ಬೆಂಗಳೂರು: ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಮತ್ತೊಂದು ಸಾರ್ಥಕ ಸೇವೆ ಕಾರ್ಯ ನಡೆದಿದ್ದು, ಎರಡೂವರೆ ವರ್ಷದ ಬಾಲಕನ ಬಾಳಿಗೆ ಕಿಚ್ಚ ಸುದೀಪ್ ಬೆಳಕು ನೀಡಿದ್ದಾರೆ.

ಶಿವಮೊಗ್ಗದ ಯಡವಾಲ ಗ್ರಾಮದ ನವೀನ್ ನಾಯಕ್ ಎಂಬವರ ಪುತ್ರ ಧನುಷ್ ನಾಯಕನಿಗೆ ಎಡಗಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಒಂಭತ್ತು ತಿಂಗಳ ಹಿಂದೆ ಧನುಷ್ಗೆ  ಚಿಕನ್ ಪಾಕ್ಸ್ ಆಗಿತ್ತು. ಮಗುವಿಗೆ  ಸೂಕ್ತ ಸಮಯಕ್ಕೆ  ಚಿಕಿತ್ಸೆ ಸಿಗದ ಕಾರಣ ಚಿಕನ್ ಪಾಕ್ಸ್ ನಿಂದ ಕಣ್ಣಿಗೆ ಹಾನಿ ಉಂಟಾಗಿತ್ತು. ಅಲ್ಲದೇ ಎಂಟು ತಿಂಗಳ ಹಿಂದೆ ಕಣ್ಣಿನಲ್ಲಿ ಕ್ಯಾನರ್ ಕಾಣಿಸಿಕೊಂಡಿದ್ದು, ಕಣ್ಣನ್ನು ತೆಗೆಯಲೇಬೇಕಾದ ನಿವಾರ್ಯತೆ ಎದುರಾಗಿತ್ತು.

ಒಂದು ವೇಳೆ ಕಣ್ಣನ್ನು ಆಪರೇಷನ್ ಮಾಡಿ ತೆಗೆಯದೆ ಹೋದರೆ ಬಲಗಣ್ಣಿಗೂ ಕ್ಯಾನ್ಸರ್ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಕಳೆದ ಮೂರು ತಿಂಗಳ ಹಿಂದೆಯೇ ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ಸಲಹೆ ನೀಡಿದ್ದರು. ಆದರೆ ಮಗುವಿನ ತಂದೆ ನವೀನ್ ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಮಗುವಿಗೆ ಅಪರೇಷನ್ ಮಾಡಿಸಲಾಗದೆ ಕುಟುಂಬಸ್ಥರು ಕಂಗಲಾಗಿದ್ದರು.

ಪರಿಸ್ಥಿತಿ ಕೈ ಮೀರಿದ್ದನ್ನು ಅರಿತ ನವೀನ್ ಕೊನೆಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಸದಸ್ಯರನ್ನು ಸಂಪರ್ಕ ಮಾಡಿ ಮಗುವಿನ ಆಪರೇಷನ್​ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಮಗುವಿನ ಅರೋಗ್ಯ ಪರಿಸ್ಥಿತಿ ಗಮನಿಸಿ ಕಣ್ಣಿನ ಅಪರೇಷನ್​ಗೆ ಅಗತ್ಯವಿರುವ ಹಣಕಾಸಿನ ಸಹಾಯ ಮಾಡಲು ಚಾರಿಟೇಬಲ್ ಸೊಸೈಟಿ ಮುಂದಾಯ್ತು.

ಸದ್ಯ ಧನುಷ್ ನಾಯಕ್ ಕಣ್ಣಿನ ಆಪರೇಷನ್​ ಯಶಸ್ವಿಯಾಗಿ ನಡೆದಿದ್ದು, ಕ್ಯಾನ್ಸರ್ ಆಗಿರುವ ಕಣ್ಣನ್ನು ತೆಗೆದು ಹಾಕಿ ಕೃತಕ ಕಣ್ಣನ್ನು ಅಳವಡಿಸಿ ಅದಕ್ಕೆ ಲೆನ್ಸ್ ಹಾಕಲಾಗಿದೆ. ಅಲ್ಲದೇ ಆಪರೇಷನ್ ಆದ ಬಳಿಕ ಮೂರರಿಂದ ನಾಲ್ಕು ತಿಂಗಳು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದ್ದು, ಇದಕ್ಕೆ 2 ರಿಂದ 3 ಲಕ್ಷ ರೂಪಾಯಿ ಖರ್ಚಾಗಲಿದೆ. ಈ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಭರಿಸಲಿದೆ.

The post 2 ವರ್ಷದ ಬಾಲಕನ ಬಾಳಿಗೆ ಬೆಳಕು- ಕಿಚ್ಚನಿಂದ ಮತ್ತೊಂದು ಸಾರ್ಥಕ ಸೇವೆ appeared first on News First Kannada.

Source: newsfirstlive.com

Source link