ಒಂದು ಮಾವಿನ ಹಣ್ಣಿನ ಬೆಲೆ ನೂರು ರೂಪಾಯಿ ಅಂದ್ರೂ ಒಂದು ಡಜನ್‌ ಮಾವಿನ ಹಣ್ಣಿನ ಬೆಲೆ 1,200 ರೂಪಾಯಿ ಆಗುತ್ತೆ. ಆದ್ರೆ, ಒಬ್ಬ ಬಾಲಕಿ 12 ಮಾವಿನ ಹಣ್ಣನ್ನು ಬರೋಬ್ಬರಿ 1 ಲಕ್ಷ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಹಾಗಾದ್ರೆ ಅದು ಯಾವ ತಳಿ ಮಾವಿನ ಹಣ್ಣು ಅಂತ ಹೌಹಾರಬೇಡಿ, ಇದರ ಹಿಂದೊಂದು ಮಾನವೀಯ ಸ್ಟೋರಿ ಇದೆ..

ಅದೊಂದು ತೀರಾ ಬಡತನದಲ್ಲಿದ್ದ ಕುಟುಂಬ. ಪ್ರತಿ ದಿನ ದುಡಿಮೆಯ ಹಣದಲ್ಲಿಯೇ ಮೂರು ಹೊತ್ತಿನ ತುತ್ತು ತುಂಬಿಸಿಕೊಳ್ಳಬೇಕಿತ್ತು. ಅಂತಹ ಬಡತನದ ಕುಟುಂಬದಲ್ಲಿ ಜನಿಸಿದ ಬಾಲಕಿಗೆ ಶಿಕ್ಷಣದ ಮೇಲೆ ಒಲವು. ತಾನು ಕಲಿಯಬೇಕು, ತಾನು ಕಾಲೇಜಿಗೆ ಹೋಗಬೇಕು, ಮುಂದೊಂದು ದಿನ ದೊಡ್ಡ ಉದ್ಯೋಗಕ್ಕೆ ಸೇರಬೇಕು, ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಮಾಡಬೇಕು, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.. ಇದುವೇ ಆ ಬಾಲಕಿಗೆ ಇದ್ದ ಕನಸು. ಹೀಗಾಗಿಯೇ ಪ್ರತಿ ದಿನ ತಪ್ಪದೇ ಶಾಲೆಗೆ ಹೋಗುತ್ತಿದ್ದಳು. ಸ್ವಲ್ಪ ಆರೋಗ್ಯ ವ್ಯತ್ಯಾಸ ಆದ್ರೂ ಆಕೆ ಶಾಲೆಗೆ ಹೋಗುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಕಲಿಕೆಯಲ್ಲಿಯೂ ಅಷ್ಟೇ ಭಾರೀ ಚುರುಕು. ಆದ್ರೆ, ಕೊರೊನಾ ಆಕೆಯ ಶಿಕ್ಷಣದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇತ್ತು. ಆಕೆ ಜಗ್ಗಲಿಲ್ಲ. 12 ಮಾವಿನ ಹಣ್ಣನ್ನು 1 ಲಕ್ಷದ 20 ಸಾವಿರ ರೂಪಾಯಿಗೆ ವ್ಯಾಪಾರ ಮಾಡಿ ಶಿಕ್ಷಣ ಕಲಿಯಲು ಮುಂದಾಗಿದ್ದಾಳೆ.

ಶಿಕ್ಷಣ ಕಲಿಕೆಗೆ ಅಡ್ಡಗಾಲಾದ ಕೊರೊನಾ
ಜೀವನದ ದಿಕ್ಕನ್ನೇ ಬದಲಿಸಿದ ಮ್ಯಾಂಗೋ ವ್ಯಾಪಾರ

ನೋಡಿ, ಆ ಚಿಕ್ಕ ಹೆಣ್ಣು ಮಗು ರಸ್ತೆಯ ಪಕ್ಕದಲ್ಲಿ ಮಾವಿನ ಹಣ್ಣು ವ್ಯಾಪಾರಕ್ಕೆ ಹೇಗೆ ಕುಳಿತ್ತಿದ್ದಾಳೆ ಅಂತ. ರಸ್ತೆಯ ಪಕ್ಕ ಎರಡು ಚೀಲವನ್ನು ಹಾಸಿಕೊಂಡು ಅದರಲ್ಲಿ ಮಾವಿನ ಹಣ್ಣು ಇಟ್ಟಿದ್ದಾಳೆ. ರಸ್ತೆಯಲ್ಲಿ ಹೋಗುವವರು ಯಾರಾದರೂ ವ್ಯಾಪಾರಕ್ಕೆ ವಾಹನ ನಿಲ್ಲುಸುತ್ತಾರಾ ಅಂತ ಕಾಯುತ್ತಿದ್ದಾಳೆ. ಇದೇ ಮಾವಿನ ಹಣ್ಣಿನ ವ್ಯಾಪಾರವೇ ಆಕೆಯ ಜೀವನಕ್ಕೆ ಟರ್ನಿಂಗ್‌ ನೀಡಿದೆ. ಅಂದ ಹಾಗೆ ಆಕೆ ಜಾರ್ಖಂಡ್‌ನ ಜೇಮ್ಷೆಡ್‌ಪುರದವಳು. ಆಕೆಯ ಹೆಸರು ತುಳಸಿ ಕುಮಾರಿ. ಆಕೆಯ ವಯಸ್ಸು 11 ವರ್ಷ.


ಕೊರೊನಾ ಸೋಂಕಿನಿಂದ ಶಾಲೆಗಳು ಬಂದ್‌

ಕೊರೊನಾ ಮಹಾಮಾರಿ ವೈರಸ್‌ ಮಾಡಿದ ಸಮಸ್ಯೆ ಅಷ್ಟಿಷ್ಟಲ್ಲ. ಸೋಂಕು ನಿಯಂತ್ರಣಕ್ಕೆ ಶಾಲೆಗಳನ್ನು ಬಂದ್ ಮಾಡಿಸಲಾಗಿತ್ತು. ಇದರಿಂದ ಒಂದೂವರೆ ವರ್ಷದಲ್ಲಿ ಮಕ್ಕಳು ಶಾಲೆಯ ಮುಖವನ್ನೇ ಸರಿಯಾಗಿ ನೋಡಲಾಗಿಲ್ಲ. ಮೊದಲನೇ ಅಲೆಯ ಲಾಕ್‌ಡೌನ್‌ ಸಮಯದ ಆರಂಭದಲ್ಲಿ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ರಜೆ ಇತ್ತು. ಆ ನಂತರ ಆನ್‌ಲೈನ್‌ ಶಿಕ್ಷಣ ಪದ್ಧತಿ ಜಾರಿಗೆ ತರಲಾಯಿತು. ಆದ್ರೆ, ಇದೇ ಆನ್‌ಲೈನ್‌ ಶಿಕ್ಷಣ ಬಾಲಕಿಯನ್ನು ವಿಚಲಿತಳಾಗಿಸಿತ್ತು.

ಕಿತ್ತು ತಿನ್ನುವ ಬಡತನದಲ್ಲಿ ಮೊಬೈಲ್‌ ಕೊಳ್ಳುವುದು ಹೇಗೆ?
ಮೊಬೈಲ್‌ಗೆ ಇಂಟರ್ನೆಟ್‌ ಹಾಕಿಸಿಕೊಳ್ಳುವುದು ಹೇಗೆ?

ಹೇಳಿ ಕೇಳಿ ಆಕೆ ತೀರಾ ಬಡತನದಲ್ಲಿ ಜನಿಸಿದವಳು. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ. ತಂದೆಯ ದಿನನಿತ್ಯದ ದುಡಿಮೆಯಲ್ಲಿಯೇ ಜೀವನ ಸಾಗುತ್ತಿತ್ತು. ತಂದೆಯ ಕೈಯಲ್ಲಿಯೂ ಸ್ಮಾರ್ಟ್‌ ಫೋನ್‌ ಇರಲಿಲ್ಲ. ಇನ್ನೇನು ಮಾಡುವುದು ಅಂತ ಆ ಬಾಲಕಿ ಮನೆಯಲ್ಲಿಯೇ ಆಟ ಆಡುತ್ತಾ ಕುಳಿತುಕೊಳ್ಳಲಿಲ್ಲ. ಹೇಗಾದ್ರೂ ಮಾಡಿ ಶಿಕ್ಷಣ ಪಡೆಯಬೇಕು. ತಾನು ಶಿಕ್ಷಣದಿಂದ ವಂಚಿತಳಾಗಬಾರದು ಅನ್ನೋದು ಆಕೆಯದಾಗಿತ್ತು. ಹೀಗಾಗಿಯೇ ಯಾರಾದ್ರೂ ಸ್ಮಾರ್ಟ್‌ ಫೋನ್‌ ಕೊಡಿಸುವಂತೆ ಮನವಿ ಮಾಡುತ್ತಾಳೆ.

ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್‌ಗಾಗಿ ಮನವಿ
ಬಾಲಕಿ ಮನವಿಗೆ ಯಾರಿಂದಲೂ ಸ್ಪಂದನೆ ಸಿಗಲಿಲ್ಲ

ಬಾಲಕಿಗೆ ಶಿಕ್ಷಣದ ಬಗ್ಗೆ ಇರುವ ವಲವಿನ ಬಗ್ಗೆ, ಆಕೆಗೆ ಸ್ಮಾರ್ಟ್‌ ಫೋನ್‌ ಅಗತ್ಯ ಇರುವ ಬಗ್ಗೆ ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ. ಎಷ್ಟೋ ಜನ ಆ ಸುದ್ದಿ ನೋಡಿಯೂ ನೋಡದಂತೆ ಇರುತ್ತಾರೆ. ಇನ್ನು ಕೆಲವಷ್ಟು ಜನಕ್ಕೆ ಸಹಾಯ ಮಾಡುವ ಮನಸ್ಸು ಇರುತ್ತೆ. ಆದ್ರೆ, ಅದು ಸತ್ಯವೋ ಸುಳ್ಳೋ ಅನ್ನೋದು ಖಚಿತವಾಗಿರುವುದಿಲ್ಲ. ಹೀಗಾಗಿ ಜನರಿಂದ ಸ್ಪಂದನೆ ಸಿಗಲ್ಲ, ಬಾಲಕಿಗೆ ಮೊಬೈಲ್‌ ಸಿಗಲ್ಲ. ಆಗ ಆರಂಭವಾಗಿದ್ದೇ ಮಾವಿನ ಹಣ್ಣಿನ ವ್ಯಾಪಾರ.

ಬಾಲಕಿ ಮಾವಿನ ಹಣ್ಣಿನ ವ್ಯಾಪಾರಕ್ಕೆ ಇಳಿದಿದ್ದು ಯಾಕೆ?
ಪೈಸೆ ಪೈಸೆ ಹಣ ಸಂಗ್ರಹಿಸಿ ಇಡುತ್ತಿದ್ದ ಬಾಲಕಿ

ಯಾರಿಂದಲೂ ಸ್ಮಾರ್ಟ್‌ ಫೋನ್‌ ಸಿಗದ್ದಿದ್ದಾಗ ಆಕೆ ಕುಂದಲಿಲ್ಲ. ಅಳುತ್ತಾ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ನೇರವಾಗಿ ಮಾವಿನ ಹಣ್ಣಿನ ವ್ಯಾಪಾರಕ್ಕೆ ಇಳಿದೇ ಬಿಡುತ್ತಾಳೆ. ಸ್ಥಳೀಯರೊಬ್ಬರು ಆಕೆ ರಸ್ತೆ ಪಕ್ಕ ಮಾವಿನ ಹಣ್ಣು ವ್ಯಾಪಾರ ಮಾಡುವುದಕ್ಕೆ ನೆರವು ನೀಡುತ್ತಾರೆ. ಬಾಲಕಿ ರಸ್ತೆ ಪಕ್ಕ ಚೀಲದ ಮೇಲೆ ಮಾವಿನ ಹಣ್ಣನ್ನು ಎರಡು ಗುಪ್ಪೆ ಮಾಡಿಕೊಂಡು ವ್ಯಾಪಾರ ಮಾಡುತ್ತಾ ಇರುತ್ತಾಳೆ. ರಸ್ತೆಯಲ್ಲಿ ಹೋಗುವಂಥ ವಾಹನಗಳ ಮಾಲೀಕರು ಖರೀದಿಸುತ್ತಿದ್ರು. ಅದರಿಂದ ಬಂದ ಹಣವನ್ನು ಬಾಲಕಿ ಹಾಗೇ ಇಡುತ್ತಿದ್ದಳು. ಯಾಕೆಂದರೆ ಆಕೆಗೆ ಸ್ಮಾರ್ಟ್‌ ಫೋನ್‌ ಬೇಕಿತ್ತು.

ಮಾವಿನ ಹಣ್ಣು ವ್ಯಾಪಾರ ಗಮನಿಸಿದ ಉದ್ಯಮಿ
ಹಣ್ಣಿನ ಖರೀದಿಗೆ ಬಂದ್ರು ಅಂತ ಖುಷಿಯಾದ ಬಾಲಕಿ

ಅಂದು ಎಂದಿನಂತೆ ಬಾಲಕಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ತೊಡಗಿದ್ದಳು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನೇ ನೋಡುತ್ತಿದ್ದಳು. ಯಾರಾದ್ರೂ ವಾಹನ ನಿಲ್ಲಿಸುತ್ತಾರೆ. ಮಾವಿನ ಹಣ್ಣು ವ್ಯಾಪಾರ ಮಾಡುತ್ತಾರೆ ಅಂತ ಕಾಯುತ್ತಿದ್ಲು. ಅಂದು ಆಕೆಯ ಅದೃಷ್ಟ ಖುಲಾಯಿಸಿತ್ತು. ಮುಂಬೈ ಉದ್ಯಮಿ ಬಾಲಕಿಯ ಬಳಿ ಬಂದು ಕಾರು ನಿಲ್ಲಿಸುತ್ತಾರೆ. ಹಾಗೇ ಬಾಲಕಿಯನ್ನು ಮಾತಿಗೆ ಎಳೆಯುತ್ತಾರೆ. ಆಕೆಯ ಶಿಕ್ಷಣದ ಬಗ್ಗೆ ವಿಚಾರಿಸುತ್ತಾರೆ. ಬಾಲಕಿಯ ನುಡಿ ಕೇಳಿ ಉದ್ಯಮಿ ಮಾವಿನ ಹಣ್ಣು ಖರೀದಿಸಲು ಮುಂದಾಗುತ್ತಾರೆ.

1.2 ಲಕ್ಷ ನೀಡಿ 12 ಮಾವು ಖರೀದಿಸಿದ ಉದ್ಯಮಿ
ಮುಂಬೈ ಉದ್ಯಮಿಗೆ ಕೃತಜ್ಞತೆ ಸಲ್ಲಿಸಿದ ಬಾಲಕಿ

ಉದ್ಯಮಿಗೆ 12 ಮಾವಿನ ಹಣ್ಣು ಖರೀದಿಸಲು 200 ರೂಪಾಯಿ ಸಾಕಿತ್ತು. ಆದ್ರೆ, ಅವರಲ್ಲಿದ್ದ ಮಾನವೀಯತೆ ಅವರನ್ನು ಅಲ್ಲಿಗೆ ನಿಲ್ಲಿಸಿಲ್ಲ. ಬಾಲಕಿಗೆ ಏನಾದ್ರೂ ಸಹಾಯ ಮಾಡಬೇಕು ಅನ್ನೋ ಮನಸ್ಸು ಬಂದಿದೆ. ಆದ್ರೆ, ಬರೀ ಹಣ ನೀಡಿ ಹೋಗುವ ಮನಸ್ಸು ಅವರಿಗಿರಲಿಲ್ಲ. ಹೀಗಾಗಿ 12 ಮಾವಿನ ಹಣ್ಣು ಖರೀದಿಸಿದ್ದಾರೆ. ಒಂದು ಹಣ್ಣಿಗೆ ಬರೋಬ್ಬರಿ 10 ಸಾವಿರದಂತೆ 12 ಹಣ್ಣಿಗೆ 1 ಲಕ್ಷದ 20 ಸಾವಿರ ಹಣವನ್ನು ಬಾಲಕಿಯ ತಂದೆಯ ಅಕೌಂಟ್‌ಗೆ ಹಾಕಿದ್ದಾರೆ. ಸ್ಮಾರ್ಟ್‌ ಫೋನ್‌ ಖರೀದಿಸಿಕೊಂಡು ಉಳಿದ ಹಣವನ್ನು ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಹೇಳಿ ಹೋಗಿದ್ದಾರೆ.

ಮನೆಗೆ ಬಂದ ಬಾಲಕಿ ನಡೆದ ವಿಚಾರವನ್ನೆಲ್ಲಾ ತಂದೆ ತಾಯಿಗೆ ಹೇಳಿದ್ದಾಳೆ. 13 ಸಾವಿರ ಕೊಟ್ಟು ಸ್ಮಾರ್ಟ್‌ ಫೋನ್‌ ಖರೀದಿಸಿದ್ದಾಳೆ. ಇಂಟರ್ನೆಟ್‌ ಕನೆಕ್ಷನ್‌ ಹಾಕಿಸಿಕೊಂಡಿದ್ದಾಳೆ. ಪ್ರತಿ ದಿನ ಆನ್‌ಲೈನ್‌ ಶಿಕ್ಷಣಕ್ಕೆ ಹಾಜರಾಗುತ್ತಿದ್ದಾಳೆ.

ಮಾನವೀಯತೆ ಮಿಡಿದ ಉದ್ಯಮಿ ಯಾರು?

ಇವರೆ ನೋಡಿ ಮಾನವೀಯತೆ ಮಿಡಿದ ಉದ್ಯಮಿ ಅಮೇಯ ಹಿತೆ. ಇವರ ಕಾರ್ಯಕ್ಕೆ ಇಡೀ ದೇಶವೇ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಯುಎಫ್‌ಒ ಸಿನಿ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು. ಬೇರೆ ಬೇರೆ ಉದ್ಯಮದಲ್ಲಿಯೂ ತೊಡಗಿಸಿಕೊಂಡವರು. ದಾನಧರ್ಮ ಮಾಡುವಲ್ಲಿ ಎತ್ತಿದ ಕೈ.

ಕಲಿಯುವ ಛಲ ಇದ್ದರೆ ಭಗವಂತ ಕಣ್ಣು ಬಿಟ್ಟೆ ಬಿಡುತ್ತಾನೆ ಅನ್ನೋಹಾಗಿದೆ ಈ ಬಾಲಕಿಯ ಸ್ಟೋರಿ. ಆಕೆಯ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ 12 ಮಾವಿನ ಹಣ್ಣಿಗೆ 1.2 ಲಕ್ಷ ಕೊಟ್ಟು ಖರೀದಿಸಿರುವ ಉದ್ಯಮಿ ಅಮೇಯ ಹಿತೆ ಕಾರ್ಯ ಪ್ರಶಂಸನೀಯ.

The post 1.2 ಲಕ್ಷ ನೀಡಿ 12 ಮಾವು ಖರೀದಿಸಿದ ಉದ್ಯಮಿ: ಬಾಲಕಿಯ ಬದುಕಿನ ದಿಕ್ಕನ್ನೇ ಬದಲಿಸಿದ ಮ್ಯಾಂಗೋ ವ್ಯಾಪಾರ appeared first on News First Kannada.

Source: newsfirstlive.com

Source link