ಇಂದು ಸಿಎಂ ದೆಹಲಿ ಪ್ರಯಾಣ
ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ 100ದಿನ ಪೂರೈಸಿದ ಬೆನ್ನಲ್ಲೇ ಇಂದು ದೆಹಲಿಗೆ ಹಾರಲಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ದೆಹಲಿಗೆ ಬೊಮ್ಮಾಯಿ 6ನೇ ಬಾರಿ ಭೇಟಿ ನೀಡ್ತಿದ್ದಾರೆ. ಈಗಾಗ್ಲೆ ಹೈಕಮಾಂಡ್ ನಾಯಕರ ಭೇಟಿಗೂ ಸಮಯ ನಿಗದಿಯಾಗಿದೆ. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಮುಂಬರುವ ಪರಿಷತ್ ಚುನಾವಣೆ ಮತ್ತು 2023ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಹೇಗಿದೆ ಎಂಬ ಮಾಹಿತಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕರಾಟೆಯಲ್ಲಿ ವಿಶ್ವದಾಖಲೆ ಬರೆದ ಬೆಳಗಾವಿ ಬಾಲಕ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಮೂಲದ ಕೇವಲ 6 ವರ್ಷದ ಬಾಲಕ ಕರಾಟೆಯಲ್ಲಿ ವಿಶ್ವದಾಖಲೆ ಬರೆದಿದ್ದಾನೆ. ಸುಶೀಲ್ ಕುಮಾರ ವಿವೇಕ ಹೆಗಡೆ ಕೇವಲ 60 ಸೆಕೆಂಡುಗಳಲ್ಲಿ 305 ಕರಾಟೆ ಪಂಚ್ ಮಾಡುವ ಮೂಲಕ ದಾಖಲೆ ಬರೆದಿದ್ದಾನೆ. ಈ ಹಿಂದೆ ಇದೆ ರೀತಿ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ವ್ಯಕ್ತಿಯ ದಾಖಲೆಯನ್ನು 6 ವರ್ಷದ ಬಾಲಕ ಮುರಿದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.
‘ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಲ್ಲ’
ಕರ್ನಾಟಕದ ಈರಪ್ಪ ಮುರಗಣ್ಣನವರ್ ಕೇಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಸಂತ್ರಸ್ತರು ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗಲ್ಲ ಅಂತ ಹೇಳಿದೆ. ಖಾನಾಪುರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ರು. ಹೀಗಾಗಿ ಅಪರಾಧಿಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅಪರಾಧಿ ಈರಪ್ಪ ಸುಪ್ರೀಂಕೋರ್ಟ್ಗೆ ಗಲ್ಲು ಶಿಕ್ಷೆ ಪರಿವರ್ತಿಸುವಂತೆ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ.
ರಾಜ್ಯಪಾಲರನ್ನ ಭೇಟಿಯಾದ ವಾಂಖೆಡೆ ಕುಟುಂಬ
NCB ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕುಟುಂಬ ತಡರಾತ್ರಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿಯಾಗಿದೆ. ಸಮೀರ್ ತಂದೆ, ಪತ್ನಿ ಮತ್ತು ಸಹೋದರಿ ರಾಜ್ಯಪಾಲರನ್ನು ಭೇಟಿ ಮಾಡಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಖಡೆ ಮೇಲಿನ ಆರೋಪ ಮತ್ತಿತರ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಮೀರ್ ತಂದೆ ಜ್ಞಾನದೇವ್ ವಾಂಖೆಡೆ ಹಾಗೂ ಪತ್ನಿ ಕ್ರಾಂತಿ ರೆಡ್ಕರ್, ಎಲ್ಲವೂ ಸರಿ ಹೋಗತ್ತೆ ಅಂತ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದಿದ್ದಾರೆ.
‘96 ರಾಷ್ಟ್ರಗಳಿಂದ ಕೋವಿಶೀಲ್ಡ್, ಕೊವ್ಯಾಕ್ಸಿನ್ಗೆ ಮಾನ್ಯತೆ’
ಭಾರತದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ಗೆ ಸುಮಾರು 96 ರಾಷ್ಟ್ರಗಳು ಮಾನ್ಯತೆ ನೀಡಿವೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ವಿವಿಧ ದೇಶಗಳ 8 ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದ್ರಲ್ಲಿ ಭಾರತದ ಕೋವ್ಯಾಕ್ಸಿನ್, ಕೋವಿಶೀಲ್ಡ್ ಸ್ಥಾನ ಪಡೆದ ಬೆನ್ನಲ್ಲೇ 96 ರಾಷ್ಟ್ರಗಳೂ ಎರಡೂ ಲಸಿಕೆಗಳಿಗೆ ಮಾನ್ಯತೆ ನೀಡಿವೆ.
ಧ್ವಂಸಗೊಂಡಿದ್ದ ದೇವಾಲಯ ಪುನರ್ ನಿರ್ಮಿಸಿದ ಪಾಕ್
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಧ್ವಂಸಗೊಳಿಸಲಾಗಿದ್ದ ಶ್ರೀ ಪರಮಹಂಸ ಜಿ ಮಹಾರಾಜ್ ದೇವಾಲಯವನ್ನು ಪುನರ್ ನಿರ್ಮಿಸಲಾಗಿದೆ. ಅಚ್ಚರಿ ಎಂಬಂತೆ ದೇವಾಲಯವನ್ನು ಖುದ್ದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಪಾಕ್ ಸಂವಿಧಾನದ ಪ್ರಕಾರ, ಎಲ್ಲ ಧರ್ಮದ ಜನರಂತೆಯ ಹಿಂದೂಗಳಿಗೂ ಸಮಾನ ಹಕ್ಕುಗಳಿವೆ ಅಂತ ಹೇಳಿದ್ದಾರೆ. ಕಳೆದ ವರ್ಷ ಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ ಪಕ್ಷದ ಕಾರ್ಯಕರ್ತರು ದೇವಾಲಯವನ್ನು ಧ್ವಂಸಗೊಳಿಸಿದ್ದರು.
ಇಂದು ಭಾರತದಿಂದ NSA ಸಭೆ, ಪಾಕ್ ಪ್ರತ್ಯೇಕ ಸಭೆ
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಬೆಳವಣಿಗೆ ಬಗ್ಗೆ ಚರ್ಚಿಸಲು ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಇಂದು ನಡೆಯಲಿದೆ. ಈ ಸಭೆಗೆ ಇರಾನ್, ರಷ್ಯಾ, ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ 7 ಮಧ್ಯ ಏಷ್ಯಾದ ದೇಶಗಳು ಭಾಗಿಯಾಗಲಿವೆ. ಸಭೆಯಿಂದ ಪಾಕಿಸ್ತಾನ ಹಾಗೂ ಚೀನಾ ಹಿಂದುಳಿದಿದ್ದು ಭಾರತಕ್ಕೆ ಠಕ್ಕರ್ ಕೊಡಲೆಂದು ಪಾಕಿಸ್ತಾನ ನಾಳೆ ಮತ್ತೊಂದು ಸಭೆ ಕರೆದಿದೆ.
199 ದಿನಗಳ ನಂತರ ಭೂಮಿಗೆ ಬಂದಿಳಿದ ಗಗನಯಾತ್ರಿಗಳು
ದೀರ್ಘಾವಧಿಯ ಅಧ್ಯಯನಕ್ಕಾಗಿ ಏಪ್ರಿಲ್‌ನಲ್ಲಿ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ನಾಲ್ವರು ಗಗನಯಾತ್ರಿಗಳು ಮತ್ತೆ ಭೂಮಿಗೆ ಹಿಂದಿರುಗಿದ್ದಾರೆ. ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಕಕ್ಷೆಯಿಂದ ಬೇರ್ಪಟ್ಟ, ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಬರೋಬ್ಬರಿ 199 ದಿನಗಳ ನಂತರ NASA-SpaceX ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಗಗನಯಾತ್ರಿಗಳು ಫ್ಲೋರಿಡಾದ ಕರಾವಳಿಯಲ್ಲಿ ತಡರಾತ್ರಿ ಬಂದಿಳಿದಿದ್ದಾರೆ.
ಮನುಷ್ಯನನ್ನು ಅರ್ಥೈಸಿಕೊಂಡು ಡ್ರೋಣ್ ಕೆಲಸ
ಮನುಷ್ಯನ ಮನಸ್ಥಿತಿಯನ್ನ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬಲ್ಲ ಡ್ರೋನ್ ಅನ್ನ ಬ್ರಿಟಿಷ್ ಡಿಫೆನ್ಸ್ ಕಂಪೆನಿ ಕಂಡುಹಿಡಿದಿದೆ. ಕಂಪ್ಯೂಟರ್ ಮುಂದೆ ಕುಳಿತ ವ್ಯಕ್ತಿಯ ಮನಸ್ಥಿತಿಯಂತೆ ಡ್ರೋಣ್ನ್ನು ಕಂಟ್ರೋಲ್ ಮಾಡಬಹುದಾಗಿದೆ. ಮನುಷ್ಯನ ಮೆದುಳಿನಿಂದ ಸಿಗ್ನಲ್ಗಳನ್ನು ಗ್ರಹಿಸಿ ಡ್ರೋಣ್ ಕಾರ್ಯನಿರ್ವಹಿಸಲಿದೆ. ಇದು ರಕ್ಷಣಾ ವಲಯದಲ್ಲಿ ಬಹಳ ಉಪಯುಕ್ತವಾಗುತ್ತೆ ಅಂತ ಡ್ರೋಣ್ ತಯಾರಕರು ಹೇಳಿದ್ದಾರೆ.
ಟ್ವಿಟರ್ನ ಅತ್ಯಂತ ಪ್ರಭಾವಶಾಲಿ 50 ವ್ಯಕ್ತಿಗಳ ಪಟ್ಟಿ ಪ್ರಕಟ
ಗ್ರಾಹಕ ಗುಪ್ತಚರ ಕಂಪನಿ ಬ್ರ್ಯಾಂಡ್ ವಾಚ್, ಟ್ವಿಟರ್ನಲ್ಲಿನ ಐವತ್ತು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟಿಸಿದೆ. ಪಟ್ಟಿಯಲ್ಲಿ ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ ಮೊದಲ ಸ್ಥಾನದಲ್ಲಿದ್ದು, ಪ್ರಧಾನಿ ಮೋದಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಇದೇ ಲಿಸ್ಟ್ನಲ್ಲಿ ಖ್ಯಾತ WWE ರಸ್ಲರ್ ಹಾಗೂ ನಟ ರಾಕ್ ಮತ್ತು ನಟ ಲಿಯೋನಾರ್ಡೋ ಡಿಕಾಪ್ರಿಯೋರನ್ನ ಹಿಂದಿಕ್ಕಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಕೂಲರ್ 35ನೇ ಸ್ಥಾನದಲ್ಲಿದ್ದಾರೆ.