ಬಾಗಲಕೋಟೆ:  ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸವಿದ್ರೂ ಕೆಲವು ಜನರು ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ. ಮದುವೆ ಸಮಾರಂಭಗಳಲ್ಲಿ ಕೋವಿಡ್​ ನಿಯಮ ಉಲ್ಲಂಘನೆ ಕಂಡುಬರ್ತಿದೆ.  ಮದುವೆಗಳೇ ಕೊರೊನಾ ಹಾಟ್​​ಸ್ಪಾಟ್ ಆಗುವ ಆತಂಕ ಎದುರಾಗಿದೆ. ಹೀಗಾಗಿ ಜಿಲ್ಲಾಡಳಿತ ಮದುವೆ ಕಾರ್ಯಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್​ ದಾಖಲಿಸಲಾಗ್ತಿದೆ.

ಬಾಗಲಕೋಟೆ ಉಪ ವಿಭಾಗದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ನಡೆದ 13 ಮದುವೆ ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ಮದುವೆಗಳಲ್ಲಿ ಪಾಲ್ಗೊಂಡ ಹತ್ತಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಹಿನ್ನೆಲೆ ಕೊರೊನಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಈ ಮದುವೆಗಳ ಸಂಬಂಧ ಕೇಸ್ ದಾಖಲಾಗಿದೆ.

ಬಾಗಲಕೋಟೆ ಉಪ ವಿಭಾಗದ ಬದಾಮಿ, ಗುಳೇದಗುಡ್ಡ, ಇಳಕಲ್, ಹುನಗುಂದ ಮತ್ತು ಬಾಗಲಕೋಟೆ ತಾಲೂಕಿನಲ್ಲಿ ನಡೆದ ಮದುವೆಗಳ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.

ಮದುವೆಯಲ್ಲಿ 50 ಜನರು ಪಾಲ್ಗೊಳ್ಳಲು ಮಾತ್ರ  ಅವಕಾಶವಿದೆ. ಈ ನಿಯಮ ಮೀರಿ 50ಕ್ಕೂ ಹೆಚ್ಚು ಜನ ಸೇರಿದ ಮದುವೆ ಕಾರ್ಯಕ್ರಮಗಳ ವಿರುದ್ಧ ಸಂಬಂಧಪಟ್ಟ ಠಾಣೆಗಳಲ್ಲಿ ಕೇಸ್ ದಾಖಲಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.  ಬಾಗಲಕೋಟೆ ಉಪವಿಭಾಗದಲ್ಲಿ ನಡೆಯುವ ಮದುವೆಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಮಾಹಿತಿ ನೀಡಿದ್ದಾರೆ.

The post 13 ಮದುವೆ ಸಮರಾಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಕೇಸ್ ದಾಖಲು appeared first on News First Kannada.

Source: newsfirstlive.com

Source link