ಮಗಳು ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ ಬರೋಬ್ಬರಿ 11 ವರ್ಷಗಳ ಬಳಿಕ ಮಹಿಳೆ ಪತ್ತೆಯಾದ ಅಪರೂಪದ ಹಾಗೂ ನಿಗೂಢ ಘಟನೆ ನಡೆದಿದೆ.

29 ವರ್ಷದ ಮಹಿಳೆ ಇದೀಗ ಮನೆಯವರಿಗೆ ಪತ್ತೆಯಾಗಿದ್ದಾಳೆ. ವಿಚಿತ್ರ ಏನಂದ್ರೆ ಬರೋಬ್ಬರಿ 11 ವರ್ಷಗಳ ಕಾಲ ಯಾವುದೋ ರಾಜ್ಯದಲ್ಲೋ, ವಿದೇಶದಲ್ಲೋ ಇರಲಿಲ್ಲ. ಬದಲಾಗಿ ತಮ್ಮ ಮನೆಯಿಂದ ಕೇವಲ 500 ಮೀಟರ್​ ದೂರದಲ್ಲೇ ವಾಸವಿದ್ದಳು ಅನ್ನೋದೇ ಇಲ್ಲಿ ಇಂಟರೆಸ್ಟಿಂಗ್ ಮ್ಯಾಟರ್​.

ವಿಚಾರಣೆಯಲ್ಲಿ ಏನಾಯ್ತು..?
ಅಂದ್ಹಾಗೆ ಈ ಘಟನೆ ಪಾಲಕ್ಕಾಡ್​​ನ ಆಯಲೂರಿನಲ್ಲಿ ನಡೆದಿದೆ. ಸುಜಾತ ಹೆಸರಿನ ಯುವತಿ 2010ರಲ್ಲಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಹೀಗಾಗಿ ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ.. ಸುಜಾತ ತನ್ನ ಪ್ರಿಯಕರ ರೆಹಮಾನ್ ಎಂಬಾತನ ಜೊತೆ ಇಷ್ಟು ದಿನ ನಿಗೂಢವಾಗಿ ವಾಸವಿದ್ದಳು. ಸುಜಾತ ಮನೆಯಿಂದ ರೆಹಮಾನ್ ಜೊತೆ ಓಡಿ ಬರುತ್ತಾಳೆ. ಆದರೆ ರೆಹಮಾನ್​ಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ಇರಲು ಹಣವಿರದ ಕಾರಣ ತಮ್ಮ ಮನೆಯಲ್ಲೇ ಆಕೆಯನ್ನ ಇಟ್ಟುಕೊಳ್ಳಲು ನಿರ್ಧರಿಸುತ್ತಾನೆ. ಅದರಂತೆ ಮನೆಯವರಿಗೂ ತಿಳಿಯದ ರೀತಿಯಲ್ಲಿ ಇಬ್ಬರೂ ಮನೆಯಲ್ಲಿರುವ ಚಿಕ್ಕ ಕೋಣೆಯಲ್ಲಿ ಸಂಸಾರ ಮಾಡಲು ಆರಂಭಿಸಿದ್ದಾರೆ. ವಿಚಿತ್ರ ಏನಂದ್ರೆ ರೆಹಮಾನ್ ಮನೆಯಲ್ಲಿ ನಾಲ್ವರಿದ್ದರು. ತಂದೆ-ತಾಯಿ ಹಾಗೂ ರೆಹಮಾನ್ ಸಹೋದರಿ ಹಾಗೂ ಸೋದರಳಿಯ ಇದ್ದರು.

ಕುಟುಂಬಸ್ಥರು ಹಾಗೂ ಇತರರು ಆತನ ಕೋಣೆಗೆ ಪ್ರವೇಶ ಮಾಡಲು ಯತ್ನಿಸಿದಾಗ, ಅದನ್ನ ತಪ್ಪಿಸುವ ಪ್ರಯತ್ನವನ್ನ ಮಾಡುತ್ತಿದ್ದ. ಕೆಲವೊಮ್ಮೆ ತನ್ನ ರೂಮಿನತ್ತ ಯಾರಾದ್ರೂ ಬಂದ್ರೆ ಜೋರಾಗಿ ಕಿರುಚುತ್ತಿದ್ದ. ಇನ್ನೂ ಕೆಲವೊಮ್ಮೆ ಆತ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದ. ಹೆಚ್ಚಿನ ಸಮಯವನ್ನ ತನ್ನ ಕೋಣೆಯಲ್ಲಿ ಸುಜಾತಳ ಜೊತೆ ಕಳೆಯುತ್ತಿದ್ದ ಎನ್ನಲಾಗಿದೆ. ಇನ್ನು ರೆಹಮಾನ್ ತನ್ನ ಕೋಣೆಯಲ್ಲಿ ಚಿಕ್ಕದಾದ ಹೋಲ್ ಒಂದನ್ನ ಮಾಡಿದ್ದ. ಇದರ ಮೂಲಕ ಆಕೆ ರಾತ್ರಿ ವೇಳೆ ಹೊರಗಡೆ ಹೋಗಿ ಬರುತ್ತಿದ್ದಳು. ಅವಳು ಸ್ನಾನ ಮಾಡಿ ಸ್ವಲ್ಪ ಹೊತ್ತು ಹೊರಗಡೆ ಕುಳಿತುಕೊಳ್ಳುತ್ತಿದ್ದಳು. ಇದೇ ರೀತಿ ದಶಕಗಳಿಂದ ಕದ್ದು-ಮುಚ್ಚಿ ಬದುಕುತ್ತಿದ್ದಳು ಅನ್ನೋ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಇವರಿಬ್ಬರಿಗೆ ಹಣಕಾಸಿನ ಅಡಚಣೆ ಕೂಡ ಇತ್ತು, ಹೀಗಾಗಿ ಚಿಕ್ಕ ಕೋಣೆಯಲ್ಲೇ ವಾಸ್ತವ್ಯ ಹೂಡಿದ್ದರು. ಇನ್ನು ರೆಹಮಾನ್ ಆಕೆಗಾಗಿ ಊಟ, ತಿಂಡಿಗಳನ್ನ ಪಾರ್ಸೆಲ್​ ಮೂಲಕ ತರುತ್ತಿದ್ದ. ತಂದಿರುವ ಫುಡ್​ ಪ್ಯಾಕೇಟ್​ಗಳನ್ನ ಕೆಲಸಕ್ಕೆ ಹೋಗುವಾಗ ಬಿಸಾಡುತ್ತಿದ್ದ. ಇನ್ನೂ ಒಂದು ವಿಚಾರ ಏನಂದ್ರೆ ಮನೆಯಲ್ಲಿದ್ದ ಬಹುತೇಕರೂ ಕೂಡ ಕೆಲಸಕ್ಕಾಗಿ ಹೊರಗಡೆ ಹೋಗುತ್ತಿದ್ದರು. ಹೀಗಾಗಿ ಈಕೆ ಮನೆಯಲ್ಲಿರೋದು ಗೊತ್ತೇ ಆಗಿರಲಿಲ್ಲ ಎನ್ನಲಾಗಿದೆ.

ಗೊತ್ತಾಗಿದ್ದು ಹೇಗೆ..?
2021ರ ಮಾರ್ಚ್​​​ನಲ್ಲಿ ರೆಹಮಾನ್ ಮನೆಯಿಂದ ಕಾಣೆಯಾಗಿದ್ದ. ಹೀಗಾಗಿ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಜೂನ್ 7 ರಂದು ರೆಹಮಾನ್ ಪೊಲೀಸ್​ ಚೆಕ್​ಪಾಯಿಂಟ್​ನಲ್ಲಿ ನಿಂತಿರೋದು ಆತನ ಸಂಬಂಧಿಯೊಬ್ಬರಿಗೆ ಗೊತ್ತಾಗುತ್ತದೆ. ಕೂಡಲೇ ಪೊಲೀಸರಿಗೆ ಆತನ ಬಗ್ಗೆ ಮಾಹಿತಿ ನೀಡುತ್ತಾರೆ. ನಂತರ ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಾರೆ. ಪೊಲೀಸರ ವಿಚಾರಣೆ ವೇಳೆ ರೆಹಮಾನ್, ಸುಜಾತ ಸೊತೆ ಒಟ್ಟಿಗೆ ಇರೋದನ್ನ ಬಹಿರಂಗ ಪಡಿಸಿದ್ದಾನೆ. ಮನೆಯಿಂದ ಎಸ್ಕೇಪ್ ಆಗಿ ಹತ್ತಿರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿರುವ ಬಗ್ಗೆಯೂ ತಿಳಿಸುತ್ತಾನೆ. ಹೀಗೆ ಪ್ರಶ್ನೆ ಮಾಡುತ್ತಿದ್ದಾಗ 11 ವರ್ಷಗಳಿಂದ ಸುಜಾತಳನ್ನ ನಿಗೂಢವಾಗಿ ಇಟ್ಟುಕೊಂಡಿರುವ ಬಗ್ಗೆ ರಿವೀಲ್ ಮಾಡ್ತಾನೆ.

ಇದೇ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಸುಜಾತ.. ತಾನು ರೂಮಿನಿಂದ ಹೇಗೆ ಹೊರಗೆ ಹೋಗ್ತಿದ್ದೆ. ತನ್ನ 11 ವರ್ಷಗಳ ಕಾಲ ರೂಮಿನಲ್ಲಿ ಏನೆಲ್ಲಾ ಮಾಡಿದೆ ಅನ್ನೋದ್ರ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಇನ್ನು ಕೊನೆಗೆ ಇವರನ್ನ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಕೋರ್ಟ್​ ಇಬ್ಬರೂ ಒಟ್ಟಿಗೆ ಇರಲು ಅವಕಾಶ ಮಾಡಿಕೊಟ್ಟಿದೆ.

The post 11 ವರ್ಷಗಳ ಹಿಂದೆ ನಾಪತ್ತೆಯಾದ ಮಗಳು ಮನೆ ಪಕ್ಕದಲ್ಲೇ ಇದ್ದಳು; ಇದೊಂಥರ ನಿಗೂಢ ರಹಸ್ಯ ಸ್ಟೋರಿ appeared first on News First Kannada.

Source: newsfirstlive.com

Source link

Leave a comment