ಅಂತಿಮ ಟೆಸ್ಟ್ನ 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ನಾಲ್ಕು ವಿಕೆಟ್ ನಷ್ಟಕ್ಕೆ 221 ರನ್ಗಳೊಂದಿಗೆ ದಿನದಾಟದ ಆರಂಭಿಸಿದ ಭಾರತವನ್ನ ಕಿವೀಸ್, 325 ರನ್ಗಳಿಗೆ ಕಟ್ಟಿಹಾಕಿತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಭಯಾನಕ ಬೌಲಿಂಗ್ ಮೂಲಕ ಕಿವೀಸ್ ಕಿವಿ ಹಿಂಡಿದ ಭಾರತ, ಕೇವಲ 62 ರನ್ಗಳಿಗೆ ಆಲೌಟ್ ಮಾಡಿತು. ಆ ಮೂಲಕ 2ನೇ ಟೆಸ್ಟ್ ಅನ್ನ ಟೀಮ್ ಇಂಡಿಯಾ, ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
ಕನ್ನಡಿಗ ಮಯಾಂಕ್ ಅಗರ್ವಾಲ್ ಮನಮೋಹಕ 150 ರನ್
2ನೇ ದಿನವೂ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್, ಕಿವೀಸ್ ಸ್ಪಿನ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಈ ಹಿನ್ನೆಲೆ ಮನಮೋಹಕ 150 ರನ್ಗಳಿಸಿ ಸಂಭ್ರಮಿಸಿದ ಮಯಾಂಕ್, ತಂಡದ ಮೊತ್ತವನ್ನ 300ರ ಗಡಿ ದಾಟಿಸಲು ನೆರವಾದರು. ಎದುರಿಸಿದ 311 ಎಸೆತಗಳಲ್ಲಿ 4 ಸಿಕ್ಸರ್, 17 ಬೌಂಡರಿ ಸಿಡಿಸಿದ ಬೆಂಗಳೂರು ಹುಡುಗ, 150 ರನ್ ಗಳಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಇನ್ನಿಂಗ್ಸ್ವೊಂದರಲ್ಲಿ 10 ವಿಕೆಟ್ ಪಡೆದು ದಾಖಲೆ ಬರೆದ ಅಜಾಜ್
ಟೆಸ್ಟ್ ಕ್ರಿಕೆಟ್ನ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ಗಳನ್ನು ಪಡೆದ ವಿಶ್ವದ 3ನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಜಾಜ್ ಪಟೇಲ್ ಪಾತ್ರರಾಗಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್, ಕನ್ನಡಿಗ ಅನಿಲ್ ಕುಂಬ್ಳೆ ಈ ದಾಖಲೆ ಬರೆದಿದ್ದರು. ಭಾರತದ ಮೊದಲ ದಿನದಾಟದಲ್ಲಿ 4 ವಿಕೆಟ್ ಪಡೆದಿದ್ದ ಅಜಾಜ್, 2ನೇ ದಿನದ ಮೊದಲ ಸೆಷನ್ನಲ್ಲೇ 6 ಉಳಿದ ವಿಕೆಟ್ ಕಬಳಿಸಿ ಪಟೇಲ್ ಇತಿಹಾಸ ನಿರ್ಮಿಸಿದ್ದಾರೆ.
ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ
ಎದುರಾಳಿ ಬೌಲರ್ಗಳನ್ನ ಸಮರ್ಥವಾಗಿ ಎದುರಿಸುತ್ತಿದ್ದ ಮಯಾಂಕ್ಗೆ, ಅದ್ಭುತವಾಗಿ ಸಾಥ್ ನೀಡಿದ ಅಕ್ಷರ್ ಪಟೇಲ್, ಮೊದಲ ಅರ್ಧಶತಕವನ್ನ ಸಿಡಿಸಿದರು. 128 ಎಸೆತಗಳನ್ನ ಎದುರಿಸಿದ ಅಕ್ಷರ್ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 52 ರನ್ ಸಿಡಿಸಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದರು.
ಆರ್.ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿದ ಕಿವೀಸ್
ಭಾರತದ 325 ರನ್ಗಳಿಗೆ ಉತ್ತರಿಸಲಾಗದ ಕಿವೀಸ್, ಮೊದಲ ಇನ್ನಿಂಗ್ಸ್ನಲ್ಲಿ 62 ರನ್ ಗಳಿಗೇ ಆಲ್ಔಟಾಯ್ತು. ಅದ್ರಲ್ಲೂ ಟೀಮ್ ಇಂಡಿಯಾ ಬೌಲರ್ಗಳ, ಸಂಘಟಿತ ಬೌಲಿಂಗ್ ದಾಳಿಗೆ ಪ್ರವಾಸಿ ತಂಡ ನಿರುತ್ತರವಾಯ್ತು. ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರೆ, 4 ವಿಕೆಟ್ ಕಬಳಿಸಿದ ಅಶ್ವಿನ್ ಮಾರಕ ಸ್ಪಿನ್ ತಂತ್ರಕ್ಕೆ ಕಿವೀಸ್ ಮಕಾಡೆ ಮಲಗಿತು. ಪರಿಣಾಮ 62 ರನ್ಗಳಿಗೆ ಕುಸಿದ ನ್ಯೂಜಿಲೆಂಡ್, ಭಾರೀ 263 ರನ್ಗಳ ಹಿನ್ನಡೆ ಅನುಭವಿಸ್ತು.
2ನೇ ದಿನದಾಟ ಮುಕ್ತಾಯ- ಭಾರೀ ಮುನ್ನಡೆಯಲ್ಲಿ ಭಾರತ..!
263 ರನ್ಗಳ ಮುನ್ನಡೆ ಪಡೆದ ಭಾರತ, ಎದುರಾಳಿಗೆ ಫಾಲೋ ಆನ್ಹೇರದೆ, ಬ್ಯಾಟಿಂಗ್ ಆರಂಭಿಸ್ತು. 2ನೇ ಇನ್ನಿಂಗ್ಸ್ನಲ್ಲೂ ಭರ್ಜರಿ ಆರಂಭ ಪಡೆದ ಟೀಮ್ ಇಂಡಿಯಾ, 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಪೂಜಾರ ಅಜೇಯ 29 ಮತ್ತು ಮಯಾಂಕ್ ಅಜೇಯ 38 ರನ್ಗಳಿಸಿ, ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಭಾರತ 332 ರನ್ಗಳ ಭಾರೀ ಮುನ್ನಡೆ ಪಡೆದುಕೊಂಡಿದ್ದು, ಕಿವೀಸ್ಗೆ ಬೃಹತ್ ಟಾರ್ಗೆಟ್ ನೀಡುವ ಪ್ಲಾನ್ ಹಾಕಿಕೊಂಡಿದೆ.