ಕೊರೊನಾ ಎರಡನೇ ಅಲೆ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣವಷ್ಟೇ ಅಲ್ಲಲ್ಲಿ ಕಾಣಿಸ್ತಾ ಇದೆ. ಈ ನಡುವೆ, ಮೂರನೇ ಅಲೆಯ ಬಗ್ಗೆಯೂ ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಊಹೆಗೂ ನಿಲುಕದಷ್ಟು ಅನಾಹುತ ಸೃಷ್ಟಿಸುತ್ತಿದೆ ಕೊರೊನಾ. ಅದ್ಯಾವಾಗ ಅದೆಲ್ಲಿ ಕೊರೊನಾ ಒಮ್ಮೆಲೆ ಅಪ್ಪಳಿಸಿ ಬಿಡುತ್ತೋ ನಿಖರವಾಗಿ ಹೇಳೋಕೇ ಆಗ್ತಾ ಇಲ್ಲ. ವಿಶ್ವದ ಹಲವು ದೇಶಗಳಲ್ಲಿ ಒಂದನೇ ಅಲೆ, ಎರಡನೇ ಅಲೆ, ಮೂರನೇ ಅಲೆ ಬಂದು ಹೋಗಿ ಈಗ ನಾಲ್ಕನೇ ಅಲೆಯೂ ಬರ್ತಾ ಇದೆ.

ಈ ಕೊರೊನಾಗೆ ಆ ದೇಶ ಈ ದೇಶ, ಆ ರಾಜ್ಯ ಈ ರಾಜ್ಯ ಅಂತ ಯಾವ ಬೇಧವೂ ಇಲ್ಲ. ವಿಶ್ವದ ಮೂಲೆ ಮೂಲೆಗೂ ಕೊರೊನಾ ವೈರಸ್ ಹೋಗಿ ತಲುಪಿಕೊಂಡಿದೆ. ಜಗತ್ತಿನ ಅತಿ ಎತ್ತರದ ಹಿಮಾಚ್ಛಾದಿತ ಮೌಂಟ್ ಎವರೆಸ್ಟ್ ಬಳಿಯೇ ಇದು ಪ್ರತ್ಯಕ್ಷವಾಗಿ ಅಂದ್ರೆ ಲೆಕ್ಕ ಹಾಕಿಕೊಳ್ಳಿ. ನಾರ್ವೆ ಮೂಲದ ಪರ್ವತಾರೋಹಿ ಒಬ್ಬರಿಗೆ ಪಾಸಿಟಿವ್ ಆದ ತಕ್ಷಣ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೌಂಟ್ ಎವರೆಸ್ಟ್ ನಿಂದ ಹಿಡಿದು ಬಯಲು ಸೀಮೆಯವರೆಗೂ ಬಂದು, ಚಿಕ್ಕ ಚಿಕ್ಕ ದ್ವೀಪ ರಾಷ್ಟ್ರಗಳನ್ನೂ ಬಿಡದೇ, ಕಾಡಿನ ಮಧ್ಯೆ ಇರುವ ಒಂಟಿ ಮನೆಯಲ್ಲಿ ವಾಸ ಮಾಡೋರನ್ನು ಬಿಡದೇ ಕಾಡುತ್ತಿದೆ ಈ ಕೊರೊನಾ ಅಂದರೆ ಅದರ ಸಂಚಾರ ಹೇಗಿರಬಹುದು ನೋಡಿ.

ಎರಡನೇ ಅಲೆಯಂತೂ ಭಾರತದಲ್ಲಿ ಸೃಷ್ಟಿಸಿದ ಆಘಾತ, ತಂದೊಡ್ಡಿದ ಆತಂಕ, ಭೀತಿ ಅಷ್ಟಿಷ್ಟಲ್ಲ. ಮಾಡಿದ ಅನಾಹುತಕ್ಕೆ ಬೆಲೆ ಕಟ್ಟಲು ಆಗಲ್ಲ. ಲಕ್ಷಾಂತರ ಜನಕ್ಕೆ ಕೊರೊನಾ ಬಂತು. ನೂರಾರು ಜನ ಬೆಡ್ಗಾಗಿ, ಆಕ್ಸಿಜನ್ಗಾಗಿ, ರೆಮ್ಡಿಸಿವಿರ್ ಗಾಗಿ ಅಲೆದಾಡಿದ ದೃಶ್ಯಗಳು ಸಾಮಾನ್ಯವಾಗಿತ್ತು. ಇನ್ನು ಸ್ಮಶಾನದ ಎದುರು ಆಂಬ್ಯುಲೆನ್ಸ್ಗಳ ಸಾಲು. ಅಬ್ಬಾ. ಭೂಮಿಯ ಮೇಲೆಯೇ ನರಕ ದರ್ಶನವಾದ ಅನುಭವ ಹಲವರಿಗೆ. ಅಷ್ಟೊಂದು ಭಯಾನಕವಾಗಿದೆ ಕೊರೊನಾ.

ಈ ಕೊರೊನಾ ಕಂಟ್ರೋಲ್ ಮಾಡಲು ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮುಂಬೈ, ಬೆಂಗಳೂರು, ದೆಹಲಿಯಂತ ಮಹಾನಗರಗಳೇ ಸ್ತಬ್ಧವಾಗಿ ಬಿಟ್ಟಿವೆ. ವೈಭವದಿಂದ ಕಂಗೊಳಿಸುತ್ತಿದ್ದ ಮುಂಬೈ, ಬೆಂಗಳೂರು,ದೆಹಲಿ ಎಲ್ಲಾ ಕಡೆ ನೀರವ ಮೌನ. ಸದ್ದು ಗದ್ದಲಗಳಿಂದ ಸದಾ ಗಿಜಿಗುಡುತ್ತಿದ, ಜನರನ್ನು ಮಡಿಲಲ್ಲಿ ಇಟ್ಟುಕೊಂಡು ಸಲಹುತ್ತಿದ್ದ ಈ ಮಹಾನಗರಗಳು ಈಗ ನಿಶ್ಯಬ್ದವಾಗಿ ಬಿಟ್ಟಿವೆ. ಒಂದು ವೈರಸ್ ಎಷ್ಟರ ಮಟ್ಟಿಗೆ ಮನುಷ್ಯನನ್ನು ಕಟ್ಟಿ ಹಾಕಿದೆ ನೋಡಿ.

ಇನ್ನು ಹಳ್ಳಿಗಳು ಸೇಫ್ ಅಂತ ಅಂದುಕೊಂಡರೆ ಅಲ್ಲೂ ಕೊರೊನಾ ಅಬ್ಬರಿಸುತ್ತಿದೆ. ದಟ್ಟ ಕಾಡಿನ ಮಧ್ಯೆ ಬದುಕು ಕಟ್ಟಿಕೊಂಡಿದ್ದವರಿಗೂ ಕೊರೊನಾ ಬಿಡ್ತಾ ಇಲ್ಲ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನಂತ ಮಲೆನಾಡು ಜಿಲ್ಲೆಗಳಲ್ಲೂ ಕೊರೊನಾ ವೇಗ ಸಿಕ್ಕಾಪಟ್ಟೆ ಹೆಚ್ಚಿದೆ. ಇದಕ್ಕೆ ಕಾರಣ ಮಹಾನಗರಗಳಿಂದ ವಾಪಸ್ಸಾದ ಜನ. ಒಬ್ಬರಿಂದ ಇನ್ನೊಬ್ಬರಿಗೆ ಹರಡ್ತಾನೇ ಇದೆ ಕೊರೊನಾ. ಹಳ್ಳಿಗಳಲ್ಲಂತೂ ಟ್ರ್ಯಾಕ್ ಮಾಡೋದೂ ಕಷ್ಟ. ಟೆಸ್ಟ್ ಮಾಡೋದು ಇನ್ನೂ ಕಷ್ಟ. ಟ್ರೀಟ್ ಮೆಂಟ್ ಅಂತೂ ದೇವರೇ ಗತಿ.

ಕೊರೊನಾ ಮೊದಲ ಅಲೆ ಬಂದು ಅಂತು ಇಂತು ಪಾರಾಗಿ ಬಿಟ್ಟೆವು ಅಂದುಕೊಳ್ತಿದ್ದಂತೆ ಎರಡನೇ ಅಲೆ ಶಾಕ್ ಕೊಟ್ಟಿದೆ. ಮೊದಲನೇ ಅಲೆ ಬಂದು ಸೋಂಕು ಕಡಿಮೆಯಾದ ಮೇಲೆ ಕೊರೊನಾ ಹೋಯ್ತು ಅಂತ ಎಲ್ಲಾ ನಿಟ್ಟುಸಿರುಬಿಟ್ಟಿದ್ರು. ಕಳೆದ ಸೆಪ್ಟೆಂಬರ್ನಲ್ಲಿ ಗರಿಷ್ಟ ಮಟ್ಟಕ್ಕೆ ತಲುಪಿ ನಿಧಾನವಾಗಿ ಇಳಿಮುಖವಾದ ಮೇಲೆ ಜನ ಜೀವನ ಸಹಜ ಸ್ಥಿತಿಗೆ ಮರಳಿದ್ದೂ ಹೌದು. ಆದ್ರೆ ಕೊರೊನಾ ಅದೆಲ್ಲಿ ವಿಶ್ರಾಂತಿ ಪಡೆಯುತ್ತಿತ್ತೋ ಗೊತ್ತಿಲ್ಲ. ಮತ್ತೆ ನಿಧಾನವಾಗಿ ಹೆಚ್ಚಾಗತೊಡಗಿತು. ಫೆಬ್ರವರಿಯಲ್ಲಿ ಅಲ್ಲಲ್ಲಿ ಶುರುವಾದ ಕೊರೊನಾ ವ್ಯಥೆ ಮಾರ್ಚ್ ಏಪ್ರಿಲ್ ವೇಳೆಗೆ ಮತ್ತೆ ಮೇಲುಮುಖವಾಯಿತು. ಈಗಂತೂ ಗರಿಷ್ಟ ಕೇಸ್ ಗಳು ಬರ್ತಾ ಇದ್ದಾವೆ. ಕಳೆದ ಎರಡು ಮೂರು ದಿನಗಳಿಂದ ಸ್ವಲ್ಪ ತಗ್ಗಿದರೂ ಇನ್ನೂ ಹದಿನೈದರಿಂದ ಒಂದು ತಿಂಗಳು ಬೇಕೇ ಬೇಕು.

ಆಯ್ತು ಇಷ್ಟಕ್ಕೆ ಮುಗೀತು ಅಂತ ತಿಳಿದುಕೊಂಡರೆ ಮತ್ತೆ ದಡ್ಡರಾಗಬೇಕಾಗುತ್ತೆ. ತಜ್ಞರು ಈಗಾಗಲೇ ಎಚ್ಚರಿಕೆ ನೀಡಿಬಿಟ್ಟಿದ್ದಾರೆ. ಈ ಕೊರೊನಾ ಕಡಿಮೆ ಆಗುತ್ತೆ, ಆದ್ರೆ ಹೋಗಲ್ಲ ಅಂತ ಹೇಳಿ ಬಿಟ್ಟಿದ್ದಾರೆ. ಮೂರನೇ ಅಲೆ ಖಂಡಿತ ಬರುತ್ತೆ ಅಂತ ಖಡಾ ಖಂಡಿತವಾಗಿ ತಿಳಿಸಿಬಿಟ್ಟಿದ್ದಾರೆ. ತಜ್ಞರು ಹೇಳಿದಂತೆಯೇ ಎರಡನೇ ಅಲೆಯೂ ಬಂದಿದೆ. ಮೂರನೇ ಅಲೆಯೂ ಬರೋದ್ರಲ್ಲಿ ಅನುಮಾನ ಕಾಣ್ತಾ ಇಲ್ಲ.

ಎರಡನೇ ಅಲೆ ಇಳಿಯುವ ಮೊದಲೇ 3ನೇ ಅಲೆ ಭೀತಿ
ಮತ್ತೆ 90 ದಿನಗಳಲ್ಲೇ ಮರಳಿ ಬರಲಿದ್ಯಾ,ಮತ್ತೆ ಕಾಡಲಿದ್ಯಾ?

ಈ ಕೊರೊನಾ ಸದ್ಯಕ್ಕಂತೂ ಜಗತ್ತನ್ನು ಬಿಟ್ಟು ಹೋಗಲ್ಲ. ಆದ್ರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಕಷ್ಟ ತಂದೊಡ್ತಾ ಇದ್ರೆ ಜನ ಸಾಮಾನ್ಯರ ಬದುಕೇ ಹಾಳಾಗಿ ಬಿಡುತ್ತೆ. ಕೊರೊನಾದ ಎರಡು ಅಲೆಗೆ ಜನ ಹೈರಾಣಾಗಿ ಬಿಟ್ಟಿದ್ದಾರೆ. ಅನೇಕರು ತಮ್ಮವರನ್ನು ಕಳೆದುಕೊಂಡು ಅವರ ಬದುಕಿನಲ್ಲಿ ಶೂನ್ಯವೇ ಆವರಿಸಿದಂತಾಗಿದೆ. ಇನ್ನು ಅನೇಕರಿಗೆ ಈ ಲಾಕ್ ಡೌನ್ ನಿಂದ ಮಾಡಲು ಕೆಲಸ ಇಲ್ಲ, ಬದುಕಲು ಬೇರೆ ದಾರಿಯೇ ಕಾಣ್ತಾ ಇಲ್ಲ. ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ತಿಂಗಳುಗಟ್ಟಲೇ ಎಲ್ಲಾ ಬಂದ್ ಆಗಿ ಬದುಕು ದುಸ್ತರವಾಗಿ ಬಿಟ್ಟಿದೆ.  ಮತ್ತೆ ಪದೇ ಪದೇ ಕೊರೊನಾ ಅಲೆ ಅಪ್ಪಳಿಸೋದು, ಪದೇ ಪದೇ ಲಾಕ್ಡೌನ್ ಆಗಿ ಎಲ್ಲಾ ಬಂದ್ ಆಗೋದು ಆಗಿಬಿಟ್ರೆ ಭವಿಷ್ಯವೇ ಹಾಳಾಗುತ್ತದೆ. ಮಕ್ಕಳಿಗೆ ಶಾಲೆ ಇಲ್ಲ, ಪೋಷಕರಿಗೆ ಕೆಲಸ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ. ಕೊರೊನಾವನ್ನು ತೊಲಗಿಸದಿದ್ರೆ ಅದು ಮತ್ತೆ ಮತ್ತೆ ನಮ್ಮನ್ನು ಸಂಕಷ್ಟದ ಸಾಗರಕ್ಕೆ ತಳ್ಳುತ್ತಲೇ ಇರುತ್ತೆ ಅನ್ನೋದು ಖಚಿತವಾಗ್ತಾ ಇದೆ.

ತಜ್ಞರು ನೀಡಿರುವ ಎಚ್ಚರಿಕೆ ಪ್ರಕಾರ 90 ದಿನಗಳಲ್ಲಿ ಮತ್ತೆ ಕೊರೊನಾ ಮೂರನೇ ಅಲೆ ಅಪ್ಪಳಿಸಬಹುದು. ಅಂದರೆ ಇನ್ನು ಮೂರು ತಿಂಗಳು ಬಾಕಿ. ಎರಡನೇ ಅಲೆಯ ಅಬ್ಬರವೇ ತಗ್ಗಿಲ್ಲ. ಇನ್ನು ಮೂರು ತಿಂಗಳಲ್ಲಿ ಮತ್ತೊಂದು ಅಲೆ ಅಪ್ಪಳಿಸಿದರೆ ಗತಿ ಏನು. ಸಾಮಾನ್ಯವಾಗಿ ಮೂರು ತಿಂಗಳು ಕಳೆದು ಹೊಸ ಅಲೆ ನಿಧಾನವಾಗಿ ಶುರುವಾಗುತ್ತದೆ. ಮೊದಲಿಗೆ ಅಲ್ಲೊಂದು ಇಲ್ಲೊಂದು ಕೇಸ್ಗಳು ಬರತೊಡಗುತ್ತೆ. ಬಳಿಕ ಹತ್ತು ನೂರಾಗಿ, ನೂರು ಸಾವಿರವಾಗುತ್ತೆ. ಈಗ ಆಗಿರೋದು ಅದೇ. ಮುಂದಿನ 90 ದಿನಗಳಲ್ಲಿ ಮತ್ತೊಂದು ಅಲೆ ಅಂದರೆ, ಬಹುಶಃ ಆಗಸ್ಟ್ ವೇಳೆಗೆ ಮತ್ತೊಮ್ಮೆ ಅಬ್ಬರಿಸಬಹುದು.

3ನೇ ಅಲೆ ಹೇಗಿರುತ್ತೆ, ಅದೆಷ್ಟು ರೂಪಾಂತರಗೊಳ್ಳುತ್ತೆ ವೈರಸ್?
ಮತ್ತಷ್ಟು ಅಪಾಯ ತರುತ್ತಾ? ಹರಡುವ ವೇಗ ಇನ್ನಷ್ಟು ಹೆಚ್ಚುತ್ತಾ?

ಮೂರನೇ ಅಲೆ ಹೇಗಿರುತ್ತೆ ಅಂತ ಕಲ್ಪಿಸಿಕೊಳ್ಳೋಕೇ ಆಗಲ್ಲ. ಕಾರಣ ಎರಡನೇ ಅಲೆ ಕೊಟ್ಟಿರುವ ಶಾಕ್. ಮೊದಲ ಅಲೆ ಬಂದಾಗ ಭಯ ಇದ್ದರೂ ಇಷ್ಟೊಂದು ಆಘಾತ ತಂದಿರಲಿಲ್ಲ. ಆದ್ರೆ ಎರಡನೇ ಅಲೆ ದಿಢೀರ್ ಶಾಕ್ ನೀಡಿದೆ. ಲಕ್ಷ ಲಕ್ಷ ಜನರಿಗೆ ಸೋಂಕು ಹರಡಿದ್ದಷ್ಟೇ ಅಲ್ಲ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಮೊದಲನೇ ಅಲೆಯಲ್ಲಿ ಇಲ್ಲದ ಸಮಸ್ಯೆ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿದೆ. ಮೊದಲನೇ ಅಲೆಯಲ್ಲಿ ಅಕ್ಸಿಜನ್ಗಾಗಿ ಜನ ಪರದಾಡಿಲ್ಲ. ರೆಮ್ಡಿಸಿವಿರ್ಗಾಗಿ ಯಾರೂ ಹುಡುಕಾಡಿಲ್ಲ. ಆದ್ರೆ ಎರಡನೇ ಅಲೆ ಬಂದಾಗ ಹಲವರಿಗೆ ಕಾಣಿಸಿಕೊಂಡಿದ್ದು ಶ್ವಾಸಕೋಶದ ತೊಂದರೆ. ಅಷ್ಟೇ ಅಲ್ಲ ಮೊದಲನೇ ಅಲೆಯಲ್ಲಿ ವಯಸ್ಸಾದವರಿಗೆ ಹೆಚ್ಚು ಡೇಂಜರ್ ಅಂತ ಹೇಳ್ತಿದ್ರು. ಆದ್ರೆ ಈಗ ವಯಸ್ಸಿನ ಬೇಧವೇ ಇಲ್ಲ. ಯುವಕರೂ ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ರೂಪಾಂತರಿ ವೈರಸ್ಸೇ ಕಾರಣ.

ಹಲವು ರೂಪಾಂತರಿ ತಳಿ ವೈರಸ್ಗಳು ಸೃಷ್ಟಿಸುತ್ತಿರುವ ಆರೋಗ್ಯದ ಸಮಸ್ಯೆ ಒಂದೆರಡಲ್ಲ. ಈ ವೈರಸ್ ಇನ್ನೂ ರೂಪಾಂತರಗೊಳ್ಳುತ್ತಲೇ ಇದೆ. ಯಾವುದೇ ವೈರಸ್ ಆದ್ರೂ ಅದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ ಇಷ್ಟೊಂದು ವ್ಯಾಪಕವಾಗಿ ಹರಡಿದ ವೈರಾಣು ನೂರಾರು ರೀತಿಯಲ್ಲಿ ರೂಪಾಂತರಗೊಳ್ಳುತ್ತೆ. ಇನ್ನಷ್ಟು ಶಕ್ತಿ ವೃದ್ಧಿಸಿಕೊಳ್ಳುತ್ತೆ. ಮತ್ತಷ್ಟು ಅನಾಹುತ ತರುತ್ತೆ. ಹೀಗಾಗಿ ಮೂರನೇ ಅಲೆಯಲ್ಲಿ ಇನ್ನೆಂಥ ವೈರಸ್ ಬರಬಹುದು ಎಂಬ ಆತಂಕ ಈಗಿನಿಂದಲೇ ಕಾಡತೊಡಗಿದೆ. ಅಷ್ಟೇ ಅಲ್ಲ ಮೂರನೇ ಅಲೆಯಲ್ಲಿ ವೈರಸ್ ಹರಡುವ ವೇಗ ಇನ್ನೆಷ್ಟು ಇರಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಆದ್ರೆ ಮಾಯಾವಿ ಕೊರೊನಾ ಗುಟ್ಟು ಬಿಟ್ಟುಕೊಡದೇ ಎಂಟ್ರಿ ಕೊಟ್ಟುಬಿಡುತ್ತೆ.

3ನೇ ಅಲೆ ಬರುವರಷ್ಟರಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಬಚಾವ್
ವ್ಯಾಕ್ಸಿನೇಷನ್ ವೇಗ ನೋಡಿದ್ರೆ ಅಷ್ಟರಲ್ಲಿ ಎಲ್ಲರಿಗೂ ಸಿಗುತ್ತಾ?

ಕೊರೊನಾ ಕಂಟ್ರೋಲ್ ಮಾಡಬೇಕು ಅಂದ್ರೆ ವ್ಯಾಕ್ಸಿನೇಷ್ ಮಾಡೋದೊಂದೇ ಉಪಾಯ ಅಂತ ತಜ್ಞರು ಹೇಳ್ತಿದಾರೆ. ಅನೇಕ ದೇಶಗಳಲ್ಲಿ ಇದನ್ನು ಮಾಡಿಯೂ ಇದ್ದಾರೆ. ಅಮೆರಿಕಾ ಮತ್ತಿತರೇ ರಾಷ್ಟ್ರಗಳಲ್ಲಿ ಲಸಿಕೆ ಅಭಿಯಾನವನ್ನು ಹೆಚ್ಚು ಕಡಿಮೆ ಕಂಪ್ಲೀಟ್ ಮಾಡಲಾಗಿದೆ. ಇದರಿಂದ ಹೆಚ್ಚು ಸೇಫ್ ಆಗ್ತಾ ಇವೆ ಅಂತಾ ತಜ್ಞರು ಹೇಳ್ತಿದಾರೆ. ಆದ್ರೆ ಭಾರತದಲ್ಲಿರೋದು 130 ಕೋಟಿ ಜನ. ಈಗ ಮೊದಲ ಡೋಸ್ ಹಾಕಿಸಿಕೊಂಡಿರೋದು 17 ಕೋಟಿ ಜನ. ಇವರಲ್ಲಿ ಎರಡೂ ಡೋಸ್ ಕಂಪ್ಲೀಟ್ ಮಾಡಿದವರು ಸುಮಾರು 3 ಕೋಟಿ ಜನ ಮಾತ್ರ. ಅಂದರೆ ಭಾರತದಲ್ಲಿ ಇನ್ನು ಹೆಚ್ಚು ಕಡಿಮೆ 60ರಿಂದ 70 ಕೋಟಿ ಜನರಿಗೆ ಲಸಿಕೆ ಹಾಕಿಸಬೇಕೆಂದ್ರೆ ಅದೆಷ್ಟು ದಿನಗಳು ಬೇಕಾಗಬಹುದು ಲೆಕ್ಕ ಹಾಕಿ. ಇದೇ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಆಗ್ತಾ ಇದ್ರೆ ಇನ್ನು ಆರೇಳು ತಿಂಗಳಾದ್ರೂ ಡೋಸ್ ಸಿಗೋದು ಕಷ್ಟ. ಅಷ್ಟರಲ್ಲೇ ಮೂರನೇ ಅಲೆ ಅಪ್ಪಳಿಸಿ ಬಿಟ್ರೆ ಮತ್ತಷ್ಟು ಆತಂಕ ಹೆಚ್ಚೋದು ಮಾತ್ರ ಖಚಿತ. ಇನ್ನೊಂದು ಗಮನಿಸಬೇಕಾದ ವಿಚಾರ ಅಂದ್ರೆ, ಈಗ ಬಂದಿರೋ ಲಸಿಕೆಗಳು ಮುಂದೆಯೂ ವರ್ಕೌಟ್ ಆಗುತ್ತಾ ಅನ್ನೋದು. ಕಾರಣ, ಈಗ ಲಭ್ಯವಾಗ್ತಾ ಇರೋ ಲಸಿಕೆಗಳು ಶೇಕಡಾ 60ರಿಂದ 70ರಷ್ಟು ಮಾತ್ರ ಪರಿಣಾಮಕಾರಿ ಅಂತ ಹೇಳಲಾಗ್ತಾ ಇದೆ. ಇನ್ನು ಈ ಕೊರೊನಾದಲ್ಲಿ ರೂಪಾಂತರಿ ವೈರಸ್ ಗಳು ಹೆಚ್ಚಾಗ್ತಾ ಹೋದಂತೆ,ಇನ್ನಷ್ಟು ಬಲಿಷ್ಠವಾಗ್ತಾ ಹೋದಂತೆ ಬಹುಷಃ ಈ ಲಸಿಕೆಗಳ ಪರಿಣಾಮವೂ ತಗ್ಗಬಹುದು ಅಂತಾನೂ ಹೇಳಲಾಗ್ತಾ ಇದೆ. ಹೀಗಾಗಿ ವ್ಯಾಕ್ಸಿನ್ ಒಂದನ್ನೇ ನಂಬಿಕೊಂಡ್ರೆ ಆಗಲ್ಲ.

ಮೂರನೇ ಅಲೆ ಬರೋದ್ರೊಳಗೆ ನಿಖರ ಮೆಡಿಸಿನ್ ಬರುತ್ತಾ?
ಕೊರೊನಾ ಮಣಿಸಲು 3ನೇ ಅಲೆಯೊಳಗೆ ಔಷಧ ಸಿದ್ಧವಾಗುತ್ತಾ?
ಕೊರೊನಾ ವಿರುದ್ಧದ ಸಮರ ಅಂತಿಮ ಹಂತ ತಲುಪಿ ಬಿಡುತ್ತಾ?

ಈಗಾಗಲೇ ಕೊರೊನಾಗೆ ವ್ಯಾಕ್ಸಿನ್ ಮಾತ್ರವಲ್ಲ. ಔಷಧವನ್ನೇ ಕಂಡು ಹಿಡಿಯಲು ಸಂಶೋಧನೆಗಳು ಮುಂದುವರೆಯುತ್ತಿವೆ. ಅಮೆರಿಕದಲ್ಲಿ ಮಾತ್ರೆಗಳ ಪ್ರಯೋಗ ನಡೀತಾ ಇದೆ. ಇಂಡಿಯಾದಲ್ಲೂ ಈ ಬಗ್ಗೆ ಸಂಶೋಧನೆಗಳು ಮುಂದುವರೆದಿವೆ. ಬೇರೆ ಬೇರೆ ದೇಶಗಳ ಸಂಶೋಧಕರು,ವೈದ್ಯರು ಇದಕ್ಕೊಂದು ನಿಖರವಾದ ಔಷಧ ಕಂಡು ಹಿಡಿಯಲೇ ಬೇಕೆಂದು ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳು ನಡೀತಾನೆ ಇದ್ದಾವೆ. ಭಾರತದಲ್ಲಿ ಮೂರನೇ ಅಲೆ ಬರೋದ್ರೊಳಗೆ ಇಂತದ್ದೊಂದು ಔಷಧವೇ ಬಂದು ಬಿಟ್ರೆ ಆಗ ತಲೆ ಬಿಸಿಯೇ ಇರಲ್ಲ. ಸಾಮಾನ್ಯ ಜ್ವರದಂತೆ ಕೊರೊನಾಗೂ ಚಿಕಿತ್ಸೆ ಪಡೆದುಕೊಳ್ಳಬಹುದು. ಆದ್ರೆ ಈ ಔಷಧ ಕಂಡು ಹಿಡಿಯುವುದು ಕೊರಾನಾ ವಿಚಾರದಲ್ಲಿ ಹೆಚ್ಚು ಕಷ್ಟವಾಗ್ತಾ ಇದೆ. ಕಾರಣ ದಿನಕ್ಕೊಂದು ವೇಷ ಬದಲಿಸ್ತಾ ಇರೋ ಕೊರೊನಾಗೆ ಪರಿಣಾಮಕಾರಿ ಯಾವುದು ಅಂತ ಆಗಾಗ ಗೊಂದಲಗಳೂ ಸೃಷ್ಟಿಯಾಗಬಹುದು.

ಮೂರನೇ ಅಲೆ ತಡೆಯೋದು ಹೇಗೆ,ತಜ್ಞರ ಸಲಹೆ ಏನು?
ಇನ್ನೆಷ್ಟು ದಿನ ಲಾಕ್ ಡೌನ್ ,ಕ್ಲೋಸ್ ಡೌನ್ ಮಾಡೋದು?
ವರ್ಷಕ್ಕೆರಡು ಬಾರಿ ಲಾಕ್ ಮಾಡಿದ್ರೆ ಆರ್ಥಿಕತೆ ಕಥೆಯೇನು?

ಮೂರನೇ ಅಲೆ ತಡೆಯೋದಕ್ಕೆ ತಜ್ಞರು ಹಲವಾರು ರೀತಿಯ ಸಲಹೆಗಳನ್ನು ಕೊಡ್ತಾ ಇದಾರೆ. ಕಾರಣ ಪದೇ ಪದೇ ಲಾಕ್ ಡೌನ್ ಮಾಡೋದೊಂದೇ ಕೊರೊನಾ ಕಂಟ್ರೋಲ್ ಮಾಡ್ತೀವಿ ಅಂದ್ರೆ ಅದು ಸಾಧ್ಯವಾಗಲ್ಲ. ತೀರಾ ವಿಕೋಪಕ್ಕೆ ಹೋಗುವ ಸಂದರ್ಭ ಎದುರಾದಾಗಾ ಮಾತ್ರ ಲಾಕ್ ಡೌನ್ ಮಾಡಬಹುದು. ಕಾರಣ ವರ್ಷಕ್ಕೆರಡು ಬಾರಿ ತಿಂಗಳು ಗಟ್ಟಲೇ ಈ ರೀತಿ ಲಾಕ್ ಡೌನ್ ಆಗಿ ಬಿಟ್ರೆ ಎಲ್ಲಾ ಚಟವಟಿಕೆಗಳು ಬಂದ್ ಆಗಿ ಆರ್ಥಿಕತೆಗೆ ತೀರಾ ಹೊಡೆತ ಬಿದ್ದು ಬಿಡುತ್ತೆ. ಜನ ಸಾಮಾನ್ಯರ ಬದುಕು ಕಷ್ಟವಾಗಿ ಬಿಡುತ್ತೆ. ಹೀಗಾಗಿ ಬೇರೆಯದೇ ಆದ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ತಿಂಗಳು ಮುಂದುವರೆಸಲೇಬೇಕು.

3ನೇ ಅಲೆ ಅಬ್ಬರಿಸದಂತೆ ಏನು ಮಾಡಬಹುದು?

  1. ಜನ ಗುಂಪು ಸೇರುವ ಸಮಾರಂಭಗಳಿಗೆ ಅನುಮತಿ ಬೇಡ
  2. ಮದುವೆ ಇತ್ಯಾದಿ ಸಮಾರಂಭಗಳಿಗೆ ಮಾರ್ಗಸೂಚಿ ಇರಲಿ
  3. ಜಾತ್ರೆ,ಉತ್ಸವಗಳನ್ನು ಕೆಲ ತಿಂಗಳು ನಡೆಸದಿರುವುದು ಒಳಿತು
  4. ಟಿಟಿಟಿ ಸೂತ್ರ ಕೊರೊನಾ ತಗ್ಗಿದಾಗಲೂ ಕಂಟಿನ್ಯೂ ಇರಲಿ
  5. ಮನೆಯಿಂದಲೇ ಕೆಲಸ ನಿರ್ವಹಿಸುವ ಪಾಲಿಸಿಗೆ ಆದ್ಯತೆ ಇರಲಿ
  6. ಶಾಲಾ ಮಕ್ಕಳ ಬಗ್ಗೆ ಕಾಳಜಿ ಇರಲಿ,ಆನ್ ಕ್ಲಾಸ್ ಸದ್ಯಕ್ಕೆ ಬೆಸ್ಟ್
  7. ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸಿಕೊಳ್ಳಿ

ಎರಡನೇ ಅಲೆ ತಗ್ಗಿದ ಮೇಲೂ ಜನ ಗುಂಪು ಸೇರುವ ಸಮಾರಂಭಗಳಿಗೆ ಅನುಮತಿ ಬೇಡ ಅಂತ ತಜ್ಞರು ಸಲಹೆ ನೀಡಿದ್ದಾರೆ. ಇನ್ನು ಮದುವೆ ಇತ್ಯಾದಿ ಸಮಾರಂಭಗಳಿಗೆ ಮಾರ್ಗಸೂಚಿ ಮುಂದುವರೆಯಲಿ ಅಂತಾನೂ ತಿಳಿಸಿದ್ದಾರೆ. ಜಾತ್ರೆ ಮತ್ತು ಉತ್ಸವಗಳು ಕೆಲ ತಿಂಗಳು ಸೀಮತವಾಗಿ ನಡೆಯುವುದು ಒಳಿತು ಅನ್ನೋ ಅಭಿಪ್ರಾಯವೂ ಕೇಳಿ ಬಂದಿದೆ. ಇನ್ನು ಟೆಸ್ಟಿಂಗ್,ಟ್ರ್ಯಾಕಿಂಗ್, ಕಂಟಿನ್ಯೂ ಆಗಬೇಕು. ಅದಲ್ಲದೆ, ಮನೆಯಿಂದಲೇ ಕೆಲಸ ನಿರ್ವಹಿಸುವ ನೀತಿಗೆ ಹೆಚ್ಚು ಆದ್ಯತೆ ಕೊಡಬೇಕೆಂದು ಸಲಹೆ ನೀಡಲಾಗ್ತಿದೆ. ಎರಡನೇ ಅಲೆ ತಗ್ಗಿತ್ತು ಅಂದ ತಕ್ಷಣ ಶಾಲಾ-ಕಾಲೇಜುಗಳನ್ನು ದಿಢೀರ್ ಅಂತ ಓಪನ್ ಮಾಡಿದ್ರೆ ಮತ್ತೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆನ್ ಲೈನ್ ಕ್ಲಾಸ್ ಗೆ ಹೆಚ್ಚಿನ ಮಹತ್ವ ಕೊಡುವಂತೆ ಸಲಹೆ ನೀಡಲಾಗಿದೆ. ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸಿಕೊಳ್ಳಬೇಕು ಅಂತಾನೂ ತಜ್ಞರು ಸಲಹೆ ನೀಡ್ತಿದಾರೆ.

ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟ ಮೇಲೂ ಮತ್ತೆ ನಿರ್ಲಕ್ಷ್ಯ ಮಾಡಿದರೆ ಎರಡನೇ ಅಲೆಗಿಂತಲೂ ಮೂರನೇ ಅಲೆ ಮತ್ತಷ್ಟು ಭೀಕರತೆ ಸೃಷ್ಟಿಸೋದು ಖಚಿತ. ಹೀಗಾಗಿ ಎರಡನೇ ಅಲೆ ಮುಗಿಯುವ ಹೊತ್ತಿಗೆ ಮೂರನೇ ಅಲೆ ಎದುರಿಸಲು ಸಜ್ಜಾಗಬೇಕಾಗಿದೆ. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಎರಡನೇ ಅಲೆ ತಗ್ಗುವ ಲಕ್ಷಣಗಳು ಗೋಚರಿಸ್ತಾ ಇದೆ. ಆದ್ರೆ ಮೂರನೇ ಅಲೆ ಬಗ್ಗೆ ಈಗಾಗಲೇ ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೂರನೇ ಅಲೆ ಮೂರರಿಂದ ಆರು ತಿಂಗಳ ಒಳಗೆ ಯಾವಾಗಲಾದರೂ ಅಪ್ಪಳಿಸಬಹುದು. ಹೀಗಾಗಿ ಕೊರೊನಾ ಎರಡನೇ ಅಲೆಗೆ ಎಂಡ್ ಆಗುತ್ತೆ ಅನ್ನೋ ಭಾವನೆ ಬೇಡವೇ ಬೇಡ.

The post 2ನೇ ಅಲೆ ಇಳಿಯುವ ಮೊದಲೇ 3ನೇ ಅಲೆ ಭೀತಿ- ತಡೆಯೋದು ಹೇಗೆ, ತಜ್ಞರ ಸಲಹೆ ಏನು? appeared first on News First Kannada.

Source: newsfirstlive.com

Source link