2ನೇ ದಿನಕ್ಕೆ ಕಾಲಿಟ್ಟ ದೆಹಲಿ ಆಟೊ ಟ್ಯಾಕ್ಸಿ ಮುಷ್ಕರ: ಪ್ರಯಾಣಿಕರ ಪರದಾಟ | Delhi auto and taxi Drivers Oppose CNG Price Hike commuters struggle Continues


2ನೇ ದಿನಕ್ಕೆ ಕಾಲಿಟ್ಟ ದೆಹಲಿ ಆಟೊ ಟ್ಯಾಕ್ಸಿ ಮುಷ್ಕರ: ಪ್ರಯಾಣಿಕರ ಪರದಾಟ

ದೆಹಲಿಯಲ್ಲಿ ಆಟೊ ಚಾಲಕರ ಮುಷ್ಕರ

ದೆಹಲಿ: ಇಂಧನ ಬೆಲೆಗಳ ಏರಿಕೆ ಖಂಡಿಸಿ ದೆಹಲಿಯ ಆಟೊ ಮತ್ತು ಟ್ಯಾಕ್ಸಿ ಚಾಲಕರು ನಡೆಸುತ್ತಿರುವ ಮುಷ್ಕರ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಟ್ಯಾಕ್ಸಿ ಚಾಲಕರು ವಾಹನಗಳನ್ನು ರಸ್ತೆಗೆ ಇಳಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಸಂಚಾರಕ್ಕೆ ನೆರವಾಗುವ ಬಹುತೇಕ ಆ್ಯಪ್​ಗಳು ‘ಯಾವುದೇ ಕ್ಯಾಬ್​ಗಳು ಲಭ್ಯವಿಲ್ಲ’ ಎನ್ನುವ ಸಂದೇಶವನ್ನು ಬಿತ್ತರಿಸಿದವು. ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯೊಂದಿಗೆ ಸುಮಾರು 90,000 ಆಟೊ ಮತ್ತು 80,000 ನೋಂದಾಯಿತ ಟ್ಯಾಕ್ಸಿಗಳು ಸೇವೆ ಒದಗಿಸುತ್ತಿವೆ.

ಕೆಲ ಓಲಾ ಮತ್ತು ಊಬರ್ ಟ್ಯಾಕ್ಸಿಗಳ ಸೇವೆ ಲಭ್ಯವಿತ್ತಾದರೂ ಬೆಲೆ ತುಂಬಾ ದುಬಾರಿಯಾಗಿತ್ತು. ಚಾಲಕರು ಮತ್ತು ಮಾಲೀಕರ ಸಂಘಟನೆಗಳು ಸೋಮವಾರ ಒಂದು ದಿನದ ಮುಷ್ಕರ ಎಂದು ಘೋಷಿಸಿದ್ದವು. ಆದರೆ ಮಂಗಳವಾರವೂ ಜನರ ಸಂಕಷ್ಟ ಮುಂದುವರಿಯಿತು. ‘ಆಟೊ ಮತ್ತು ಟ್ಯಾಕ್ಸಿಗಳು ಇಂಧನವಾಗಿ ಬಳಸುವ ಸಿಎನ್​ಜಿ ಬೆಲೆಯು ವಿಪರೀತ ಎನ್ನುವಷ್ಟು ಹೆಚ್ಚಾಗುತ್ತಿದೆ. ಇದನ್ನು ವಿರೋಧಿಸುವ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ’ ಎಂದು ದೆಹಲಿ ಆಟೊರಿಕ್ಷಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೋನಿ ಹೇಳಿದರು.

ಇಂಧನ ಬೆಲೆ ಏರಿಕೆಯಿಂದ ಉಂಟಾಗುತ್ತಿರುವ ಸಂಕಷ್ಟ ತಗ್ಗಿಸುವ ಉದ್ದೇಶದಿಂದ ಸರ್ಕಾರಗಳು ಒಂದು ಕೆಜಿ ಸಿಎನ್​ಜಿಗೆ ₹ 35 ಸಹಾಯಧನ ಒದಗಿಸಬೇಕು ಎಂದು ಆಟೊ ಮತ್ತು ಟ್ಯಾಕ್ಸಿ ಸಂಘಟನೆಗಳು ಆಗ್ರಹಿಸಿವೆ. ಸರ್ಕಾರ ತಮ್ಮೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿವೆ. ಸಮಸ್ಯೆ ಪರಿಹರಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ದೆಹಲಿ ಸರ್ಕಾರ ಘೋಷಿಸಿದೆಯಾದರೂ, ಆಟೊ-ಟ್ಯಾಕ್ಸಿ ಸಂಘಟನೆಗಳು ತಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸಿಲ್ಲ..

ಕೆಲ ಸಂಘಟನೆಗಳು ಎರಡನೇ ದಿನಕ್ಕೆ ಮುಷ್ಕರ ಹಿಂಪಡೆಯುವುದಾಗಿ ಘೋಷಿಸಿದ್ದವು. ಜನರ ಸಂಕಷ್ಟ ಗಮನಿಸಿ ಕೆಲ ಸಂಘಟನೆಗಳು ಪ್ರತಿಭಟನೆ ಮುಂದೂಡಲು ನಿರ್ಧರಿಸಿವೆ. ಆದರೆ ನಮ್ಮ ಬೇಡಿಕೆಗಳು ಈಡೇರುವವರೆಗೆ ಸರ್ಕಾರದೊಂದಿಗೆ ಸಂಘರ್ಷ ಮುಂದುವರಿಸುತ್ತೇವೆ ಎಂದು ಸೋನಿ ಹೇಳಿದರು. ದೆಹಲಿಯ ವಿವಿಧ ಕ್ಯಾಬ್ ಕಂಪನಿಗಳಲ್ಲಿ ಕೆಲಸ ಮಾಡುವ ಚಾಲಕರ ಪ್ರಾತಿನಿಧಿಕ ಸಂಘಟನೆ ಸರ್ವೋದಯಾ ಡ್ರೈವರ್ ವೆಲ್​ಫೇರ್ ಅಸೋಸಿಯೇಷನ್, ಮತ್ತೊಂದು ದಿನಕ್ಕೆ ಮುಷ್ಕರ ಮುಂದುವರಿಸಲು ನಿರ್ಧರಿಸಿದೆ.

ದೆಹಲಿಯಲ್ಲಿ ಆಟೊ ದರವನ್ನು 2019ರಲ್ಲಿ ಪರಿಷ್ಕರಿಸಲಾಗಿತ್ತು. ಪ್ರತಿ ಕಿಲೋಮೀಟರ್​ಗೆ ₹ 8ರಿಂದ ₹ 9.5ಕ್ಕೆ ಹೆಚ್ಚಿಸಲಾಗಿತ್ತು. ಸಿಎನ್​ಜಿ ದರಗಳು ಕಳೆದ ವಾರ ಪ್ರತಿ ಕೆಜಿಗೆ ₹ 2.5 ಹೆಚ್ಚಾಗಿವೆ. ಪ್ರಸ್ತುತ ದೆಹಲಿಯಲ್ಲಿ ಒಂದು ಕೆಜಿ ಸಿಎನ್​ಜಿ ₹ 71.61ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಒಂದು ಕೆಜಿ ಸಿಎನ್​ಜಿ ₹ 28 ಇತ್ತು. ಒಂದು ವರ್ಷದ ಅವಧಿಯಲ್ಲಿ ಸಿಎನ್​ಜಿ ಧಾರಣೆ ಶೇ 60ರಷ್ಟು ಹೆಚ್ಚಾಗಿದೆ.

TV9 Kannada


Leave a Reply

Your email address will not be published.