ಕೊರೊನಾದ ಮೂರನೇ ಅಲೆ ಮಕ್ಕಳನ್ನು ಟಾರ್ಗೆಟ್ ಮಾಡಬಹುದು ಅಂತಾನೇ ಹೇಳಲಾಗುತ್ತಿತ್ತು. ತಜ್ಞರು ಕೂಡ ಈ ಬಗ್ಗೆ ಈಗಾಗಲೇ ಎಚ್ಚರಿಕೆಯನ್ನೂ ಕೂಡ ಕೊಟ್ಟಿದ್ದಾರೆ. ಕಾರಣ, ಮಕ್ಕಳಿಗೆ ಇನ್ನು ಲಸಿಕೆ ಬಂದಿಲ್ಲ. ಇನ್ನೊಂದು ಮಕ್ಕಳು ಹೊರಗೆ ಬಂದರೆ ಅವರಿಗೆ ಸುಲಭವಾಗಿ ಕೊರೊನಾ ಸೋಂಕು ಎಂಟ್ರಿ ಕೊಡಬಹುದು. ಆದರೆ, ಈಗ ಬರ್ತಿರೋ ಮಾಹಿತಿ ಪ್ರಕಾರ ಈಗಿರುವ ಎರಡನೇ ಅಲೆಯಲ್ಲೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗ್ತಾ ಇದ್ದಾರೆ. ಮೂರನೇ ಅಲೆ ಬರೋದಕ್ಕಿಂತ ಮುನ್ನವೇ ಮಕ್ಕಳಿಗೆ ಕೊರೊನಾ ಹೆಚ್ಚು ಆತಂಕ ತಂದಿದೆ.

2ನೇ ಅಲೆಯಲ್ಲಿ ಅದೆಷ್ಟು ಮಕ್ಕಳಿಗೆ ಕೊರೊನಾ ಬಂದಿದೆ ಗೊತ್ತಾ?
ಮಕ್ಕಳಲ್ಲಿ ಅತ್ಯಂತ ವೇಗವಾಗಿ ಹರಡ್ತಿದ್ಯಾ ಕೊರೊನಾ ಸೋಂಕು?

ಎರಡನೇ ಅಲೆಯಲ್ಲೇ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸ್ತಾ ಇದೆ. ಇದು ನಿಜಕ್ಕೂ ಪೋಷಕರಿಗೆ ಆತಂಕ ತಂದಿದೆ. ಮಕ್ಕಳಲ್ಲಿ ಅತ್ಯಂತ ವೇಗವಾಗಿ ಕೊರೊನಾ ಹರಡ್ತಾ ಇದ್ಯಾ ಅಂತ ಕೇಳಿದ್ರೆ ಅಷ್ಟಾಗಿ ಹರಡ್ತಾ ಇಲ್ಲದಿದ್ರೂ ಸಾಕಷ್ಟು ಕೇಸ್ ಗಳು ಬಂದಿರೋದು ಭೀತಿ ಹುಟ್ಟಿಸಿದೆ.

ಎರಡು ತಿಂಗಳ ಅವಧಿಯಲ್ಲೇ 39 ಸಾವಿರ ಮಕ್ಕಳಿಗೆ ಕೊರೊನಾ
ಈ 39 ಸಾವಿರ ಮಕ್ಕಳೆಲ್ಲರು 9 ವರ್ಷದ ಒಳಗಿನ ವಯಸ್ಸಿನವರು
39 ಸಾವಿರ ಕೊರೊನಾ ಸೋಂಕಿತ ಮಕ್ಕಳಲ್ಲಿ ಈವರೆಗೆ 15 ಸಾವು

ಕಳೆದ ಎರಡು ತಿಂಗಳ ಅವಧಿಯಲ್ಲೇ 39 ಸಾವಿರದ 846 ಮಕ್ಕಳು ಕೊರೊನಾ ಸೋಂಕಿತರಾಗಿದ್ದಾರೆ. ಮಾರ್ಚ್ 18ರಿಂದ ಅಂಕಿ ಅಂಶಗಳನ್ನು ಗಮನಿಸಿದಾಗ ಇದು ಗೊತ್ತಾಗಿದೆ. ಕೊರೊನಾ ಸೋಂಕಿತರಾಗಿರುವ 39 ಸಾವಿರ ಮಕ್ಕಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ಹೆಚ್ಚು ಆತಂಕ ತಂದಿದೆ. ಇವರಿಗಿಂತ ದೊಡ್ಡ ಮಕ್ಕಳಲ್ಲೂ ಕೊರೊನಾ ಅತಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಅದರ ಲೆಕ್ಕವನ್ನೂ ನಿಮಗೆ ಕೊಡ್ತೀವಿ. ಅಂದ ಹಾಗೆ ಮತ್ತೊಂದು ಆಘಾತ ತರುವ ವಿಚಾರ ಅಂದ್ರೆ ಕೊರೊನಾ ಸೋಂಕಿತರಾಗಿದ್ದ 39 ಸಾವಿರ ಮಕ್ಕಳಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

19 ವರ್ಷದೊಳಗಿರುವ ವಯಸ್ಸಿನ 1 ಲಕ್ಷ ಮಕ್ಕಳಿಗೆ ಕೊರೊನಾ
ಚಿಕ್ಕವರಿಗಿಂತ ಹೆಚ್ಚಾಗಿ ಕಾಣಿಸಿರೋದು ಈ ವಯಸ್ಸಿನ ಮಕ್ಕಳಲ್ಲಿ

ಚಿಕ್ಕ ಚಿಕ್ಕ ಮಕ್ಕಳಷ್ಟೇ ಅಲ್ಲ, 10ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ. ಬರೋಬ್ಬರಿ 1 ಲಕ್ಷದ 05 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ 10ರಿಂದ 19 ವರ್ಷದೊಳಗಿನ ಮಕ್ಕಳು ಈವರೆಗೆ ಕೊರೊನಾ ಸೋಂಕಿತರಾಗಿದ್ದಾರೆ. ಈ ಸೋಂಕಿತರಲ್ಲಿ 16 ಮಕ್ಕಳು ಸಾವನ್ನಪ್ಪಿದ್ದಾರೆ. ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳೇ ಹೆಚ್ಚು ಸೋಂಕಿತರಾಗಿದ್ದಾರೆ. ಕಾರಣ ಇವರ ಚಟುವಟಿಕೆ ಮತ್ತು ಸಂಪರ್ಕ. ಸಾಮಾನ್ಯವಾಗಿ 10ರಿಂದ 19 ವರ್ಷದೊಳಗಿನ ಮಕ್ಕಳು ಮನೆಯಿಂದ ಆಚೆ ಹೆಚ್ಚಾಗಿ ಓಡಾಡ್ತಾ ಇದ್ದಿದ್ದರಿಂದಲೇ ಇಷ್ಟು ಪ್ರಮಾಣದಲ್ಲಿ ಸೋಂಕು ತಗುಲಿದೆ.

ಚಿಕ್ಕ ಮಕ್ಕಳು ಮನೆಯಲ್ಲೇ ಇದ್ದರೂ ಹೇಗೆ ಬಂತು ಕೊರೊನಾ?
ಮನೆಯಲ್ಲೇ ದೊಡ್ಡವರಿಂದ ಮಕ್ಕಳಿಗೆ ಈ ಸೋಂಕು ತಗುಲಿತ್ತಾ?

ಈ ಬಾರಿ ಬಹುತೇಕವಾಗಿ ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಹೋಗಿಲ್ಲ. ಆದರೂ ಇವರಿಗೆ ಕೊರೊನಾ ಬಂದಿದೆ ಅಂದ್ರೆ ಅದು ಮನೆಯವರಿಂದ ಅಥವಾ ಮನೆಗೆ ಬಂದವರಿಂದ ಮಾತ್ರ. ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಿ ಬಂದವರು ಮಕ್ಕಳ ಜೊತೆ ಬೆರೆತ ಕಾರಣದಿಂದ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೊರೊನಾ ಲಕ್ಷಣಗಳು ಇಲ್ಲದ ಕಾರಣ ಅನೇಕರು ಮಕ್ಕಳ ಜೊತೆ ಬೆರೆತಿರೋದು ಅಪಾಯ ತಂದಿದೆ. ಆಮೇಲೆ ಕೊರೊನಾ ದೃಢಪಟ್ಟ ಮೇಲೆ ಮಕ್ಕಳನ್ನು ದೂರ ಇಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ಮಕ್ಕಳಿಗೂ ಸೋಂಕು ಬಂದಿತ್ತು. ಇಂತಹ ಉದಾಹರಣೆಗಳು ಸಾಕಷ್ಟಿವೆ. ಇನ್ನು ಹೊರಗಿನಿಂದ ಬಂದ ಅತಿಥಿಗಳಿಂದಲೂ ಸೋಂಕು ಹರಡಿರಬಹುದು. ಹೊರಗಡೆಯಿಂದ ಬಂದವರು ಯಾರ ಸಂಪರ್ಕದಲ್ಲಿರ್ತಾರೊ ಗೊತ್ತಾಗಲ್ಲ. ಅವರು ನೇರವಾಗಿ ಬಂದು ಮಕ್ಕಳ ಜೊತೆ ಒಂದಿಷ್ಟು ಟೈಮ್ ಕಳೆದರೆ ಸೋಂಕು ಹರಡೋದಕ್ಕೆ ಅಷ್ಟೇ ಸಾಕಾಗುತ್ತೆ. ಕಾರಣ ಚಿಕ್ಕ ಚಿಕ್ಕ ಮಕ್ಕಳಿಗೂ ಮಾಸ್ಕ್ ಹಾಕಿಸೋದು, ಅಂತರ ಕಾಪಾಡಿಕೊಳ್ಳುವಂತೆ ತಿಳಿ ಹೇಳುವುದು ಕಷ್ಟ. ಆದ್ರೆ 10ರಿಂದ 19 ವರ್ಷದ ಮಕ್ಕಳು ಮನೆಯಿಂದ ಆಚೆ ಹೋಗಿ ಬೇರೆಯವರ ಜೊತೆ ಆಟವಾಡೋದ್ರಿಂದ,ಸ್ನೇಹಿತರ ಜೊತೆ ಹೆಚ್ಚಾಗಿ ಇರಲು ಬಯಸುವ ಕಾರಣದಿಂದಲೂ ಕೊರೊನಾ ಸೋಂಕು ಸುಲಭವಾಗಿ ತಗುಲಲು ಕಾರಣವಾಗಿರಬಹುದು ಅಂತಿದಾರೆ ತಜ್ಞರು.

ಕೊರೊನಾದಿಂದ ಮಕ್ಕಳಲ್ಲೂ ಶ್ವಾಸಕೋಶದಲ್ಲಿನ ತೊಂದರೆ
ನಿರ್ಲಕ್ಷ್ಯ ವಹಿಸಿದ್ರೆ ಅಪಾಯಕಾರಿಯಾಗಿ ಬಿಡುತ್ತೆ ಕೊರೊನಾ?

ಮೊದಲ ಕೋವಿಡ್ ಅಲೆಯಲ್ಲೂ ಮಕ್ಕಳು ಸೋಂಕಿಗೆ ತುತ್ತಾಗಿದ್ದರು, ಆದರೆ ಮಕ್ಕಳ ಇಮ್ಯೂನಿಟಿ ಹೆಚ್ಚಿದ್ದು, ಅವರಿಗೆ ಶ್ವಾಸಕೋಶದ ತೊಂದರೆ ಕಾಣಿಸಿರಲಿಲ್ಲ. ಆದರೆ ಈಗಿರುವ ರೂಪಾಂತರಿ ಕೋವಿಡ್ ತಳಿ ನೇರವಾಗಿ ಶ್ವಾಸಕೋಶಕ್ಕೆ ಟಾರ್ಗೆಟ್ ಮಾಡುತ್ತಿರುವಾಗ, ಮಕ್ಕಳಲ್ಲೂ ಶ್ವಾಸಕೋಶದ ತೊಂದರೆ ಕಾಣಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಕೊರೊನ ಪಾಸಿಟೀವ್ ಬಂದ ಮಕ್ಕಳಿಗೆ ಚಿಕಿತ್ಸೆ ನೀಡಿರುವ ವೈದ್ಯರು, ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ಗಮನಿಸಿದ್ದಾರೆ. ಇಂತಹ ಲಕ್ಷಣಗಳನ್ನು ಈ ಹಿಂದೆ ಅಂದರೆ ಮೊದಲ ಅಲೆಯಲ್ಲಿ ನೋಡಿರಲಿಲ್ಲ. ಇದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿಯೇ ಮಕ್ಕಳಿಗೆ ಪ್ರತ್ಯೋಕ ಕೋವಿಡ್ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಕಾರಣ ಮಕ್ಕಳ ಆರೋಗ್ಯ ಸೂಕ್ಷ್ಮವಾಗಿರುತ್ತದೆ. ಇವರನ್ನು ಯುವಕರು ಮತ್ತು ಮಧ್ಯವಯಸ್ಕರು,ವೃದ್ಧರ ಜೊತೆಗೆ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ರೆ ಅದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು ಅಂತ ಸರ್ಕಾರ ಇಂತಹ ಕ್ರಮಕ್ಕೆ ಮಂದಾಗಿದೆ.

ಎರಡನೇ ಅಲೆಯಲ್ಲಂತೂ ವಿವಿಧ ಸ್ವರೂಪದಲ್ಲಿ ಕೊರೊನಾ
ಬಹುಬೇಗ ಮಕ್ಕಳಲ್ಲೂ ಹರಡ್ತಾ ಇದೆ ರೂಪಾಂತರಿ ವೈರಸ್
ಈ ಬಾರಿ ಮಕ್ಕಳಲ್ಲೂ ಕಾಣಿಸಿಕೊಳ್ತಿದ್ಯಾ ಉಸಿರಾಟದ ಸಮಸ್ಯೆ?

ಕೋವಿಡ್ ಮೊದಲ ಅಲೆಯಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಲಕ್ಷಣಗಳು ಕಂಡುಬರುತ್ತಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಜ್ವರ, ಶೀತ, ಒಣ ಕೆಮ್ಮು, ವಾಂತಿ, ಭೇದಿ, ಅಸೌಖ್ಯ, ಮೈ-ಕೈ ನೋವು ಹೀಗೆ ಹಲವು ಸಾಮಾನ್ಯ ಲಕ್ಷಣಗಳು ಕೊರೊನಾ ಸೋಂಕಿತ ಮಕ್ಕಳಲ್ಲಿ ಕಂಡು ಬರುತ್ತಿವೆ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಚರ್ಮದ ಅಲರ್ಜಿ ಕೂಡಾ ಕಂಡುಬರ್ತಿದೆ. ಮಕ್ಕಳು ಹೊರಗೆ ಆಟವಾಡುವುದರಿಂದ ಹಾಗೂ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಕಾರಣ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ. ಮತ್ತು ಮಕ್ಕಳಿಂದ ಸುಲಭವಾಗಿ ಹರಡುತ್ತಿರುವುದು ವರದಿಯಾಗಿದೆ. ಹೀಗಾಗಿ, ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪೋಷಕರು ಪರೀಕ್ಷೆ ಮಾಡಿಸಬೇಕಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಪೋಷಕರೂ ಕ್ವಾರಂಟೈನ್‌ಗೆ ಒಳಪಡಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಸಾಕಷ್ಚು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಎರಡು ವರ್ಷದ ಮಕ್ಕಳನ್ನೂ ಸಹ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ. ಕರ್ನಾಟಕದಲ್ಲಿ ಹೀಗೆ ದಾಖಲಾಗ್ತಾ ಇರುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದ್ರೆ ಬೇರೆ ಬೇರೆ ರಾಜ್ಯಗಳಲ್ಲಿ ಮಕ್ಕಳಿಗೂ ಕೊರೊನಾ ಅಪಾಯಕಾರಿಯಾಗ್ತಾ ಇರೋ ವರದಿ ಬರ್ತಾ ಇವೆ. ಕೋವಿಡ್ ನ್ಯುಮೋನಿಯಾ ಮಕ್ಕಳನ್ನು ಕಾಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಹೀಗಾಗಿ ಸೋಂಕು ಕಂಡು ಬಂದ ತಕ್ಷಣ ಮಕ್ಕಳಿಗೆ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆಯನ್ನು ತಕ್ಷಣ ಕೊಡಿಸಬೇಕು.

ಮಕ್ಕಳಲ್ಲಿ ಕಂಡು ಬರುವ ಕೋವಿಡ್ ಲಕ್ಷಣಗಳು ಯಾವುದು?
ಮಕ್ಕಳನ್ನು ಪ್ರತಿನಿತ್ಯ ಸೂಕ್ಷ್ಮವಾಗಿ ಗಮನಿಸುತ್ತಲೇ ಇರಬೇಕಾ?

ಈಗಾಗಲೇ ಮೊದಲು ಹಾಗೂ ಎರಡನೇ ಅಲೆಯಲ್ಲಿ ಕೊರೊನಾ ಲಕ್ಷಣಗಳು ಹೇಗಿರಲಿದೆ ಅನ್ನೊದು ಗೊತ್ತು. ಜ್ವರ, ಕೆಮ್ಮು, ಶೀತ, ನೆಗಡಿ, ಗಂಟಲಲ್ಲಿ ಕಿರಿಕಿರಿ. ಮಕ್ಕಳಲ್ಲಿ ಕಂಡು ಬರುವ ಸೋಂಕನ್ನು ನಾಲ್ಕು ಹಂತದ ಲಕ್ಷಣಗಳಾಗಿ ವಿಂಗಡಿಸಿದ್ದಾರೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳನ್ನು ಇಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಾಗಿ ನಿತ್ಯವೂ ಗಮನಿಸ್ತಾ ಇರೋದು ಒಳಿತು.

The post 2ನೇ ಅಲೆಯಲ್ಲೂ ಹೆಚ್ಚು ಮಕ್ಕಳಿಗೆ ಸೋಂಕು.. 39 ಸಾವಿರ ಸೋಂಕಿತರಲ್ಲಿ 15 ಮಕ್ಕಳು ಸಾವು appeared first on News First Kannada.

Source: newsfirstlive.com

Source link