111 ರನ್​​​ ಡಿಪೆಂಡ್​ ಮಾಡಿ ಇತಿಹಾಸ ನಿರ್ಮಿಸುತ್ತಾ ಕೊಹ್ಲಿ ಪಡೆ.?


ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ ಸೋಲಿನ ಸುಳಿಯಲ್ಲಿದೆ. ಆ ಮೂಲಕ ಸರಣಿ ಗೆಲ್ಲುವ ಕನಸನ್ನೂ ಕೈಚೆಲ್ಲುವ ಆತಂಕಕ್ಕೆ ಸಿಲುಕಿದೆ. ಆದರೂ ಗೆಲುವಿಗಾಗಿ ಟೀಮ್​ ಇಂಡಿಯಾ ಬೌಲರ್​​​ಗಳು ಹರಸಾಹಸಪಡ್ತಿದ್ದಾರೆ.

ದಕ್ಷಿಣ ಆಫ್ರಿಕಾ – ಭಾರತ ನಡುವಿನ ಅಂತಿಮ ಟೆಸ್ಟ್​ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ ಗೆಲುವಿಗಾಗಿ ಉಭಯ ತಂಡಗಳು ಹೋರಾಟ ನಡೆಸ್ತಿದ್ದು, ಮೇಲುಗೈ ಸಾಧಿಸಲು ಸಾಕಷ್ಟು ಪ್ರಯತ್ನ ಮಾಡ್ತಿವೆ. ಆದರೆ ಈ ಹೋರಾಟದಲ್ಲಿ ಆಫ್ರಿಕಾವೇ ಒಂದು ಹೆಜ್ಜೆ ಮುಂದೆ ಇದ್ದು, ಭಾರತ ತೀವ್ರ ಹಿನ್ನಡೆಯಲ್ಲಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್​​ ಅಗತ್ಯ ಇದ್ರೆ, ಭಾರತಕ್ಕೆ ಇನ್ನೂ 8 ವಿಕೆಟ್​ಗಳು ಬೇಕಿದೆ.

ಮೂರನೇ ದಿನದಾಟದ ಆರಂಭದಲ್ಲೇ ಎಡವಿದ ಭಾರತ

2 ವಿಕೆಟ್​ ನಷ್ಟಕ್ಕೆ 57 ರನ್​​​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಭಾರತಕ್ಕೆ, ಆರಂಭದಲ್ಲೇ ದಕ್ಷಿಣ ಆಫ್ರಿಕಾ ಡಬಲ್​​ ಶಾಕ್​​​ ನೀಡಿತು. ದಿನದಾಟದ 2ನೇ ಎಸೆತದಲ್ಲೇ ಪೀಟರ್​​ಸನ್​ ಹಿಡಿದ ಅದ್ಭುತ ಕ್ಯಾಚ್​​​ಗೆ ಚೇತೇಶ್ವರ್​​​ ಪೂಜಾರ (9) ಬಲಿಯಾದ್ರೆ, ಅಜಿಂಕ್ಯ ರಹಾನೆ (1) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್​​​ನತ್ತ ಹೆಜ್ಜೆ ಹಾಕಿದರು. ಆದ್ರೆ ಕೊಹ್ಲಿ ಮತ್ತು ಪಂತ್​​ ಎಚ್ಚರಿಕೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.

ರಿಷಭ್​ ಪಂತ್​- ವಿರಾಟ್​​​ ಕೊಹ್ಲಿ 94 ರನ್​​ಗಳ ಜೊತೆಯಾಟ

ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ನೆರವಾಗಿದ್ದು ನಾಯಕ ವಿರಾಟ್​ ಕೊಹ್ಲಿ ಮತ್ತು ರಿಷಭ್​​ ಪಂತ್​​ ಜೊತೆಯಾಟ. ಈ ಜೋಡಿ ತಂಡಕ್ಕೆ 94 ರನ್​​ಗಳ ಕಾಣಿಕೆ ನೀಡ್ತು. ಪರಿಣಾಮ ಭಾರತ ಚೇತರಿಕೆಯತ್ತ ಹೆಜ್ಜೆ ಹಾಕ್ತು. ಇದೇ ವೇಳೆ ಪಂತ್​ ಅರ್ಧಶತಕ ಕೂಡ ಸಿಡಿಸಿದ್ರು. ಕೊಹ್ಲಿ ತಾಳ್ಮೆಯುತ ಬ್ಯಾಟಿಂಗ್​ ಮಾಡಿದ್ರೆ, ಪಂತ್​ ಸ್ಫೋಟಕ ಬ್ಯಾಟಿಂಗ್​ ನಡೆಸಿದರು.

ಬೌಲರ್ಸ್​ ದರ್ಬಾರ್​ ನಡುವೆಯೂ ಪಂತ್​​ ಭರ್ಜರಿ ಶತಕ

ಬರೋಬ್ಬರಿ 143 ಎಸೆತಗಳನ್ನು ಎದುರಿಸಿ ದೀರ್ಘ ಇನ್ನಿಂಗ್ಸ್​ ಕಟ್ಟಿದ್ದ ಕೊಹ್ಲಿ (29) ಆಟಕ್ಕೆ ಲುಂಗಿ ಎನ್​ಗಿಡಿ ತಡೆ ಹಾಕಿದರು. ಆದ್ರೆ ಕೊಹ್ಲಿ ಔಟಾದ ಬೆನ್ನಲ್ಲೆ​​​​​​ ಮತ್ತೆ ಪರಾಕ್ರಮ ಮೆರೆದ ದಕ್ಷಿಣ ಆಫ್ರಿಕಾ ಬೌಲರ್ಸ್, ಅಶ್ವಿನ್​ (7), ಶಾರ್ದೂಲ್ (5), ಉಮೇಶ್​​​​​​​​​​​​​​​​​​ (0), ಶಮಿ (0), ಬೂಮ್ರಾಗೆ (2) ಗೇಟ್​ಪಾಸ್​ ನೀಡುವಲ್ಲಿ ಯಶಸ್ಸು ಕಂಡರು. ಇದರ ಮಧ್ಯೆಯೂ ಪಂತ್​ ಹೋರಾಟ ನಡೆಸಿದ ದಾಖಲೆಯ ಶತಕ ಸಿಡಿಸಿ ಅಜೇಯರಾಗಿ ಉಳಿದರು.

198ಕ್ಕೆ ಭಾರತ ಆಲ್​​​ಔಟ್​-ಎದುರಾಳಿಗೆ 212 ಟಾರ್ಗೆಟ್​​​​​​

ದಕ್ಷಿಣ ಆಫ್ರಿಕಾ ಬೌಲರ್​​ಗಳ ಮಾರಕ ದಾಳಿಯಿಂದಾಗಿ ಭಾರತ 198 ಕ್ಕೆ ಕುಸಿಯಿತು. ಮಾರ್ಕೋ ಜಾನ್ಸನ್​​ 4 ವಿಕೆಟ್​, ರಬಾಡ, ಲುಂಗಿ ಎನ್​ಗಿಡಿ ತಲಾ 3 ವಿಕೆಟ್​ ಪಡೆದು ಮಿಂಚಿದರು. 13 ರನ್​​ ಅಲ್ಪಮುನ್ನಡೆ ಮತ್ತು ಪಂತ್​ ಶತಕದ ಬಲದಿಂದ ಗಳಿಸಿದ 198 ರನ್​​ಗಳನ್ನೂ ಸೇರಿಸಿ ದಕ್ಷಿಣ ಆಫ್ರಿಕಾಗೆ ಭಾರತ 212 ರನ್​​ಗಳ ಸಾಧಾರಣ ಗುರಿ ನೀಡ್ತು.

ಗೆಲುವಿನತ್ತ ಆಫ್ರಿಕಾ ಹೆಜ್ಜೆ, ಭಾರತದ ಬೌಲರ್​​​ಗಳ ಪರದಾಟ

212 ರನ್​​ಗಳ ಸಾಧಾರಣ ಗುರಿ ಬೆನ್ನಟ್ಟಿದ ಸೌತ್​ ಆಫ್ರಿಕಾ, ಗೆಲುವಿನತ್ತ ಹೆಜ್ಜೆ ಹಾಕಿದೆ. ಆರಂಭದಲ್ಲಿ​​​ ಮಾರ್ಕರಮ್​ ವಿಕೆಟ್​ ಕಳೆದುಕೊಂಡ್ರೂ, ಡೀನ್​​ ಎಲ್ಗರ್​​​ ಮತ್ತು ಪೀಟರ್​​ಸನ್​​​ ದಿಟ್ಟ ಹೋರಾಟ ನಡೆಸಿ 78 ರನ್​ಗಳ ಭರ್ಜರಿ ಜೊತೆಯಾಟ ನೀಡಿದ್ರು. ಪೀಟರ್​​ಸನ್​ 2ನೇ ಇನ್ನಿಂಗ್ಸ್​​​ನಲ್ಲಿ 48 ರನ್​​​​ ಗಳಿಸಿ ಅಜೇಯರಾಗಿ ಉಳಿದಿದ್ರೆ, ದಿನದ ಕೊನೆಯಲ್ಲಿ ಬೂಮ್ರಾಗೆ ಎಲ್ಗರ್​​ (30) ಔಟಾದ್ರು. ಆದ್ರೆ ಗೆಲುವಿನ ಎಲ್ಲಾ ಲೆಕ್ಕಾಚಾರ ಸೌತ್​ ಆಫ್ರಿಕಾ ಕಡೆಯೇ ಇದೆ.

ಸದ್ಯ 3ನೇ ದಿನದ ಅಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ 101 ಗಳಿಸಿರುವ ದಕ್ಷಿಣ ಆಫ್ರಿಕಾ, ಗೆಲುವಿಗೆ ಕೇವಲ 111 ರನ್​​ ಬೇಕಿದೆ. ಆದರೆ ಭಾರತ ಇದನ್ನು ಡಿಫೆಂಡ್​ ಮಾಡಿಕೊಂಡು ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸುತ್ತಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

ಸಂಕ್ಷಿಪ್ತ ಸ್ಕೋರ್​​​

  • ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​​​- 223ಕ್ಕೆ ಆಲೌಟ್​
  • ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ 210ಕ್ಕೆ ಆಲೌಟ್​
  • ಟೀಮ್​ ಇಂಡಿಯಾ ಎರಡನೇ ಇನ್ನಿಂಗ್ಸ್​​ 198ಕ್ಕೆ ಕುಸಿತ

News First Live Kannada


Leave a Reply

Your email address will not be published. Required fields are marked *