ಉಡುಪಿ: ಕಾಲಿಗೆ ಚಕ್ರ ಹಾಕಿಸಿಕೊಂಡು ಓಡಾಡುವ ನಾಯಿಮರಿಯ ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸಂತೋಷದ ಹಿಂದಿನ ಸಂಕಟದ ಕಥೆ ಮೈ ರೋಮಾಂಚನಗೊಳಿಸುತ್ತದೆ. ತನ್ನ ಹಿಂಬದಿಯ ಎರಡೂ ಕಾಲುಗಳನ್ನು ಮುರಿದುಕೊಂಡಿದ್ದ ಈ ನಾಯಿಮರಿಗೆ ಮರುಜೀವ ಸಿಕ್ಕಿದ್ದೇ ಒಂದು ಇಂಟರೆಸ್ಟಿಂಗ್ ವಿಚಾರ.

ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಹೊಸಂಗಡಿ ಕೆಪಿಸಿಎಲ್ ಘಟಕದ ಆವರಣದಲ್ಲಿ ಪುಟ್ಟ ನಾಯಿಮರಿಯೊಂದು ಬಿದ್ದಿತ್ತು. ಯಾರೋ ಬೈಕ್ ಹಾಯಿಸಿದ ಪರಿಣಾಮ ನಾಯಿಮರಿಯ ಹಿಂಬದಿಯ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿದ್ದವು. ಅಸಹಾಯಕ ಸ್ಥಿತಿಯಲ್ಲಿ ಅಲ್ಲೇ ರಸ್ತೆ ಬದಿಯಲ್ಲಿ 15 ದಿನಗಳಿಂದ ನಾಯಿಮರಿ ಮಲಗಿದ್ದಲ್ಲೇ ಮಲಗಿತ್ತು. ಸ್ಥಳೀಯ ನಿವಾಸಿ ಹಾಗೂ ಕೆಪಿಸಿಎಲ್​ನಲ್ಲಿ ಉದ್ಯೋಗ ಮಾಡುವ ಕೆ.ರಾಮಸ್ವಾಮಿ ಹಾಗೂ ವೀಣಾ ದಂಪತಿಯ ಪುತ್ರಿಯಾದ ಪ್ರಿಯಾ ಎಂ.ಆರ್ ಈ ಅಸಹಾಯಕ ನಾಯಿಯನ್ನು ನೋಡಿ ಮಮ್ಮಲ ಮರುಗಿದ್ದರು.

ಬಳಿಕ ನಾಯಿಮರಿ ಕುಂಟು ಕಾಲಿನಲ್ಲೇ ಅವರನ್ನು ಹಿಂಬಾಲಿಸಿಕೊಂಡು ಮನೆಯವರೆಗೂ ಬಂದಿತ್ತು. ಇದರಿಂದ ಅವರ ಮನ ಕರಗಿ, ವೈದ್ಯರನ್ನು ಕರೆಸಿ ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ನಾಯಿ ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ್ದರಂತೆ. ಸಂಪೂರ್ಣ ಇನ್ಫೆಕ್ಷನ್​​​ಗೆ ತುತ್ತಾಗಿದ್ದ ನಾಯಿಯ ಎರಡೂ ಕಾಲುಗಳಿಗೆ ಮತ್ತೆ ಜೀವ ತರುವುದು ಅಸಾಧ್ಯವಾಗಿತ್ತು. ಬೀದಿ ನಾಯಿಗಳನ್ನು ಕಂಡರೆ ಮೊದಲೇ ಪ್ರಿಯಾಗೆ ಎಲ್ಲಿಲ್ಲದ ಪ್ರೀತಿ . ಹಿಂದೆ ಅನೇಕ ಬೀದಿನಾಯಿಗಳನ್ನು ಈಕೆ ಆರೈಕೆ ಮಾಡಿದ್ದರು.

ನಾಯಿ ಮತ್ತೆ ಹಿಂದಿನಂತೆ ಓಡಾಡಬೇಕಲ್ಲ ಎಂದು ಆಲೋಚಿಸಿದ ರಾಮಸ್ವಾಮಿ ಒಂದು ಪ್ಲಾನ್ ಮಾಡಿ, ಆನ್​ಲೈನ್​ನಲ್ಲಿ ಎರಡು ಪುಟ್ಟ ಚಕ್ರಗಳನ್ನು ತರಿಸಿಕೊಂಡಿದ್ದಾರೆ. ಬಳಿಕ ಪಿವಿಸಿ ಪೈಪ್ ಗೆ ಈ ಪುಟ್ಟಪುಟ್ಟ ಗಾಲಿಗಳನ್ನು ಜೋಡಿಸಿ ನಾಯಿಯ ಹಿಂದಿನ ಎರಡು ಕಾಲುಗಳ ಚಲನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಕೃತಕ ಕಾಲು ಹಾಕಿದ ನಂತರ ಸತ್ತೆ ಹೋದಂತಿದ್ದ ಆ ಪುಟ್ಟ ನಾಯಿಮರಿ ಮತ್ತೆ ಲವಲವಿಕೆಯಿಂದ ಓಡಾಡಿಕೊಂಡಿದೆ. ಬದುಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ನಾಯಿ ಆರಾಮಗಿ ಓಡಾಡುತ್ತಾ ಖುಷಿ ಖುಷಿಯಾಗಿದೆ.

The post 2 ಕಾಲು ಕಳೆದುಕೊಂಡು ಸಾಯುವ ಸ್ಥಿತಿಯಲ್ಲಿದ್ದ ನಾಯಿಮರಿಗೆ ಮರುಜೀವ, ಯುವತಿ ಕಾರ್ಯಕ್ಕೆ ಹ್ಯಾಟ್ಸ್​​ಆಫ್​ appeared first on News First Kannada.

Source: newsfirstlive.com

Source link