ಪ್ರಾತಿನಿಧಿಕ ಚಿತ್ರ
ಭಾರತ ತಂಡ, ಅತಿಥಿ ನ್ಯೂಜಿಲೆಂಡ್ಗೆ ಆತಿಥ್ಯ ನೀಡಿ ಅವರನ್ನು ಬರಿಗೈಯಲ್ಲಿ ತಮ್ಮ ದೇಶಕ್ಕೆ ಹಿಂದಿರುಗಿಸಿದೆ. ಮೊದಲು ಟಿ20 ಸರಣಿಯನ್ನು ವಶಪಡಿಸಿಕೊಂಡ ಟೀಂ ಇಂಡಿಯಾ ನಂತರ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತ್ತು. ಕಾನ್ಪುರ ಟೆಸ್ಟ್ ಡ್ರಾಗೊಂಡ ನಂತರ ಮುಂಬೈ ಟೆಸ್ಟ್ನಲ್ಲಿ ಟೀಂ ಇಂಡಿಯಾ ದಾಖಲೆಯ 372 ರನ್ಗಳ ಜಯ ಸಾಧಿಸಿದೆ. ಈ ಗೆಲುವು ಭಾರತ ತಂಡದ ಅಭಿಮಾನಿಗಳಿಗೆ ಮತ್ತೊಮ್ಮೆ ಸಂಭ್ರಮಿಸುವ ಅವಕಾಶ ನೀಡಿದೆ. ಈ ಗೆಲುವಿನಿಂದ 2021ರ ಟೆಸ್ಟ್ ಚಾಂಪಿಯನ್ಶಿಪ್ನ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿದೆ ಎಂದು ಅಭಿಮಾನಿಗಳ ಪಾಳಯ ಮಾತನಾಡಿಕೊಳ್ಳುತ್ತಿದೆ.
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋಲು
2021ರಲ್ಲಿ ಸೌತಾಂಪ್ಟನ್ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನ ವಿಶ್ವ ಚಾಂಪಿಯನ್ ಆಗುವ ಉತ್ತಮ ಅವಕಾಶವನ್ನು ಭಾರತೀಯ ಕ್ರಿಕೆಟ್ ತಂಡ ಕಳೆದುಕೊಂಡಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮಳೆ ಪೀಡಿತ ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಆಟ ತೋರಿಸಿದರೂ ನ್ಯೂಜಿಲೆಂಡ್ ಜಯಗಳಿಸಿತು. ಈ ಸೋಲಿನ ಹತಾಶೆಯಿಂದ ಬಳಲುತ್ತಿದ್ದ ಭಾರತ, ಟಿ20 ಹಾಗೂ ಟೆಸ್ಟ್ ಸರಣಿಗೆಂದು ಭಾರತಕ್ಕೆ ಬಂದಿದ್ದ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಎರಡೂ ಸರಣಿಯಲ್ಲೂ ವೈಟ್ವಾಷ್ ಮಾಡಿದೆ. ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದೆದುರು ಅಬ್ಬರಿಸಿದ ಕಿವೀಸ್ ಪಡೆ, ಭಾರತದಲ್ಲಿ ಟೀಂ ಇಂಡಿಯಾ ಎದುರು ಯಾವುದೇ ಪ್ರತಿರೋಧ ತೋರದೆ ಮಂಡಿಯೂರಿದೆ.
ಹೀಗೊಂದು ಕಾಕತಾಳಿಯ
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಮಕಾಡೆ ಮಲಗಿಸಿದ ಕಿವೀಸ್ ಪಡೆ ಭಾರತ ಪ್ರವಾಸದಲ್ಲಿ ಯಾವ ಸರಣಿಯನ್ನೂ ಗೆಲ್ಲಲಾಗದೆ ಬರಿಗೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ 1983ರ ವಿಶ್ವಕಪ್ ಮತ್ತು ಅನಂತರದ ವೆಸ್ಟ್ ಇಂಡೀಸ್ ಭಾರತ ಪ್ರವಾಸವೂ ಕಾಕತಾಳಿಯವೆಂಬಂತೆ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಆ ಘಟನೆಯ ಸಂಪೂರ್ಣ ಚಿತ್ರಣ ಹೀಗಿದೆ.
ವೀಂಡಿಸ್ ಮಣಿಸಿ ವಿಶ್ವಕಪ್ ಎತ್ತಿಹಿಡಿದಿದ್ದ ಭಾರತ
60 ಓವರ್ಗಳ ಪಂದ್ಯದಲ್ಲಿ ವಿಂಡೀಸ್ ಕ್ಯಾಪ್ಟನ್ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಕೃಷ್ಣಮಾಚಾರಿ ಶ್ರೀಕಾಂತ್(38) ಅವರ ಉಪಯುಕ್ತ ರನ್ ನೆರವಿನಿಂದ ಭಾರತ ಕೇವಲ 183 ರನ್ಗಳನ್ನು ಕಲೆಹಾಕಿತು. ಆಗಲೂ ವಿಂಡೀಸ್ ಸುಲಭ ಜಯ ಸಾಧಿಸಲಿದೆ ಎಂದೇ ಲೆಕ್ಕಾಚಾರ ಹಾಕಿದ್ದರು. ಆದರೆ ಕಪಿಲ್ ಪಡೆ ಕಳೆದುಕೊಳ್ಳುವುದು ಏನು ಇಲ್ಲ ಎನ್ನುವಂತೆ ಮೈಚಳಿ ಬಿಟ್ಟು ಬೌಲಿಂಗ್ ಮಾಡಲು ಆರಂಭಿಸಿತು. ಪರಿಣಾಮ ವಿಂಡೀಸ್ ನಿಗದಿತ 60 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕಪಿಲ್ ಪಡೆ ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಎತ್ತಿ ಹಿಡಿದು ಕುಣಿದು ಕುಪ್ಪಳಿಸಿತು.
ತಾಯ್ನಾಡಲ್ಲೇ ಕೆರಿಬಿಯನ್ನರ ಎದುರು ಹೀನಾಯ ಸೋಲೂಂಡಿದ್ದ ಭಾರತ
ಜೂನ್ 25 ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದು ಚಾಂಪಿಯನ್ಗಳೆಂದು ಮೆರೆಯುತ್ತಿದ್ದ ಭಾರತ ತನ್ನ ಫೈನಲ್ ಎದುರಾಳಿ ವೀಂಡಿಸ್ ತಂಡವನ್ನು ಅದೇ ವರ್ಷ ಆಕ್ಟೋಬರ್ ತಿಂಗಳಲ್ಲಿ ಏಕದಿನ ಸರಣಿಯ ಸಲುವಾಗಿ ಭಾರತಕ್ಕೆ ಆಹ್ವಾನಿಸಿತ್ತು. 5 ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಕೆರಿಬಿಯನ್ ತಂಡ ಭಾರತವನ್ನು ಹೇಳ ಹೆಸರಿಲ್ಲದಂತೆ ಸೋಲಿಸಿತ್ತು. ಮೊದಲ ಪಂದ್ಯದಲ್ಲಿ ವೀಂಡಿಸ್ಗೆ 28 ರನ್ಗಳ ಜಯ ಸಿಕ್ಕರೆ, 2ನೇ ಪಂದ್ಯದಲ್ಲಿ 4 ವಿಕೆಟ್ಗಳ ಜಯ ದಾಖಲಿಸಿತು. 3ನೇ ಪಂದ್ಯದಲ್ಲಾದರೂ ಭಾರತ ಪುಟಿದೇಳುತ್ತದೆ ಎಂದುಕೊಂಡಿದ್ದರೆ ಅದೂ ಕೂಡ ಸುಳ್ಳಾಯಿತು. 3ನೇ ಪಂದ್ಯದಲ್ಲೂ ಕೆರಿಬಿಯನ್ ಪಡೆ 8 ವಿಕೆಟ್ಗಳ ಜಯ ಸಾಧಿಸಿತು. ಹಾಗೆಯೇ 4ನೇ ಮತ್ತು 5ನೇ ಪಂದ್ಯದಲ್ಲೂ ವೀಂಡಿಸ್ ದಂತಕಥೆಗಳೆ ಗೆಲುವಿನ ನಗೆ ಬೀರಿದ್ದರು. ವಿಶ್ವಕಪ್ ಫೈನಲ್ನಲ್ಲಿ ಕ್ರಿಕೆಟ್ ದೈತ್ಯರನ್ನು ಮಣಿಸಿ ಕಪ್ ಎತ್ತಿ ಹಿಡಿದಿದ್ದ ಭಾರತ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿತ್ತು.