ಕಠಿಣ ಪರಿಶ್ರಮ, ಗುರಿ ಮುಟ್ಟಲೇಬೇಕೆಂಬ ಹಂಬಲ, ಸಾಧಿಸಲೇಬೇಕೆಂಬ ಛಲ ಈ ಮೂರೂ ಅಚಲವಾಗಿದ್ರೆ, ಯಾವುದೇ ಗುರಿಯೂ ಅಸಾಧ್ಯವಲ್ಲ..! ಹಲವರು ಅಸಾಧ್ಯ ಎಂದಿದ್ದನ್ನ ಇದೀಗ ಈ ಯುವ ಕ್ರಿಕೆಟಿಗ ಮಾಡಿ ತೋರಿಸಿದ್ದಾನೆ. ಆತ ಯಾರು..? ಸಾಧಿಸಿದ ಗುರಿ ಎಂತದ್ದು..? ಇಲ್ಲಿದೆ ನೋಡಿ ಡಿಟೇಲ್ಸ್​..!

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು ಅನ್ನೋದು ಪ್ರತಿಯೊಬ್ಬ ಯುವ ಕ್ರಿಕೆಟಿಗನ ಕನಸು. ಈ ಕನಸನ್ನ ಬೆನ್ನತ್ತಿ ಹಲವರು ಗೆದ್ದಿದ್ರೆ, ಸೋತ ಉದಾಹರಣೆಗಳೂ ಸಾಕಷ್ಟಿವೆ. ಆದ್ರೆ, ತಮಗಿದ್ದ ಅಡೆತಡೆಗಳನ್ನ ಮೀರಿ ಕನಸು ನನಸು ಮಾಡಿಕೊಂಡ ಕೆಲವೇ ಕೆಲವು ಉದಾಹರಣೆಗಳು ನಮ್ಮ ಮುಂದಿವೆ. ಅದರಲ್ಲಿ ಇನ್ಮುಂದೆ ಪಾಕಿಸ್ತಾನದ ಈ ಯುವ ಕ್ರಿಕೆಟಿಗನ ಕಥೆಯೂ ಸೇರಲಿದೆ.

ಇದು ಪಾಕಿಸ್ತಾನದ ಯುವ ಆಟಗಾರನ ಸಕ್ಸಸ್​ ಕಥೆ..!
ನಿಮಗೆಲ್ಲಾ ವೆಸ್ಟ್​ ಇಂಡೀಸ್​​ನ ರಕೀಮ್​ ಕಾರ್ನವೆಲ್​, ವಿಶ್ವಕಪ್ ಟೂರ್ನಿಯನ್ನ​ ಪ್ರತಿನಿಧಿಸಿದ್ದಾಗ ಬರ್ಮುಡಾ ತಂಡದಲ್ಲಿದ್ದ ಡ್ವಾನೆ ಲಿವರ್​ಕಾಕ್​ ಗೊತ್ತಿರಬಹುದು. ತಮ್ಮ ಧಡೂತಿ ದೇಹದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡ ಕ್ರಿಕೆಟಿಗರು ಇವರು. ಆದ್ರೆ, ಖಾಯಂ ಸ್ಥಾನಕ್ಕಾಗಿ ಪೈಪೋಟಿ ಎದುರಿಸಿದವರಲ್ಲಿ ಇವರೇ ಪ್ರಮುಖರು ಅನ್ನೋದನ್ನ ಮರೆಯುವಂತಿಲ್ಲ. ಪಾಕಿಸ್ತಾನದ ಈ ಯುವ ಆಟಗಾರರ ಮುಂದೆ ಸ್ಥಾನಕ್ಎ ಪೈಪೋಟಿಯೇ ಬರಬಾರದೆಂಬ ಕಾರಣಕ್ಕೆ ಮೊದಲೇ ದೇಹದ ತೂಕ ಇಳಿಸಿಕೊಂಡು ತಂಡಕ್ಕೆ ಆಯ್ಕೆಯಾಗಿದ್ದಾನೆ. ಅದು.. ಕೇವಲ 12 ತಿಂಗಳಲ್ಲಿ ಬರೋಬ್ಬರಿ 30 ಕೆ.ಜಿ ದೇಹತೂಕವನ್ನ.

ಮುಂಬರುವ ಇಂಗ್ಲೆಂಡ್​​ ಮತ್ತು ವೆಸ್ಟ್​​ಇಂಡೀಸ್​​​ ವಿರುದ್ಧದ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​​ ತಂಡವನ್ನ ಪ್ರಕಟಿಸಿದೆ. ಇಡೀ ತಂಡದ ಆಯ್ಕೆಯಲ್ಲಿ ಹೆಚ್ಚು ಗಮನ ಸೆಳೆದಿರೋದು ಅಜಂಖಾನ್​ ಎಂಬ ಯುವಕನ ಆಯ್ಕೆ..! ಎರಡೂ ಟೂರ್​ಗಳಿಗೆ ಆಯ್ಕೆಯಾಗಿರುವ ಏಕೈಕ ಅನ್​ಕ್ಯಾಪ್ಡ್​ ಪ್ಲೇಯರ್​ ಈತ..!

ಅಪ್ಪ ಮಾಜಿ ನಾಯಕನಾದ್ರೂ ಸಿಕ್ಕಿರಲಿಲ್ಲ ಅವಕಾಶ..!
22ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರೋ ಅಜಂಖಾನ್​ಗೆ ಇನ್ನೂ ಮೊದಲೇ ತಂಡಕ್ಕೆ ಆಯ್ಕೆಯಾಗೋ ಅವಕಾಶವಿತ್ತು. ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಆತ ನೀಡಿದ ಪ್ರದರ್ಶನ ಅಷ್ಟು ಪ್ರಾಮಿಸಿಂಗ್​ ಆಗಿತ್ತು. ಜೊತೆಗೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಮೊಯಿನ್​ ಖಾನ್​ ಮಗ ಎಂಬ ಕೃಪಾಕಟಾಕ್ಷವೂ ಇತ್ತು. ಆದ್ರೆ, ಆತನ ಆಯ್ಕೆಗೆ ಅಡ್ಡ ಬಂದಿದ್ದು ದೇಹದ ತೂಕ.

ಹಲವು ಬಾರಿ ಆಯ್ಕೆ ಟ್ರಯಲ್ಸ್​ಗೆ ಹೋದಾಗಲೂ ದೇಹದ ತೂಕ ಅಡ್ಡ ಬಂದಿತ್ತು. ಒಮ್ಮೆ ಸೆಲೆಕ್ಷನ್​ ಕಮಿಟಿ ಅಜಂ ಖಾನ್​ ತೂಕ ಇಳಿಸಿಕೊಂಡರಷ್ಟೇ ಅವಕಾಶ ಎಂದು ಹೇಳಿದ್ದೂ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ, ಇದ್ಯಾವುದನ್ನೂ ಅವಮಾನ ಎಂದು ಭಾವಿಸದ ಅಜಂಖಾನ್​, ತನ್ನ ಕಠಿಣ ಪರಿಶ್ರಮ, ಹಾಗೂ ಛಲದಿಂದಲೇ ಇಂದು ಸಾಧಿಸಿದ್ದಾನೆ. ಅಂದು ಜಿಮ್​ನಲ್ಲಿ ಬೆವರು ಹರಿಸಿದ್ದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ.

ಕೇವಲ ಛಲ ಮಾತ್ರವಲ್ಲ..! ಕ್ರಿಕೆಟ್​ ಕೌಶಲ್ಯವೂ ಈತನಿಗಿದ್ದಿದ್ದು ಆಯ್ಕೆಯ ಮತ್ತೊಂದು ಮಾನದಂಡವಾಗಿತ್ತು ಅನ್ನೋದನ್ನ ಮರೆಯುವಂತಿಲ್ಲ. ಪಾಕಿಸ್ತಾನ್​ ಸೂಪರ್​ ಲೀಗ್​ನಲ್ಲಿ ಬೆಸ್ಟ್​ ಫಿನಿಷರ್​ ಆಗಿಯೇ ಗುರುತಿಸಿಕೊಂಡಿದ್ದ ಅಜಂಖಾನ್​, ಆಡಿದ 15 ಪಂದ್ಯಗಳಲ್ಲಿ ಕಲೆ ಹಾಕಿದ್ದು 260 ರನ್​.! ಸ್ಟ್ರೈಕ್​ರೇಟ್​ 131.3.

ರಾಷ್ಟ್ರೀಯ ತಂಡಕ್ಕೆ ಆಗುವ ಕನಸು, ಜೊತೆಗೆ ಆ ಕನಸಿಗೆ ತಕ್ಕ ಪರಿಶ್ರಮ..! ಈ ಎರಡೂ ಇಂದು ಅಜಂಖಾನ್​ಗೆ ರಾಷ್ಟ್ರೀಯ ತಂಡದ ಟಿಕೆಟ್​ ನೀಡಿದೆ. ಈ ಅವಕಾಶವನ್ನ ಅಜಂ ಹೇಗೆ ಉಪಯೋಗಿಸಿಕೊಳ್ತಾರೆ ಅನ್ನೋದೇ ಈಗ ಕುತೂಹಲ ಮೂಡಿಸಿರೋ ಅಂಶ.

The post 12 ತಿಂಗಳಲ್ಲಿ ಇಳಿಸಿದ್ದು ಬರೋಬ್ಬರಿ 30 ಕೆ.ಜಿ ತೂಕ- ಯುವ ಆಟಗಾರನ ಸಕ್ಸಸ್​ ಕಥೆ ಇದು appeared first on News First Kannada.

Source: newsfirstlive.com

Source link