ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪಿಐಎಲ್​ ಸಲ್ಲಿಕೆಯಾಗಿದ್ದು, ಇಂದು ಹೈಕೋರ್ಟ್​​ ವಿಭಾಗೀಯ ಪೀಠದಲ್ಲಿ ಇದರ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯ  2ನೇ ಡೋಸ್ ವ್ಯಾಕ್ಸಿನೇಷನ್​ಗೆ ಕೈಗೊಂಡ ಕ್ರಮವೇನೆಂದು ತಿಳಿಸಿ ಅಂತ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ಇಂದು ಹೈಕೋರ್ಟ್ ಲಸಿಕೆ ಅಭಾವದ ಹಿನ್ನೆಲೆ ಸರ್ಕಾರಕ್ಕೆ ಕ್ಲಾಸ್​ ತೆಗೆದುಕೊಂಡಿತು. ನಿಮ್ಮಿಂದ ಲಸಿಕೆ ನೀಡಲು ಆಗದಿದ್ದರೆ ಹೇಳಿ ಅಂತ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತು. ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರಾದ ಎಎಸ್​ಜಿ ಐಶ್ವರ್ಯ ಭಾಟಿ ಹಾಗೂ ರಾಜ್ಯ ಸರ್ಕಾರದ ಪರ ವಕೀಲರು ಕೋರ್ಟ್​ಗೆ ಕೆಲ ಮಾಹಿತಿ ನೀಡಿದರು.

ಬಳಿಕ ಹೈಕೋರ್ಟ್​ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಲಿಖಿತ ಹೇಳಿಕೆಯಲ್ಲಿ ಮೇ 12ರ  6 ಗಂಟೆ ವೇಳೆಗೆ 12.32 ಲಕ್ಷ ಡೋಸ್ ಹೊಂದಿರುವುದಾಗಿ ತಿಳಿಸಿದೆ. ಸದ್ಯ ಅದರಲ್ಲಿ ಶೇ 50ರಷ್ಟು ಲಸಿಕೆಯನ್ನ 18-45 ವರ್ಷದವರಿಗೆ ಬಳಸಲಾಗಿದೆ. ಈಗ 14.8 ಲಕ್ಷ ಮಂದಿಗೆ ಅಧಿಕೃತವಾಗಿ ಎರಡನೇ ಡೋಸ್ ನೀಡೋದು ಬಾಕಿ ಇದೆ. ಆರೋಗ್ಯದಿಂದ ಜೀವಿಸುವುದು ನಮ್ಮ ಮೂಲಭೂತ ಹಕ್ಕಿನ ಭಾಗ. 2ನೇ ಡೋಸ್ ಲಸಿಕೆ ನೀಡದಿದ್ದರೆ ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಕೋರ್ಟ್​ ಹೇಳಿತು.

14 ಲಕ್ಷ ಡೋಸ್ ಸಿಕ್ಕರೂ ರಾಜ್ಯಕ್ಕೆ ಸಾಕಾಗುವುದಿಲ್ಲ. 2ನೇ ಡೋಸ್ಗೆ ಅಗತ್ಯವಿರುವಷ್ಟು ಲಸಿಕೆ ಪೂರೈಸಬೇಕಿದೆ. ತಕ್ಷಣ ರಾಜ್ಯ ಸರ್ಕಾರ ಅಗತ್ಯವಿರುವ ಲಸಿಕೆ ಪ್ರಮಾಣದ ಅಂಕಿ ಅಂಶವನ್ನ ಕೇಂದ್ರಕ್ಕೆ ಒದಗಿಸಬೇಕು. ಕೇಂದ್ರ ಸರ್ಕಾರ ಗ್ಯಾಪ್ ಸರಿಪಡಿಸಲು ಪ್ರಯತ್ನಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.

ಈ ಬಗ್ಗೆ ಕೇಂದ್ರ ಸರ್ಕಾರದ ಎಎಸ್​ಜಿ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 3 ಮಾರ್ಗಸೂಚಿ ಪತ್ರ ಬರೆದಿದೆ. ಆದರೆ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ. ಉಲ್ಲಂಘನೆಗೆ ಕಾರಣ ತಿಳಿಸಲು ಎಎಸ್​ಜಿ ಕಾಲಾವಕಾಶ ಕೋರಿದ್ದಾರೆ. ಮಾರ್ಗಸೂಚಿ ಉಲ್ಲಂಘಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದ್ದು, 2ನೇ ಡೋಸ್ ವ್ಯಾಕ್ಸಿನೇಷನ್​ಗೆ ಕೈಗೊಂಡ ಕ್ರಮ ತಿಳಿಸಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೇಳಿದೆ.

The post 2ನೇ ಡೋಸ್ ಲಸಿಕೆ ನೀಡದಿದ್ರೆ ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ, ಕ್ರಮ ತಿಳಿಸಿ: ಹೈಕೋರ್ಟ್​ appeared first on News First Kannada.

Source: newsfirstlive.com

Source link