ಮಕ್ಕಳಿಗೆ ಕೊರೊನಾ ಬರೋದು ತೀರಾ ಕಡಿಮೆ. ಯುವಕರು, ಮಧ್ಯವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ತಾ ಇಲ್ಲ. ಆದ್ರೆ ಎರಡನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದ್ರೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಅಂತಿದ್ದಾರೆ ತಜ್ಞರು. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಒಂದೇ ದಿನ ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಆಯ್ತು, ಯುವಕರಲ್ಲಿ ಆಯ್ತು ಈಗ ಮುಗ್ಧ ಪಟಾಣಿಗಳಲ್ಲಿ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರುವಾಗಿದೆ.

ಇಷ್ಟು ದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿರಲಿಲ್ಲ ಕೊರೊನಾ
ಈಗ ಮಕ್ಕಳಿಗೂ ಹೆಚ್ಚಾಗಿ ಹರಡ್ತಿದೆ ಅಪಾಯಕಾರಿ ವೈರಸ್

ಕೊರೊನಾ ಬಂದಾಗಿನಿಂದ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಕಡಿಮೆ. ಮಕ್ಕಳಿಗೆ ಕೊರೊನಾ ಬಂದ್ರೆ ಆಸ್ಪತ್ರೆಯಲ್ಲೂ ಪ್ರತ್ಯೇಕವಾಗಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗ್ತಾ ಇತ್ತು. ಕಾರಣ ಅವರ ಆರೋಗ್ಯ ದೊಡ್ಡವರ ಆರೋಗ್ಯಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುವ ಕಾರಣಕ್ಕಾಗಿ. ಆದರೆ ಈಗ ಬಂದಿರೋ ಎರಡನೇ ಅಲೆ ವೇಳೆ ಮಕ್ಕಳಿಗೂ ಹೆಚ್ಚಾಗಿ ಪರಿಣಾಮ ಬೀರ್ತಾ ಇರೋದು ಆತಂಕ ಹುಟ್ಟಿಸ್ತಾ ಇದೆ. ಮೊದಲ ಕೋವಿಡ್ ಅಲೆಯಲ್ಲೂ ಮಕ್ಕಳು ಸೋಂಕಿಗೆ ತುತ್ತಾಗಿದ್ದರು, ಆದರೆ ಮಕ್ಕಳ ಇಮ್ಯೂನಿಟಿ ಹೆಚ್ಚಿದ್ದು, ಅವರಿಗೆ ಶ್ವಾಸಕೋಶದ ತೊಂದರೆ ಕಾಣಿಸಿರಲಿಲ್ಲ. ಆದರೆ ಈಗಿರುವ ರೂಪಾಂತರಿ ಕೋವಿಡ್ ತಳಿ ನೇರವಾಗಿ ಶ್ವಾಸಕೋಶಕ್ಕೆ ಟಾರ್ಗೆಟ್ ಮಾಡುತ್ತಿರುವಾಗ, ಮಕ್ಕಳಲ್ಲೂ ಶ್ವಾಸಕೋಶದ ತೊಂದರೆ ಕಾಣಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ಪಾಸಿಟೀವ್ ಬಂದ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ಗಮನಿಸಿದ್ದಾರೆ. ಇಂತಹ ಲಕ್ಷಣಗಳನ್ನು ಈ ಹಿಂದೆ ಅಂದರೆ ಮೊದಲ ಅಲೆಯಲ್ಲಿ ನೋಡಿರಲಿಲ್ಲ. ಇದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಎರಡನೇ ಅಲೆಯಲ್ಲಂತೂ ವಿವಿಧ ಸ್ವರೂಪದಲ್ಲಿ ಕೊರೊನಾ
ಬಹುಬೇಗ ಮಕ್ಕಳಲ್ಲೂ ಹರಡ್ತಾ ಇದೆ ರೂಪಾಂತರಿ ವೈರಸ್

ನವಿ ಮುಂಬೈನ ಮಕ್ಕಳ ತಜ್ಞ ಡಾ. ಸುಭಾಷ್ ರಾವ್ ಅವರ ಪ್ರಕಾರ, ರೂಪಾಂತರ ಹೊಂದಿರುವ ಕೊರೊನಾ ವೈರಸ್ ಬಹುಬೇಗ ಹರಡುತ್ತಿದೆ, ಅದರಲ್ಲೂ ಮಕ್ಕಳು ಸೋಂಕಿಗೆ ತುತ್ತಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಕೊರೊನಾ ಮೊದಲ ಅಲೆಯ ವೇಳೆ ವಯಸ್ಕರು ಬೇಗ ಸೋಂಕಿಗೆ ತುತ್ತಾಗುತ್ತಿದ್ದರು. ಆದ್ರೆ ಈಗ ಟ್ರೆಂಡ್ ಬದಲಾಗಿದೆ ಎನ್ನುತ್ತಾರೆ ಡಾ. ರಾವ್. ಮಕ್ಕಳಿಂದ ವಯಸ್ಕರಿಗೆ ಸೋಂಕು ಹರಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಮೊದಲನೇ ಅಲೆ ಇದ್ದ ವೇಳೆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೂ ಅವರಲ್ಲಿ ಲಕ್ಷಣಗಳು ಕಂಡುಬರುತ್ತಿರಲಿಲ್ಲ. ಆದ್ರೆ, ಈಗ ಸೋಂಕಿತರಾದ ಕೂಡಲೇ ಲಕ್ಷಣಗಳು ಕಂಡುಬರುತ್ತಿವೆ.

ಸಾಮಾನ್ಯ ಲಕ್ಷಣಗಳ ಜೊತೆ ಮಕ್ಕಳಲ್ಲಿ ಉಸಿರಾಟದ ತೊಂದರೆ
ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿ ಎನ್ನುತ್ತಾರೆ ವೈದ್ಯರು

ಕೋವಿಡ್ ಮೊದಲ ಅಲೆಯಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಲಕ್ಷಣಗಳು ಕಂಡುಬರುತ್ತಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಜ್ವರ, ಶೀತ, ಒಣ ಕೆಮ್ಮು, ವಾಂತಿ, ಭೇದಿ, ಅಸೌಖ್ಯ, ಮೈ-ಕೈ ನೋವು ಹೀಗೆ ಹಲವು ಸಾಮಾನ್ಯ ಲಕ್ಷಣಗಳು ಕೊರೊನಾ ಸೋಂಕಿತ ಮಕ್ಕಳಲ್ಲಿ ಕಂಡು ಬರುತ್ತಿವೆ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಚರ್ಮದ ಅಲರ್ಜಿ ಕೂಡಾ ಕಂಡುಬರ್ತಿದೆ. ಮಕ್ಕಳು ಹೊರಗೆ ಆಟವಾಡುವುದರಿಂದ ಹಾಗೂ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಕಾರಣ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ. ಮತ್ತು ಮಕ್ಕಳಿಂದ ಸುಲಭವಾಗಿ ಹರಡುತ್ತಿರುವುದು ವರದಿಯಾಗಿದೆ. ಹೀಗಾಗಿ, ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪೋಷಕರು ಪರೀಕ್ಷೆ ಮಾಡಿಸಬೇಕಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಪೋಷಕರೂ ಕ್ವಾರಂಟೈನ್‌ಗೆ ಒಳಪಡಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಕ್ಕಳನ್ನು ಕಾಡ್ತಿದೆ ರೂಪಾಂತರಿ ಕೋವಿಡ್ ನ್ಯುಮೋನಿಯಾ
ಎರಡು ವರ್ಷದ ಮಕ್ಕಳಲ್ಲೂ ಸಹ ಶ್ವಾಸಕೋಶದ ತೊಂದರೆ

ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಸಾಕಷ್ಚು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಎರಡು ವರ್ಷದ ಮಕ್ಕಳನ್ನೂ ಸಹ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ, ಏಪ್ರಿಲ್ 23 ರಂದು, ಚೆನ್ನೈನ ಎಗ್ಮೋರ್ ನ ಸರ್ಕಾರಿ ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ಕೋವಿಡ್ ನ್ಯುಮೋನಿಯಾದಿಂದ 19 ದಿನಗಳ ಹೆಣ್ಣುಮಗು ಮೃತಪಟ್ಟಿತ್ತು. ಮಗುವಿನ ಪೋಷಕರು ಕೋವಿಡ್‌ನ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್ ನ್ಯುಮೋನಿಯಾ ಬಹಳ ಅಪಾಯಕಾರಿಯಾಗ್ತಾ ಇದೆ.

11 ವರ್ಷದ ಬಾಲಕನೋರ್ವ ಮಧ್ಯಮ ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ಬಂದಿದ್ದನು. ಅವನಿಗೆ ಕನಿಷ್ಠ ಆಮ್ಲಜನಕದ ನೆರವಿನ ಅಗತ್ಯವಿತ್ತು. ಚಿಕಿತ್ಸೆ ನೀಡಿದಾಗ ಮರುದಿನ ಚೇತರಿಸಿಕೊಂಡ. ನಮ್ಮ ಆಸ್ಪತ್ರೆಯಲ್ಲಿ ಕಿರಿಯ ರೋಗಿ ಅಂದರೆ ಅದು ಎರಡು ವರ್ಷದ ಮಗು. ಆ ಮಗುವಿಗೆ ಕೊಂಚ ಶ್ವಾಸಕೋಶದ ಸೋಂಕು ಕೂಡ ಇತ್ತು. ಆದರೆ ಆಮ್ಲಜನಕದ ಬೆಂಬಲ ಅಗತ್ಯವಿರಲಿಲ್ಲ. ಆಮ್ಲಜನಕದ ಅವಶ್ಯಕತೆ ಇರುವ ಇಬ್ಬರು ಮಕ್ಕಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಈ ಹಿಂದೆ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಕ್ಕಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರಲಿಲ್ಲ. ಆದರೆ ಇದೀಗ ದಾಖಲಾಗುವ ಬಹುತೇಕ ಮಕ್ಕಳಿಗೆ ಆಮ್ಲಜನಕದ ಅಗತ್ಯವಿರುತ್ತದೆ, ಇಂತಹ ಪರಿಸ್ಥಿತಿ ನಮಗೆ ಹೊಸದು
– ಮಕ್ಕಳ ವೈದ್ಯರು, ಚನ್ನೈ ಸರ್ಕಾರಿ ಆಸ್ಪತ್ರೆ.

ಮಕ್ಕಳ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿರುವ ಈ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಬರುವ ತನಕ ಮಕ್ಕಳನ್ನು ಈ ಕಾಯಿಲೆಯಿಂದ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶದ ಮಕ್ಕಳಿಗೂ ಈ ಕೊರೋನಾ ಸಾವಿನೆಡೆಗೆ ಕೊಂಡೊಯ್ದ ಉದಾಹರಣೆಗಳಿವೆ. ಅಮೆರಿಕಾದಲ್ಲಿ 9 ವರ್ಷದ ಮುದ್ದು ಹುಡುಗ ಈ ಮಹಾಮಾರಿ ಬಲೆಗೆ ಬಲಿಯಾಗಿದ್ದಾನೆ. ಇದೆ ರೀತಿ ನ್ಯೂ ಯಾರ್ಕ್ ನಲ್ಲಿ ಹಲವು ಮಕ್ಕಳು ಸಾವಿಗೆ ತುತ್ತಾಗಿರುವುದು ವರದಿಯಾಗಿದೆ. ಅಮೆರಿಕದಲ್ಲಂತೂ 15ಮಕ್ಕಳು ಮೃತಪಟ್ಟರೆ ಅದರಲ್ಲಿ ಕೋವಿಡ್ ನಿಂದ ಮೃತಪಟ್ಟವರೇ 5 ಮಂದಿ ಇದ್ದಾರೆ ಅನ್ನೋದು ಇನ್ನಷ್ಟು ಭಯ ಹುಟ್ಟಿಸ್ತಾ ಇದೆ.

ಮಕ್ಕಳನ್ನು ಕಾದಿರುವ ಭಯಾನಕ ಕೋವಿಡ್ ಅಪಾಯ
ಮಕ್ಕಳಿಗೆ ಕೋವಿಡ್ ಭೀಕರತೆ ಪಾಠ ಹೇಳಿ ಎಂದ ವೈದ್ಯರು

ಭಾರತ ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಶೇಕಡ 39 ರಷ್ಟು ಮಕ್ಕಳಿದ್ದಾರೆ. ಅಂದ್ರೆ 18 ವರ್ಷದ ಕೆಳಪಟ್ಟ ಮಕ್ಕಳು 40 ಕೋಟಿ 72 ಲಕ್ಷ ಇರಬಹುದು. ಕೋವಿಡ್ ಮೊದಲ ಅಲೆಯಲ್ಲಿ ಮಕ್ಕಳು ಹೇಗೋ ಪಾರಾಗಿದ್ದರು. ಆದರೆ ಎರಡನೆ ಅಲೆಯಲ್ಲಿ ರೂಪಾಂತರಿ ತಳಿ ಭಯಾನಕ ಆಪಾಯವನ್ನು ಹೊತ್ತು ನಿಂತಿದೆ. ಮಕ್ಕಳನ್ನು ಈ ರೋಗದಿಂದ ಪಾರು ಮಾಡುವ ಒಂದು ಮುಖ್ಯ ಮಾರ್ಗ ಎಂದರೆ ಅದು, ಪೋಷಕರು ಮಕ್ಕಳಿಗೆ ಕೋವಿಡ್ ವೈರಸ್ ಕುರಿತಾಗಿ ಪಾಠ ಮಾಡಬೇಕು. ಕೋವಿಡ್ ಕರಾಳತೆ, ಅದನ್ನು ಎದುರಿಸುವ ಕ್ರಮ ಎಲ್ಲದರ ಬಗ್ಗೆ ಮಕ್ಕಳಿಗೆ ಅರಿವೂ ಮೂಡಿಸುವುದು ಅತ್ಯತ್ತಮ ಮಾರ್ಗ ಎನ್ನುವ ಸಲಹೆ ನೀಡುತ್ತಾರೆ ವೈದ್ಯರು.

ಮಕ್ಕಳು ಮನೆಯಲ್ಲೇ ಇದ್ದರೂ ಅವರ ಬಗ್ಗೆ ಸದಾ ಒಂದು ಗಮನ ಇರಲಿ. ಮಕ್ಕಳನ್ನು ಆದಷ್ಟು ಹೊರಗಡೆ ಬಿಡಬೇಡಿ. ಬೇರೆಯವರ ಜೊತೆ ಕೆಲವು ದಿನ ಮಿಕ್ಸ್ ಆಗದಿರೋದೇ ಒಳ್ಳೇದು.

The post 2ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಹರಡ್ತಿದೆ ಕೊರೊನಾ.. ತಜ್ಞರ ಸಲಹೆ ಇಲ್ಲಿದೆ appeared first on News First Kannada.

Source: newsfirstlive.com

Source link