15 ದಿನಗಳಲ್ಲಿ 11 ನಾಗರಿಕರ ಹತ್ಯೆ; ಕಾಶ್ಮೀರದಲ್ಲೀಗ ಮತ್ತೊಂದು ಹೊಸ ಆತಂಕ..!

ನವದೆಹಲಿ: ಭೂಲೋಕದ ಸ್ವರ್ಗ ಅಂತಾನೇ ಕರೆಯೋ ಕಣಿವೆ ನಾಡು ಕಾಶ್ಮೀರ ಉಗ್ರರ ಉಪಟಳದಿಂದಾಗಿ ಅಕ್ಷರಶಃ ನರಕದಂತಾಗಿದೆ. ಅಮಾಯಕರ ಮೇಲೆ ಉಗ್ರರು ಅಟ್ಟಹಾಸ ಮುಂದುವರೆದಿದ್ದು, ಅನ್ಯ ರಾಜ್ಯದಿಂದ ಆಗಮಿಸಿದ್ದ ಇಬ್ಬರು ಕಾರ್ಮಿಕರನ್ನು ಬಲಿಪಡೆದಿದ್ದಾರೆ. ಕಳೆದ 15 ದಿನದಲ್ಲಿ 11 ನಾಗರಿಕರ ಉಸಿರನ್ನು ಉಗ್ರರು ಕಸಿದಿರೋದು ಕಾಶ್ಮೀರದಲ್ಲಿ ಹೊಸ ಆತಂಕ ಸೃಷ್ಟಿಸಿದೆ.

ಉಗ್ರರ ಗುಂಡಿಗೆ ಉಸಿರು ನಿಲ್ಲಿಸಿದ ಇಬ್ಬರು ಕಾರ್ಮಿಕರು
ಭಾರತದ ಕಿರೀಟ ಕಾಶ್ಮೀರದಲ್ಲಿ ಉಗ್ರರ ಗುಂಡಿನ ಸದ್ದು ಜೋರಾಗುತ್ತಲೇ ಹೋಗ್ತಿದೆ. ಅಮಾಯಕ ಜನರ ಹತ್ಯೆಯ ಸರಣಿ ಮುಂದುವರಿದಿದ್ದು, ಭಾನುವಾರ ಮತ್ತಿಬ್ಬರು ಕಾರ್ಮಿಕರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ದೂರದ ಬಿಹಾರದಿಂದ ಕಾಶ್ಮೀರಕ್ಕೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದ ಎರಡು ಅಮಾಯಕ ಜೀವಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕಣಿವೆನಾಡಿನಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 11 ನಾಗರಿಕರ ಪ್ರಾಣವನ್ನು ಉಗ್ರರು ಬಲಿ ಪಡೆದುಕೊಂಡಿದ್ದಾರೆ.

ಕಣಿವೆನಾಡಲ್ಲಿ ಉಗ್ರರ ಕ್ರೌರ್ಯ
ಬಿಹಾರದ ಇಬ್ಬರು ಕಾರ್ಮಿಕರನ್ನ ಉಗ್ರರು ಬಲಿಪಡೆದಿದ್ದಾರೆ. ಖುಲ್ಗಾಂನ ವಾನ್​ಪೋಹ್​ನಲ್ಲಿ ಬಿಹಾರದಿಂದ ಆಗಮಿಸಿದ್ದ ಕಾರ್ಮಿಕರು ವಾಸವಿದ್ದರು. ಕಾರ್ಮಿಕರ ಮನೆಗೆ ನುಗ್ಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಿಹಾರದ ರಾಜ ದೇವ್ ಹಾಗೂ ಜೋಗಿಂದರ್ ದೇವ್ ಉಗ್ರರ ಗುಂಡಿಗೆ ಬಲಿಯಾದ ಕಾರ್ಮಿಕರು. ಗುಂಡಿನ ದಾಳಿಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಅಕ್ಟೋಬರ್​ 16ರಂದೇ ಇಬ್ಬರು ಕಾರ್ಮಿಕರನ್ನು ಉಗ್ರರು ಕೊಂದಿದ್ದರು. ಬಿಹಾರದ ಓರ್ವ ಕಾರ್ಮಿಕ ಹಾಗೂ ಉತ್ತರ ಪ್ರದೇಶದ ಓರ್ವ ಕಾರ್ಮಿಕನಿಗೆ ಗುಂಡಿಕ್ಕಿದ್ದರು. ಅದರ ಮರುದಿನವೇ ಮತ್ತಿಬ್ಬರು ಕಾರ್ಮಿಕರ ಬಲಿಪಡೆದುಕೊಂಡಿದ್ದಾರೆ. ಅನ್ಯ ರಾಜ್ಯದವರನ್ನೇ ಉಗ್ರರು ಟಾರ್ಗೆಟ್ ಮಾಡಿದ್ದು, ಸರಣಿ ದಾಳಿ ನಡೆಸುತ್ತಿದ್ದಾರೆ

ಉಗ್ರರ ದಾಳಿಯನ್ನು ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ಜನರನ್ನು ತಲುಪಿ ಅವರ ಜೊತೆ ಮಾತನಾಡೋ ಅಗತ್ಯವಿದೆ ಅಂತಾ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಮೃತ ಕಾರ್ಮಿಕರ ಕುಟುಂಬಕ್ಕೆ ಬಿಹಾರ ಸಿಎಂ ಪರಿಹಾರ
ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿರೋ ಕಾರ್ಮಿಕರ ಕುಟುಂಬಗಳಿಗೆ ಸಿಎಂ ನೀತಿಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಹಾಗೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೂ ನಿತೀಶ್ ಕುಮಾರ್ ಚರ್ಚೆ ನಡೆಸಿದ್ದಾರೆ.

ಉಗ್ರರು ತಮ್ಮ ದುಷ್ಕೃತ್ಯಗಳ ಮೂಲಕ ಕಣಿವೆ ನಾಡಿನ ಶಾಂತಿ ಕದಡುತ್ತಿದ್ದಾರೆ. ಅನ್ಯ ರಾಜ್ಯದ ನಾಗರಿಕರ ಹತ್ಯೆಗಳನ್ನು ನಡೆಸುತ್ತಿದ್ದು, ಜನರ ಮನಸ್ಸಲ್ಲಿ ಭಯದ ಬೀಜ ಬಿತ್ತುತ್ತಿದ್ದಾರೆ. ಅಮಾಯಕ ಜನರ ಉಸಿರು ಕಸಿಯುತ್ತಿರೋ ರಾಕ್ಷಸರನ್ನು ಭದ್ರತಾ ಪಡೆಗಳು ಹೆಡೆಮುರಿ ಕಟ್ಟಿ ಭೂಲೋಕದ ಸ್ವರ್ಗದಲ್ಲಿ ಮತ್ತೆ ಶಾಂತಿ ಸ್ಥಾಪಿಸಬೇಕಿದೆ.

News First Live Kannada

Leave a comment

Your email address will not be published. Required fields are marked *