ಗದಗ: ಸಾವನ್ನಪ್ಪಿದ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದು ಮಗುವನ್ನು ಉಳಿಸಿಕೊಂಡಿರುವ ಘಟನೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆ ಮೂಲಕ ಗದಗ ಸರ್ಕಾರಿ ಆಸ್ಪತ್ರೆಯ ವೈದ್ಯರು ಪವಾಡವೆಂಬಂತೆ ಮಗುವಿನ ಪಾಲಿಗೆ ಆಪತ್ಭಾಂಧವರಾಗಿದ್ದಾರೆ. ವೈದ್ಯರ ಮಹತ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ನಗರದ ಹೃದಯ ಭಾಗದಲ್ಲಿರೋ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವೈದ್ಯರು ಮೃತರಾಗಿದ್ದ ಗರ್ಭಿಣಿಯ ಹೊಟ್ಟೆಯಿಂದ ಮಗುವನ್ನ ಬದುಕಿಸಿ ಪವಾಡ ಸೃಷ್ಟಿಸಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ತುಂಬು ಗರ್ಭಿಣಿಯಾಗಿದ್ದ ಅಣ್ಣಪೂರ್ಣ ಅಬ್ಬಿಗೇರಿ ಅವರಿಗೆ ನ.4ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಆಕೆಗೆ ಇನ್ನೂ ಹೆರಿಗೆ ನೋವು ಇರದೇ ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥಳಾಗಿದ್ದರಂತೆ. ಕುಟುಂಬಸ್ಥರು ಇರೋ ಬರೋ ಆಸ್ಪತ್ರೆರೆಲ್ಲಾ ಅಲೆದಾಡಿ ಬಳಿಕ ಗದಗ ನಗರದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರೋವಷ್ಟರಲ್ಲಿ ಆಕೆ ಮೃತಳಾಗಿದ್ದಳು. ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಆಕೆಯ ಆರೋಗ್ಯವನ್ನ ಪರಿಶೀಲನೆ ಮಾಡಿದಾಗ ಆಗಲೇ ಉಸಿರಾಟ ನಿಂತುಹೋಗಿತ್ತು. ಆದ್ರೆ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹಾರ್ಟ್ ಬೀಟ್ ಇನ್ನೂ ಬಡಿದುಕೊಳ್ಳುತ್ತಿತ್ತಂತೆ. ಹೀಗಾಗಿ ತಕ್ಷಣ ಅಲರ್ಟ್ ಆದ ವೈದ್ಯರು ಮಗುವನ್ನಾದರೂ ಬದುಕಿಸುಬಹುದು ಅಂತ ವೈದ್ಯರು ಕಾರ್ಯಪ್ರವೃತ್ತರಾಗಿ ಕುಟುಂಬದವರೊಂದಿಗೆ ಮಾತನಾಡಿ ಆಪರೇಷನ್ಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಕೆಲವೇ ನಿಮಿಷದಲ್ಲಿ ಅಪರೇಷನ್ ಮಾಡಿ ಮಗುವನ್ನು ಹೊರತೆಗೆದಿದ್ದಾರೆ. ತಾಯಿ ಸತ್ತರೂ ತಾಯಿ ಉದರದಿಂದ ಜೀವಂತವಾಗಿ ಮಗುವನ್ನ ಬದುಕಿಸಿಕೊಳ್ಳಲು ವೈದ್ಯರು ಇಲ್ಲಿ ಯಶಸ್ವಿಯಾಗಿದ್ದರು.
ತಾಯಿ ಸತ್ತರೂ ಮಗುವನ್ನ ಜೀವಂತವಾಗಿ ತೆಗೆಯಬೇಕು ಅನ್ನೋ ವೈದ್ಯರ ಕಾರ್ಯ ಬಹಳ ಕ್ಲಿಷ್ಟಕರವಾಗಿತ್ತು. ಉಳಿದ ಕೆಲವೇ ನಿಮಿಷಗಳಲ್ಲಿ ಆ ಮೃತ ಗರ್ಭಿಣಿಯ ತಂದೆ-ತಾಯಿನ್ನ, ಪತಿಯನ್ನ ಕೌನ್ಸಿಲ್ ಮಾಡಿ ಜೊತೆಗೆ ಹಿರಿಯ ಆಡಳಿತ ವೈದ್ಯರೊಂದಿಗೆ ಚರ್ಚೆ ಮಾಡಿ ಮಗು ಬದುಕಿಸೋದೆ ಒಂದು ದೊಡ್ಡ ಸವಾಲಾಗಿತ್ತು. ಬಹುತೇಕ ವೈದ್ಯಕೀಯ ಲೋಕದಲ್ಲಿ ಯಾರೂ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಈ ಎಲ್ಲಾ ಸವಾಲುಗಳನ್ನ ಮೀರಿ ವೈದ್ಯರು ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಮಹಿಳೆಗೆ ಹೆಣ್ಣು ಮಗು ಜನಿಸಿದ್ದು, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಸವಾಲಾಗಿ ಮಗುವನ್ನ ಬದುಕಿಸಿರೋ ವೈದ್ಯರು ಈ ಮಗುವಿನ ಆರೈಕೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣ್ತಿದೆ. ಇನ್ನು ಮಗುವಿನ ತಂದೆ ಮಾಧ್ಯನಗಳಿಗೆ ಮಾಹಿತಿ ನೀಡಿದ್ದು, ನನಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದು ಅಂತ ಕಣ್ಣೀರು ಹಾಕ್ತಿದ್ದಾರೆ. ಮದುವೆಯಾಗಿ ಒಂದು ವರ್ಷ ಆಗಿತ್ತು. ಇಬ್ಬರೂ ತುಂಬ ಪ್ರೀತಿ ವಿಶ್ವಾಸದಿಂದ ಇದ್ದೇವು. ಆದ್ರೆ ಈಗ ನನ್ನ ಒಂಟಿ ಮಾಡಿ ನನ್ನ ಹೆಂಡತಿ ಹೋಗಿದ್ದಾಳೆ. ಮಗುವನ್ನ ನಾನು ಚೆನ್ನಾಗಿ ಸಾಕಿ ನನ್ನ ಹೆಂಡತಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡ್ತಿನಿ ಅಂತ ಪತಿ ವಿರೇಶ್ ಕಣ್ಣೀರು ಹಾಕ್ತಿದ್ದಾರೆ.
ಇನ್ನು ವೈದ್ಯಲೋಕದಲ್ಲಿ ಇಂತಹ ಪ್ರಕರಣಗಳು ಅಪರೂಪದಲ್ಲಿ ಅಪರೂಪ. ಇಂತಹ ಅಪರೂಪದ ಪ್ರಕರಣವನ್ನ ಕೈಗೆತ್ತಿಕೊಂಡ ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರು ಎಲ್ಲರ ಮೆಚ್ಚುವಂತ ಕಾರ್ಯ ಮಾಡಿದ್ದಾರೆ. ತಾಯಿಯ ಜೊತೆಗೆ ಮಸನ ಸೇರಬೇಕಿದ್ದ ಮಗುವನ್ನ ಬದುಕಿಸಿ ನಿಜಜೀವನದಲ್ಲಿ ದೇವರಾಗಿದ್ದಾರೆ. ಹೆರಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಬಸನಗೌಡ ಕರಿಗೌಡರ ಮಾರ್ಗದರ್ಶನದಲ್ಲಿ ಈ ಅಪರೂಪದ ಆಪರೇಷನ್ ಕೈಗೆತ್ತಿಕೊಂಡಿದ್ದ ವೈದ್ಯರುಗಳಾದ ಡಾ. ವಿನೋದ್, ಡಾ. ಜಯರಾಜ್, ಡಾ. ಸೃತಿ ಮತ್ತು ಡಾ. ಕೀರ್ತನ್ ಅವರಿಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬಕು. ವೈದ್ಯೋ ನಾರಾಯಣ ಹರಿ ಅನ್ನೋ ಮಾತು ಇಲ್ಲಿ ಸತ್ಯವಾಗಿದೆ.
ವಿಶೇಷ ಬರಹ: ಸುರೇಶ್ ಕಡ್ಲಿಮಟ್ಟಿ, ನ್ಯೂಸ್ ಫಸ್ಟ್, ಗದಗ