ಹುಬ್ಬಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ 1,015 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿ ಮಾಡಿದೆ ಇದನ್ನು 1,400 ಮೆಟ್ರಿಕ್ ಟನ್‍ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತು ಪತ್ರವನ್ನು ಸಹ ಬರೆಯಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದ ಸಕ್ರ್ಯೂಟ್ ಹೌಸ್ ಆವರಣದಲ್ಲಿ ರಾಜ್ಯದ ಆಕ್ಸಿಜನ್ ಸರಬರಾಜು ಹಾಗೂ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಂತ ಹಂತವಾಗಿ ರಾಜ್ಯದ ಆಕ್ಸಿಜನ್ ನಿಗದಿ ಪ್ರಮಾಣವನ್ನು ಹೆಚ್ಚಿಸುತ್ತಾ ಬಂದಿದೆ. 965 ಮೆಟ್ರಿಕ್ ಟನ್ ಇದ್ದ ಪ್ರಮಾಣವನ್ನು ಈಗ 1,015ಕ್ಕೆ ಏರಿಸಿದೆ. ರಾಜ್ಯಕ್ಕೆ ಒಡಿಶಾ ಹಾಗೂ ಜಾರ್ಖಂಡ್‍ನ ಜೇಮ್‍ಶೆಡ್‍ಪುರದಿಂದ ಆಕ್ಸಿಜನ್ ಸರಬರಾಜು ಆಗುತ್ತಿದೆ. ರಾಜ್ಯದಲ್ಲಿ ಜಿಂದಾಲ್ ಸೇರಿದಂತೆ ಹಲವು ಕಡೆ 1,100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಈ ಆಕ್ಸಿಜನ್ ನೆರೆಯ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ಬದಲು ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ರಾಜ್ಯದಲ್ಲಿಯೇ ಬಳಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಇದಕ್ಕೂ ಅನುಮತಿ ನೀಡಲಿದೆ ಎಂದರು.

ಮೇ 11 ರಂದು ಜೇಮಶೆಡ್ ಪುರದಿಂದ ಹೊರಟಿದ್ದ 120 ಮೆಟ್ರಿಕ್ ಟನ್ ಆಕ್ಸಿಜನ್ 6 ಟ್ಯಾಂಕರ್‍ಗಳು ರಾಜ್ಯಕ್ಕೆ ಬಂದು ತಲುಪಿವೆ. ಬಹರೇನ್ ಮತ್ತು ಕುವೈತ್‍ನಿಂದ ಹಡಗಿನ ಮೂಲಕ ಆಗಮಿಸಿದ 180 ಮೆಟ್ರಿಕ್ ಟನ್ ಆಕ್ಸಿಜನ್ ಸಹ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ. ಇನ್ನೂ 6 ರಿಂದ 8 ಟ್ಯಾಂಕರ್ ಆಕ್ಸಿಜನ್ ರಾಜ್ಯಕ್ಕೆ ಬರಬೇಕಿದೆ. ಮೇ 16 ರಂದು ಐ.ಎಸ್.ಓ ಕಂಟೇನರ್ ಟ್ಯಾಂಕ್ ರಾಜ್ಯಕ್ಕೆ ಬರಲಿದ್ದು, ಇದನ್ನು ಹುಬ್ಬಳ್ಳಿ-ಧಾರವಾಡಕ್ಕೆ ನೀಡಲಾಗುವುದು. ಇದರಿಂದ ಬಳ್ಳಾರಿಯಿಂದ ಆಕ್ಸಿಜನ್ ತರಲು ಅನುಕೂಲವಾಗಿಲಿದೆ. ಆಕ್ಸಿಜನ್ ಸರಬರಾಜು ಮೇಲುಸ್ತುವಾರಿಗಾಗಿ 5 ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ದಿನದ 24 ಗಂಟೆಯೂ ಆಕ್ಸಿಜನ್ ಸರಬರಾಜ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿ ಆಕ್ಸಿಜನ್ ಕೊರತೆ ಉಂಟಾಗಿಲ್ಲ ಎಂದರು.

ಹರಿದು ಬಂತು ನೆರವು:
ದೇಶಪಾಂಡೆ ಫೌಂಡೇಷನ್ ಸೇರಿದಂತೆ ಹಲವು ಎನ್.ಜಿ.ಓಗಳಿಂದ 70 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇದರೊಂದಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಾಗೂ ರಾಜ್ಯ ಸರ್ಕಾರದಿಂದ 80 ಆಕ್ಸಿಜನ್ ಸಾಂದ್ರಕಗಳು ಜಿಲ್ಲೆಗೆ ಲಭಿಸಲಿವೆ. ಇವುಗಳನ್ನು ಹೊಸದಾಗಿ ನಿರ್ಮಿಸುವ ಕೋವಿಡ್ ಆಸ್ಪತ್ರೆಗಳಲ್ಲಿ ಬಳಸಲಾಗುವುದು. ವೇದಾಂತ ಫೌಂಡೇಷನ್ ವತಿಯಿಂದ ಕಿಮ್ಸ್ ನಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಿ ದೇಣಿಗೆ ನೀಡುತ್ತಿದ್ದಾರೆ. ಒನ್ ಮೋರ್ ಬ್ರೆಥ್ ಎನ್ನುವ ಎನ್‍ಜಿಓದಿಂದ ಜಿಲ್ಲಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಿದ್ದಾರೆ. ದೇಶಪಾಂಡೆ ಫೌಂಡೇಷನ್ ವತಿಯಿಂದ 250 ಲೀಟರ್ ಸಾಮಥ್ರ್ಯದ 2 ಡೋರಾ ಸಿಲಿಂಡರ್‍ಗಳನ್ನು ನೀಡಿದ್ದಾರೆ. ಎಂ.ಆರ್.ಪಿ.ಎಲ್ ಹಾಗೂ ಓಎನ್‍ಸಿಸಿ ಕಂಪನಿ ವತಿಯಿಂದ 4 ಟನ್ ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ನೀಡಲಿದ್ದಾರೆ. ಎಲ್‍ಆ್ಯಂಡ್‍ಟಿ ಕಂಪನಿ ವತಿಯಿಂದ ಕಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ನಿರ್ಮಿಸಲು ಮಾತುಕತೆ ನಡೆಸಲಾಗಿದೆ. ಎನ್.ಜಿ.ಓ ಹಾಗೂ ವಿವಿಧ ಕಂಪನಿಗಳಿಂದ ಸಾಕಷ್ಟು ನೆರವು ಹರಿದು ಬರುತ್ತಿದೆ. ನೆರವು ನೀಡಿದ ಖಾಸಿಗೆ ಸಂಸ್ಥೆಗಳಿಗೆ ಅಭಿನಂದನೆಗಳನ್ನು ಸಚಿವ ಶೆಟ್ಟರ್ ತಿಳಿಸಿದರು.

ತಾಲೂಕಿನಲ್ಲಿ ಸ್ಥಾಪನೆ:
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 600 ಬೆಡ್‍ಗಳ ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಜಿಲ್ಲಾಡಳಿತದಿಂದ ಪ್ರತಿ ತಾಲೂಕಿನಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಹಾನಗರ ಪಾಲಿಕೆ ವತಿಯಿಂದ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಉಚಿತವಾಗಿ ಮಾಡಲಾಗುವುದು. ಇದೇ ರೀತಿ ಜಿಲ್ಲಾಡಳಿತದಿಂದ ಗ್ರಾಮೀಣ ಭಾಗದಲ್ಲೂ ಉಚಿತವಾಗಿ ಅಂತ್ಯ ಸಂಸ್ಕಾರಕ್ಕೆ ಕ್ರಮಕೈಗೊಳ್ಳಲಾಗುವುದು. ಇದರ ಮೇಲುಸ್ತುವಾರಿಯನ್ನು ಸಂಬಂಧ ಪಟ್ಟ ತಹಶೀಲ್ದಾರರು ವಹಿಸಲಿದ್ದಾರೆ. ಅಂತ್ಯ ಸಂಸ್ಕಾರದ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಿಲಾಗಿದೆ. ಪ್ರತಿ ಏರಿಯಾ ಹಾಗೂ ಕಾಲೋನಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. 1,250 ಕಿರಾಣಿ ಅಂಗಡಿ ಮಾಲೀಕರು ಫೋನ್ ಮೂಲಕ ಆರ್ಡರ್ ಪಡೆದು ಗ್ರಾಹರ ಮನೆ ಬಾಗಿಲಿಗೆ ದಿನಸಿ ಪದಾರ್ಥಗಳನ್ನು ತಲುಪಿಸಲು ಒಪ್ಪಿದ್ದಾರೆ. ಇದು ಜಾರಿಯಾದರೆ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಲಿದೆ. ಪ್ರತಿ ದಿನ 6 ರಿಂದ 10 ಗಂಟೆಯ ಒಳಗೆ ಗ್ರಾಹಕರ ಮನೆಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸರ್ಕಾರಿ ಹಾಗೂ ಖಾಸಿಗೆ ಆಸ್ಪತ್ರೆ ಕೆಲಸ ನಿರ್ವಹಿಸುವ ಗ್ರೂಪ್ ಡಿ ನೌಕರರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವಿಮೆ ಭದ್ರತೆ ಒದಗಿಸಲಾಗಿದೆ. ಹುಬ್ಬಳ್ಳಿ ಈ.ಎಸ್.ಐ ಆಸ್ಪತ್ರೆ ಕಾರ್ಮಿಕ ಇಲಾಖೆಯಡಿ ಬರುತ್ತದೆ. ಅದರ ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆಯಲಾಗಿದೆ. ಗ್ರೂಪ್ ಡಿ ನೌಕರರ ಕೊರತೆ ಉಂಟಾದರೆ ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡರೆ ಜಿಲ್ಲಾಡಳಿತದಿಂದ ಎನ್.ಡಿ.ಆರ್.ಎಫ್ ಅಡಿ ಅನುದಾನ ನೀಡಲಾವುದು ಎಂದರು. ಈ.ಎಸ್.ಐ ಆಸ್ಪತ್ರೆಯನ್ನು ಸದುಪಯೋಗ ಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರ ಸುತ್ತೋಲೆಯಂತೆ ಕಿಮ್ಸ್‍ನಲ್ಲಿ ಬೆಡ್‍ಗಳ ಸಂಖ್ಯೆಯ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕಾಗಿ ಬೋರ್ಡ್‍ನಲ್ಲಿ ಹಾಕಲಾಗುವುದು. ಇದುವರೆಗೆ ಒಟ್ಟು 922 ರೋಗಿಗಳು ಕಿಮ್ಸ್‍ನಲ್ಲಿ ದಾಖಲಾಗಿದ್ದಾರೆ. ಇಂದು 82 ಜನರು ಹೊಸದಾಗಿ ದಾಖಲಾಗಿದ್ದು, 59 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬೆಡ್‍ಗಳ ಮಾಹಿತಿಯನ್ನು ಪ್ರತಿ ಆಸ್ಪತ್ರೆಯಲ್ಲೂ ಪ್ರದರ್ಶಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ವತಿಯಿಂದ 600 ರೋಗಿಗಳನ್ನು ದಾಖಲಿಸಲಾಗಿದೆ. ಇವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಇವರು ದಾಖಲಾಗುವಾಗಲು ಹಾಗೂ ಬಿಡುಗಡೆ ಹೊಂದುವಾಗಲು ಹಣ ನೀಡುವ ಹಾಗಿಲ್ಲ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

 

ಜಿಲ್ಲೆಯಲ್ಲಿ ಕರ್ನಾಟಕ ಇಂಡಸ್ಟಿರಿಯಲ್ ಗ್ಯಾಸ್, ಪ್ರಾಕ್ಟೇರ್ ಹಾಗೂ ಸದರನ್ ಗ್ಯಾಸ್ ಆಕ್ಸಿಜನ್ ರೀ ಫಿಲಿಂಗ್‍ಗಳು ಇದ್ದು, ಇವರು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸರಬರಾಜು ಮಾಡುವರು. ಇವರು ಸದ್ಯ ಕೈಗಾರಿಕೆಗಳಿ ಆಕ್ಸಿಜನ್ ಪೂರೈಕೆ ಮಾಡುವ ಹಾಗಿಲ್ಲ. ಈ ಕುರಿತು ಜಿಲ್ಲಾಡಳಿತದಿಂದ ನಿಗಾ ವಹಿಸಲಾಗಿದೆ. ಜಿಲ್ಲೆಗೆ ಪ್ರತಿದಿನ 65 ಟನ್ ಆಕ್ಸಿಜನ್ ಸರಬಾಜು ಆಗುತ್ತಿದೆ. ಇದರಲ್ಲಿ 41 ಟನ್ ಜಿಲ್ಲೆಯಲ್ಲಿ ಬಳಕೆಯಾಗುತ್ತಿದೆ. ಉಳಿದ ಆಕ್ಸಿಜನ್ ಬಾಗಲಕೋಟೆ, ಗದಗ, ಬೆಳಗಾವಿ, ಬಿಜಾಪುರ ಜಿಲ್ಲೆಗಳಿಗೆ ಸರಬಾರಜು ಆಗುತ್ತಿದೆ. ಲೈಫ್ ಲೈನ್ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಸಾವಿನ ಕುರಿತಾದ ವರದಿ ಬಂದಿದೆ. ಇದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಯಾವ ರೋಗಿಯೂ ಸಹ ಆಕ್ಸಿಜನ್ ಕೊರತೆಯಿಂದ ಅಸುನೀಗಿಲ್ಲ ಎಂಬ ಮಾಹಿತಿ ನೀಡಿದರು.

ಲಸಿಕೆ ವಿತರಣೆ:
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ಪಡೆಯುವವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತ ಲಸಿಕೆ ಪಡೆಯುವವರಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳು ಲಭ್ಯ ಇವೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕಿಮ್ಸ್ ನಲ್ಲಿ 110 ವೆಂಟಿಲೇಟರ್‍ಗಳಿದ್ದು ಸದ್ಯ 30 ವೆಂಟಿಲೇಟರ್ ಲಭ್ಯ ಇವೆ. ಐ.ಸಿ.ಯು ನಲ್ಲಿರುವ ರೋಗಿಗಳಿಗೆ ಆಧ್ಯತೆ ಅನುಸಾರ ವೆಂಟಿಲೇಟರ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ್, ತಹಶೀಲ್ದಾರ್ ಶಶಿಧರ ಮಾಡ್ಯಾಳ, ದೇಶಪಾಂಡೆ ಫೌಂಡೇಷನ್ ವಿವೇಕ್ ಪವಾರ್ ಉಪಸ್ಥಿತರಿದ್ದರು.

The post 1400 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಗೆ ಕೇಂದ್ರಕ್ಕೆ ಮನವಿ – ಶೆಟ್ಟರ್ appeared first on Public TV.

Source: publictv.in

Source link