೇಶದ ಕಲ್ಪನೆಯನ್ನು ಮುಂದಿಟ್ಟಿದ್ದರು ಎಂದು ಕಾಂಗ್ರೆಸ್ ಹೇಳಿದೆ. ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರದಲ್ಲಿ ನೆಹರು ಅವರ ಚಿತ್ರವನ್ನು ಕೈ ಬಿಟ್ಟಿದ್ದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

TV9 Kannada


Leave a Reply

Your email address will not be published. Required fields are marked *