1947ರ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆಯಂತೆ: ನಟಿ ಕಂಗನಾ ರನೌತ್ ಹೇಳಿಕೆಗೆ ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲ | 1947 freedom is alms Veteran actor Vikram Gokhale supports Kangana Ranaut Remark


1947ರ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆಯಂತೆ: ನಟಿ ಕಂಗನಾ ರನೌತ್ ಹೇಳಿಕೆಗೆ ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲ

ನಟ ವಿಕ್ರಮ್ ಗೋಖಲೆ ಮತ್ತು ನಟಿ ಕಂಗನಾ ರನೌತ್

ಪುಣೆ: ಭಾರತವು 1947ರಲ್ಲಿ ಭಿಕ್ಷೆಯ ರೂಪದಲ್ಲಿ ಸ್ವಾತಂತ್ರ್ಯ ಪಡೆಯಿತು ಎಂಬ ನಟಿ ಕಂಗನಾ ರನೌತ್ ಹೇಳಿಕೆಯನ್ನು ಹಿರಿಯ ನಟ ವಿಕ್ರಮ್ ಗೋಖಲೆ ಸಮರ್ಥಿಸಿಕೊಂಡಿದ್ದಾರೆ. ತಮಗೆ 75 ವರ್ಷ ತುಂಬಿದ ಪ್ರಯುಕ್ತ ಪುಣೆಯ ಬ್ರಾಹ್ಮಣ ಮಹಾಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಂಗನಾರ ಹೇಳಿಕೆಗಳನ್ನು ನಾನು ಒಪ್ಪುತ್ತೇನೆ’ ಎಂದರು. ‘ನಾವು ಸ್ವಾತಂತ್ರ್ಯ ಪಡೆದದ್ದು ಭಿಕ್ಷೆಯಿಂದಲೇ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕು ಎಂದು ಹೋರಾಟಗಾರರು ಶ್ರಮಿಸಿದ್ದರು. ಆದರೆ ಆ ಕಾಲದ ದೊಡ್ಡವರು ಅವರನ್ನು ಉಳಿಸಲು ಪ್ರಯತ್ನ ಪಡಲಿಲ್ಲ. ಈ ಬಗ್ಗೆ ನಾನು ಸಾಕಷ್ಟು ಓದಿಕೊಂಡಿದ್ದೇನೆ. ಕಂಗನಾ ಏನು ಹೇಳಿದ್ದಾರೋ ಅದಕ್ಕೆ ನನ್ನ ಸಮ್ಮತಿಯಿದೆ ಎಂದು ಮತ್ತೊಮ್ಮೆ ಕಂಗನಾ ರನೌತ್​ರ ಹೇಳಿಕೆಯನ್ನು ಸಮರ್ಥಿಸಿದರು.

ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ಗೋಖಲೆ, ಶಿವಸೇನೆ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ದೂರ ಸರಿಯಬಾರದಿತ್ತು ಎಂದೂ ಅಭಿಪ್ರಾಯಪಟ್ಟರು. ದೇಶವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಹೋರಾಡಬೇಕಿತ್ತು ಎಂದು ಹೇಳಿದರು.

ಬಾಳಾಸಾಹೇಬ್ ಠಾಕ್ರೆ ಅವರ ನಿಧನದ ನಂತರ ರಾಜಕೀಯ ಆಟದ ನಿಯಮಗಳೇ ಬದಲಾಗಿವೆ. ಮರಾಠಿ ರಾಜಕಾರಣಿಗಳು ಶಕ್ತಿಹೀನರಂತೆ ಕಾಣಿಸುತ್ತಾರೆ. ರಾಜ್ಯದ ಜನರು ಏನು ಯೋಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಿಗೆ ಹೆಚ್ಚು ತಿಳಿದಿಲ್ಲ. ಆದರೆ ರಾಜ್ಯವ್ಯಾಪಿ ಓಡಾಡುವ ಮತ್ತು ಸಾಮಾನ್ಯ ಜನರೊಂದಿಗೆ ನಿಯಮಿತ ಸಂಪರ್ಕದಲ್ಲಿರುವ ನನಗೆ ಜನರ ಆಲೋಚನೆ ಏನು ಎಂಬುದು ತಿಳಿದಿದೆ. ಶಿವಸೇನೆ ಮತ್ತು ಬಿಜೆಪಿ ಬೇರೆಯಾಗಿದ್ದು ತಮಗೆ ಇಷ್ಟವಾಗಿಲ್ಲ ಎಂದೇ ಹಲವರು ಅಭಿಪ್ರಾಯಪಡುತ್ತಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಒಗ್ಗೂಡಿ ದೇಶವನ್ನು ಅಪಾಯದಿಂದ ಕಾಪಾಡಬೇಕಿದೆ ಎಂದು ಹೇಳಿದರು. ಆದರೆ ಆ ಅಪಾಯ ಏನು ಎಂದು ವಿವರಿಸಲಿಲ್ಲ.

ಎರಡೂ ಕೇಸರಿ ಪಕ್ಷಗಳನ್ನು ಒಗ್ಗೂಡಿಸಲು ನಾನು ನಿರಂತರ ಶ್ರಮಿಸುತ್ತಿದ್ದೇನೆ ಎಂದು ಗೋಖಲೆ ನುಡಿದರು. ಶಿವಸೇನೆಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಬಿಟ್ಟುಕೊಡಲು ಒಪ್ಪಲಿಲ್ಲವೇಕೆ ಎಂದು ದೇವೇಂದ್ರ ಫಡಣವೀಸ್ ಅವರನ್ನು ಪ್ರಶ್ನಿಸಿದೆ. ಅದೊಂದು ತಪ್ಪು ನಿರ್ಧಾರವಾಗಿತ್ತು ಎಂದು ಫಡಣವೀಸ್ ನನಗೆ ಉತ್ತರಿಸಿದ್ದರು. ಅವರಿಬ್ಬರ ನಡುವೆ ಏನೆಲ್ಲಾ ಆಯಿತು ಎಂಬುದನ್ನು ಇನ್ನಾದರೂ ಎರಡೂ ಪಕ್ಷಗಳು ಜನರಿಗೆ ತಿಳಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಇಬ್ಬರೂ ಮುಂದುವರಿಯಬೇಕು. ನೀವು ಜನರಿಗೆ ವಂಚಿಸಿದರೆ ಅವರು ನಿಮ್ಮನ್ನು ಚೆನ್ನಾಗಿ ಶಿಕ್ಷಿಸುತ್ತಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿಯೂ ನಾನು ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡಣವೀಸ್ ಅವರನ್ನು ಖಾಸಗಿಯಾಗಿ ಭೇಟಿಯಾಗುತ್ತೇನೆ. ನೀವು ಪಕ್ಷದ ಬೆಂಬಲಿಗರಾಗಿದ್ದರೆ ದೇಶವನ್ನು ಉಳಿಸಲು ಏನಾದರೂ ಮಾಡಲೇಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Kangana Ranaut: 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಭಿಕ್ಷೆ, ಸ್ವಾತಂತ್ರ್ಯ ಲಭಿಸಿದ್ದು 2014ರಲ್ಲಿ; ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ
ಇದನ್ನೂ ಓದಿ: 1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

TV9 Kannada


Leave a Reply

Your email address will not be published. Required fields are marked *