ಕೊರೊನಾ ಅನ್ನೋ ಚೀನಾ ಮೇಡ್‌ ವೈರಸ್‌ನ ಭಯಂಕರ ಅಲೆಗಳನ್ನು ಈಗಾಗಲೇ ಜಗತ್ತಿನ ನಾನಾ ದೇಶಗಳು ಎದುರಿಸಿ ಆಗಿದೆ. ಇದರ ಬೆನ್ನಲ್ಲೇ ಈಗ ಚೀನಾ ಮಂಕಿ ಬಿ ಎಂಬ ಹೊಸ ವೈರಸ್​ ಆತಂಕ ಹುಟ್ಟು ಹಾಕಿದೆ. ಈ ಹೊಸ ವೈರಸ್‌ಗೆ ಈಗಾಗಲೇ ಅಲ್ಲೊಂದು ಸಾವು ಕೂಡಾ ಸಂಭವಿಸಿದೆ. ಇದರಿಂದ ಎಲ್ಲಿ ಮತ್ತೊಮ್ಮೆ ಸಂಕಷ್ಟ ಶುರುವಾಗುತ್ತೋ ಎಂಬ ಆತಂಕ ಮನೆಮಾಡಿದೆ.

ಮಹಾಮಾರಿ ಕೊರೊನಾ ವೈರಸ್​ಗೆ ಜನ್ಮ ನೀಡಿದ ಅಪಖ್ಯಾತಿಗೆ ಒಳಗಾಗಿರುವ ಚೀನಾದಲ್ಲಿ ಮತ್ತೊಂದು ಹೊಸ ವೈರಸ್‌ ಹುಟ್ಟಿಕೊಂಡಿದೆ. ಮಂಕಿ ಬಿ ವೈರಸ್​ ಎಂಬ ಹೊಸ ವೈರಾಣು ಚೀನಾದಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಒಂದು ಸಾವು ಕೂಡಾ ಸಂಭವಿಸಿರೋದು ಜಗತ್ತಿನಾದ್ಯಂತ ಮತ್ತೊಮ್ಮೆ ಭಯ ಹುಟ್ಟಿಸಿದೆ.

ಎರಡು ತಿಂಗಳುಗಳ ಹಿಂದೆ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ಮಾಡಿದ್ರು

ಚೀನಾದಲ್ಲಿ ಈಗ ಹೊಸ ವೈರಸ್​ ಮಂಕಿ ಬಿ ಕಾಣಿಸಿಕೊಂಡಿದ್ದು, ಬೀಜಿಂಗ್​ ಮೂಲದ ಪಶುವೈದ್ಯರೊಬ್ಬರನ್ನು ಮೊದಲ ಬಲಿ ಪಡೆದಿದೆ. ವೈರಸ್​ಗೆ ಬಲಿಯಾಗಿರುವ ಪಶುವೈದ್ಯರು ಎರಡು ತಿಂಗಳುಗಳ ಹಿಂದೆ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ಮಾಡಿದ್ರು. ಪರೀಕ್ಷೆ ನಡೆಸಿದ ಒಂದು ತಿಂಗಳ ನಂತರ ಅವರಲ್ಲಿ ವಾಕರಿಕೆ, ವಾಂತಿಯ ರೋಗ ಲಕ್ಷಣ ಕಾಣಿಸಿಕೊಂಡಿವೆ. ಈ ಲಕ್ಷಣಗಳ ಜೊತೆಗೆ ಜ್ವರ, ನರಸಂಬಂಧಿ ತೊಂದರೆ ಹಾಗೂ ತಲೆನೋವಿನಂತಹ ಲಕ್ಷಣಗಳು ಜೊತೆಯಾಗಿದ್ದು ಸೋಂಕಿತ ವೈದ್ಯ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೊನೆಗೆ ಯಾವುದೇ ಚಿಕಿತ್ಸೆ ಫಲಿಸದೇ ಮೇ 27ರಂದು ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಾಣಿಗಳ ಬಗ್ಗೆ ಸಂಶೋಧನೆ ನಡೆಸುವವರಿಗೆ ಈ ಸೋಂಕು ಕಾಣಿಸಿಕೊಳ್ಳಬಹುದು

ತಜ್ಞರ ಪ್ರಕಾರ ಈ ಮಂಕಿ ಬಿ ವೈರಸ್​ ಹೆಚ್ಚಾಗಿ ಪಶುವೈದ್ಯರು, ಅರಣ್ಯದೊಂದಿಗೆ ನಿಕಟ ಸಂಪರ್ಕ ಹೊಂದಿರುವವರಿಗೆ, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ, ಪ್ರಾಣಿಗಳ ಜೊತೆ ಹೆಚ್ಚು ಒಡನಾಟ ಇರುವವರಿಗೆ ಹಾಗೂ ಪಶು ಪ್ರಾಯೋಗಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ, ಪ್ರಾಣಿಗಳ ಬಗ್ಗೆ ಸಂಶೋಧನೆ ನಡೆಸುವವರಿಗೆ ಈ ಸೋಂಕು ಕಾಣಿಸಿಕೊಳ್ಳಬಹುದಾಗಿದೆ.

ಮಂಕಿ ಬಿ ವೈರಸ್‌ ಚೀನಾದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ

ಹಾಗಂತ ಈ ಮಂಕಿ ಬಿ ವೈರಸ್‌ ಚೀನಾದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ. 1933ರಲ್ಲೂ ಪ್ರಯೋಗಾಲಯದ ಕೆಲಸಗಾರನೊಬ್ಬನಿಗೆ ಸೋಂಕು ತಗುಲಿತ್ತೆನ್ನಲಾಗಿದೆ. ಕೋತಿ ಕಚ್ಚಿದ್ದರಿಂದ ವ್ಯಕ್ತಿಗೆ ಸೋಂಕು ತಗುಲಿತ್ತು. 15 ದಿನಗಳ ಬಳಿಕ ಆತ ಮೃತಪಟ್ಟಿದ್ದ. ತಜ್ಞರ ಪ್ರಕಾರ ಗಾಯವಾದ ಜಾಗದಲ್ಲಿ ಕೋತಿ ಕಚ್ಚಿದರೆ, ಉಗುರುಗಳಿಂದ ಪರಚಿದ್ರೆ,ಆ ಸಮಯದಲ್ಲಿ ಕೋತಿಯ ದ್ರವದ ಅಂಶ ವ್ಯಕ್ತಿಯ ದೇಹದಲ್ಲಿ ಸೇರಿದ್ರೆ, ಮಂಕಿ ಬಿ ಸೋಂಕು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಗಾಯವನ್ನು ಸೋಪಿನಿಂದ ಅಥವಾ ಅಯೋಡಿನ್​ನಿಂದ ತೊಳೆದು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಂಕಿ ಬಿ ಸೋಂಕಿತನ ದ್ರವ ರೂಪದ ಅಂಶ ಮತ್ತೊಬ್ಬ ವ್ಯಕ್ತಿಯ ದೇಹ ಸೇರಿದ್ರೆ ಒಬ್ಬರಿಂದ ಒಬ್ಬರಿಗೆ ಈ ವೈರಸ್‌ ಹರಡಬಲ್ಲದು.

ಸೋಂಕು ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಅಗತ್ಯ

ಸೋಂಕು ತಗುಲಿದ ಒಂದು ತಿಂಗಳೊಳಗೆ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಳ್ತವೆ. ಈ ಸೋಂಕು ದೇಹದ ನರ ಮಂಡಲದ ಮೇಲೆ ನೇರ ಪರಿಣಾಮ ಬೀರಿ ಹಾನಿ ಮಾಡುತ್ತದೆ. ಜೊತೆಗೆ ಸ್ನಾಯು ನೋವು, ತಲೆನೋವು, ಹೊಟ್ಟೆನೋವು, ಬೆನ್ನು ನೋವು ಕಾಣಿಸಿಕೊಂಡು ಕೊನೆಗೆ ವ್ಯಕ್ತಿಯನ್ನು ಬಲಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸೋಂಕು ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಅಗತ್ಯವಾಗಿರುತ್ತದೆ. ಈ ಸೋಂಕಿಗೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಔಷಧಿಯೂ ಇಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊರೋನಾ ಮಧ್ಯೆಯೇ ಕೆಲ ತಿಂಗಳ ಹಿಂದೆ ಇದೇ ಚೀನಾದಲ್ಲಿ ಮಂಕಿಪಾಕ್ಸ್​ ಸೋಂಕು ಕಾಣಸಿಕೊಂಡಿತ್ತು. ಇದೀಗ ಈ ಮಂಕಿ ಬಿ ವೈರಸ್​ ಕಾಣಿಸಿಕೊಂಡಿದೆ. 20 ದಶಕಗಳ ನಂತರ ಮತ್ತೆ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ. ಈ ವೈರಸ್‌ ಜಗತ್ತನ್ನ ಮತ್ತೊಮ್ಮೆ ನರಕ ಮಾಡದಿದ್ದರೆ ಸಾಕು.

The post 1933 ರಲ್ಲಿ ಕಾಣಿಸಿಕೊಂಡಿದ್ದ ಮಂಕಿ ವೈರಸ್ ಚೀನಾಗೆ ಮತ್ತೆ ಎಂಟ್ರಿ.. ಬೆಚ್ಚಿಬಿದ್ದ ವೈದ್ಯರು appeared first on News First Kannada.

Source: newsfirstlive.com

Source link