13 ವರ್ಷಗಳ ಬಳಿಕ ಬರುತ್ತಿದೆ ‘ಅವತಾರ್’ ಸೀಕ್ವೆಲ್​; ವರ್ಷಾಂತ್ಯಕ್ಕೆ ‘ಅವತಾರ್​ 2’, 2028ಕ್ಕೆ ‘ಅವತಾರ್​ 5’ | Avatar The Way of Water Movie to be releasing on 2022 December 16


13 ವರ್ಷಗಳ ಬಳಿಕ ಬರುತ್ತಿದೆ ‘ಅವತಾರ್’ ಸೀಕ್ವೆಲ್​; ವರ್ಷಾಂತ್ಯಕ್ಕೆ ‘ಅವತಾರ್​ 2’, 2028ಕ್ಕೆ ‘ಅವತಾರ್​ 5’

ಅವತಾರ ಸಿನಿಮಾ

‘ಅವತಾರ್​’ ಚಿತ್ರ (Avatar Movie) ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. 2009ರಲ್ಲಿ ತೆರೆಗೆ ಬಂದ ಈ ಸಿನಿಮಾದ ಸೀಕ್ವೆಲ್​ ಈ ಮೊದಲೇ ಘೋಷಣೆ ಆಗಿತ್ತು. ಆದರೆ, ಈ ಚಿತ್ರದ ಟೈಟಲ್ ಏನು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ? ಎನ್ನುವ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಈ ವಿಚಾರ ಅಧಿಕೃತವಾಗಿದೆ. ಕ್ರಿಸ್​ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ‘ಅವತಾರ್​: ದಿ ವೇ ಆಫ್​ ವಾಟರ್’ ಎಂದು (Avatar The Way of Water) ಶೀರ್ಷಿಕೆ ಇಡಲಾಗಿದೆ. ಜೇಮ್ಸ್ ಕ್ಯಾಮರೂನ್ ( James Cameron) ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ.

ಸಿನೆಮಾಕೋನ್ ವಾರ್ಷಿಕ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಈ ಕಾರ್ಯಕ್ರಮ ಏಪ್ರಿಲ್ 25-28ರವರೆಗೆ ನಡೆದಿದೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ದೊಡ್ಡದೊಡ್ಡ ಚಿತ್ರಗಳ ಫಸ್ಟ್ ಲುಕ್​, ರಿಲೀಸ್ ದಿನಾಂಕಗಳನ್ನು ಇಲ್ಲಿ ಬಹಿರಂಗ ಮಾಡಲಾಗುತ್ತದೆ. ಅದೇ ರೀತಿ ‘ಅವತಾರ್​: ದಿ ವೇ ಆಫ್​ ವಾಟರ್’ ಸಿನಿಮಾದ ಎರಡು ದೃಶ್ಯಗಳನ್ನು ಇಲ್ಲಿ ತೋರಿಸಲಾಗಿದೆ.

ಐದು ಸಿನಿಮಾಗಳು ‘ಅವತಾರ’ ಸರಣಿಯಿಂದ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳು ಹಿಡಿದಿವೆ. ‘ಅವತಾರ್ 2’ ಜತೆಗೆ ಇನ್ನುಳಿದ ಮೂರು ಸಿನಿಮಾಗಳ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ. ‘ಅವತಾರ್ 3’ 2024ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ‘ಅವತಾರ್ 4’ ಡಿಸೆಂಬರ್ 18, 2026ರಂದು ರಿಲೀಸ್ ಆಗುತ್ತಿದೆ. ‘ಅವತಾರ್ 5’ 2028ರ ಡಿಸೆಂಬರ್ 22ರಂದು ಬಿಡುಗಡೆ ಆಗುತ್ತಿದೆ.

ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್​ಮಸ್ ಇರುವುದರಿಂದ ದೊಡ್ಡ ಸಿನಿಮಾ ನಿರ್ಮಾಪಕರು ಈ ಸಂದರ್ಭದಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡಲು ಆದ್ಯತೆ ನೀಡುತ್ತಾರೆ. ಕಳೆದ ವರ್ಷ ಡಿಸೆಂಬರ್ 16ರಂದು ‘ಸ್ಪೈಡರ್​ ಮ್ಯಾನ್: ನೋ ವೇ ಹೋಂ’ ಚಿತ್ರ ರಿಲೀಸ್ ಆಗಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಬಾರಿ ರಿಲೀಸ್ ಆಗುತ್ತಿರುವ ಅವತಾರ್​: ದಿ ವೇ ಆಫ್​ ವಾಟರ್’ ಸಿನಿಮಾ ಯಾವ ರೀತಿಯಲ್ಲಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಅವತಾರ್’ ಸಿನಿಮಾ ವಿಶ್ವ ಮಟ್ಟದಲ್ಲಿ 2.8 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ 21,729 ಕೋಟಿ ರೂಪಾಯಿ. ಈ ಚಿತ್ರದ ಕಲೆಕ್ಷನ್​ಅನ್ನು ಬ್ರೇಕ್ ಮಾಡಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.

TV9 Kannada


Leave a Reply

Your email address will not be published.