ಚಿಕ್ಕಬಳ್ಳಾಪುರ: ಕೊರೊನಾ ವಾರಿಯರ್ಸ್ ಸೇರಿದಂತೆ ವಿವಿಧ ಆಧ್ಯತಾ ವಲಯಗಳಲ್ಲಿ ಗುರುತಿಸಿರುವ ಪ್ರಸ್ತುತ 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅತೀ ಶೀಘ್ರದಲ್ಲಿಯೇ ಎಲ್ಲಾ 18 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ದಿನಸಿ ಸಾಮಗ್ರಿಗಳನ್ನು ಹಾಗೂ ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎಲ್ಲಾ ಕಾರ್ಯಕರ್ತರು ಹಾಗೂ ಹಾಲಿ ಸರ್ಕಾರ ಗುರುತಿಸಿರುವ ವಿವಿಧ ಆದ್ಯತಾ ವಲಯಗಳಲ್ಲಿನ 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲಾಗುತ್ತಿದೆ. ಉಳಿದಂತೆ ಅತೀ ಶೀಘ್ರದಲ್ಲೇ ಎಲ್ಲಾ ಸಾಮಾನ್ಯ ಜನರಿಗೂ ಲಸಿಕೆ ನೀಡಲಾಗುವುದು ಎಂದರು.

ಬ್ಲಾಕ್ ಫಂಗಸ್ ಗೆ ರೋಗಕ್ಕೆ ನೀಡಲಾಗುವ ಔಷಧಿ ಪೂರೈಕೆ 2-3 ದಿನಗಳಿಂದ ಚೆನ್ನಾಗಿ ಆಗುತ್ತಿದೆ. ನಿನ್ನೆ ಒಂದೇ ದಿನ 8750 ವೈಯಲ್ಸ್ ಔಷಧಿ ಸರಬರಾಜು ಆಗಿದ್ದು, ಈವರೆಗೆ ಒಟ್ಟಾರೆ 18 ಸಾವಿರ ವಯಲ್ಸ್ ನಷ್ಟು ಔಷಧಿ ಪೂರೈಕೆಯಾಗಿದೆ. ಈ ವಾರ ಇನ್ನೂ ಹೆಚ್ಚು ಸರಬರಾಜು ಆಗಲಿದೆ. ಇದಲ್ಲದೆ ಬ್ಲಾಕ್ ಫಂಗಸ್ ರೋಗ ನಿಯಂತ್ರಣಕ್ಕೆ ಎಲ್ಲಾ ರೀತಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ಜತೆಗೆ ಉಚಿತವಾಗಿ ಔಷಧಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ಸಂಭವಿತ ಕೊರೊನಾ ಮೂರನೇ ಅಲೆ ಸಂಬಂಧಿಸಿದಂತೆ ಡಾ.ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಂದು ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಸುಮಾರು 12-13 ಜನ ಹೆಸರಾಂತ ತಜ್ಞ ವೈದ್ಯರು ಇದ್ದು, ಇವರು 0-12-18 ವರ್ಷದವರಿಗೆ ಸಂಭವಿತ ಕೋವಿಡ್ 3ನೇ ಅಲೆ ಬಂದರೆ ಅದು ಯಾವ ರೀತಿ ಬಾಧಿಸಲಿದೆ. ಅದಕ್ಕೆ ಮುನ್ನೆಚ್ಚರಿಕೆ ಹೇಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಬಂದರೆ ಯಾವ ರೀತಿಯ ಚಿಕಿತ್ಸೆ ನೀಡಬೇಕು. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಏನೇನು ಕ್ರಮಗಳು, ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗೆಗಿನ ಸಂಪೂರ್ಣ ವರದಿಯನ್ನು ನೀಡಲಿದ್ದಾರೆ. ಆ ಬಳಿಕ ಅದರಂತೆ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇದೇ ಸಂದರ್ಭದಲ್ಲಿ ಪಿಎಚ್ ಸಿ ಆವರಣದಲ್ಲಿ ಸಚಿವ ಸುಧಾಕರ್ ಅವರು ಗಿಡ ನೆಟ್ಟರು. 34 ಮಂದಿ ಆಶಾ ಕಾರ್ಯಕರ್ತೆಯರಿಗೆ ಸಚಿವರು ಆಹಾರ ಕಿಟ್ ಮತ್ತು ಸಹಾಯಧನವನ್ನು ಸಾಂಕೇತಿಕವಾಗಿ ವಿತರಿಸಿದರು. ಇದೇ ವೇಳೆ ಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲೂ ಸಚಿವ ಸುಧಾಕರ್ ಅವರು ಉಚಿತ ಆಹಾರ ದಿನಸಿ ಕಿಟ್ ಹಾಗೂ ಸಹಾಯಧನ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಗೌರಿಬಿದನೂರು ತಹಸೀಲ್ದಾರ್ ಶ್ರೀನಿವಾಸ್, ಇಒ ಮುನಿರಾಜು ಹಾಗೂ ಆರೋಗ್ಯ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

The post 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಅತೀ ಶೀಘ್ರದಲ್ಲೇ ಲಸಿಕೆ: ಸುಧಾಕರ್ appeared first on Public TV.

Source: publictv.in

Source link