ಮಂಡ್ಯ: ಕೊರೊನಾ ಸೋಂಕಿನಿಂದ 15 ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ ಹಿನ್ನಲೆಯಲ್ಲಿ 5 ದಿನಗಳ ಹೆಣ್ಣು ಮಗು ಅನಾಥವಾಗಿರುವ ವಿದ್ರಾವಕ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡೇನಹಳ್ಳಿ ಗ್ರಾಮದ ನಂಜುಂಡೇಗೌಡ (45), ಮಮತಾ (31) ಮೃತ ದಂಪತಿಯಾಗಿದ್ದು, ಹದಿನೈದು ದಿನದ ಅಂತರದಲ್ಲಿ ತಂದೆ, ತಾಯಿ ಇಬ್ಬರು ಸಾವನ್ನಪ್ಪಿದ್ದಾರೆ. ಪರಿಣಾಮ ದಂಪತಿಯ ಐದು ದಿನಗಳ ಹೆಣ್ಣು ಮಗು ಅನಾಥವಾಗಿದೆ.

ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ನಂಜುಂಡೇಗೌಡ ಅವರು ಏಪ್ರಿಲ್‍ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಏಪ್ರಿಲ್ 20 ರಂದು ಚಿಕಿತ್ಸೆ ಫಲಕಾರಿಯಾಗದೆ ನಂಜುಂಡೇಗೌಡ ಸಾವನ್ನಪ್ಪಿದ್ದರು. ಬಳಿಕ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡ ಪತ್ನಿ ಮಮತಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು.

ವೈದ್ಯರ ಸಲಹೆ ಮೇರೆಗೆ ಮಮತಾ ಅವರು ಹೋಂ ಐಸೋಲೇಷನ್ ಆಗಿದ್ದರು. ಆದರೆ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 11 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ ಸಂಜೆ ಚಿಕಿತ್ಸೆ ಫಲಿಸದೆ ಮಮತಾ ಅವರು ಕೂಡ ಸಾವನ್ನಪ್ಪಿದ್ದಾರೆ.

ನಂಜುಂಡೇಗೌಡ ಹಾಗೂ ಮಮತಾ ದಂಪತಿಗೆ ಮದುವೆಯಾದ 9 ವರ್ಷಗಳ ಬಳಿಕ ಜನನವಾಗಿತ್ತು. ಆದರೆ ಮಗು ಜನಿಸಿದ ಸಂತೋಷವನ್ನು ಕ್ರೂರಿ ಕೊರೊನಾ ದೂರ ಮಾಡಿದ್ದು, ಅಮ್ಮನ ಮಡಿಲಿನಲ್ಲಿ ಇರಬೇಕಿದ್ದ ಮಗು ಅನಾಥವಾಗಿದೆ. 15 ದಿನಗಳ ಅಂತರದಲ್ಲಿ ತಮ್ಮರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post 15 ದಿನಗಳ ಅಂತರದಲ್ಲಿ ದಂಪತಿ ಸಾವು.. ಅನಾಥವಾಯ್ತು 5 ದಿನಗಳ ಹಸುಗೂಸು appeared first on News First Kannada.

Source: newsfirstlive.com

Source link