ಹೈದರಾಬಾದ್: ಭಾರತದ ರಸ್ತೆಗಳಲ್ಲಿ ಗುಂಡಿಗಳು ಸರ್ವೇ ಸಾಮಾನ್ಯ. ಅದರಲ್ಲಿಯೂ ಮಳೆಗಾಲದಲ್ಲಿ ಹೆಚ್ಚಾಗಿ ರಸ್ತೆ ಗುಂಡಿಗಳನ್ನು ಕಾಣಬಹುದು. ಇದರಿಂದ ಜನರಿಗೆ ಬಹಳಷ್ಟು ತೊಂದರೆಯುಂಟಾಗುತ್ತದೆ. ಈ ಭೀತಿಯನ್ನು ತೊಡೆದು ಹಾಕಲು ಸ್ಥಳೀಯ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಆದರೆ ಅವರು ಕೆಲಸವನ್ನು ಮಾಡದ ಕಾರಣ ಹೈದರಾಬಾದ್‍ನ ವೃದ್ಧ ದಂಪತಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.

ಹೌದು, ಅಪಘಾತವನ್ನು ತಪ್ಪಿಸಲು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಹೈದರಾಬಾದ್‍ನ ವೃದ್ಧ ದಂಪತಿ ಕಳೆದ 11 ವರ್ಷದಿಂದ 2,000ಕ್ಕೂ ಹೆಚ್ಚು ಗುಂಡಿಗಳನ್ನು ಸರಿಪಡಿಸಿದ್ದಾರೆ. ರೋಡ್ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್‍ನ ಗಂಗಾಧರ್ ತಿಲಕ್ ಕಟ್ನಮ್(73) ಮತ್ತು ಅವರ ಪತ್ನಿ ವೆಂಕಟೇಶ್ವರಿ ಕಟ್ನಮ್(64) ಕಾರಿನಲ್ಲಿ ಹೊರಟು, ಅವರಿಗೆ ಕಾಣಿಸುವ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಪ್ರತಿದಿನ ಮುಚ್ಚುತ್ತಾರೆ.

ಗುಂಡಿಗಳಿಂದಾಗಿ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ. ಹೀಗಾಗಿ ಈ ವಿಚಾರವಾಗಿ ನಾನು ಪೊಲೀಸರು ಹಾಗೂ ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಈ ಗುಂಡಿಗಳನ್ನು ಮುಚ್ಚಲು ನಾನೇ ನಿರ್ಧರಿಸಿದೆ ಎಂದು ಗಂಗಾಧರ್ ತಿಲಕ್ ಕಟ್ನಮ್ ತಿಳಿದ್ದಾರೆ.

ಗಂಗಾಧರ್ ತಿಲಕ್ ಕಟ್ನಮ್‍ರವರು ಸುಮಾರು 35 ವರ್ಷಗಳ ಕಾಲ ಭಾರತದ ರೈಲ್ವೇ ಇಲಾಖೆಯ ಉದ್ಯೋಗಿಯಾಗಿ ಕೆಲಸ ಮಾಡಿದ್ದು, ನಿವೃತ್ತಿ ಬಳಿಕ ಸಾಫ್ಟ್‍ವೇರ್ ಡಿಸೈನ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಹೈದರಾಬಾದ್‍ಗೆ ಬಂದಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ನಗರಾದ್ಯಂತ ಇರುವ ಗುಂಡಿಗಳೆಲ್ಲವನ್ನು ಮುಚ್ಚುತ್ತಾ ಬಂದಿದ್ದಾರೆ. ಈ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಮ್ಮ ಪಿಂಚಣಿ ಹಣವನ್ನು ಬಳಸಿ ಖರೀದಿಸಲಾಗುತ್ತಿದ್ದು, ಕಳೆದ 11 ವರ್ಷಗಳಿಂದ 2,030 ಗುಂಡಿಗಳನ್ನು ಮುಚ್ಚಲು 40 ಲಕ್ಷ ರೂ ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ರೈಲಿನ ಕೆಳಗೆ ಸಿಲುಕಿದ ವೃದ್ಧ – ಸಾವಿನ ಅಂಚಿನಿಂದ ಪಾರು

The post 11 ವರ್ಷದಿಂದ ರಸ್ತೆ ಗುಂಡಿ ಮುಚ್ಚುತ್ತಿರುವ ದಂಪತಿ – 2,000 ಗುಂಡಿ ಮುಚ್ಚಲು 40 ಲಕ್ಷ ವೆಚ್ಚ appeared first on Public TV.

Source: publictv.in

Source link