ಎದುರಾಳಿಗಳನ್ನು,ಕುತಂತ್ರಿಗಳನ್ನು ಟೀಕಿಸೋದು ಸುಲಭ. ಅವರನ್ನು ದೂಷಿಸೋದು ಸುಲಭ. ಆದ್ರೆ ಎದುರಾಗಳಲ್ಲಿರುವ ಸಾಮರ್ಥ್ಯ ಅರ್ಥ ಮಾಡಿಕೊಳ್ಳೋದೇ ಕಷ್ಟ. ಇಷ್ಟೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ನೆರೆಯ ರಾಷ್ಟ್ರ ಚೀನಾ ಕೊರೊನಾ ಮೊದಲು ಬಂದಾಗ ಹತ್ತೇ ಹತ್ತು ದಿನಗಳಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ಕಟ್ಟಿ ನಿಲ್ಲಿಸಿತ್ತು. ಈಗ ನಮ್ಮ ದೇಶದಲ್ಲಿ ಏನಾಗ್ತಿದೆ?

ಒಂದು ಸುಸಜ್ಜಿತ, ವಿಶಾಲವಾದ ಆಸ್ಪತ್ರೆಯನ್ನ ಹತ್ತೇ ಹತ್ತು ದಿನಗಳಲ್ಲಿ ಕಟ್ಟಿ ನಿಲ್ಲಿಸಿದ್ದು ಚೀನಾದಲ್ಲಿ. ಕಳೆದ ವರ್ಷ ಕೊರೊನಾ ವೈರಸ್ನಿಂದ ಅಲ್ಲಿ ಅನಾಹುತ ಆಗ್ತಾ ಇದ್ದಂತೆ ರಾತ್ರೋ ರಾತ್ರಿ ಕೋವಿಡ್ ಹಾಸ್ಟಿಟಲ್ ನಿರ್ಮಾಣ ಮಾಡೋದಕ್ಕೆ ಅಲ್ಲಿನ ಸರ್ಕಾರ ನಿರ್ಧಾರ ಮಾಡಿತ್ತು. ಅಷ್ಟೇ ಅಲ್ಲ ಹತ್ತೇ ದಿನಗಳಲ್ಲಿ ಅಂದುಕೊಂಡಂತೆ ಮಾಡಿ ಮುಗಿಸಿ ಬಿಟ್ಟಿತ್ತು. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಯನ್ನೇ ವುಹಾನ್ನಲ್ಲಿ ಕಟ್ಟಿಸಿಬಿಟ್ಟಿತ್ತು ಚೀನಾ ಸರ್ಕಾರ. ತಂತ್ರಜ್ಞಾನ, ವೇಗ, ಪರಿಣಿತಿ, ಇಚ್ಚಾಶಕ್ತಿ, ಸಂಕಲ್ಪ ಇವೆಲ್ಲಾ ಒಟ್ಟಾದ್ರೆ ಏನ್ ಮಾಡಬಹುದು ಅನ್ನೋದನ್ನು ಚೀನಾ ಜಗತ್ತಿಗೇ ತೋರಿಸಿಕೊಟ್ಟಿತ್ತು. ಹೀಗೆ ಹೇಳಿದರೆ ಚೀನಾವನ್ನ ಹೊಗಳ್ತಾ ಇದೀರಾ ಅಂತ ಕೇಳಬೇಡಿ. ಖಂಡಿತ ಇಲ್ಲ. ಆದರೆ, ಗುಣಕ್ಕೆ ಮತ್ಸರ ಇರಬಾರದು. ಪ್ರತಿಭೆ, ಶ್ರಮದ ವಿಚಾರದಲ್ಲಿ ಯಾರನ್ನೂ ಟೀಕಿಸಬಾರದು.

ವುಹಾನ್ನಲ್ಲಿ ಕೊರೊನಾ ರಣ ಭೀಕರತೆ ತೋರಿಸ್ತಾ ಇದ್ದಂತೆ ಹತ್ತೇ ದಿನಗಳಲ್ಲಿ ಪವಾಡ ಮಾಡಲಾಗಿತ್ತು. ಇವತ್ತು ವಿಶ್ವದಲ್ಲಿ ಕೊರೊನಾ ಲಕ್ಷ ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ. ಕೋಟಿ ಕೋಟಿ ಜನ ಸೋಂಕಿತರಾಗಿದ್ದಾರೆ. ಇಂಡಿಯಾದಲ್ಲಂತೂ ಚಿಕಿತ್ಸೆ ಸಿಗದೇ ಜನ ಹಿಡಿ ಶಾಪ ಹಾಕ್ತಾ ಇದಾರೆ. ಆಕ್ಸಿಜನ್ ಇಲ್ಲ, ಬೆಡ್ ಇಲ್ಲಾ ಅಂತ ಗೋಳಾಡ್ತಿದಾರೆ. ಅಂತ್ಯ ಸಂಸ್ಕಾರಕ್ಕೆ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ. ಈ ಅವ್ಯವಸ್ಥೆ ಮಧ್ಯೆ ಅವತ್ತಿನ ಚೀನಾದ ಸಾಧನೆ ನೆನಪಾಗಿದ್ದಕ್ಕೆ ಇದನ್ನೆಲ್ಲ ಹೇಳಬೇಕಾಗಿದೆ.

ಭಯಾನಕ ಕೊರೊನಾ ವೈರಸ್ ಕಾಣಿಸಿಕೊಂಡಿದ್ದೇ ಚೀನಾದ ವುಹಾನ್ನಲ್ಲಿ. ಅವತ್ತಿಗೆ 430 ಜನರನ್ನು ವೈರಸ್ ಬಲಿ ಪಡೆದಿತ್ತು. ರಾತ್ರಿ ಬೆಳಗಾಗುವಷ್ಟರಲ್ಲಿ ಸಾವಿರಾರು ಜನರಿಗೆ ಕೊರೊನಾ ಹರಡ್ತಾನೇ ಇತ್ತು. ಸಾವಿನ ಸಂಖ್ಯೆಯೂ ಹೆಚ್ಚಾಗ್ತಾ ಇತ್ತು. ಚೀನಾ ಸರ್ಕಾರ ತಡ ಮಾಡಲೇ ಇಲ್ಲ. ಹತ್ತೇ ಹತ್ತು ದಿನಗಳಲ್ಲಿ ಸಾವಿರಗಟ್ಟಲೇ ಬೆಡ್ಗಳಿರುವ ಆಸ್ಪತ್ರೆ ನಿರ್ಮಾಣ ಮಾಡಿ ನಿಲ್ಲಿಸಿ ಬಿಟ್ಟಿತ್ತು. ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾದ ಸುಸಜ್ಜಿತ ಆಸ್ಪತ್ರೆಯನ್ನೇ ಕಟ್ಟಿ ಬಿಟ್ಟಿತ್ತು.

ಜನವರಿ 23ರ ಮಧ್ಯರಾತ್ರಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿತ್ತು
ಕೊರೊನಾ ವೈರಸ್ ಸಾವಿನ ಬೇಟೆ ಆರಂಭಿಸಿದ ಬೆನ್ನಲ್ಲೇ ಚೀನಾ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವುದಾಗಿ 2020ರ ಜನವರಿ 23ರಂದು ಘೋಷಿಸಿತ್ತು. ಬೇರೆ ರೋಗಿಗಳಿಗೆ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಆಸ್ಪತ್ರೆ ನಿರ್ಮಿಸಲು ಮುಂದಾಗಿತ್ತು. ಜನವರಿ 23ರ ಮಧ್ಯರಾತ್ರಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ವಿಶಾಲವಾದ ಜಾಗದಲ್ಲಿ 30ಕ್ಕೂ ಅಧಿಕ ಜೆಸಿಬಿಗಳು, ಯಂತ್ರಗಳು ಭೂಮಿ ಅಗೆಯುತ್ತಿರುವ ನೂರಾರು ಟ್ರಕ್‌ಗಳು ಮಣ್ಣು ಸಾಗಿಸುತ್ತಿರುವ ದೃಶ್ಯ ಕಾಣಿಸ್ತಾ ಇತ್ತು.

ಕೊರೊನಾ ವೈರಸ್ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಚೀನಾದ ಸಾಹಸವನ್ನು ಇಡೀ ಜಗತ್ತು ಕುತೂಹಲದಿಂದ ಎದುರು ನೋಡ್ತಿತ್ತು. ಹತ್ತು ದಿನದಲ್ಲಿ ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸೋಕೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದು ಅಸಾಧ್ಯ ಅನ್ನೋ ಮಾತುಗಳು ವ್ಯಕ್ತವಾಗಿತ್ತು. ಆದ್ರೆ, ಚೀನಾ ಅಸಾಧ್ಯವನ್ನು ಸಾಧಿಸಿ ತೋರಿಸಿ ಬಿಟ್ಟಿತ್ತು. 10 ದಿನದಲ್ಲಿ ಒಂದು ಸಾವಿರ ಬೆಡ್ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಿ ನಿಂತಿತ್ತು. ಹತ್ತು ದಿನದಲ್ಲಿ ನಿರ್ಮಾಣವಾದ ಈ ಆಸ್ಪತ್ರೆಗೆ ತಕ್ಷಣ ಕೊರೊನಾ ರೋಗಿಗಳನ್ನು ಶಿಫ್ಟ್ ಮಾಡಲಾಗಿತ್ತು. ದಿನ ಬೆಳಗಾಗುವುದರೊಳಗೆ ವೈದ್ಯರು, ನರ್ಸ್ ಗಳು ಎಲ್ಲಾ ಸಜ್ಜಾಗಿ ನಿಂತಿದ್ದರು.

ಒಂದು ಯುದ್ಧ ಗೆಲ್ಲೋದು ಸುಲಭ ಅಲ್ಲ. ಒಂದು ಕೋಟೆ ಕಟ್ಟೋದು ಸುಲಭ ಅಲ್ಲ. ವರ್ಷ ಕಳೆಯುವಷ್ಟರಲ್ಲಿ ಒಂದು ದೊಡ್ಡ ಡ್ಯಾಮ್ ಕಟ್ಟಿ ನಿಲ್ಲಿಸೋದು ಸುಲಭ ಅಲ್ಲ. ದಿನ ಕಳೆಯುವುದರೊಳಗೆ ಕಿಲೋ ಮೀಟರ್ ಗಟ್ಟಲೇ ರಸ್ತೆ ಮಾಡಿ ಬಿಡೋದು ಸುಲಭ ಅಲ್ಲ. ತಿಂಗಳು ಕಳೆಯೋದ್ರೊಳಗೆ ಚಿತ್ರಣವನ್ನೇ ಬದಲಿಸುವುದು ಸುಲಭ ಅಲ್ಲ. ಆದ್ರೆ ಚೀನಾ ಪದೇ ಪದೇ ಇಂತಹ ಸಾಹಸನಗಳನ್ನು ಮಾಡ್ತಾನೇ ಇರುತ್ತೆ. ನಿರ್ಮಾಣ ಕಾಮಗಾರಿಗಳಲ್ಲಿ ಚೀನಾಗೆ ಸರಿಸಾಟಿಯೇ ಇಲ್ಲ. ಅಷ್ಟರಮಟ್ಟಿಗೆ ಚೀನಾ ಮುಂದಿದೆ. ನಮ್ಮಲ್ಲಿ ಯಾವುದಾದರೊಂದು ಯೋಜನೆ ಕೈಗೆತ್ತಿಕೊಂಡರೆ ಹತ್ತಾರು ವರ್ಷಗಳಾದರೂ ಮುಗಿಯೋದೇ ಇಲ್ಲ. ತಾತನ ಕಾಲಕ್ಕೆ ಶುರುವಾದ ಯೋಜನೆಗಳು ಮೊಮ್ಮಗನ ಕಾಲಕ್ಕೂ ಮುಗಿಯಲ್ಲ. ಇದಕ್ಕೆ ಉದಾಹರಣೆ ಬೇಕಾದಷ್ಟಿವೆ. ಆದ್ರೆ ಚೀನಾ ಹಾಗಲ್ಲ. ಕಟ್ಟೋ ವಿಚಾರದಲ್ಲಿ ಚೀನಾವನ್ನು ಮೀರಿಸೋರೇ ಇಲ್ಲ ಎನ್ನಬಹುದು.

ಈಗ ನೋಡಿ, ಬೆಂಗಳೂರಿನಲ್ಲೊಂದು ತಾತ್ಕಾಲಿಕ ಸಮರ್ಪಕವಾದ ಒಂದು ಕೋವಿಡ್ ಸೆಂಟರ್ ಇಲ್ಲ. ಅವತ್ತು ಇಂಟರ್ ನ್ಯಾಷನಲ್ ಎಗ್ಸಿಬಿಶನ್ ಸೆಂಟರ್ ನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಆರಂಭಿಸ್ತೀವಿ ಅಂತ ಒಂದಿಷ್ಟು ಬೆಡ್ ಹಾಕ್ಸಿದ್ರು. ಆದ್ರೆ ಅಷ್ಟೊತ್ತಿಗೆ ಕೊರೊನಾ ತಗ್ಗತೊಡಗಿತ್ತು. ಕೊನೆಗೆ ಕೋವಿಡ್ ಕೇರ್ ಸೆಂಟರ್ ಗೆ ಯಾರೂ ಹೋಗಿಲ್ಲ. ಅಲ್ಲಿ ಈಗ ಹೋಗಿ ನೋಡಿದ್ರೆ ಮಂಚವೂ ಇಲ್ಲ,ದಿಂಬೂ ಇಲ್ಲ. ಈಗ ಮೇಕ್ ಶಿಫ್ಟ್ ಆಸ್ಪತ್ರೆ ಮಾಡ್ತೀವಿ, ಎಲ್ಲಾ ಕಡೆ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ತೀವಿ, ಐಸಿಯು ಬೆಡ್ ಹೆಚ್ಚಿಸ್ತೀವಿ, ಬೇಕಾದಷ್ಟು ರೆಮ್ ಡಿಸಿವಿರ್ ಕೊಡ್ತೀವಿ ಅಂತ ಹೇಳಿಕೆ ಕೊಡ್ತಾರೆ ಬಿಟ್ರೆ ಬೇರೆನೂ ಮಾಡಲ್ಲ. ಇಲ್ಲಿ ಯಾರಿಗೆ ಯಾರನ್ನೂ ಹೋಲಿಕೆ ಮಾಡ್ತಾ ಇಲ್ಲ. ಆದ್ರೆ ಕೊರೊನಾ ಸಮರ ಗೆಲ್ಲಲು ಅಮೆರಿಕಾ ಹೇಗೆ ಪ್ಲಾನ್ ಮಾಡ್ತು, ಚೀನಾ ಹೇಗೆ ಗೆಲ್ಲುತ್ತಾ ಬಂತು, ಇಸ್ರೇಲ್ ನಲ್ಲಿ ಏನ್ ಮಾಡಲಾಯ್ತು, ಸಿಂಗಪೂರ್ ನಲ್ಲಿ ಹೇಗೆ ತಡೆದ್ರು ಇದನ್ನೆಲ್ಲ ನೋಡಿದ್ರೆ ಇಂಡಿಯಾದಲ್ಲಿ ಸಾಕಷ್ಟು ಹಿನ್ನಡೆ ಆಗಿದ್ದು ನಿಜ.

ಕೊರೊನಾದಂತಹ ಸಮರ ಗೆಲ್ಲಲು ಫಾಸ್ಟಾಗಿ ಕೆಲಸ ಮಾಡಿದ್ರೆ ಮಾತ್ರಾನೇ ಸಾಧ್ಯ. ಇಲ್ಲವಾದರೆ ಇನ್ನು ವರ್ಷ ಕಳೆದರೂ ಇದೇ ಸಮಸ್ಯೆ ಕಂಟಿನ್ಯೂ ಆಗಿರುತ್ತೆ. ಕೊರೊನಾ ತಗ್ಗಿದಾಗ ಎಲ್ಲರೂ ಮರೀತಾರೆ. ಮತ್ತೆ ಹೆಚ್ಚಾದಾಗ ಮತ್ತದೇ ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್, ಮೆಡಿಸಿನ್ ಸಮಸ್ಯೆ ಶುರುವಾಗಿ ಬಿಡುತ್ತೆ. ಎದುರಾಳಿಗಳ ಮೇಲೆ ಸದಾ ಕಣ್ಣಿಡೋದು ಮಾತ್ರ ಅಲ್ಲ. ಚೀನಾದಂತಹ ದೇಶದಿಂದ ಕಲಿಯೋದೂ ಇದೆ. ಹತ್ತೇ ದಿನಗಳಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯನ್ನೇ ಕಟ್ಟಿ ನಿಲ್ಲಿಸಿದ್ದು ಒಂದು ಉದಾಹರಣೆ ಅಷ್ಟೇ.

The post 10 ದಿನಗಳಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ಕಟ್ಟಿಸಿದ್ದ ಚೀನಾ.. ನಮ್ಮ ದೇಶದಲ್ಲಿ ಏನಾಗ್ತಿದೆ?  appeared first on News First Kannada.

Source: newsfirstlive.com

Source link