17 ವರ್ಷಕ್ಕೆ ಮನೆ ಬಿಟ್ಟು ಹಿಮಾಲಯಕ್ಕೆ ಓಡಿ ಹೋಗಿದ್ದ ಶ್ರೀಕಿ.. ರಾಹುಲ್​ ಗಾಂಧಿ, ಮಲ್ಯ ವೆಬ್​​​ಸೈಟ್​​ ಕೂಡ ಹ್ಯಾಕ್​​


ರಾಜ್ಯಾದ್ಯಂತ ಸದ್ದು ಮಾಡ್ತಿರುವ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಅಂತಿಂಥ ಆಸಾಮಿಯಲ್ಲ. ಬಿಟ್​ಕಾಯಿನ್​ ಮೂಲಕ ಹಲ್​ಚಲ್​ ಎಬ್ಬಿಸಿರೋ ಶ್ರೀಕಿ ಬಾಲ್ಯದಲ್ಲೇ ಖತರ್ನಾಕ್​ ಆಗಿದ್ದ ಎನ್ನಲಾಗಿದೆ. ಸ್ಕೂಲ್ ವೆಬ್​​​​​ಸೈಟ್ ಹ್ಯಾಕ್ ಮಾಡೋ ಮೂಲಕ ತನ್ನ ಹ್ಯಾಕಿಂಗ್​ ದಂಧೆಗೆ ಮುನ್ನುಡಿ ಬರೆದಿದ್ದ, ಈತನ ಹಿಸ್ಟರಿ ಕೇಳಿದ ಎಂತವರೇ ಆದ್ರೂ ಒಮ್ಮೆ ಮೂಗಿನ ಮೇಲೆ ಬೆರಳಿಡ್ತಾರೆ.

ಶ್ರೀಕೃಷ್ಣ.. ಈ ಹೆಸರು ಕೇಳಿದ್ರೆ ಸಾಕು ಸದ್ಯ ಕೆಲ ರಾಜಕಾರಣಿಗಳು ಚಳಿಯಲ್ಲೂ ಬೆವರುತ್ತಿದ್ದಾರೆ. ಅಷ್ಟೆ ಏಕೆ ರಾಜ್ಯ ಸರ್ಕಾರವೇ ಅಲುಗಾಡಿಸುವಷ್ಟರ ಮಟ್ಟಿಗೆ ಈ ಶ್ರೀಕೃಷ್ಣನ ಲೀಲೆಗಳು ಹಲ್​ಚಲ್​ ಎಬ್ಬಿಸಿವೆ. ಇಷ್ಟು ಖತರ್ನಾಕ್​ ಆಗಿರೋ ಈ ಶ್ರೀಕಿ ಬಾಲ್ಯದಲ್ಲೇ ಮೊಬೈಲ್​, ಹ್ಯಾಕಿಂಗ್​ನ್ನೇ ಆಟ ಮಾಡ್ಕೊಂಡಿದ್ದ ಅನ್ನೋ ಮಾಹಿತಿ ತನಿಖೆಯಿಂದ ಬಹಿರಂಗ ಆಗಿದ್ಯಂತೆ.

10 ನೇ ಕ್ಲಾಸ್​ನಲ್ಲಿ ಸ್ಕೂಲ್ ವೆಬ್​​​​​ಸೈಟ್ ಹ್ಯಾಕ್, ಪಿಯುಸಿಯಲ್ಲಿ ಡ್ರಗ್​​​ ಬಳಕೆ
10ನೇ ಕ್ಲಾಸ್​ನಲ್ಲೇ ಸ್ಕೂಲ್ ವೆಬ್​​​​​ಸೈಟ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ರಮೇಶ್ ಆಗಲೇ ಡಾಲರ್​ ಮುಖ ನೋಡಿದ್ದ. ರಾಹುಲ್​ ಗಾಂಧಿ, ವಿಜಯ ಮಲ್ಯ ವೆಬ್​​​ಸೈಟ್​​ ಕೂಡ ಹ್ಯಾಕ್​​ ಮಾಡಿದ್ದ ಬಗ್ಗೆ ವಿಚಾರಣೆ ವೇಳೆ ಸಿಸಿಬಿ ಪೊಲೀಸರ ಮುಂದೆ ಶ್ರೀಕಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

10ನೇ ಕ್ಲಾಸ್​​ ಓದುತ್ತಿದ್ದಾಗಲೇ ರಿಫ್ಲೆಕ್ಷನ್ ಬೆಡ್ ಜಾವ ಬೊಟ್ಸ್ ಮೂಲಕ ಶ್ರೀಕಿ ಡಾಲರ್​ ಸಂಪಾದಿಸಿದ್ದ. ತನ್ನ ಸ್ಕೂಲ್ ವೆಬ್​​​​​ಸೈಟ್ ಹ್ಯಾಕ್ ಮಾಡಿ ಅಟೆಂಡೆನ್ಸ್ ಮತ್ತು ಮಾರ್ಕ್ಸ್ ಕಾರ್ಡ್ ತಿದ್ದುವ ಮೂಲಕ ತನಗೆ ಮತ್ತು ಸ್ನೇಹಿತರಿಗೆ ಹೆಚ್ಚು ಅಂಕ ಬರುವಂತೆ ಮಾಡಿದ್ದ. ಹ್ಯಾಕ್​ ಮಾಡಿ ಐಪಿಎಲ್​​​ ಹಾಗೂ ಪಾರ್ಟಿ, ಮೂವಿ ಟಿಕೆಟ್​ ಬುಕ್​ ಮಾಡ್ತಿದ್ದ. ಬಳಿಕ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯು ಆರಂಭಿಸಿದ್ದ ಶ್ರೀಕಿಗೆ ಆಗಲೇ ಮಾದಕವಸ್ತುಗಳ ಪರಿಚಯವಾಗಿತ್ತು. ಐಷಾರಾಮಿ ಜೀವನ ಲೀಡ್​ ಮಾಡಲು ಬೋಟ್ಸ್ ಕೋಡ್ ಬರೆದಿದ್ದ ಎನ್ನಲಾಗಿದೆ.

ಪಿಯುಸಿಯಲ್ಲಿ ಕ್ರಿಪ್ಟೋ ಕರೆನ್ಸಿ ಹ್ಯಾಕಿಂಗ್ ಆರಂಭಿಸಿದಾಗ ಅದರ ದರ 4500 ರೂಪಾಯಿ ಇತ್ತು. ಮೊದಲು ಡ್ರಗ್​​ ಖರೀದಿ ಮಾಡಲು ಬಿಟ್​ ಕಾಯಿನ್​ ಬಳಕೆ ಮಾಡಿದ್ದ. ಸಿಲ್ಕ್ ರೋಡ್ 1.0 ಅನ್ನೋ ಮಾರ್ಕೆಟ್ ಮೂಲಕ ಡ್ರಗ್ ಖರೀದಿಸಿದ್ದ ಶ್ರೀಕಿ ರೋಸ್ ಉಲ್ಬ್ರಿಟ್ ಮೂಲಕ ಅದನ್ನ ತರಿಸಿಕೊಳ್ಳುತ್ತಿದ್ದ. 2 ವರ್ಷದಲ್ಲಿ ಅನೇಕ ಬಾರಿ ಕಸ್ಟಮ್ಸ್ ಕ್ಲಿಯರ್ ಮಾಡಿ ಡ್ರಗ್ ಪಡೆಯೋ ಮೂಲಕ ಅಲ್ಲಿಂದ ಡ್ರಗ್ ಅಪರಾಧ ಜಗತ್ತಿನಲ್ಲಿ ಸಕ್ರಿಯವಾಗಿದ್ದ ಎನ್ನಲಾಗಿದೆ. ಇನ್ನು ಹ್ಯಾಕರ್ ಶ್ರೀ ಕೃಷ್ಣನ ಜನ್ಮ ಜಾಲಾಡುತ್ತಿರುವ ಪೊಲೀಸರಿಗೆ ಹಲವು ಇಂಟ್ರೆಸ್ಟಿಂಗ್​ ಮಾಹಿತಿ ಸಿಕ್ಕಿದೆ.

17 ವರ್ಷಕ್ಕೆ ಮನೆ ಬಿಟ್ಟು ಹಿಮಾಲಯಕ್ಕೆ ಓಡಿ ಹೋಗಿದ್ದ ಶ್ರೀಕಿ
ಶ್ರೀಕೃಷ್ಣ 17 ವರ್ಷಕ್ಕೆ ಸ್ನೇಹಿತ ರಿತ್ವಿಕ್ ಜೊತೆ ಮನೆ ಬಿಟ್ಟು ಹಿಮಾಲಯಕ್ಕೆ ಓಡಿ ಹೋಗಿದ್ದ. ಈ ಬಗ್ಗೆ ಸ್ನೇಹಿತ ಸಿದ್ದಾಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದಾಗ ಪೊಲೀಸರು ಮಥುರಾದಲ್ಲಿದ್ದ ಶ್ರೀಕಿಯನ್ನ ಕರೆತಂದಿದ್ದರು. ಅಲ್ಲಿಂದ ಬಂದು ಬಿಎಸ್​ಸಿ ವಿದ್ಯಾಬ್ಯಾಸವನ್ನು ಆರಂಭಿಸಿದ್ದ. ಆ ನಂತರ ಇಂಜಿನಿಯರಿಂಗ್ ಬಿಟ್ಟು ಹ್ಯಾಕಿಂಗ್ ಕಲಿಯಲು ಆಮ್‌ಸ್ಟರ್​ಡಾಮ್​ಗೆ ಹೋಗಿದ್ದನಂತೆ. ಎಎಂಎಸ್​ನಲ್ಲಿ ಬಿಟ್ ಕಾಯಿನ್ ಟ್ರೇಡಿಂಗ್ ಬಗ್ಗೆ ಅಭ್ಯಾಸ ಮಾಡಿ ಸ್ನೇಹಿತರ ಜೊತೆ ಅಕ್ರಮವಾಗಿ ಬಿಟ್ ಕಾಯಿನ್ ಎಕ್ಸ್​​ಚೇಂಜ್ ಮಾಡಲು ಆರಂಭಿಸಿದ್ದ. ಈ ಮೂಲಕ ಪ್ರತಿದಿನ 100 ಸಾವಿರ ಯೂರೋ ಸಂಪಾದಿಸುತ್ತಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದ್ಯಂತೆ.

ಒಟ್ಟಿನಲ್ಲಿ ಖತರ್ನಾಕ್​ ಶ್ರೀಕಿ ಹಿಸ್ಟರಿ ಬಲು ರೋಚಕವಾಗಿದೆ. ಆದ್ರೆ ಈತನ ಚಾಲಾಕಿತನವನ್ನು ಒಳ್ಳೆ ಕೆಲಸಕ್ಕೆ ಬಳಸದೇ ಹೀಗೆ ಅಕ್ರಮ ಕೆಲಸಕ್ಕೆ ಕೆಲಸಕ್ಕೆ ಕೈ ಹಾಕಿದ್ದು ಮಾತ್ರ ದುರಂತ.

News First Live Kannada


Leave a Reply

Your email address will not be published.