ಮೈಸೂರು: ಸಂಸದ ಪ್ರತಾಪಸಿಂಹ ಮತ್ತೊಮ್ಮೆ ಡಿ.ಸಿ‌ ರೋಹಿಣಿ ಸಿಂಧೂರಿ ವಿರುದ್ದ ಗುಡುಗಿದ್ದಾರೆ. ಜನ ಕೊರೊನಾ ಸಂಕಷ್ಟದಲ್ಲಿರುವಾಗ ಸ್ನಿಮ್ಮಿಂಗ್ ಪೂಲ್ ಬೇಕಿತ್ತಾ ನಿಮಗೆ? ಔಷಧಿ ಖರೀದಿಗೆ ಕಾನೂನು ಅಡ್ಡ ಬರುತ್ತೆ. 28 ಲಕ್ಷ ಖರ್ಚು ಮಾಡಿ ಸ್ಮಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ ಎಂದು ಜಿಲ್ಲಾಧಿಕಾರಿಯನ್ನ ಪ್ರಶ್ನಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಪಾಪದ ಜನರನ್ನು ರಕ್ಷಿಸೋದು ಬಿಟ್ಟು ಮೋಜು ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ₹41 ಕೋಟಿ ಹಣ ಬಂದಿದೆ. ಅದರಲ್ಲಿ ₹39 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಿರಿ. ₹39 ಕೋಟಿ ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂತಾ ಮಾಹಿತಿ ಕೊಡಿ ಎಂದು ಲೆಕ್ಕ ಕೇಳಿದ್ರು. ಜಿಲ್ಲಾಧಿಕಾರಿ ಹಾಗೂ ಡಿಎಚ್ಓ ಮೊದಲು ಲೆಕ್ಕ ಕೊಡಲಿ ಎಂದು ಪ್ರತಾಪಸಿಂಹ ಕೇಳಿದರು.

ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ‌ ಪ್ರಧಾನಿಯವ್ರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಆದರೆ ಈಗಲೂ ಕೂಡ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ? ಪಿಎಂ ಕೇರ್ಸ್​​ನಿಂದ ಬಂದ 40 ವೆಂಟಿಲೇಟರ್​​​ಗಳನ್ನ ಇನ್ನೂ ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾಧಿಕಾರಿಗಳ ವೈಫಲ್ಯತೆ ತೋರಿಸುತ್ತೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಅಸಹಕಾರ ಹೇಗಾಗುತ್ತೆ? ಎಂದು ಪ್ರಶ್ನಿಸಿದ್ರು.

ಸಿಎಂ ಯಡಿಯೂರಪ್ಪ ಅವರು ಕೋವಿಡ್ ರೋಗಿಗಳಿಗೆ ನೆರವಾಗೆಲೆಂದು ಸ್ಟೆಪ್ ಡೌನ್ ಅಸ್ಪತ್ರೆ ತೆರೆಯಲು ಹೇಳಿದ್ರು. ಖಾಸಗಿ ಆಸ್ಪತ್ರೆಯವ್ರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. ಆದರೆ ಮೈಸೂರಿನಲ್ಲಿ ನಾಯಿಕೊಡೆಗಳಂತೆ ಸ್ಟೆಪ್ ಡೌನ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಅವರು ಇದರ ಭ್ರಷ್ಟಾಚಾರ ಪತ್ತೆ ಹಚ್ಚೋತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆಗೆ ಅನುಮತಿ ನೀಡಿದಿರಿ? ಮೊದಲು ಅದಕ್ಕೆ ಉತ್ತರ ಕೊಡಿ ಎಂದು ಸಿಂಧೂರಿಗೆ ಪ್ರತಾಪಸಿಂಹ ಪ್ರಶ್ನೆ ಹಾಕಿದ್ರು.

The post ₹39 ಕೋಟಿ ಯಾವುದಕ್ಕೆ ಖರ್ಚು ಮಾಡಿದ್ದೀರ? ಸಿಂಧೂರಿಗೆ ಲೆಕ್ಕ ಕೇಳಿದ ಪ್ರತಾಪ್​ಸಿಂಹ appeared first on News First Kannada.

Source: newsfirstlive.com

Source link