ಮೀರತ್: ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಯ ಮೃತದೇಹ ನೀಡಲು ಆಸ್ಪತ್ರೆಯ ಸಿಬ್ಬಂದಿ 15 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪರಿಣಾಮ ಮೃತದೇಹ 45 ದಿನ ಶವಾರಾಗದಲ್ಲೇ ಉಳಿದ ಘಟನೆ ಉತ್ತರ ಪ್ರದೇಶದ ಮೀರತ್ ನರದಲ್ಲಿ ಬೆಳಕಿಗೆ ಬಂದಿದೆ.

28 ವರ್ಷದ ಮಹಿಳೆಯ ಪತಿ ಕಳೆದ ಎರಡು ತಿಂಗಳ ಹಿಂದೆ ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಆದರೆ ಆತನ ಅಂತ್ಯ ಸಂಸ್ಕಾರ ಜುಲೈ 2 ರಂದು ನಡೆಸಲಾಗಿದೆ. ಈ ಕುರಿತು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿರುವ ಮಹಿಳೆ, ಪತಿಯ ಮೃತ ದೇಹ ಕೊಡಲು 15 ಸಾವಿರ ರೂಪಾಯಿ ಕೇಳಿದರು. ಅಷ್ಟು ಮೊತ್ತ ನಾನು ಎಲ್ಲಿಂದ ತಂದು ಕೊಡಲಿ. ಆದ್ದರಿಂದ ಅವರು ಮೃತದೇಹವನ್ನು ನೀಡಲಿಲ್ಲ ಎಂದು ಆರೋಪಿಸಿದ್ದಾಳೆ.

ಮೃತ ವ್ಯಕ್ತಿಯನ್ನು ನರೇಶ್ ಎಂದು ಗುರುತಿಸಲಾಗಿದ್ದು, ಏ.10 ರಂದು ಆತ ಕೊರೊನಾ ಸೋಂಕಿಗೆ ಒಳಗಾಗಿ ಹಾಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಆತನನ್ನು ಲಾಲ ಲಜಪತ್​ ರೈ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಏ.15 ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ವೇಳೆ ಆತನ ಪತ್ನಿ ಗುಡಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಸುಮಾರು 700 ಪ್ರಯಾಣ ಮಾಡಿ ಪತಿಯ ಮೃತದೇಹ ಪಡೆಯಲು ಆಗಮಿಸಿದ್ದಳು. ಆದರೆ ಮೃತದೇಹ ಕೊಡಲು 15 ಸಾವಿರ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಆದರೆ ಮಹಿಳೆಯ ಆರೋಪವನ್ನು ತಿರಸ್ಕರಿಸಿರುವ ಆಸ್ಪತ್ರೆಯ ವೈದ್ಯ ವಿದಿತ್ ದೀಕ್ಷಿತ್, ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಸತ್ಯಾಂಶವಿಲ್ಲ. ಮೃತದೇಹ ಕೊಡುವಂತೆ ಯಾರು ಮನವಿ ಮಾಡಿಲ್ಲ. ಆದ್ದರಿಂದ ಮೃತದೇಹವನ್ನು ಹಾಪುರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈಗ ಪೊಲೀಸರ ನೆರವು ಪಡೆದು ಮೃತದೇಹದ ವಾರಸುದಾರರನ್ನು ಪತ್ತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತ ಪತಿಯ ಅಂತ್ಯ ಸಂಸ್ಕಾರವನ್ನು ಆಸ್ಪತ್ರೆಯ ಸಿಬ್ಬಂದಿಯೇ ಮಾಡಿರುತ್ತಾರೆ ಎಂದು ತಿಳಿಸಿದ ಗುಡಿಯಾ ಗ್ರಾಮಕ್ಕೆ ವಾಪಸ್ ಆಗಿದ್ದರು. ಸದ್ಯ ಪೊಲೀಸರು ಆಕೆಯನ್ನು ಸಂಪರ್ಕ ಮಾಡಿ ಪತಿಯ ಮೃತದೇಹವನ್ನು ಹಸ್ತಾಂತರ ಮಾಡಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮೀರತ್ ಡಿಸಿ ಆದೇಶ ನೀಡಿದ್ದಾರೆ.

The post 15 ಸಾವಿರ ಲಂಚಕ್ಕೆ ಬೇಡಿಕೆ- 45 ದಿನ ಶವಾಗಾರದಲ್ಲೇ ಉಳಿದ ಸೋಂಕಿತನ ಮೃತದೇಹ appeared first on News First Kannada.

Source: newsfirstlive.com

Source link